ವಿಶ್ವದ ಪ್ರತಿ ಖಂಡದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಬಡತನ, ಜನಾಂಗೀಯ ಸಂಘರ್ಷ, ಧಾರ್ಮಿಕ ವಿದ್ವೇಷ, ಅಪೌಷ್ಠಿಕತೆ, ಅಸಮಾನತೆಯಂತಹ ಸಾಮಾಜಿಕ ಸಮಸ್ಯೆಗಳು ಒಂದೆಡೆಯಾದರೆ. ಯುದ್ಧ, ಉಗ್ರವಾದ, ನಿರಂಕುಶ ಪ್ರಭುತ್ವದ ಜೊತೆಯಲ್ಲಿ ಇದಕ್ಕೆಲ್ಲಾ ಪುಷ್ಠಿ ನೀಡುವ ಮಾದಕ ದ್ರವ್ಯಗಳ ಕಳ್ಳಸಾಗಾಟ ಸಹಿತ ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳು ಮತ್ತೊಂದೆಡೆ. ವರ್ತಮಾನದಲ್ಲಿ ಜಾಗತಿಕ ಭೌಗೋಳಿಕ ರಾಜಕಾರಣದ ಪ್ರತಿಫಲನದ ಜೊತೆಯಲ್ಲಿ ವಿಶ್ವಸಂಸ್ಥೆಯ ಕುಸಿದಿರುವ ಪ್ರಭಾವವೂ ಒಂದರ್ಥದಲ್ಲಿ ವಿವಿಧ ದೇಶಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವಂತೆ ಮಾಡುತ್ತಿದೆ.
ಕಳೆದ ಮೂರು ವರ್ಷಗಳ ಈಚೆಗೆ ವಿಶ್ವದ ಹಲವು ಖಂಡಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿದರೆ, ಮೇಲಿನ ಅಂಶಗಳಿಗೆ ತಕ್ಕ ಉದಾಹರಣೆಯನ್ನು ನೀಡಬಹುದು. ಕೊರೊನಾ ಎಸಗಿದ ಸವಾಲನ್ನು ಮೆಟ್ಟಿ ನಿಂತ ರಾಷ್ಟ್ರಗಳಿಗೆ ಈ ಕೊರೊನಾ ಹುಟ್ಟಿನಲ್ಲಿ ಯಾವ ರಾಷ್ಟ್ರದ ಕೈವಾಡವಿದೆ ಎಂಬುದನ್ನು ತಿಳಿಯಲು ಅದಕ್ಕೆ ತಕ್ಕ ಶಾಸ್ತಿ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಒಮ್ಮೆ ಈ ಬಗ್ಗೆ ಗುಡುಗಿದ ಕೆಲ ರಾಷ್ಟ್ರಗಳು ತಮಗೆ ಯಾಕೆ ಉಸಾಬರಿ ಎಂಬಂತೆ ಮೌನಕ್ಕೆ ಶರಣಾಗಿವೆ, ಆ ವಿಚಾರ ಪಕ್ಕಕ್ಕಿಡೋಣ. ಪ್ರಸ್ತುತ ಇಸ್ರೇಲ್ ಎಂಬ ಪುಟ್ಟ ಯಹೂದಿ ರಾಷ್ಟ್ರ ಹಮಾಸ್ ಉಗ್ರರ ಮೇಲೆ ತನ್ನ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಿದೆ. ವಿಶ್ವದ ಹಲವೆಡೆ ಪರ ಮತ್ತು ವಿರೋಧದ ಚರ್ಚೆಗಳು ಎದ್ದಿವೆ. ಹಮಾಸ್ ಉಗ್ರರ ಅಡುಣತಾಣಗಳು, ಬಂಕರುಗಳು, ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದ್ದ ನಿಗೂಢ ಸುರಂಗ ಮಾರ್ಗಗಳನ್ನು ಬೇಧಿಸುವ ಕಾರ್ಯವನ್ನು ಇಸ್ರೇಲ್ ಮುಂದುವರಿಸಿದೆ. ಇಷ್ಟು ಮಾತ್ರ ಅಲ್ಲವೆಂಬಂತೆ ಹಮಾಸ್ ಉಗ್ರರ ಬೆನ್ನು ಹಿಂದೆ ನಿಂತಿರುವ ಕೆಲ ರಾಷ್ಟ್ರಗಳಿಗೂ ನೇರ ಮತ್ತು ನಿಷ್ಠುರ ಸಂದೇಶವನ್ನು ರವಾನಿಸಿದೆ. ಇಸ್ರೇಲ್ ರಾಷ್ಟ್ರಕ್ಕೆ ಸಾಥ್ ನೀಡಿರುವ ಅಮೇರಿಕಾವು ಮಧ್ಯಪ್ರಾಚ್ಯದಲ್ಲಿ ಅದರಲ್ಲೂ ಪಶ್ಚಿಮ ಏಷ್ಯದಲ್ಲಿ ತನ್ನ ಪ್ರಭಾವವನ್ನು ಮತ್ತೊಮ್ಮೆ ಮೆರೆಯಲು ಮುಂದಾಗಿದೆ. ಜೊ ಬಿಡೆನ್ ಈ ಯುದ್ಧದ ಮೂಲಕ ಪುನಃ ಅಧಿಕಾರಕ್ಕೆ ಏರಲೂ ಬಹುದು. ಒಂದರ್ಥದಲ್ಲಿ ಯುದ್ಧ ಎಂಬುದು ಕೆಲವರಿಗೆ ಸಂಕಷ್ಟದ ಕೋಟಲೆಯಾದರೆ ಮತ್ತೆ ಕೆಲವರಿಗೆ ಅಧಿಕಾರ, ನಾಯಕತ್ವ ಮತ್ತು ವರ್ಚಸ್ಸಿನ ಪರಮ ಶೃಂಗವೂ ಹೌದು.!
