ಬೆಳ್ತಂಗಡಿ : ಕಲಿಯುಗದಲ್ಲಿ ಭಗವಂತನ ಸಾನಿಧ್ಯಕ್ಕೆ ಹೋಗಲು ಭಜನೆಯ ಸೃಷ್ಟಿಯಾಗಿದೆ ಮತ್ತುಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಭಜನೆಯಲ್ಲಿ ಪರಿಹಾರವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆದ 17 ನೇ ವರ್ಷದ ಭಜನಾ ತರಬೇತಿ ಕಮ್ಮಟಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಭಜನೆ ಇಂದಿನ ಕಾಲಕ್ಕೆ ಅತೀ ಅವಶ್ಯವಾಗಿದೆ. ಸಮಾಜದಲ್ಲಿರುವ ಮತಿಭ್ರಷ್ಟರು ವಿಚಾರವಂತರಾಗಲು ಭಜನಾ ಸಾಂಗತ್ಯಕ್ಕೆ ಬರಬೇಕು. ಇದರಿಂದ ಭಗವಂತನ ಒಲುಮೆ ಸಿಗುತ್ತದೆ. ಬದುಕು ಸುಗಮವಾಗುತ್ತದೆ. ಭಗವಂತನಿಗೆ ಭಕ್ತರ ಅವಶ್ಯಕತೆಯಿದೆ. ಭಕ್ತರು ಆತನ ಅನುಸಂಧಾನ ಮಾಡಿದರೆ ಮಾತ್ರ ಭಗವಂತನ ನಮ್ಮೆಡೆಗೆ ಬರುತ್ತಾನೆ. ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಭಜನಾ ಸತ್ಸಂಗ ಪೂರಕ ಎಂದರು.
ಮನೆಯೊಳಗಿದ್ದ ಭಜನೆಯನ್ನು ಹೊರಗೆ ತಂದು ಅದನ್ನು ಸಮಾಜಮುಖಿಯನ್ನಾಗಿ ಮಾಡುತ್ತಿರುವ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರ ಕಾರ್ಯ ದೇಶವ್ಯಾಪಿಯಾಗಬೇಕು. ಸಂತ,ದಾಸ,ಮುನಿಗಳಿಂದ ದೊರಕಿದ ಈ ಅಪೂರ್ವ ಸಾಹಿತ್ಯ ಮತ್ತೊಮ್ಮೆ ಮನೆ-ಮನೆಗಳಲ್ಲಿ ಅನುರಣಿಸಬೇಕು ಎಂದು ಗುರುಪುರ ಶ್ರೀಗಳು ಆಶಿಸಿದರು. ಬಳಿಕ ಅವರುತಮ್ಮ ಮಠದ ಪರವಾಗಿ ಡಾ|ಹೆಗ್ಗಡೆಯವರನ್ನು ಸಮ್ಮಾನಿಸಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಸಮಾಜದಲ್ಲಿ ಯೋಗ್ಯ ಆಚಾರ ವಿಚಾರಗಳ ಬಗ್ಗೆ ಜಾಗೃತಿಗಾಗಿ ಮತ್ತು ಜೀವನ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಭಜನೆಯೆಂಬ ಭಕ್ತಿಪಂಥದ ಮಾರ್ಗ ಸುಲಭವಾದದ್ದು ಎಂದು ಶುಭ ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜದ ಸಂಘಟನೆಯಲ್ಲಿ ಭಜನಾ ಮಂಡಳಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಎಲ್ಲಾ ವರ್ಗಗಳಿಗೆ ಪ್ರಿಯವಾದ ಮತ್ತು ಭಾಗವಹಿಸುವ ಭಜನಾ ಕಾರ್ಯಕ್ರಮವು ಸಾಮರಸ್ಯವನ್ನು ತರಬಲ್ಲುದು.
ಭಗವಂತನ ಅನುಗ್ರಹ ಸ್ವೀಕರಿಸಲು ಮನಸ್ಸು ಪಕ್ವವಾಗಿರಬೇಕು. ಇದಕ್ಕೆ ಭಜನೆಯೊಂದು ಸಾಧನ. ಸಾಮಾನ್ಯರಿಗೆ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಲು ದೊಡ್ಡ ಗ್ರಂಥಗಳನ್ನು ಓದಿದರೆ ಪ್ರಯೋಜನವಾಗದು. ಅದಕ್ಕೆ ಭಜನೆ ಸಹಾಯಕಕಾರಿ ಎಂದ ಅವರು ಭಜನೆಗೆ ಭಕ್ತಿಯೇ ಮುಖ ಎಂದ ಅವರು ಶಿಬಿರಾರ್ಥಿಗಳು ದುಶ್ಚಟಗಳನ್ನು ದೂರಮಾಡಿ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ರೂವಾರಿಗಳಾಗಬೇಕು, ದಕ್ಷ ನಾಯಕರಾಗಬೇಕು ಎಂದು ಆಶಿಸಿದರು.
ವೇದಿಕೆಯಲ್ಲಿ ಹೇಮಾವತಿ ವಿ.ಹೆಗ್ಗಡೆ, ಡಿ. ಹಷೇಂದ್ರ ಕುಮಾರ್, ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯ, ಕಮ್ಮಟದ ಸಂಯೋಜಕ ಬಿ.ಸೀತಾರಾಮ ತೋಳ್ಪಡಿತ್ತಾಯ ಇದ್ದರು.ಭಜನಾ ಪರಿಷತ್ ಕಾರ್ಯದರ್ಶಿ ಬಿ.ಜಯರಾಮ ನೆಲ್ಲಿತ್ತಾಯ ಪ್ರಸ್ತಾವಿಸಿ, ಸ್ವಾಗತಿಸಿದರು. ಶಾಂತಿವನದ ಮಂಜುನಾಥ ಎಂ.ಎನ್. ವಂದಿಸಿದರು. ಶ್ರೀನಿವಾಸ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯಾದ್ಯಂತ ಭಜನಾ ಮಂಡಳಿಗಳನ್ನು ಸ್ಥಾಪಿಸುವ ಉದ್ದೇಶದಿಂದ ಈ ವರ್ಷದಿಂದ ಶ್ರೀ ಧ.ಮಂ.ಭಜನಾ ಪರಿಷತ್ ಪ್ರಾರಂಭಿಸಲಾಗಿದೆ. ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ 9 ತಾಲೂಕುಗಳಲ್ಲಿ ಪರಿಷತ್ ಸ್ಥಾಪಿಸಲಾಗಿದೆ- ಡಾ|ಹೆಗ್ಗಡೆ
ಕಳೆದ 16 ವರ್ಷಗಳಲ್ಲಿ ರಾಜ್ಯದ ಆಯ್ದ 1401 ಭಜನಾ ಮಂಡಳಿಗಳ 2690 ಸದಸ್ಯರಿಗೆ ತರಬೇತಿ ನೀಡಲಾಗಿದೆ. ಈ ಬಾರಿ 102 ಮಂಡಳಿಗಳಿಂದ 193 ಶಿಬಿರಾರ್ಥಿಗಳು ಒಂದು ವಾರ ಇಲ್ಲಿದ್ದು ತರಬೇತಿ ಪಡೆಯಲಿದ್ದಾರೆ- ಜಯರಾಮ ನೆಲ್ಲಿತ್ತಾಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.