ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಚಿವರಿಗೆ ದೇಶದ ಸುರಕ್ಷತೆ, ಭದ್ರತೆ ಮತ್ತು ನಾಗರಿಕ ಸಮಾಜದ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹೋಟೆಲ್ ಜಿ.ಎಂ. ರಿಜಾಯ್ಸ್ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ. ಓಲೈಕೆ ಮಾಡುವುದು ಇವರ ಚಾಳಿ ಎಂದು ಟೀಕಿಸಿದರು. ಬಿಜೆಪಿ ಒತ್ತಾಯದ ಬಳಿಕ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣವನ್ನು ತುಂಬ ದಿನಗಳ ಬಳಿಕ ಎನ್ಐಎಗೆ ಹಸ್ತಾಂತರ ಮಾಡಿದ್ದಾರೆ ಎಂದರು.
ಬಿಜೆಪಿಗೆ ಸ್ಫೋಟದ ಜೊತೆ ಸಂಬಂಧ ಇದೆ ಎಂದು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದರು. ಎನ್ಐಎಯವರು ಸಾಕ್ಷಿಯಾಗಿ ಪರಿಗಣಿಸಿದ ಕುರಿತು ವಿವರಣೆ ನೀಡಿದರು. ಕಾಂಗ್ರೆಸ್ಸಿನವರಿಗೆ ಪ್ರತಿ ಹಂತದಲ್ಲೂ ತನಿಖೆಯ ದಾರಿ ತಪ್ಪಿಸುವುದುÀ ಚಾಳಿಯಾಗಿದೆ. ಡಿ.ಕೆ.ರವಿ ಸಾವಿನ ಪ್ರಕರಣದಿಂದ ರಾಮೇಶ್ವರಂ ಕೆಫೆ ಪ್ರಕರಣದ ವರೆಗೆ ಪ್ರಾರಂಭದಲ್ಲಿ ಇವರೇ ತೀರ್ಮಾನ ಮಾಡುತ್ತಾರೆ ಎಂದು ದೂರಿದರು.
ಇದು ಉದ್ಯಮಗಳ ನಡುವಿನ ದ್ವೇಷದ ಘಟನೆಯಲ್ಲ; ಆರೋಪಿಗಳಿಗೆ ಐಸಿಸ್, ಭಯೋತ್ಪಾದನಾ ಸಂಘಟನೆಗಳ ಜೊತೆ ಲಿಂಕ್ ಇರುವುದು ಗೊತ್ತಾಗಿದೆ. ಆರೋಪಿಗಳು ಪಶ್ಚಿಮ ಬಂಗಾಲದಲ್ಲಿ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರು ಎಂದೂ ತಿಳಿದುಬಂದಿದೆ. ಕರ್ನಾಟಕ ಮತ್ತು ಬೆಂಗಳೂರನ್ನು ಭಯೋತ್ಪಾದನಾ ಚಟುವಟಿಕೆಯ ಕೇಂದ್ರ ತಾಣವಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಪಶ್ಚಿಮ ಬಂಗಾಲ, ತಮಿಳುನಾಡು ಸೇರಿ ಇಂಡಿ ಒಕ್ಕೂಟ ಅಧಿಕಾರ ಇರುವಲ್ಲಿ ಇಂಥವರಿಗೆ ಇರಲು ಅವಕಾಶ ಕೊಡುತ್ತಿದ್ದಾರೆ. ಅಲ್ಲದೆ ವಿವಿಧ ದಾಖಲೆಪತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ರಾಜ್ಯದ ಸುರಕ್ಷತೆ ಬಗ್ಗೆ ನಿಮ್ಮ ಜವಾಬ್ದಾರಿ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಮತ್ತು ಗೃಹಸಚಿವರು ತಿಳಿಸಬೇಕಿದೆ ಎಂದು ಆಗ್ರಹಿಸಿದರು. ರಾಷ್ಟ್ರದ ಸುರಕ್ಷತೆ ಸಂಬಂಧ ರಾಜ್ಯ ಸರಕಾರದ ಜವಾಬ್ದಾರಿ ಏನೆಂದು ತಿಳಿಸಲು ಒತ್ತಾಯಿಸಿದರು.
ಬಂಧಿತ ಆರೋಪಿಗಳು 2020ರ ಭಯೋತ್ಪಾದನಾ ಪ್ರಕರಣದಲ್ಲಿ ಬೇಕಾದವರು. ಗಂಭೀರ ಪ್ರಕರಣದಲ್ಲಿ ಭಾಗಿ ಆದವರು, ಅಪರಾಧಿಗಳನ್ನು ಕಾಂಗ್ರೆಸ್ ಓಲೈಕೆ ಮಾಡುತ್ತಿದೆ. ಶಂಕಿತರನ್ನು ನಿರಪರಾಧಿಗಳು ಎಂದು ಹೇಳುವುದು ಡಿ.ಕೆ.ಶಿವಕುಮಾರ್ ಅವರ ಚಾಳಿ ಎಂದು ಟೀಕಿಸಿದರು.
ಮಾರ್ಚ್ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬೆಂಗಳೂರಿಗೆ ಕಳಂಕ ತಂದಿದೆ. ಇದು ವ್ಯವಹಾರಕ್ಕೆ ಸಂಬಂಧಿಸಿ ಆದ ಸ್ಫೋಟ ಎಂದು ಕಾಂಗ್ರೆಸ್ನ ಮುಖಂಡರು ಹೇಳಿಕೆ ಕೊಟ್ಟಿದ್ದರು. ಇದನ್ನು ಬಾಂಬ್, ಭಯೋತ್ಪಾದನೆಗೆ ತಳಕು ಹಾಕಬಾರದು ಎಂದು ಸಚಿವರು ಹೇಳಿದ್ದರು. ದಿನೇಶ್ ಗುಂಡೂರಾವ್ ಅವರು ಓಲೈಕೆಯ ಹೇಳಿಕೆ ಕೊಟ್ಟಿದ್ದರು ಎಂದು ನೆನಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಚಾಳಿ ಎಂದು ಟೀಕಿಸಿದರು.
ಹಿಂದೆ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಅವರೆಲ್ಲ ಅಮಾಯಕರು ಎಂದು ಹೇಳಿಕೆ ಕೊಟ್ಟಿದ್ದರು ಎಂದು ಅವರು ಗಮನ ಸೆಳೆದರು. ರಾಜ್ಯ ವಕ್ತಾರ ಪ್ರಕಾಶ್ ಶೇಷ ರಾಘವಾಚಾರ್, ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ.ಗಣೇಶ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.