ಉಡುಪಿ: ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ಇಂದು ರೌಡಿಗಳು ಯಾವುದೇ ಭಯವಿಲ್ಲದೆ ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್ ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಶಾಸಕ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡಿ ರಾಜ್ಯದಲ್ಲಿ ಈಗ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಪರಿಣಾಮವಾಗಿ ಇಂದು ಕ್ರಿಮಿನಲ್ ಗಳು ವಿಜೃಂಭಿಸುವಂತಾಗಿದೆ.ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ಅಲ್ಲದೇ ಕಾನೂನು-ಸುವ್ಯವಸ್ಥೆ ಕಾಪಾಡಲಾರದ ಗೃಹ ಸಚಿವರಿಂದ ಎಂದು ರಾಜೀನಾಮೆ ಪಡೆಯುತ್ತೀರಿ ?, ಪೊಲೀಸ್ ಠಾಣೆಯನ್ನು ಆಳುವ ಸರ್ಕಾರದ ಆಳಾಗಿಸಿಕೊಂಡಿರುವುದಕ್ಕೆ ಎಂದು ಮುಕ್ತಾಯ ಹಾಡುತ್ತೀರಿ ?, ಕ್ರಿಮಿನಲ್ ಗಳಿಗೂ ನಿಮ್ಮ ಸರ್ಕಾರಕ್ಕೂ ಒಳ ಒಪ್ಪಂದ ಏರ್ಪಟ್ಟಿದ್ದರೆ ಮಾಸಿಕ ಹಫ್ತಾ ಎಷ್ಟು ನಿಗದಿ ಮಾಡಿದ್ದೀರಿ ? ಎಂದು ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರ ಕೈ ಕಟ್ಟಿ ಹಾಕಿದ್ದೀರಾ ? ಎಂದಿರುವ ಅವರು, ಜನರ ಶಾಂತಿ- ನೆಮ್ಮದಿ ಕಾಪಾಡಲಾರದ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜನವುಂಟೇ ಎಂದು ಟೀಕಿಸಿದ್ದಾರೆ.
ಅಲ್ಲದೇ ಕ್ರಿಮಿನಲ್ ಗಳ ಅಟ್ಟಹಾಸ ನಿಲ್ಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಭಯವೇಕೆ ? ಎಂದಿದ್ದಾರೆ.
ಸಿದ್ದರಾಮಯ್ಯನವರೇ ನಿಮಗೊಂದು ನೇರ ಸವಾಲು ಈ ಘಟನೆಗೆ ಕಾರಣವಾದ ಗ್ಯಾಂಗ್ ಸ್ಟಾರ್ ಗಳನ್ನು ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ ? ಸಣ್ಣ ಕಾರಣಕ್ಕೆ ಶಾಸಕರ ನ್ನು ಬಂದಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂದಿಸುವ ಗಂಡೆದೆ ಇಲ್ಲವೇ? ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.