ಬೆಂಗಳೂರು: ಮತಾಂಧತೆಯ ಅತಿರೇಕದ ಪರಿಣಾಮವಾಗಿ ಪಾಕಿಸ್ತಾನದ ಪ್ರೀತಿಯನ್ನು ಬೆಳಗಾವಿ, ವಿಧಾನಸೌಧದಲ್ಲಿ ವ್ಯಕ್ತಪಡಿಸಲಾಗಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿತ್ತು. ಈಗ ಬೆಂಗಳೂರಿನಲ್ಲಿ ಎಲ್ಇಡಿ ಬಾಂಬ್ ಸ್ಫೋಟ ಆಗಿದೆ. ಕಳೆದ 11 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಣ್ಣ- ದೊಡ್ಡದು ಸೇರಿ ಆರು ಸ್ಫೋಟಗಳಾಗಿವೆ. ಇದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿ ಎಂದು ಅನುಮಾನ ಮೂಡುವಂತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಗ್ರಹಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಸರಕಾರವು ಬಾಂಬ್ ಸ್ಫೋಟದ ಕುರಿತ ಸಮಗ್ರ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಬ್ರ್ಯಾಂಡ್ ಬೆಂಗಳೂರಿಗೆ ಬಾಂಬ್ ಭೀತಿ ಎದುರಾಗಿದೆ. ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟವು ಸರಣಿ ಸ್ಫೋಟದ ಪರೀಕ್ಷಾರ್ಥ ಸ್ಫೋಟ ಅಥವಾ ರಿಹರ್ಸಲ್ ಇರಬಹುದು ಎಂದು ಅವರು ಆರೋಪಿಸಿದರು. ಸರಣಿ ಸ್ಫೋಟದ ಮುನ್ಸೂಚನೆ ಇದಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಭಯೋತ್ಪಾದಕರು ಸ್ಲೀಪರ್ ಸೆಲ್ ಆಗಿ ಮಾಡಿಕೊಂಡದ್ದು ಹೊಸತಲ್ಲ. ತರಬೇತಿ ಕೇಂದ್ರವಾಗಿಯೂ ಕರ್ನಾಟಕವನ್ನು ಬಳಸಿಕೊಂಡಿದ್ದಾರೆ. ಕೊಪ್ಪದಲ್ಲಿ ಹಿಂದೆ ಬಂದೂಕು, ಬಾಂಬ್ ತಯಾರಿಸುವ ತರಬೇತಿ ಕೊಡಲಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಕುಕ್ಕರ್ ಬಾಂಬ್ ತಯಾರಿಸಲಾಗುತ್ತಿತ್ತು. ಕೊಡಗಿನಲ್ಲೂ ಭಯೋತ್ಪಾದಕರಿಗೆ ತರಬೇತಿ ಕೊಡಲಾಗುತ್ತಿತ್ತು ಎಂದು ತಿಳಿಸಿದರು. ಈ ಎಲ್ಲ ಮಾಹಿತಿ ಸರಕಾರದ ಬಳಿ ಇದೆ ಎಂದು ವಿವರಿಸಿದರು.
ದೇಶದ ಉತ್ತರ ಭಾಗದಲ್ಲಿ ಬಾಂಬ್ ಸ್ಫೋಟದ ಸದ್ದು ಕ್ಷೀಣವಾಗಿದೆ; ಬಹುತೇಕ ನಿಂತುಹೋಗಿದೆ. ಭಾರತದ ದಕ್ಷಿಣ ಭಾಗದಲ್ಲಿ ಕೇರಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಭಯೋತ್ಪಾದನೆ ಆರಂಭವಾಗುವುದೇ ಮತಾಂಧತೆಯ ಅತಿರೇಕದಿಂದ ಎಂದು ತಿಳಿಸಿದ ಸಿ.ಟಿ.ರವಿ ಅವರು, ಮತಾಂಧತೆಯ ಅತಿರೇಕವನ್ನು ಕೋವಿಡ್ ಸಂದರ್ಭದಲ್ಲಿ ಹಲವೆಡೆ ಗಮನಿಸಿದ್ದೇವೆ. ಪಾದರಾಯನಪುರದಲ್ಲಿ ಕೋವಿಡ್ ವಾರಿಯರ್ಸ್ಗಳ ಮೇಲೆ ದಾಳಿ ನಡೆದಿತ್ತು. ಡಿ.ಜೆ.ಹಳ್ಳಿ- ಕೆಜೆ.ಹಳ್ಳಿ ಗಲಭೆ ಸಂದರ್ಭದಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಸುಟ್ಟಿದ್ದರು. 200ಕ್ಕೂ ಹೆಚ್ಚು ಮನೆಗಳ ವಾಹನಗಳನ್ನು ಸುಟ್ಟದ್ದಲ್ಲದೆ, ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದರು ಎಂದು ತಿಳಿಸಿದರು.