ಕೊರೊನಾ ವಿಷಮ ಪರಿಸ್ಥಿತಿಯ ನಂತರ ಯುರೋಪ್, ಏಷ್ಯಾ ಖಂಡ ಸಹಿತ ಅಮೇರಿಕಾದ ಹಲವು ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟಿಗೆ ಒಳಗಾದವು. ಭಾರತವು ಸಾವಿರಾರು ಮೈಲಿ ದೂರದ ರಾಷ್ಟ್ರಗಳಿಗೆ ವ್ಯಾಕ್ಸಿನ್ ಮೈತ್ರಿ ಮೂಲಕ ಲಸಿಕೆ ಪೂರೈಸಿ ಸಹಾಯಹಸ್ತ ಚಾಚಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಶ್ರೀಲಂಕಾದ ಆರ್ಥಿಕತೆ ನೆಲಕ್ಕಚ್ಚಿದಾಗ ಭಾರತವು ಶ್ರೀಲಂಕಾ ಚೇತರಿಕೆಗೆ ಸಹಾಯವನ್ನು ನೀಡಿತು. ಇದೇ ಸಂದರ್ಭದಲ್ಲಿ ರಷ್ಯಾ ಯುಕ್ರೇನ್ ಮೇಲೆ ಯುದ್ಧ ಸಾರಿತು. ಯುದ್ಧವೂ ಇಂದಿಗೂ ಮುಂದುವರಿದಿದೆ. ಡೊನೆಸ್ಕ್ಟ್, ಡೊಂಬಾಸ್ ಪ್ರಾಂತ್ಯಗಳು ಇಂದು ರಷ್ಯಾದ ತೆಕ್ಕೆಯಲ್ಲಿವೆ. ಭಾರತ ಸಹಿತ ವಿಶ್ವ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ಯುದ್ಧದಿಂದ ರಷ್ಯಾ ಹಿಂದೆ ಸರಿಯುವಂತೆ ಮನವರಿಕೆ ಮಾಡುವ ಪ್ರಯತ್ನವಾದರೂ ಅದು ಸಫಲವಾಗಿಲ್ಲ. ವರ್ಷಗಳ ಹಿಂದೆ ಕ್ರಿಮಿಯಾ ದ್ವೀಪವನ್ನು ವಶಪಡಿಸಿಕೊಂಡ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಯುದ್ಧವನ್ನು ತಮ್ಮ ವರ್ಚಸ್ಸನ್ನು ಹೆಚ್ಚಿಸುವ ಹಾದಿಯಾಗಿ ಕಾಣುತ್ತಿದ್ದಾರೆ ಮಾತ್ರವಲ್ಲ ಒಂದಿಷ್ಟು ವರ್ಷ ರಷ್ಯಾದ ಅನಿಭಿಷಿಕ್ತ ದೊರೆಯಾಗಿ ಮುಂದುವರಿಯುವ ಕನಸನ್ನು ಕಾಣುತ್ತಿದ್ದಾರೆ. ವಾಸ್ತವ ಎಂದರೆ 1999 ರಲ್ಲಿ ಗೋರ್ಬಚೆವ್ ಅಧ್ಯಕ್ಷಗಾದಿಯ ನಂತರ ಕಳೆದ ಎರಡೂವರೆ ದಶಕದ ಕಾಲ ರಷ್ಯಾದ ಅಧ್ಯಕ್ಷರಾಗಿ ಆಳ್ವಿಕೆ ನಡೆಸುತ್ತಿರುವ ಪುಟಿನ್ ಅವರಿಗೆ ರಾಜಕೀಯ ಎದುರಾಳಿಗಳೇ ಇಲ್ಲ ಎನ್ನುವಂತಾಗಿದೆ. ಪುಟಿನ್ ನಡೆಯನ್ನು ಪ್ರಶ್ನಿಸಿದ ಅದೆಷ್ಟೋ ಮಂದಿ ಮಸಣವನ್ನು ಸೇರಿರುವ ಸಂಗತಿ ಪ್ರತ್ಯೇಕಿಸಿ ಹೇಳಬೇಕಿಲ್ಲ. ರಷ್ಯಾ ಅಧ್ಯಕ್ಷರ ಅಣತಿಯಂತೆ ನಡೆಯುತ್ತಿದ್ದ ಪರಮಾಪ್ತ ಬಾಣಸಿಗ ನಂತರ ವೈಷಮ್ಯ ಬೆಳೆಸಿದ ಪ್ರಿಗೋಜಿನ್ ಕೂಡಾ ಇತ್ತೀಚೆಗಷ್ಟೇ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ ರಷ್ಯಾ ಇಸ್ರೇಲ್ ಪರ ಇಲ್ಲ ಎಂಬುದೂ ಸ್ಪಷ್ಟವಾದ ಸಂಗತಿ.
ಇದರ ಮಧ್ಯೆ ಇರಾನ್ ಪೋಷಿಸಿರುವ ಹಲವು ಉಗ್ರಗಾಮಿ ಸಂಘಟನೆಗಳು ಮಧ್ಯಪ್ರಾಚ್ಯ ಮಾತ್ರವಲ್ಲದೆ ಆಫ್ರಿಕಾ ಖಂಡದ ಆಸ್ಥಿರತೆಗೂ ಕಾರಣವಾಗಿದೆ ಇದರಲ್ಲಿ ಸುಡಾನ್ ಕಲಹ ಮುಖ್ಯವಾದುದು. ಮುಸ್ಲಿಂ ಬ್ರದರಹುಡ್, ಹೆಜ್ಬುಲ್ಲಾ ಉಗ್ರ ಸಂಘಟನೆಯ ಪ್ರಭಾವವೂ ಇಸ್ರೇಲ್ ಹಮಾಸ್ ಯುದ್ಧದಲ್ಲಾಗುತ್ತಿದೆ ಎಂಬುದೂ ನಿಶ್ಚಿತ. ಈ ಹಿಂದೆ ಯೆಮೆನ್ ಎಂಬ ಪುಟ್ಟ ರಾಷ್ಟ್ರದಲ್ಲಿ ಹೌತಿ ಬಂಡುಕೋರರನ್ನು ಎತ್ತಿ ಕಟ್ಟಿದ ಇರಾನ್ ಅಲ್ಲಿನ ರಾಜಕೀಯ ಅಧೋಗತಿಗೆ ಕಾರಣವಾಗಿತ್ತು. ಅಲ್ ಖೈದಾ ಉಗ್ರರೂ ಯೆಮೆನ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರು. ಇಂದು ಯೆಮೆನ್ ಯಮಾಂತಕವಾಗಿದೆ. ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದರೆ, ಮಹಿಳೆಯರು ಮತ್ತು ಅಲ್ಲಿನ ಯುವಕರಿಗೆ ಯಾವುದೇ ಉದ್ಯೋಗವಾಗಲಿ, ಸಾಮಾಜಿಕ ಆರ್ಥಿಕ ಸುರಕ್ಷೆಯಾಗಲಿ ಇಲ್ಲ. ಕಳೆದ ಒಂದು ದಶಕದಲ್ಲಿ ಯೆಮೆನ್ ಪಟ್ಟ ಪಾಡು ಹೇಳತೀರದು. ಈ ಮಧ್ಯೆ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನಳಾದ ತವಕ್ಕಲ್ ಕರ್ಮನ್ ಎಂಬ ಯೆಮೆನಿ ಮಹಿಳೆಯ ದನಿಯೂ ಕೇಳದಾಗಿದೆ.
