ಬೆಂಗಳೂರು: ಕುಟುಂಬವಾದದ ಕಾಂಗ್ರೆಸ್ ಬೇಕೇ? ಪರಂಪರೆ ಕಾಪಾಡುವ ಬಿಜೆಪಿ ಬೇಕೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶ್ನಿಸಿದರು.
ಹುಕ್ಕೇರಿಯಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೋದಿಜೀಗೆ 10 ವರ್ಷ ಬೆಂಬಲ ನೀಡಿದ್ದೀರಿ ಎಂದರಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ಮಾಡಬೇಕಿತ್ತೇ ಎಂದು ಪ್ರಶ್ನಿಸಿ ‘ಹೌದು’ ಎಂದು ಜನರಿಂದ ಉತ್ತರ ಪಡೆದರು.
ಕಾಂಗ್ರೆಸ್ ಪಕ್ಷವು ರಾಮಮಂದಿರ ನಿರ್ಮಾಣ ವಿಚಾರವನ್ನು ವಿಳಂಬ ಮಾಡಿತು. ಮೋದಿಜೀ ಅವರು ಕೇಸು ಗೆದ್ದು, ಭೂಮಿಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ರಾಹುಲ್ ಬಾಬಾ, ಸೋನಿಯಾ ಗಾಂಧಿ, ಖರ್ಗೆಯವರಿಗೆ ಆಮಂತ್ರಣಪತ್ರ ಇದ್ದರೂ ಅವರು ಗೈರುಹಾಜರಾದರು. ಮತಬ್ಯಾಂಕ್ಗಾಗಿ ಈ ನಿರ್ಧಾರ ಮಾಡಿದ್ದಾರೆ. ಇವರಿಗೆ ಮತ ಕೊಡಲು ಸಾಧ್ಯವೇ ಎಂದು ಕೇಳಿದರು.
ಕಾಶಿ ವಿಶ್ವನಾಥ ಮಂದಿರವನ್ನು ಔರಂಗಬೇಬನು ಹಾಳು ಮಾಡಿದ್ದ. ಕಾಶಿ ಕಾರಿಡಾರ್, ಸೋಮನಾಥ ಮಂದಿರ ಮೊದಲಾದ ಕೆಲಸಗಳನ್ನು ಮೋದಿಜೀ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣಕ್ಕಾಗಿ ಈ ಎಲ್ಲ ವಿಚಾರಗಳನ್ನು ಕಡೆಗಣಿಸಿತ್ತು ಎಂದು ಆಕ್ಷೇಪಿಸಿದರು.
ಕಾಶ್ಮೀರ ನಮ್ಮದಲ್ಲವೇ ಎಂದು ಪ್ರಶ್ನಿಸಿದ ಅವರು, ಖರ್ಗೆಯವರು ನಮಗೆ ಕಾಶ್ಮೀರದ ಜೊತೆಗೇನು ಸಂಬಂಧ ಎನ್ನುತ್ತಾರೆ. ಆದರೆ, ಇಲ್ಲಿನ ಜನತೆ ಕಾಶ್ಮೀರಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದರು. 370ನೇ ವಿಧಿ ರದ್ದು ಮಾಡಬೇಕಿತ್ತಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ಪಕ್ಷವು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇóಷ ಸ್ಥಾನಮಾನವನ್ನು ಮೋದಿಜೀ ಅವರು ರದ್ದು ಮಾಡಿದ್ದಾರೆ ಎಂದು ತಿಳಿಸಿದರು. ಕಾಶ್ಮೀರದ ಆತಂಕವಾದ, ಭಯೋತ್ಪಾದನೆ ಈಗ ಇಲ್ಲವಾಗಿದೆ ಎಂದು ನುಡಿದರು.
ರಾಹುಲ್ ಬಾಬಾ ಅವರು ಸಂಸತ್ತಿನಲ್ಲಿ ಆಗ ಮಾತನಾಡಿದ್ದರು. 370 ನೇ ವಿಧಿ ರದ್ದು ಮಾಡಿದರೆ ರಕ್ತದ ನದಿ ಹರಿಯುತ್ತದೆ ಎಂದಿದ್ದರು. 5 ವರ್ಷ ಕಳೆದರೂ ಏನೂ ಸಮಸ್ಯೆ ಆಗಿಲ್ಲ ಎಂದು ನುಡಿದರು. ಮೋದಿಜೀ ಅವರು ದೇಶವನ್ನು ಬಾಧಿಸುತ್ತಿದ್ದ ಭಯೋತ್ಪಾದಕತೆಯಿಂದ ಮುಕ್ತಿ ಕೊಟ್ಟಿದ್ದಾರೆ; ಪಿಎಫ್ಐ ನಿಷೇಧಿಸಿದ್ದಾರೆ ಎಂದು ತಿಳಿಸಿದರು.
ಎಸ್ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಸರಕಾರ ನಡೆಯುತ್ತಿದೆ ಎಂದು ಟೀಕಿಸಿದ ಅವರು, ಬೆಂಗಳೂರು ಬಾಂಬ್ ಸ್ಫೋಟವನ್ನು ಪ್ರಸ್ತಾಪಿಸಿದರು. ನೇಹಾ ಹಿರೇಮಠ ಅವರ ಹತ್ಯೆ ಕೇಸನ್ನು ಸರಿಯಾಗಿ ತನಿಖೆ ಮಾಡಲು ಆಗದಿದ್ದರೆ ಸಿಬಿಐಗೆ ಕೊಡಿ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದರು.
