ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯರಾಗಿರುವ, ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ದಿರುವ ಪ್ರಹ್ಲಾದ ಜೋಶಿ ಅವರಿಗೆ ಈ ಚುನಾವಣೆಯಲ್ಲಿ ಕುರುಬ ಸಮಾಜವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದು ಎಂಬ ವಿಶ್ವಾಸವನ್ನು ಮಾಜಿ ಸಚಿವ ಬೈರತಿ ಬಸವರಾಜ ಇಂದಿಲ್ಲಿ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದಾಗಿಯೂ, ಸಮಾಜದ ಮುಖಂಡರ ಸಭೆಗಳನ್ನು ನಡೆಸಿ, ಸಮಾಜದ ಜನರು ಹೆಚ್ಚು ಇರುವ ಕಡೆಗೆ ಪ್ರಚಾರ ಕೈಗೊಂಡಿದ್ದಾಗಿಯೂ ನುಡಿದ ಅವರು ಎಲ್ಲೆಡೆ ಜೋಶಿ ಪರ ಅಲೆ ಇದ್ದುದಾಗಿ ನುಡಿದರು. ಕುರುಬ ಸಮಾಜದ ಮತದಾರರು ಮತದಾನ ದಿನವನ್ನು ಎದುರು ನೋಡುತ್ತಿದ್ದಾರೆ. ಮೇ 7 ಎಂದು ಬಂದೀತೋ ಎಂದು ಕಾತರರಾಗಿದ್ದಾರೆ. ಅಂದು ಮುಂಜಾನೆ ಮತಗಟ್ಟೆಗಳಲ್ಲಿ ಸರತಿ ಸಾಲು ಇರುವುದಾಗಿ ತಿಳಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಒಂದು ಕಡೆ. ಆದರೆ ಇದು ಲೋಕಸಭಾ ಚುನಾವಣೆ ಆಗಿದ್ದರಿಂದ ಮತದಾರರು ದೇಶದ ಸುರಕ್ಷಿತತೆ, ಸುಭದ್ರತೆ ಕುರಿತು ವಿಚಾರ ಮಾಡುತ್ತಿದ್ದು, ತಾವೆಲ್ಲ ಬಿಜೆಪಿಗೆ ಮತ ನೀಡುವುದಾಗಿ ಎಲ್ಲರೂ ತಾವು ಪ್ರಚಾರ ಕೈಗೊಂಡ ಸ್ಥಳಗಳಲ್ಲಿ ತಮಗೆ ತಿಳಿಸಿರುವುದಾಗಿ ಬೈರತಿ ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಇಂಥಲ್ಲಿ ಕಾಂಗ್ರೆಸ್ನವರು ಕುರುಬ ಸಮಾಜಕ್ಕೆ ಸೇರಿದ ಒಬ್ಬ ಯುವಕನಿಗೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಇಳಿಸಿ, ಆತನನ್ನು ಹರಕೆಯ ಕುರಿ ಮಾಡಿದ್ದಾರೆ, ನಮಗೆಲ್ಲ ಬಹಳ ನೋವಾಗಿದೆ ಎಂದು ಬೈರತಿ ಬೇಸರ ವ್ಯಕ್ತಪಡಿಸಿದರು. ಆತ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಒಮ್ಮೆ ಸೋತಿದ್ದರೂ, ಅದೇ ಕ್ಷೇತ್ರದಲ್ಲಿ ಆತನಿಗೆ ಕಾಂಗ್ರೆಸ್ನವರು ಇನ್ನೊಮ್ಮೆ ಅವಕಾಶ ನೀಡಬಹುದಿತ್ತು ಎಂದರು. ನಾಲ್ಕು ಬಾರಿ ಸಂಸದರಾಗಿರುವ ಜೋಶಿ ಅವರ ಹೆಸರು ಕ್ಷೇತ್ರದಾದ್ಯಂತ ಚಿರಪರಿಚಿತ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅಪರಿಚಿತ ಎಂದರು.
ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ತಾವು ಸಂಚರಿಸಿ, ಹಾಲುಮತ ಸಮಾಜದವರನ್ನು ಭೆಟ್ಟಿ ಮಾಡಿ, ಬಿಜೆಪಿಯನ್ನು ಬೆಂಬಲಿಸುವಂತೆ ಮನವೊಲಿಸಿರುವುದಾಗಿ ನುಡಿದರು. ಬೆಂಗಳೂರಿನಲ್ಲಿ ಕಡಿಮೆ ಮತದಾನ ಕುರಿತು ಕೇಳಿದ ಪ್ರಶ್ನೆಗೆ ಅವರು ಚುನಾವಣಾ ಆಯೋಗವು ರಜಾದಿನಗಳ ಹಿಂದಿನ ದಿನ ಅಥವಾ ಮುಂದಿನ ದಿನ ಬಿಟ್ಟು ಮತದಾನ ದಿನ ನಿಗದಿಪಡಿಸಬೇಕೆಂದು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.