ಅರ್ಮೇನಿಯಾ –ಅಜರಬೈಜಾನ್ ರಾಷ್ಟ್ರಗಳ ನಡುವೆಯೂ ಈ ಮಧ್ಯೆ ಸಂಘರ್ಷ ನಡೆದಿತ್ತು. ಆದರೆ ಪ್ರಸ್ತುತ ಈ ಯುದ್ಧವೂ ನಿಂತಿದೆ. ಎರಡೂ ರಾಷ್ಟ್ರಗಳ ಮಧ್ಯೆ ಕಾದಾಟ ಆರಂಭಗೊಂಡು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಏಷ್ಯಾದಲ್ಲಿಯೇ ಪ್ರಬಲ ಆರ್ಥಿಕತೆ ಎನಿಸಿಕೊಂಡ ಚೈನೀಸ್ ತೈಪೆ ಅಥವಾ ತೈವಾನ್ ಮತ್ತು ಚೀನಾದ ಮಧ್ಯೆ ಪ್ರಬಲ ಯುದ್ಧವಾಗುವ ಲಕ್ಷಣ ಗೋಚರಿಸಿತ್ತು. ಆದರೆ ಅದೃಷ್ಠವಶಾತ್ ಈ ಸಂಘರ್ಷವು ಆರಂಭದ ಕೆಲ ಯುದ್ಧ ಆವೇಶದ ನಂತರ ಕಡಿಮೆಯಾಯಿತು. ಅಮೇರಿಕಾದ ಜಲಾಂತರ್ಗಾಮಿ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಗುಟುರು ಹಾಕಿದ ಪ್ರಸಂಗವೂ ನಡೆದಿತ್ತು. ಇನ್ನು ಇಸ್ರೇಲ್ ಪ್ಯಾಲೇಸ್ತಿನ್ ಸಂಘರ್ಷದತ್ತ ನೋಡುದಾದರೆ, ಇದು ಇಂದು ನಿನ್ನೆಯದಲ್ಲ. ಯಹೂದಿ ನೆಲದ ಕಲಹಕ್ಕೆ ಶತಮಾನಗಳ ಇತಿಹಾಸವಿದೆ. ತಮ್ಮ ನೆಲದಿಂದಲೇ ಓಡಿಸಲ್ಪಟ್ಟ ಯಹೂದಿಗಳು ತಮ್ಮ ಧಾರ್ಮಿಕ ನೆಲದ ಆಸ್ಮಿತೆಯನ್ನು ಪುನಃ ಅರಸುತ್ತಾ ಬಂದದ್ದು 20 ನೇ ಶತಮಾನದಲ್ಲಿ. ಅದಕ್ಕೂ ಮೊದಲಿನ ಕಥೆಗಳು ರುದ್ರರೋಚಕವಾಗಿವೆ. ರೋಮನ್ನರು, ಬ್ಯಾಬಿಲೋನಿಯನ್ನರು ಸಹಿತ ಮಧ್ಯಪ್ರಾಚ್ಯವನ್ನು ಆಳಿದ ಹಲವು ಅರಸೊತ್ತಿಗೆಗಳಿಂದ ದಮನಿಸಲ್ಪಟ್ಟಿದ್ದ ಯಹೂದಿಗಳು ವಿಶ್ವದ ಹಲವು ರಾಷ್ಟ್ರಗಳಿಗೆ ಪಲಾಯನ ಮಾಡಿದರು. ಹೆಚ್ಚಿನ ಮಂದಿ 16 ನೇ ಶತಮಾನದ ವೇಳೆ ಮಧ್ಯಪ್ರಾಚ್ಯವನ್ನು ಆಳುತ್ತಿದ್ದ ಒಟ್ಟೊಮನ್ನರಿಂದ ತುಳಿತಕ್ಕೊಳಗಾಗಿ ಪೋಲಾಂಡ್, ರಷ್ಯಾ, ಬ್ರಿಟನ್ ಜರ್ಮನಿಯಲ್ಲಿ ಆಶ್ರಯ ಪಡೆದರು. ಸೂಕ್ಷ್ಮವಾಗಿ ನೋಡುದಾದರೆ ಪ್ರಾಚೀನ ಪರ್ಶಿಯಾದ ಪಾರ್ಸಿಗಳಂತೆ ತಾಯ್ನೆಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡ ಧರ್ಮೀಯರು ಇವರು. ಪಾರ್ಸಿಗಳ ಅನುಭವಿಸಿದ ಸಮಸ್ಯೆಗಳು ಯಹೂದಿಗಳ ಸಮಸ್ಯೆಗಳು ಒಂದೇ ತೆರನಾಗಿವೆ. ಇವೆರಡು ಧರ್ಮಗಳು ಇಸ್ಲಾಂ ಮತೀಯವಾದಕ್ಕೆ ಸಿಲುಕಿ ಬೇರೆಡೆಗೆ ಸ್ಥಳಾಂತರ ಹೊಂದುವಂತಾಯಿತು. ವಿಶೇಷ ಎಂದರೆ ಪಾರ್ಸಿ ಮತ್ತು ಯಹೂದಿ ನಿರಾಶ್ರಿತರು ಅಂದು ಭಾರತದಲ್ಲೂ ಆಶ್ರಯ ಪಡೆದರು. ಇದರಲ್ಲಿ ಬಹಳಷ್ಟು ಯಹೂದಿಗಳು ಇಸ್ರೇಲ್ ಸ್ಥಾಪನೆಯ ನಂತರ ತಮ್ಮ ತಾಯ್ನಾಡಿಗೆ ಮರಳಿದರು.