ಹಿಂದೂ ವಿರೋಧಿಗಳು ಮತ್ತು ಹಿಂದೂಗಳಿಗೆ ಅವಮಾನ ಮಾಡುವವರು ಮತ್ತು ಹಿಂದೂ ಸನಾತನ ಧರ್ಮ ಸಂರಕ್ಷಣೆ ಮಾಡುವವರ ನಡುವೆ ಮತಸಮರ ನಡೆದಿದೆ ಎಂದು ತಿಳಿಸಿದರು. ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಕೊಟ್ಟ ಮತವು ಮೋದಿಜೀ ಅವರಿಗೆ ತಲುಪಲಿದೆ ಎಂದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ರೈತರಿಗೆ 10 ಸಾವಿರ ಸಿಗುತ್ತಿತ್ತು. ರಾಜ್ಯ ಸರಕಾರ ಕೊಡುತ್ತಿದ್ದ 4 ಸಾವಿರವನ್ನು ರದ್ದು ಮಾಡಿದ್ದಾರೆ. ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದರು.
ಬರಗಾಲ, ನೀರಿನ ಸಮಸ್ಯೆ ತೀವ್ರಗೊಂಡಿದೆ. ವಿದ್ಯುತ್ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ಸಿಗರು ಕರ್ನಾಟಕವನ್ನು ದಿವಾಳಿ ಮಾಡಿದ್ದಾರೆ. ಮೋದಿಯವರಿಗೆ ಮತ ಕೊಟ್ಟರೆ ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಅವರು ಪ್ರಕಟಿಸಿದರು. ನದಿ ಜೋಡಣೆ ಮೂಲಕ ನೀರಿನ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು. ಇಲ್ಲಿನ 3 ಲಕ್ಷ ಮನೆಗಳಿಗೆ ನಳ್ಳಿ ನೀರು ಸಂಪರ್ಕ, ಗ್ಯಾಸ್ ಸಂಪರ್ಕ, 2 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಕೂಡ ಅವರು ಇದೇವೇಳೆ ಮಾಹಿತಿ ಕೊಟ್ಟರು.
ರಾಹುಲ್ ಬಾಬಾ ಕಂಪೆನಿಯಿಂದ ದೇಶವನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ. ಮೋದಿಜೀ ಅವರ ಅವಧಿಯಲ್ಲಿ ದೇಶ ಸುರಕ್ಷಿತವಾಗಿತ್ತು; ಸಮೃದ್ಧ ದೇಶವಾಗಿ ಭಾರತ ಹೊರಹೊಮ್ಮಿದೆ. ಸೋನಿಯಾ ಗಾಂಧಿ, ರಾಹುಲ್, ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಬಾಂಬ್ ಸ್ಫೋಟ, ಭಯೋತ್ಪಾದನೆ ನಿರಂತರವಾಗಿ ನಡೆದಿತ್ತು ಎಂದು ವಿವರಿಸಿದರು.
ಜಗತ್ತಿನ 3ನೇ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲು ಮೋದಿ ಗ್ಯಾರಂಟಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ರಾಹುಲ್ ಬಾಬಾ ಅಮೇಥಿಯಿಂದ ರಾಯಬರೇಲಿಗೆ ಓಡಿದ್ದಾರೆ. ರಾಹುಲ್ ಬಾಬಾಗೆ ಸೋಲು ಖಚಿತ ಎಂದು ತಿಳಿಸಿದರು. ಕೋವಿಡ್ ಲಸಿಕೆಯನ್ನು ಮೋದಿ ಲಸಿಕೆ ಎಂದು ರಾಹುಲ್ ಬಾಬಾ ಹೇಳಿದ್ದರು. ಅಲ್ಲದೆ ಸದ್ದಿಲ್ಲದೆ ರಾತ್ರಿ ಲಸಿಕೆ ಹಾಕಿಸಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು.
ಒಂದೆಡೆ 12 ಲಕ್ಷ ಕೋಟಿಯ ಹಗರಣಗಳ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷ ಇದೆ. ಇನ್ನೊಂದೆಡೆ 23 ವರ್ಷ ಸಿಎಂ, ಪ್ರಧಾನಿ ಆಗಿದ್ದರೂ ಒಂದೇ ಒಂದು ಪೈಸೆಯ ಭ್ರಷ್ಟಾಚಾರದ ಆರೋಪ ಇಲ್ಲದ ಪ್ರಾಮಾಣಿಕರಾದ ನರೇಂದ್ರ ಮೋದಿಯವರು ಇದ್ದಾರೆ ಎಂದು ವಿಶ್ಲೇಷಿಸಿದರು. ಮುಂದಿನ 5 ವರ್ಷಗಳ ಕಾಲ ಇವರಿಬ್ಬರ ನಡುವೆ ಯಾರಿಗೆ ಅಧಿಕಾರ ಎಂಬುದನ್ನು ಆಯ್ಕೆ ನಡೆಸಬೇಕಿದೆ ಎಂದು ತಿಳಿಸಿದರು.
ಅಣ್ಣಾ ಸಾಹೇಬ ಜೊಲ್ಲೆಯವರನ್ನು ಗೆಲ್ಲಿಸಿ; ಮೋದಿಜೀ ಅವರಿಗೆ 400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಕೊಡಿ ಎಂದು ವಿನಂತಿಸಿದರು. ಭಾಷಣದ ಆರಂಭದಲ್ಲಿ ಜೈ ಶಿವಾಜಿ, ಜೈ ಭವಾನಿ ಘೋಷಣೆ ಕೂಗಿದರು. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಸ್ಥಾಪಿಸಿದ್ದರು ಎಂದು ನೆನಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.