ಬೆಂಗಳೂರು: ಶಿವಮೊಗ್ಗದಲ್ಲಿ ನಿನ್ನೆ ನಡೆದ ಹಿಂದೂ- ಮುಸ್ಲಿಂ ಗಲಭೆಗೆ ಸರಕಾರದ ಸಂಪೂರ್ಣ ವೈಫಲ್ಯತೆಯೇ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಟೀಕಿಸಿದರು. ‘ನಿಮಗೆ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಕೂಡಲೇ ರಾಜೀನಾಮೆ ಕೊಡಿ’ ಎಂದು ಅವರು ಆಗ್ರಹಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆ ಕತ್ತಿ, ಗುರಾಣಿ ಹಿಡಿದು ಮೆರವಣಿಗೆ ಮಾಡಲು ಅವಕಾಶ ಕೊಟ್ಟವರು ಯಾರು? ಜೊತೆಯಲ್ಲಿ ಹಿಂದೂ ಮಹಿಳೆಯರ ಮೇಲೆ, ಯುವಕರ ಮೇಲೆ ದೌರ್ಜನ್ಯ ನಡೆದಿದೆ. ಮೊಹಲ್ಲಾದಲ್ಲಿ ಶಾಂತಮ್ಮ ಅವರು ಗಾಯಗೊಂಡಿದ್ದು, ಹೊಲಿಗೆ ಹಾಕಿ ಚಿಕಿತ್ಸೆ ಕೊಡುವ ಸ್ಥಿತಿ ಬಂದಿದೆ. ಮನೆಗಳಿಗೆ ನುಗ್ಗಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಸರಕಾರ ಅಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ನಡೆಸಲು ಪ್ರೇರೇಪಣೆ ಕೊಟ್ಟಂತಿದೆ ಎಂದು ಆರೋಪಿಸಿದರು.
ದೊಡ್ಡ ಗಲಭೆ ಆಗದಂತೆ ಪೊಲೀಸರು ತಡೆದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದಾರೆ. ದೊಡ್ಡ ಪ್ರಮಾಣದ ಗಲಭೆ ಆಗುವುದೆಂದು ಗೊತ್ತಿದ್ದರೆ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಬೇಕಿತ್ತಲ್ಲವೇ ಎಂದು ಕೇಳಿದರು. ಗಲಭೆ ನಡೆಸಬೇಕೆನ್ನುವುದು ಈ ಸರಕಾರದ ಉದ್ದೇಶವಾಗಿತ್ತೇ ಎಂದು ಪ್ರಶ್ನಿಸಿದರು.
ಶಿವಮೊಗ್ಗ ಹೊತ್ತಿ ಉರಿದರೂ ಸರಕಾರ ಶಾಂತವಾಗಿದೆ. ಸರಕಾರಕ್ಕೆ ಸಕ್ರಿಯತೆ ಕಾಣುತ್ತಿಲ್ಲ ಎಂದು ಎನ್.ರವಿಕುಮಾರ್ ಅವರು ಆಕ್ರೋಶ ಹೊರಹಾಕಿದರು. ಕಾವೇರಿ ನೀರಿನ ವಿಚಾರದಲ್ಲಿ ಸಮಸ್ಯೆಗಳಿಲ್ಲ; ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲ; ಬರಗಾಲದ ಸಮಸ್ಯೆ ಇಲ್ಲ ಎಂದು ನಿರ್ಲಕ್ಷ್ಯತನದಿಂದ ಇದ್ದಾರೆ ಎಂದು ಆಕ್ಷೇಪಿಸಿದರು.