ಆರಂಭದಲ್ಲಿ ಯಹೂದಿ ಎನ್ನುವುದಕ್ಕಿಂತ ಇವರು ತಮ್ಮನ್ನು ಇಸ್ರೆಲೈಟ್ಸ್ ಎಂದೇ ಹೆಸರಿಸಿಕೊಂಡಿದ್ದರು. ಕ್ರಿ.ಪೂ 1000 ದಿಂದಲೇ ಈ ಮತದ ಆಚರಣೆ, ಸಂಪ್ರದಾಯಗಳು ಜೀವಂತವಾಗಿತ್ತು. ಅಬ್ರಹಾಂ, ಇಸಾಕ್, ಜೇಕಬ್ ಅನ್ನು ನಂಬುವ ಯಹೂದಿಯರನ್ನು ಅಬ್ರಹಾಮಿಕ್ ಮೂಲದ ಮೊದಲ ಮತಾಚರಣೆ ಎಂದೂ ಕರೆಯಲಾಗುತ್ತದೆ. ಈ ನೆಲದ ಮೊದಲ ಅರಸ ಕಿಂಗ್ ಡೆವಿಡ್ ಜೆರುಸಲೇಂ ನಗರವನ್ನು ಸ್ಥಾಪಿಸುತ್ತಾನೆ, ನಂತರದಲ್ಲಿ ಬಂದ ಕಿಂಗ್ ಸೊಲೊಮನ್ ಈ ನಗರದಲ್ಲಿ ಮೊದಲ ದೇಗುಲವನ್ನು ನಿರ್ಮಿಸುತ್ತಾನೆ. ನಂತರ ಯಹೂದಿಗಳೇ ಹೆಚ್ಚಾಗಿದ್ದ ಈ ಪ್ರದೇಶದ ಮೇಲೆ ಹಲವು ರಾಜವಂಶಜರು ಯುದ್ಧ ಸಾರುತ್ತಾರೆ. ಕ್ರಿ.ಪೂ 722 ರಲ್ಲಿ ಅಸ್ಸಿರಿಯನ್, ಕ್ರಿ.ಪೂ 598 ರಲ್ಲಿ ಬ್ಯಾಬಿಲೋನ್,ಕ್ರಿ.ಪೂ 539 ರಲ್ಲಿ ಪರ್ಶಿಯನ್ನರು, ಕ್ರಿ.ಪೂ 63 ರಲ್ಲಿ ರೋಮನ್ನರ ದಾಳಿಗೆ ತುತ್ತಾದ ನಂತರ ಇಸ್ರೇಲ್ ಅಕ್ಷರಶಃ ನಲುಗಿ ಹೋಗುತ್ತದೆ. ಬಹು ದೇವ ಉಪಾಸಕರಾಗಿದ್ದ ರೋಮನ್ನರಿಗೆ ಸೆಮಿಟಿಕ್ ಮತಾಚರಣೆಯ ಈ ಏಕದೇವೋಪಾಸಕ ಯಹೂದಿಗಳು ತಮಗೆ ಕಂಟಕ ಎಂಬ ಪೂರ್ವಾಗ್ರಹ ಹುಟ್ಟಿ ಅವರ ಮೇಲಿನ ದಬ್ಬಾಳಿಕೆ ಮತ್ತು ಮಾರಣ ಹೋಮಕ್ಕೆ ಕಾರಣವಾಗಿರುತ್ತದೆ. ತದನಂತರ ಮೂಲತಃ ಯಹೂದಿಯೇ ಆಗಿದ್ದ ಜೀಸಸ್ ಅನ್ನು ಶಿಲುಬೆಗೆ ಏರಿಸಲಾಗುತ್ತದೆ. ಕ್ರಿಸ್ತನ ಮರುಜನ್ಮದ ವೃತ್ತಾಂತದ ನಂತರದಲ್ಲಿ ಕ್ರೈಸ್ತ ಮತದ ಸ್ಥಾಪನೆಯಾಗುತ್ತದೆ. ಈ ಮತದ ಹುಟ್ಟು ಕೂಡಾ ಇಸ್ರೇಲ್ ನಲ್ಲಿಯೇ ಆಗಿದೆ ಎಂಬುದು ವಿಶೇಷವಾದ ಸಂಗತಿ. ಯೇಸು ಜನಿಸಿದ ನಗರವಾದ ಬೆತ್ಲೆಹೆಮ್ ಕೂಡಾ ಇದೇ ಇಸ್ರೇಲ್ ದೇಶದಲ್ಲಿದೆ. ಬೈಬಲ್ಲಿನ ಹಳೆ ಟೆಸ್ಟಮೆಂಟಿನ ಹಲವು ಸಾಲುಗಳು ಯಹೂದಿಗಳ ಮೂಲದ್ದು ಎನ್ನುತ್ತಗತದೆ ಇತಿಹಾಸ. ಹೀಗೆ ಬೆಳೆದ ಕ್ರೈಸ್ತರು ಅನಂತರದಲ್ಲಿ ರೋಮನ್ ದೊರೆಯನ್ನೇ ಮತಾಂತರಗೊಳಿಸುತ್ತಾರೆ, ಕ್ರೈಸ್ತ ಪುರೋಹಿತಶಾಹಿ ನೀತಿಯಿಂದ ಕ್ರಿಶ್ಚಿಯನ್ನರ ಪ್ರಭಾವ ಈ ಪ್ರದೇಶದಲ್ಲಿ ಹೆಚ್ಚಾಗುತ್ತದೆ ಮಾತ್ರವಲ್ಲದೆ ಯಹೂದಿಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಕಾಣಲಾಗುತ್ತದೆ. ಇದೇ ಸಂದರ್ಭ ಹಲವು ಯಹೂದಿಗಳನ್ನು ಗಡಿಪಾರು ಮಾಡಲಾಗುತ್ತದೆ, ಮತಾಂತರಕ್ಕೆ ಒಪ್ಪದ ಮಂದಿಯನ್ನು ನಿರ್ದಯವಾಗಿ ಸಾಯಿಸಲಾಗುತ್ತದೆ. ಹೀಗೆ ಯುರೋಪ್ ಕಡೆ ಸಾಗಿದ ಕೆಲ ಯಹೂದಿಗಳು ತಮ್ಮ ಮೂಲ ಧರ್ಮಾಚರಣೆಯನ್ನು ಜೀವಂತವಾಗಿರಿಸುತ್ತಾರೆ. 