ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ವರ್ಚಸ್ಸನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದ್ದು ಅದರ ವಿರುದ್ದು ಸಜ್ಜನರು ಒಂದಾಗಿ ಎದುರಿಸಬೇಕಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.ಅವರು ಬುಧವಾರ ಗುರುವಾಯನಕರೆ ಸನಿಹದ ಶಕ್ತಿನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು ನಡೆಸಿದ ಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಜ್ಜನರು ತಮ್ಮ ನೋವನ್ನು, ಭಾವನೆಗಳನ್ನು ಒಳಗೊಳಗೆ ಅದುಮಿಟ್ಟುಕೊಂಡರೆ ಅದು ದುರ್ಜನರ ನಾಶಕ್ಕೆ ಕಾರಣವಾಗುತ್ತದೆ. ದುರ್ಜನರು ಸಜ್ಜನರನ್ನು ಪೀಡಿಸುವಾಗ ಭಗವಂತನ ಕೃಪೆ ಸಜ್ಜನರ ಕಡೆಗೇ ಇರುತ್ತದೆ. ಡಾ|ಹೆಗ್ಗಡೆಯವರಿಗೆ ಶಕ್ತಿ ತುಂಬಲು ಇಲ್ಲಿ ಸೇರಿದ್ದೇವೆ. ಕ್ಷೇತ್ರವನ್ನು ಅವಹೇಳನ ಮಾಡುತ್ತಿರುವ ರಾಕ್ಷಸರ ವಿರುದ್ಧ ಸಾತ್ವಿಕರ ಆಕ್ರೋಶ ಜ್ವಾಲಾಮುಖಿಯಾಗಿ ಅದರ ಲಾವಾರಸ ಆರಂಭ ಆಗಿದೆ. ಹೆಗ್ಗಡೆಯವರ ವಿರುದ್ಧ ಮಾತನಾಡಿದವರ ವರ್ಚಸ್ಸೇ ಹಾಳಾಗುವುದು ನಿಶ್ಚಿತ ಎಂದರು. ಬಲ್ಯೊಟ್ಟು ವಿಖ್ಯಾತಾನಂದ ಶ್ರೀಗಳು ಆಶೀರ್ವದಿಸುತ್ತಾ, ಅಂಧಾನುಕರಣೆ ಮಾಡಬಾರದು. ಅನ್ಯಾಯದ ವಿರುದ್ಧ ಹೋರಾಡುವ ಮನಸ್ಸು ಶಕ್ತಿ ಬಂದಿರುವುದು ಸಂತಸತಂದಿದೆ ಎಂದರು.
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು, ಪರಿಸರದ ಹೆಸರಲ್ಲಿ ಹಣ ಮಾಡಿದವರಿಗೆ ಇನ್ನೊಬ್ಬರಿಗೆ ಬುದ್ದಿ ಹೇಳುವ ನೈತಿಕತೆ ಇಲ್ಲ. ವಿದೇಶದಿಂದ ಬಂದ ಹಣವನ್ನು ಮನಸ್ವೀ ಖರ್ಚು ಮಾಡಿ ಇನ್ನೊಬ್ಬರ ತೇಜೋವಧೆ ಮಾಡುತ್ತಿದ್ದಾರೆ. ಲಕ್ಷಾಂತರ ಮಂದಿಗೆ ದಾರಿ ದೀಪವಾಗಿರುವ ಡಾ|ಹೆಗ್ಗಡೆಯವರು ಜನತೆಗೆ ದುಡಿದುತಿನ್ನಲು ಕಲಿಸಿದ್ದಾರೆ. ಇದೀಗ ನಾವು ಸಾತ್ವಿಕ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ತೇಜೋವಧೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತೀರ್ವವಾಗಿ ಪ್ರತಿಭಟಿಸಲಿದ್ದೇವೆ ಎಂದ ಅವರು ತಾಳ್ಮೆಗೂ ಒಂದು ಮಿತಿ ಇರುವುದನ್ನು ಅವರು ನೆನಪಿಸಿದರು.
ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ|ಎಂ.ಮೋಹನ ಅಳ್ವಾ ಅವರು ನಾವು ಕಲ್ಲಿನ ಮೂರ್ತಿಗಳಲ್ಲ. ನಮ್ಮ ಭಾವನೆಗೆ ಧಕ್ಕೆತರುವುದನ್ನು ಸಹಿಸೆವು. 48 ವರ್ಷಗಳಿಂದ ಡಾ|ಹೆಗ್ಗಡೆಯವರು ಮಾಡುತ್ತಿರುವ ಜನಪರ ಕೆಲಸಗಳನ್ನು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದರು.ಕೊಂಡೆವೂರು ಯೋಗಾನಂದ ಶ್ರೀಗಳು ಆಶೀರ್ವದಿಸಿ, ಯಾರೂ ಅಧರ್ಮದ ಹಾದಿಯಲ್ಲಿ ನಡೆಯಬಾರದು. ವಿಭೀಷಣನಂತೆ ಸ್ವಾಮಿ ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ರಾಮರಾಜ್ಯ ಖಂಡಿತ ಎಂದರು.
