ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ನಾಳೆ ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಮೋದಿ ನಿನ್ನೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದ ಎನ್ಡಿಎ ನಿಯೋಗವು ರಾಷ್ಟ್ರಪತಿಯನ್ನು ಭೇಟಿ ಮಾಡಿ, ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪತ್ರವನ್ನು ಸಲ್ಲಿಸಿದೆ. ಎನ್ಡಿಎ ಘಟಕದ ಪಕ್ಷಗಳ ಬೆಂಬಲ ಪತ್ರವನ್ನೂ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು.
ದ್ರೌಪದಿ ಮುರ್ಮು ಅವರು ಸಂವಿಧಾನದ 75 (1) ನೇ ವಿಧಿಯ ಅಡಿಯಲ್ಲಿ ತನ್ನಲ್ಲಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಭಾರತದ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಅವರನ್ನು ನೇಮಕ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.
ಕೇಂದ್ರ ಸಚಿವ ಸಂಪುಟದ ಸದಸ್ಯರಾಗಿ ನೇಮಕಗೊಳ್ಳುವ ಇತರ ವ್ಯಕ್ತಿಗಳ ಹೆಸರುಗಳ ಬಗ್ಗೆ ಸಲಹೆ ನೀಡುವಂತೆ ಮತ್ತು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಮತ್ತು ಸಮಯವನ್ನು ಸೂಚಿಸುವಂತೆ ರಾಷ್ಟ್ರಪತಿಗಳು ಮೋದಿ ಅವರನ್ನು ವಿನಂತಿಸಿದ್ದಾರೆ.
ರಾಷ್ಟ್ರಪತಿ ಭವನದ ಹೊರಗೆ ಮಾತನಾಡಿದ ಮೋದಿ, ಎನ್ಡಿಎ ಪ್ರಬಲ, ಸ್ಥಿರ ಮತ್ತು ಬೆಳವಣಿಗೆ ಆಧಾರಿತ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.
ರಾಷ್ಟ್ರಪತಿ ಭವನವು ಉಳಿದ ಪ್ರಕ್ರಿಯೆಗಳಿಗೆ ಸಿದ್ಧತೆಯನ್ನು ಈಗಲೇ ರೂಪಿಸಲಿದ್ದು, ಅಷ್ಟರೊಳಗೆ ಮಂತ್ರಿಮಂಡಲದ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮೋದಿ ಹೇಳಿದರು.
ಜನರು ಎನ್ಡಿಎ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದಾರೆ ಮತ್ತು ಈ 18 ನೇ ಲೋಕಸಭೆಯು ಹೊಸ ಮತ್ತು ಯುವ ಶಕ್ತಿಯ ಸದನವಾಗಿದೆ. ತಮ್ಮ ಸರ್ಕಾರ ದೇಶದ ಜನರ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿದೆ ಎಂದರು.
ಸ್ಥಿರ ಸರ್ಕಾರವು ಭಾರತ ಮತ್ತು ಅದರ ಆರ್ಥಿಕತೆ ಮತ್ತು ಯುವಜನತೆಗೆ ಪ್ರಯೋಜನಕಾರಿಯಾಗಲಿದೆ. ರಾಷ್ಟ್ರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಯಾವುದೇ ಅವಕಾಶ ಬಿಡುವುದಿಲ್ಲ ಎಂದು ಅವರು ರಾಷ್ಟ್ರಕ್ಕೆ ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.