16 ನೇ ಶತಮಾನದ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ಒಟ್ಟೊಮನ್ ತುರ್ಕರು ಕೂಡಾ ಯಹೂದಿಗಳ ಮೇಲಿನ ಆಕ್ರಮಣವನ್ನು ಮುಂದುವರಿಸುತ್ತಾರೆ. ಅಷ್ಟರವರೆಗೆ ಶಾಂತವಾಗಿದ್ದ ಯಹೂದಿ ನಾಡಿನಲ್ಲಿ ಮಗದೊಂದು ಆಧ್ಯಾಯ ಶುರುವಾಗುತ್ತದೆ, ಹೀಗೆ ಮಗದೊಮ್ಮೆ ಪಲಾಯನ ಮಾಡಬೇಕಾದ ದುಸ್ಥಿತಿ ಯಹೂದಿಗಳಿಗೆ ಬರುತ್ತದೆ. ಕ್ರಿ.ಶ 33 ರಲ್ಲಿ ಜೀಸಸ್ ಅನ್ನು ಶಿಲುಬೆಗೆ ಏರಿಸಲಾದ ನಂತರದ 35 ವರ್ಷಗಳಲ್ಲಿ ರೋಮನ್ನರು ಜರುಸಲೇಂ ನ ದೇಗುಲವನ್ನು ಧ್ವಂಸಗೈಯ್ಯುತ್ತಾರೆ. ಕ್ರಿ.ಶ 312 ರಲ್ಲಿ ರೋಮನ್ ದೊರೆ ಕಾನ್ಸ್ಟಾಂಟಿನೋಪ I ಕ್ರೈಸ್ತ ಮತಕ್ಕೆ ಧರ್ಮಾಂತರವಾಗುತ್ತಾನೆ. ನಂತರ ಪಶ್ಚಿಮ ಏಷ್ಯಾದ ಈ ಭಾಗದಲ್ಲಿ ಯಹೂದಿಗಳು ತೆರೆಮರೆಗೆ ಸರಿಯುವತ್ತ ಸಾಗುತ್ತಾರೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ಹಿನ್ನೆಲೆಗೆ ಸರಿಯುತ್ತಾರೆ. 1142 ರಲ್ಲಿ ವಿಲಿಯಮ್ ಎಂಬ ಬಾಲಕನ ಹತ್ಯೆಯಾಗುತ್ತದೆ ಈ ಬಾಲಕನ್ನನು ಹತ್ಯೆ ಮಾಡಿದವರು ಯಹೂದಿಗಳೇ ಎಂಬ ಆರೋಪವನ್ನು ಹೊರಿಸಿ ಯಹೂದಿಗಳನ್ನು ಮತ್ತಷ್ಟು ದಮನಿಸುವ ಪ್ರಯತ್ನ ಸಾಗುತ್ತದೆ. 13 ನೇ ಶತಮಾನದಲ್ಲಿ ಆವರಿಸಿದ ಬ್ಲ್ಯಾಕ್ ಪ್ಲೇಗ್ ರೋಗಕ್ಕೆ ಕಾರಣ ಯಹೂದಿಗಳೆಂದು ಆರೋಪ ಹೊರಿಸಿ ಅವರನ್ನು ಶಿಕ್ಷಿಸಲಾಗುತ್ತದೆ. ಇದೇ ಸಂದರ್ಭ ನೀರಿನ ಮೂಲಗಳಾದ ಬಾವಿಗಳಲ್ಲಿ ವಿಷವನ್ನು ಬೆರೆಸಲಾಗುತ್ತದೆ. ಶೇಕ್ಸ್ ಪಿಯರ್ ಬರಹಗಳಲ್ಲೂ ಯಹೂದಿಗಳ ಬಗ್ಗೆ ಉಲ್ಲೇಖವಿದೆ. ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿರುವ ಶೈಲಾಕ್ ಎನ್ನುವ ಪಾತ್ರ ಕೊನೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವುದು ಪರೋಕ್ಷವಾಗಿ ಯಹೂದಿಗಳ ಮತಾಂತರವನ್ನು ಸೂಚಿಸುತ್ತದೆ. ಹೀಗೆ ಯುರೋಪ್ ರಾಷ್ಟ್ರಗಳಿಗೆ ನಿರಾಶ್ರಿತರಾಗಿ ತೆರಳಿದ ಯಹೂದಿಗಳಿಗೆ ಅಲ್ಲಿಯೂ ತಕ್ಕುದಾದ ಗೌರವಯುತ ಜೀವನ ಸಾಗಿಸುವುದು ಕಷ್ಟಸಾಧ್ಯವಾಗುತ್ತದೆ. 1290 ರಲ್ಲಿ ಯಹೂದಿಗಳು ಬ್ರಿಟನ್ ನಿಂದ ಹೊರದೂಡಲ್ಪಡುತ್ತಾರೆ, 1306 ರಲ್ಲಿ ಫ್ರಾನ್ಸ್ ಯಹೂದಿಗಳನ್ನು ಓಡಿಸುತ್ತದೆ, 1348 ರಲ್ಲಿ ಸ್ವಿಜರಲ್ಯಾಂಡ್, 1394 ರಲ್ಲಿ ಜರ್ಮನಿಯಿಂದಲೂ ಯಹೂದಿಗಳು ಹೊರದಬ್ಬಲ್ಪಡುತ್ತಾರೆ. ನಾಜಿ ದುರಾಡಳಿತದ ಸುಮಾರು ಶತಮಾನಗಳ ಹಿಂದೆಯೇ ಯಹೂದಿಗಳಿಗೆ ಅಂತಹುದೇ ಪರಿಸ್ಥಿತಿ ಎದುರಾಗಿತ್ತು ಎಂಬುದು ವಾಸ್ತವದ ಸಂಗತಿ. 1700 ರ ಸುಮಾರಿಗೆ ಯಹೂದಿಗಳಿಗೆ ಹಲವು ಸವಾಲುಗಳು ಎದುರಾಗುತ್ತವೆ, ಸೆಮಿಟಿಕ್ ವಿರೋಧೀ ಮನಸ್ಥಿತಿಯು ಹಲವು ಮಂದಿ ಯಹೂದಿಗಳ ಮಾರಣ ಹೋಮಕ್ಕೆ ನಾಂದಿಯಾಗುತ್ತದೆ. ಇವರ ಮೇಲೆ ಜನಾಂಗೀಯ ಪೀಡನೆಯು ನಡೆಯುತ್ತದೆ. 