ಯಕ್ಷಗಾನ ಕಲಾವಿದ ಅಶೋಕ ಭಟ್ ಉಜಿರೆ ಅವರು, ಇದೊಂದು ಪ್ರಚಂಡ ಭಕ್ತಿಯ ಶಕ್ತಿ. ಶ್ವಾನ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಆದರೆ ಪಕ್ಕದವನಿಗೆ ನಿದ್ದೆ ಬರುವುದಿಲ್ಲ. ವಿಕೃತ ಮನಸ್ಸು ಬಿಟ್ಟು ಸುಕೃತದ ಕಡೆಗೆ ಮುನ್ನಡೆಯಬೇಕು. ನಾವು ಆಕ್ರಮಣ ಪ್ರವೃತ್ತಿಯವರಲ್ಲ. ರಕ್ಷಣಾತ್ಮಕ ವೃತ್ತಿ ನಮ್ಮದು. ಸಮಾಜದಲ್ಲಿನ ಕಳೆ, ಬಂದಣಿಕೆಗಳನ್ನು ಕಿತ್ತೊಗೆಯೋಣ. ಕತ್ತಲೆಕೋಣೆಯಲ್ಲಿ ಕುಳಿತು ಪತ್ರಗಳನ್ನು ಬರೆಯವುದು ನಿಲ್ಲಿಸಿ ಎಂದರು.
ಕನ್ಯಾನ ಮಹಾಬಲ ಶ್ರೀ ಅವರು, ಧರ್ಮವಿದ್ದಲ್ಲಿ ಜಯವಿದೆ. ಸರಕಾರ ಬ್ಯಾಂಕ್, ಸಂಸ್ಥೆ ಮಾಡದ ಸೌಲಭ್ಯಗಳನ್ನು ಡಾ|ಹೆಗ್ಗಡೆಯವರು ಮಾಡಿದ್ದಾರೆ. ಧರ್ಮವಿದ್ದಲ್ಲಿ ಜಯವಿದೆ. ಅಭಿವೃದ್ಧಿಯ ಕ್ರಾಂತಿಯ ಹರಿಕಾರರ ವಿರುದ್ಧ ಅವಹೇಳನ ಸಲ್ಲದುಎಂದರು.
ಕರಿಂಜೆಯ ಮುಕ್ತಾನಂದಶ್ರೀ ಡಾ|ಹೆಗ್ಗಡೆಯವರನ್ನು ವಿರೋಧಿಸುವವರು ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ನೀವು ಸೆರಗಿನಲ್ಲಿ ಕೆಂಡಕಟ್ಟಿಕೊಂಡಿದ್ದೀರಿ. ಒಂದು ನಿಮ್ಮನ್ನೇ ಸುಡಬಹುದು ಎಂದು ಎಚ್ಚರಿಸಿದ ಅವರು ಇದು ಸತ್ಯ, ಧರ್ಮ, ನ್ಯಾಯದ ವಿರಾಟ ಸ್ವರೂಪ. ನಮ್ಮ ಹೋರಾಟ ನಿಂತ ನೀರಾಗದೆ ನಿರಂತರವಾಗಬೇಕು ಎಂದರು.
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಡಾ|ಹೆಗ್ಗಡೆಯವರ ನೋವು ಇಂದು ಜನರ ರೂಪದಲ್ಲಿ ಬೃಹತ್ತಾಗಿ ಹೊರಬಂದಿದೆ. ಅವಹೇಳದನ ಬಗ್ಗೆ ಸರಕಾರ ಧೃಢನಿರ್ಧಾರ ತೆಗೆದುಕೊಳ್ಳಬೇಕು. ಇದು ಜನಜಾಗೃತಿ, ಧರ್ಮಜಾಗೃತಿಯ ಸಮಾವೇಶ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಚಿತ್ತರಂಜನ್ ಭಂಡಾರಿ ಸುರತ್ಕಲ್, ಜನಜಾಗೃತಿ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಸಿಯೋನ್ ಆಶ್ರಮದ ಯು.ಸಿ.ಪೌಲೋಸ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜನಜಾಗೃತಿ ಮಾಜಿ ಅಧ್ಯಕ್ಷ ಡಿ.ಎ.ರೆಹಮಾನ್ ಇದ್ದರು.
ಈ ಸಂದರ್ಭ ಮನವಿಯನ್ನು ಪುತ್ತೂರು ಉಪವಿಭಾಗಾಧಿಕಾರಿ ಸತೀಶ್ ಅವರು ವೇದಿಕೆಗೆ ಬಂದು ಮಾಣಿಲಶ್ರೀಗಳಿಂದ ಸ್ವೀಕರಿಸಿದರು. ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೇಶವ ಬೆಳಾಲು ಸ್ವಾಗತಿಸಿದರು. ದಯಾನಂದ ಕತ್ತಲಸಾರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.