ಬೆಂಗಳೂರು: ಗೋಧ್ರಾ ಮಾದರಿಯಲ್ಲಿ ರೈಲನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಗ್ರಹಿಸಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಿಂದ ವಾಪಸಾಗುತ್ತಿದ್ದ ವಿಶೇಷ ರೈಲಿಗೆ ಹೊಸಪೇಟೆಯಲ್ಲಿ ಒಬ್ಬ ಮತಾಂಧ ವ್ಯಕ್ತಿ ಹತ್ತಿದ್ದ. ಅಯೋಧ್ಯೆಗೆ ತೆರಳಿ ಹಿಂತಿರುಗುತ್ತಿದ್ದ ರಾಮಭಕ್ತರನ್ನು ಬೆದರಿಸಿ ಗೋಧ್ರಾ ಮಾದರಿಯಲ್ಲಿ ನಿಮ್ಮನ್ನೆಲ್ಲ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಎಲ್ಲ ರಾಮಭಕ್ತರು ಸೇರಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರೂ ಕೂಡ ಆರೋಪಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಎಲ್ಲ ರಾಮಭಕ್ತರು ಸೇರಿ ಪ್ರತಿಭಟನೆ ಮಾಡಿದ ಬಳಿಕ ಸಿ.ಸಿ.ಟಿವಿ. ಫೂಟೇಜ್ ಆಧರಿಸಿ ಆರೋಪಿಯನ್ನು ಬಂಧಿಸಿದ ಮಾಹಿತಿ ಇದೆ ಎಂದ ಅವರು, ಗೋಧ್ರಾ ಮಾದರಿಯಲ್ಲಿ ಹತ್ಯಾಕಾಂಡ ನಡೆಸುವ ಬೆದರಿಕೆ ಹಾಕುವಂಥ ಮನಸ್ಥಿತಿ ಏಕಾಏಕಿ ಬಂದಿರುತ್ತದೆ ಎಂದು ಭಾವಿಸಬಾರದು. ಇದರ ಹಿಂದೆ ಯಾವುದೋ ಪಿತೂರಿ ಆಗಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.
ಈಚೆಗೆ ರಾಮನಗರದಲ್ಲಿ ವಕೀಲನೊಬ್ಬ ವಾರಣಾಸಿ ಜ್ಞಾನವ್ಯಾಪಿಗೆ ಸಂಬಂಧಿಸಿ ನ್ಯಾಯಾಲಯ ಕೊಟ್ಟ ತೀರ್ಪನ್ನು ವಿರೋಧಿಸಲು ಬಳಸಿದ ಭಾಷೆ, ಈಗ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕೃತ್ಯ- ಇವು ಕೇವಲ ಪ್ರತ್ಯೇಕ ಘಟನೆ ಎಂದು ಭಾವಿಸಬಾರದು. ಇದರ ಹಿಂದೆ ಪಿತೂರಿಯ ಸಾಧ್ಯತೆಗಳಿರುತ್ತವೆ. ‘ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ’ ಎಂಬ ಗಾದೆ ಮಾತಿದೆ. ಹಾಗಾಗಿ ಅನಾಹುತ ಆಗುವುದಕ್ಕೂ ಮುಂಚೆ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ಸಮಗ್ರ ತನಿಖೆ ನಡೆಸಲು ಆಗ್ರಹಿಸುವುದಾಗಿ ಹೇಳಿದರು.
ಪೊಲೀಸರ ಕರ್ತವ್ಯಲೋಪ- ಕ್ರಮಕ್ಕೆ ಒತ್ತಾಯ
ರಾಮಭಕ್ತರೇ ಆರೋಪಿಯನ್ನು ಹಿಡಿದು ಕೊಟ್ಟ ನಂತರ ಕೂಡ ಪೊಲೀಸರು ವಶಕ್ಕೆ ತೆಗೆದುಕೊಳ್ಳದೆ, ಅವನು ತಪ್ಪಿಸಿಕೊಳ್ಳಲು ಕಾರಣರಾಗಿದ್ದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಸ್ಥಳದಲ್ಲಿದ್ದ ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ. ಅವರ ಮೇಲೂ ಕ್ರಮ ಕೈಗೊಳ್ಳಿ ಎಂದು ಸಿ.ಟಿ.ರವಿ ಅವರು ಒತ್ತಾಯಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹರಿಪ್ರಸಾದ್ ಅವರು, ರಾಜ್ಯಸಭಾ ಸದಸ್ಯರೂ ಆಗಿದ್ದರು. ಅವರಿಗೆ ಬರುವ ಮಾಹಿತಿಯನ್ನು ಸುಮ್ಮನೆ ಹೇಳಿದ್ದಾರೆ ಅಂದುಕೊಳ್ಳಬಾರದು. ಅವರನ್ನು ಕೂಡ ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಿ ಎಂದಿದ್ದೆ. ಈಗ ನಡೆದ ಘಟನೆ ಕೇವಲ ಕಾಕತಾಳೀಯ ಆಗಿರಲಾರದು. ಹಾಗಾಗಿ ಹೊಸಪೇಟೆಯಲ್ಲಿ ಬಂಧಿಸಿದ ವ್ಯಕ್ತಿ ಮಾತ್ರವಲ್ಲದೆ ಹರಿಪ್ರಸಾದರನ್ನೂ ತನಿಖೆಗೆ ಒಳಪಡಿಸಿ; ಗೋಧ್ರಾ ಮಾದರಿ ಹತ್ಯೆ ಎಂಬ ಅವರ ಹೇಳಿಕೆಗೆ ಸುದ್ದಿ ಮೂಲ ಏನು ಎಂದು ತಿಳಿದುಕೊಳ್ಳಬೇಕಿದೆ. ಪೊಲೀಸರಿಗೆ ಮಾಹಿತಿ ಹಂಚಿಕೊಳ್ಳುವುದು ಅವರ ಕರ್ತವ್ಯ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಈ ವಿಷಯದಲ್ಲಿ ತನಿಖೆಗೆ ನೋಟಿಸ್ ಕೊಟ್ಟಾಗ ಹರಿಪ್ರಸಾದ್ ಉರಿದುಬಿದ್ದಿದ್ದರು. ಈಗ ಆಗಿರುವ ಘಟನೆ ಗಮನಿಸಿದಾಗ ಇದನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ರಾಜ್ಯದ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳನ್ನು ಆಗ್ರಹಿಸುವುದಾಗಿ ಹೇಳಿದರು.