1859 ರ ವೇಳೆಗೆ ಚಾರ್ಲ್ಸ್ ಡಾರ್ವಿನ್ ನ ವಿಕಾಸವಾದವು ಯಹೂದಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಯಹೂದಿಗಳು ಅನ್ ಫಿಟ್ ರೇಸ್ʼ ಎಂಬ ಪರೋಕ್ಷ ವಾದವನ್ನು ಸಮಾಜದ ಮಧ್ಯೆ ಹರಿಯಬಿಡಲಾಗುತ್ತದೆ. ರಷ್ಯನ್ ಕ್ರಾಂತಿಯ ಸಂದರ್ಭ ಸುಮಾರು 30ರಿಂದ 70 ಸಾವಿರ ಯಹೂದಿಗಳು ಮಡಿಯುತ್ತಾರೆ, ಉಕ್ರೇನ್ ನಲ್ಲಿಯೂ ಇದ್ದ ಹಲವು ಸಹಸ್ರ ಯಹೂದಿಗಳ ಮಾರಣ ಹೋಮವಾಗುತ್ತದೆ. ಪೋಲಾಂಡ್, ಬೆಲಾರಸ್ ನಲ್ಲಿಯೂ ಯಹೂದಿಗಳಿಗೆ ಇಂತಹುದೆ ಸ್ಥಿತಿಗತಿಗಳು ಎದುರಾಗುತ್ತವೆ. ಹಿಟ್ಲರ್ ಎರಡನೇ ವಿಶ್ವ ಮಹಾಯುದ್ಧದ ಸೋಲಿಗೆ ಯಹೂದಿಗಳೇ ಕಾರಣ ಎಂದು ಸಾರಿಬಿಟ್ಟದ್ದು ಮಾತ್ರವಲ್ಲದೆ 1939 ರ ಸುಮಾರಿಗೆ ನಾಜಿಗಳ ಕಾನ್ಸಟ್ರೇಶನ್ ಕ್ಯಾಂಪ್ ಗಳಲ್ಲಿ ಸುಮಾರು 60 ಲಕ್ಷ ಮಂದಿ ಯಹೂದಿಗಳಿಗೆ ಮಸಣ ತೋರಿಸುತ್ತಾನೆ. ಈ ಕೃತ್ಯಗಳ ಹಿಂದೆ ಹಿಟ್ಲರ್ ಮತ್ತು ಆತನ ರಾಜಕೀಯ ಸಹಚರರೇ ಇದ್ದುದರ ಬಗ್ಗೆ ಇತಿಹಾಸದ ಕಥನಗಳಲ್ಲಿದೆ. ಕ್ರೈಸ್ತ ಧರ್ಮದ ಪರಮೋಚ್ಚ ಗುರು ಪೋಪ್ ಜಾನ್ ಪಾಲ್ ಯಹೂದಿಗಳ ಬಗ್ಗೆ ಮೃದು ಧೋರಣೆ ತಾಳಿದರೂ ಅದು ಅಲ್ಪಾಯುಷಿಯಾಗಿತ್ತು. 19 ನೇ ಶತಮಾನದ ಕೊನೆಯಲ್ಲಿ ಥಿಯೋಡರ್ ಹರ್ಜೆಲ್ ಎನ್ನುವ ತತ್ವಜ್ಞಾನಿ, ಯಹೂದಿ ನಾಯಕ ಆರಂಭಿಸಿದ ಜಿಯೋನಿಸ್ಟ್ ಕಾಂಗ್ರೆಸ್ ಯಹೂದಿಗಳಿಗೆ ಪ್ರತ್ಯೇಕ ನೆಲದ ಅವಶ್ಯಕತೆ ಇದೆ ಎಂಬುದನ್ನು ಸಾರಿ ಹೇಳುತ್ತದೆ ಮಾತ್ರವಲ್ಲ ತಮ್ಮ ಪ್ರಾಚೀನ ಧಾರ್ಮಿಕ ನೆಲವಾದ ಜೆರುಸಲೇಂ ನನ್ನು ಮರಳಿ ಪಡೆಯುವ ದೂರದೃಷ್ಠಿಯನ್ನು ಹರ್ಜೆಲ್ ಮುಂದಿಡುತ್ತಾನೆ. ಅರಬ್ಬರ ಆಕ್ರಮಣದಿಂದ ಸಂಪೂರ್ಣವಾಗಿ ಪ್ಯಾಲೇಸ್ತಿನ್ ಆಗಿದ್ದ ಈ ಪ್ರದೇಶದಲ್ಲಿ ಪುನಃ ಇಸ್ರೇಲೈಟ್ ಸ್ಥಾಪನೆಯ ಉದ್ದೇಶವೂ ಇದರ ಹಿಂದೆ ಇರುತ್ತದೆ. ಈ ಸ್ವಾಭಿಮಾನಿ ನಡೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿದ್ದ ಯಹೂದಿಗಳು ಸಮರ್ಥನೆಯನ್ನು ನೀಡುತ್ತಾರೆ. ಅಂದು ಕಾನ್ಸ್ನಾಸ್ಟಿನೋಪಲ್(ಇಂದಿನ ಇಸ್ತಾಂಬುಲ್) ತಲುಪುವ ಹರ್ಜೆಲ್ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಒಟ್ಟೋಮನ್ ದೊರೆಯಲ್ಲಿ ತಮಗೆ ನೆಲವನ್ನು ನೀಡಿ ನಾವು ನಿಮ್ಮ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸುತ್ತೇವೆ ಎಂಬ ವಿನಂತಿಯನ್ನು ಮಾಡುತ್ತಾರೆ. ಆದರೆ ಒಟ್ಟೊಮನ್ ದೊರೆ ಅದನ್ನು ಒಪ್ಪುವುದಿಲ್ಲ. ಆದರೆ ಹಾಗೋ ಹೀಗೂ ಟೆಲ್ ಅವೀವ್ ಪ್ರದೇಶವು ಯಹೂದಿಗಳಿಗೆ ಸಿಗುತ್ತದೆ. ತದನಂತರ ಒಟ್ಟೊಮನ್ ರಾಜಪ್ರಭುತ್ವ ಪತನವಾಗಿ, ಈ ಪ್ರದೇಶಗಳ ಮೇಲೆ ಬ್ರಿಟಿಷರ ಅಧಿಪತ್ಯ ಆರಂಭವಾಗುತ್ತದೆ.