ಹಿಂದೆ ಕೊಯಮತ್ತೂರಿನಲ್ಲಿ ಸರಣಿ ಸ್ಫೋಟ ನಡೆದಿತ್ತು. ಈಗ ಆ ಥರ ಸರಣಿ ಸ್ಫೋಟದ ತಯಾರಿ ಮಾಡುತ್ತಿದ್ದಾರೆ. ಮತಾಂಧ ಶಕ್ತಿಗಳು ಮತ್ತು ಭಯೋತ್ಪಾದಕರು ಕೈಜೋಡಿಸಿದ್ದಾರೆ ಎಂಬ ಸಂಶಯ ಇದೆ. ಈ ಸರಕಾರ ಬಂದ ಬಳಿಕ ಎನ್ಐಎ ಬಂಧಿತ ಶಂಕಿತ ಭಯೋತ್ಪಾದಕರ ಸಂಖ್ಯೆ 21 ಎಂದು ತಿಳಿಸಿದರು.
ಜುಲೈನಲ್ಲಿ 5 ಜನರು, ಡಿಸೆಂಬರ್ನಲ್ಲಿ 8, ಜನವರಿಯಲ್ಲಿ ದಾಳಿ ಸಂಚಿನಲ್ಲಿ 8 ಜನ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಹಿಂದೆ ಭಟ್ಕಳವನ್ನು ಜೈನರ ಕಾಶಿ ಎಂದು ಕರೆಯಲಾಗುತ್ತಿತ್ತು. ಈಗ ಅದು ಭಯೋತ್ಪಾದಕರ ನೆಲೆಯಾಗಿದೆ. ಭಯೋತ್ಪಾದಕರ ಜೊತೆ ಭಟ್ಕಳದ ಹೆಸರು ತಳಕು ಹಾಕಿಕೊಂಡಿದೆ (ಉದಾ: ಯಾಸೀನ್ ಭಟ್ಕಳ್) ಎಂದರು.
ಇದೆಲ್ಲವನ್ನೂ ಗಮನಿಸಿದಾಗ ಭಾರತವನ್ನು ಆಕ್ರಮಿಸಿ ಇಸ್ಲಾಮಿ ರಾಷ್ಟ್ರವಾಗಿ ಮಾಡುವ ಅರಬ್ ಯೋಜನೆಯ ಪ್ರಕಾರ ನಡೆಯುವಂತಿದೆ. ಆ ಯೋಜನೆಯಂತೆ ಗಾಂಧಾರ ಕಳಕೊಂಡಿದ್ದು, ಅದು ಅಪಘಾನಿಸ್ತಾನವಾಗಿದೆ. ಸಿಂಧ್ ಕಳಕೊಂಡಿದ್ದು, ಪಾಕಿಸ್ತಾನವಾಗಿದೆ. ಬಂಗಾಲ ತುಂಡರಿಸಿ ಬಾಂಗ್ಲಾದೇಶ ಮಾಡಲಾಗಿದೆ. ಕಾಶ್ಮೀರವನ್ನು ಭಾರತದಿಂದ ತುಂಡರಿಸುವ ಸಂಚು ಕೂಡ ಆ ಯೋಜನೆಯ ಮುಂದುವರಿದ ಭಾಗವಾಗಿತ್ತು. ಸಿಮಿ ಕಚೇರಿ ಮೇಲೆ ದಾಳಿ ನಡೆದಾಗ ನಕ್ಷೆ ಲಭಿಸಿತ್ತು. ಮೊಘಲರ ಆಳ್ವಿಕೆ ಇದ್ದ ಪ್ರದೇಶಗಳನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂದು ಯೋಜನೆ ರೂಪಿಸಿ ಹಲವು ರೀತಿಯ ತಯಾರಿ ಮಾಡುತ್ತಿದ್ದ ಮಾಹಿತಿ ಅದರಲ್ಲಿತ್ತು. ಇದು ಅದರ ಮುಂದುವರಿದ ಭಾಗ ಇರಬಹುದೆಂಬ ಸಂಶಯವನ್ನು ಅವರು ವ್ಯಕ್ತಪಡಿಸಿದರು. ಇದರ ಸಮಗ್ರ ತನಿಖೆ ಮಾಡಲು ಇದನ್ನು ಎನ್ಐಎಗೆ ಒಪ್ಪಿಸುವಂತೆ ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.