ತುಘಲಕ್ನಿಂದ ಪ್ರೇರಣೆ ಪಡೆದ ಸರಕಾರ?
ಕಳೆದ 10-15 ದಿನಗಳಿಂದ ರಾಜ್ಯ ಸರಕಾರವು ಯಾವ ರೀತಿ ಸುತ್ತೋಲೆ ಹೊರಡಿಸುತ್ತಿದೆ; ಯಾವ ರೀತಿ ವಾಪಸ್ ಪಡೆಯುತ್ತದೆ ಎಂಬುದನ್ನು ನೋಡಿದಾಗ ಇದು ಮಹಮ್ಮದ್ ಬಿನ್ ತುಘಲಕ್ ನೀತಿಯಂತೆ ಭಾಸವಾಗುತ್ತಿದೆ. ಆತ ಬೆಳಿಗ್ಗೆ ಒಂದು ಸುತ್ತೋಲೆ ಹೊರಡಿಸಿ ಸಂಜೆ ಅದನ್ನು ವಾಪಸ್ ಪಡೆಯುತ್ತಿದ್ದನಂತೆ. ಆತ ದೆಹಲಿಯಿಂದ ದೌಲತಾಬಾದ್ಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದ್ದ. ಜನ, ಜಾನುವಾರು ಸಮೇತ ಹೋಗಲು ಸೂಚಿಸಿದ್ದನಂತೆ. ಸ್ಥಳಾಂತರದ ವೇಳೆ ಅರ್ಧ ಜನ ಜೀವ ಕಳಕೊಂಡರಂತೆ. ಸ್ವಲ್ಪ ದಿನದ ಬಳಿಕ ನಿರ್ಣಯ ವಾಪಸ್ ಪಡೆದು, ಮತ್ತೆ ಅಲ್ಲಿಗೇ ಹೋಗಲು ತಿಳಿಸಿದನಂತೆ. ಆಗ ಇನ್ನೂ ಒಂದಷ್ಟು ಜನ ಸತ್ತರಂತೆ. ಇದನ್ನು ತುಘಲಕ್ ನೀತಿ ಎನ್ನುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರವು ಕೂಡ ಮಹಮ್ಮದ್ ಬಿನ್ ತುಘಲಕ್ ನಿಂದ ಪ್ರೇರಣೆ ಪಡೆದಂತಿದೆ ಎಂದು ಸಿ.ಟಿ.ರವಿ ಅವರು ವ್ಯಂಗ್ಯವಾಡಿದರು.
ಆ ಪ್ರೇರಣೆ ಪಡೆದೇ ಯುಗಾದಿ, ರಂಜಾನ್ ಮತ್ತಿತರ ಸಾಂಸ್ಕøತಿಕ ಹಬ್ಬಗಳನ್ನು ಆಚರಿಸದೆ ಇರಲು ಸುತ್ತೋಲೆ ಹೊರಡಿಸಿದ್ದರು. ಆಮೇಲೆ ಅದನ್ನು ವಾಪಸ್ ಪಡೆದರು. ಕುವೆಂಪು ಅವರ ಕಾವ್ಯದಿಂದ ಪ್ರೇರಣೆ ಪಡೆದು ಹಾಕಿದ ‘ಜ್ಞಾನದೇಗುಲವಿದು, ಕೈ ಮುಗಿದು ಒಳಗೆ ಬಾ’ ಘೋಷವಾಕ್ಯ ಬದಲಿಸುತ್ತಾರೆ. ಆದೇಶ ಮಾಡಿ ಜನವಿರೋಧ ವ್ಯಕ್ತ ಆಗುತ್ತಿದ್ದಂತೆ ಹಾಗೇ ಸುಮ್ಮನೆ ಎಂದು ಹೇಳಿ ವಾಪಸ್ ಪಡೆಯುತ್ತಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.