19 ನೇ ಶತಮಾನದ ತನಕ ಹಲವು ರಾಷ್ಟ್ರಗಳಿಗೆ ಪಲಾಯನ ಮಾಡಿದ್ದ ಯಹೂದಿಗಳು ಇಪ್ಪತ್ತನೇ ಶತಮಾನದ ವೇಳೆಗೆ ತಮ್ಮ ಮೂಲ ಧಾರ್ಮಿಕ ನೆಲವಾದ 20 ನೇ ಶತಮಾನದ ಪ್ಯಾಲೇಸ್ತಿನ್ ಇಸ್ರೆಲೈಟ್ ಪ್ರಾಂತ್ಯಕ್ಕೆ ತಲುಪುತ್ತಾರೆ. ವಿಶ್ವದ ಹಲವು ಭಾಗಗಳಲ್ಲಿದ್ದ ಯಹೂದಿಗಳು ಇಸ್ರೇಲಿನತ್ತ ಮುಖ ಮಾಡುತ್ತಾರೆ. ಎರಡನೇ ಮಹಾಯುದ್ಧದ ನಂತರ ಇಸ್ರೇಲ್ ವಿಚಾರದಲ್ಲಿ ಕೈ ತೊಳೆದುಕೊಂಡ ಬ್ರಿಟಿಷರು ಮಧ್ಯಪ್ರಾಚ್ಯದಿಂದ ಕಾಲ್ಕೀಳುತ್ತಾರೆ. ಈ ಸಂದರ್ಭ ಪೋಲಾಂಡಿನಲ್ಲಿದ್ದ 3 ಮಿಲಿಯನ್ ಯಹೂದಿಗಳು, ರಷ್ಯಾದ 2.5 ಮಿಲಿಯನ್ ಯಹೂದಿಗಳು, ಬ್ರಿಟನ್ ನಲ್ಲಿದ್ದ 3 ಲಕ್ಷ, ಜರ್ಮನಿಯಿಂದ ಪಲಾಯನಗೈದ ಯಹೂದಿಗಳು ನೂತನವಾಗಿ ಕೊಂಡುಕೊಂಡ ಇಸ್ರೇಲ್ ಭೂಭಾಗಗಲ್ಲಿ ನೆಲೆಯಾಗುತ್ತಾರೆ. ಸಾಕಷ್ಟು ಪ್ಯಾಲೇಸ್ತೀನಿ ಭೂಭಾಗಗಳನ್ನು ಹಣ ಕೊಟ್ಟು ಪಡೆಯುವ ಯಹೂದಿಗಳು ನಂತರದಲ್ಲಿ ತಮ್ಮ ಪ್ರದೇಶ ಮತ್ತು ಪ್ರಾಂತ್ಯದ ವಿಸ್ತರಣೆಯಲ್ಲಿಯೂ, ಈ ಪ್ರದೇಶಕ್ಕೆ ಬರುವ ಯಹೂದಿಗಳಿಗೆ ಸೂಕ್ತ ರಕ್ಷಣೆ ನೀಡುವ ಕಾರ್ಯದಲ್ಲೂ ಬದ್ಧರಾಗುತ್ತಾರೆ. ಯಹೂದಿಗಳು ತಮ್ಮ ಸ್ವರಕ್ಷಣೆಗೆ ಆರಂಭಿಸಿದ ಪ್ಯಾರಾ ಮಿಲಿಟರಿ ಪಡೆಯನ್ನು ಹಘಾನಾ ಎಂದು ಕರೆಯಲಾಗುತ್ತದೆ. ಇದು ಅರಬ್ಬರ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತದೆ. ಎರಡನೇ ವಿಶ್ವ ಮಹಾಯುದ್ಧದ ನಂತರ ಭಾರಿ ನಷ್ಟವನ್ನು ಅನುಭವಿಸಿದ ಬ್ರಿಟನ್ ಈ ಪ್ರದೇಶದಿಂದ ಹಿಂದೆ ಸರಿಯುವ ಮುನ್ನ ಹೈಫಾ ಯುದ್ಧವೂ ನಡೆಯುತ್ತದೆ. ನಂತರ ಈ ವಿಚಾರವು ವಿಶ್ವಸಂಸ್ಥೆಯ ಮುಂದೆ ಬಂದು ನಿಲ್ಲುತ್ತದೆ. 1948 ರಲ್ಲಿ ಇಸ್ರೇಲ್ ಸ್ವಾತಂತ್ರ್ಯಗೊಳ್ಳುತ್ತದೆ, ಆದರೆ ಇಸ್ರೇಲ್ ಪ್ರಾಂತ್ಯದ ಸಮಸ್ಯೆಗಳು ಬಗೆಹರಿಯುವುದಿಲ್ಲ, ಸಮೀಪದ ಪ್ಯಾಲೆಸ್ತಿನ್ ಯಹೂದಿಗಳ ಮೇಲೆ ವೈರವನ್ನು ಸಾಧಿಸುತ್ತಾ, ತಮ್ಮಿಂದ ಕಿತ್ತುಕೊಂಡ ಭೂಭಾಗವನ್ನೆಲ್ಲ ಇಸ್ರೇಲ್ ಮರಳಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಪ್ಯಾಲೆಸ್ತಿನಿಯನ್ನರ ಪ್ರತಿ ನಡೆಯಲ್ಲೂ ಸಮೀಪವರ್ತಿ ದೇಶಗಳ ಕುಮ್ಮಕ್ಕು ಇರುತ್ತದೆ. ಈಜಿಪ್ಟ್, ಲೆಬನಾನ್, ಸೌದಿ ಅರೇಬಿಯಾ, ತುರ್ಕಿ, ಜೋರ್ಡಾನ್ ದೇಶಗಳ ಪ್ರತ್ಯಕ್ಷ ಮತ್ತು ಪರೋಕ್ಷ ಕುಮ್ಮಕ್ಕು ಪ್ಯಾಲೇಸ್ತೇನಿಯನ್ನರ ಸೋಲಿಗೂ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಇಸ್ರೇಲಿಗರಿಗೆ 55% ಭೂಭಾಗ, 44% ಪ್ಯಾಲೇಸ್ತೇನಿಯನ್ನರಿಗೆ ಮತ್ತು ಉಳಿದ 1% ಭೂಭಾಗವಾದ ಜೆರುಸಲೇಂನಲ್ಲಿ ಮೂರನೇ ಶಕ್ತಿ ಅಧಿಕಾರ ನಡೆಸುವುದು ಸೂಕ್ತ ಎಂಬುದು ಪರಿಹಾರ ಮಾರ್ಗವಾಗಿರುತ್ತದೆ. ಇಸ್ರೇಲ್ ವಿಶ್ವಸಂಸ್ಥೆಯ ನಿರ್ಣಯಕ್ಕೆ ತಲೆಬಾಗುತ್ತದೆ ಆದರೆ ಪ್ಯಾಲೆಸ್ತಿನ್ ಅಂದು ಇದಕ್ಕೆ ಒಪ್ಪುವುದಿಲ್ಲ, ನಂತರ 1949 ರಲ್ಲಿ ಯುದ್ಧವಾಗುತ್ತದೆ, ಪ್ಯಾಲೆಸ್ತಿನ್ ಸೋಲುತ್ತದೆ. 1967 ರಲ್ಲಿ 6 ದಿನಗಳ ,ಮಹತ್ವದ ಯುದ್ಧವಾಗುತ್ತದೆ ಅದರಲ್ಲಿ ದಕ್ಷಿಣದಲ್ಲಿರುವ ಗಾಜಾದ ಹೆಚ್ಚಿನ ಭೂಪ್ರದೇಶ ಸೇರಿದಂತೆ ಸಿನಾಯ್ ಎಂಬ ಉಪಖಂಡ ಸೇರಿದಂತೆ ಉತ್ತರದ ಗೋಲಾನ್ ಹೈಟ್ಸ್ ಎಂಬ ಬೆಟ್ಟ ಪ್ರದೇಶವನ್ನು ಇಸ್ರೇಲ್ ತನ್ನ ವಶಕ್ಕೆ ಪಡೆಯುತ್ತದೆ. ಅಂದು ಪ್ಯಾಲೆಸ್ತಿನ್ ಜೊತೆ ಕೈ ಜೋಡಿಸಿದ ಅರಬ್ಬ ದೇಶಗಳಿಗೂ ಸೋಲಿನ ರುಚಿ ಸಿಗುತ್ತದೆ. ಪ್ಯಾಲೆಸ್ತಿನ್ ಗೆ ಯಾಸರ್ ಅರಫಾತ್ ನಂತಹ ನಾಯಕರು ಇಸ್ರೇಲ್ ಗೆ ಗೋಲ್ಡಾ ಮೇರ್, ಶಿಮೋನ್ ಪೆರೆಸ್, ಏರಿಯಲ್ ಶೆರೋನ್ ನಂತಹ ಸಮರ್ಥ ನಾಯಕರು ಪ್ರಧಾನಿಗಳಾದರೂ ಗಡಿ ತರ್ಕ, ಎರಡೂ ದೇಶಗಳ ಸಮಸ್ಯೆಗಳು ದಶಕದಿಂದ ಬಗೆ ಹರಿದಿಲ್ಲ.
ವರ್ತಮಾನದಲ್ಲಿ ಇಸ್ರೇಲ್ ಪ್ರಧಾನಿಯಾಗಿರುವ ಬೆಂಜಮಿನ್ ನೆತನ್ಯಾಹು ಹಿಂದಿನ ಸಮಸ್ಯೆಗಳನ್ನು ಅರಿತಿರುವ, ವರ್ತಮಾನದ ಸನ್ನಿವೇಶ ಬೆಳವಣಿಗೆಯ ಬಗ್ಗೆ ತಿಳಿದಿರುವ ಅನುಭವಿ ನಾಯಕರಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಒಟ್ಟು ಮೂರನೇ ಬಾರಿ ಇಸ್ರೇಲ್ ಪ್ರಧಾನಿಯಾಗಿ ಪದವಿಯನ್ನು ಅಲಂಕರಿಸಿರುವ ಇವರ ಅನುಭವ ಇಸ್ರೇಲ್ ಸಾರ್ವಭೌಮತ್ವ ಮತ್ತು ಅ ರಾಷ್ಟ್ರದ ಪ್ರತಿಷ್ಠೆಯನ್ನು ಹೇಗೆ ಕಾಪಾಡುತ್ತದೆ ಎಂದು ಕಾದು ನೋಡಬೇಕಿದೆ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.