ಗೃಹ ಸಚಿವರಿಗೆ ಈ ರೀತಿ ಹೇಳಿಕೆ ಕೊಡಲು ನಾಚಿಕೆ, ಕಾಳಜಿ, ಮಾನ ಮರ್ಯಾದಿ ಇಲ್ಲವೇ? ಗೃಹ ಸಚಿವರು ಉಡುಪಿ ವಿಡಿಯೋ ಪ್ರಕರಣದಲ್ಲೂ ಇದೇ ಥರದ ಹೇಳಿಕೆ ಕೊಟ್ಟಿದ್ದರು. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಇದರ ಬಗ್ಗೆ ಹೇಳಿಕೆ ಕೊಟ್ಟಿಲ್ಲ. ಸರಕಾರ ಸಂಪೂರ್ಣ ನಿರ್ಲಕ್ಷ್ಯ, ನಿರ್ಲಜ್ಜತನದಿಂದ ಕೂಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮೇಲೆ ನಾವು ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ; ಸಮಾಜದಲ್ಲಿ ಸಮಸ್ಯೆಗಳೇ ಇಲ್ಲ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದುಗಳ ರಕ್ಷಣೆ ಈ ಸರಕಾರಕ್ಕೆ ಕೊನೆಯ ಆದ್ಯತೆ. ಹಿಂದೂಗಳ ಕಡೆಗಣನೆ ಈ ಸರಕಾರದ ಮನೋಪ್ರವೃತ್ತಿಯಾಗಿದೆ. ಈ ಸರಕಾರವನ್ನು ಜನರು ಧಿಕ್ಕರಿಸಬೇಕು. ಚೆನ್ನಾಗಿ ಉಗಿಯಬೇಕು; ಹಾಗಾದರೆ ಮಾತ್ರ ಸರಕಾರ ಬದಲಾದೀತೇನೋ ಎಂದರು. ಶಿವಮೊಗ್ಗದಲ್ಲಿ ಮೆರವಣಿಗೆಗೆ ಯಾರು ಅನುಮತಿ ಕೊಟ್ಟವರು? ಎಂದು ಕೇಳಿದರಲ್ಲದೆ, ಗಲಭೆಗೆ ಪ್ರೇರೇಪಣೆ ನೀಡಿದವರನ್ನು ಕೂಡಲೇ ಸರಕಾರಿ ವೃತ್ತಿಯಿಂದ ಪೊಲೀಸ್ ಅಧಿಕಾರಿ ವೃತ್ತಿಯಿಂದ ಅಮಾನತುಪಡಿಸಿ ಎಂದು ಆಗ್ರಹಿಸಿದರು.
ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಕೋಲಾರದಲ್ಲೂ ದೊಡ್ಡ ಕತ್ತಿ ಮತ್ತು ಗುರಾಣಿಯ ಪ್ರದರ್ಶನ ನಡೆದಿತ್ತು. ಶಿವಮೊಗ್ಗದಲ್ಲೂ ಕತ್ತಿ, ಗುರಾಣಿ ಹಿಡಿದು ಮೆರವಣಿಗೆ ಮಾಡಿದ್ದಾರೆ. ನಿಮ್ಮ ಸರಕಾರದಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದ ತಂಡ, ಮನೆಗಳಿಗೆ ಕಲ್ಲು ಹೊಡೆದಿದೆ. ಮನೆಗಳಿಗೆ ಹಾನಿ ಮಾಡಿದ್ದಾರೆ. ಇಂಥ ಕೆಟ್ಟ ಕೆಲಸ ಆದರೂ ಪೊಲೀಸರು, ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ರೋದಿಸಿದ್ದಾರೆ ಎಂದು ತಿಳಿಸಿದರು.
ಕಲ್ಲು ಹೊಡೆಯುವವರು, ಕತ್ತಿ ಬೀಸುವವರು, ಶಕ್ತಿ ಪ್ರದರ್ಶನ ಮಾಡುವವರು, ಅಹಂಕಾರ ಮಾಡುವವರಿಗೆ, ದನಗಳ್ಳರಲ್ಲಿ ಅಪರಾಧಿಗಳ ಪರ ಇರುವ ಸರಕಾರ ರಾಜ್ಯದಲ್ಲಿದೆ ಎಂಬ ಭಾವನೆ ಇದೆ. ಆ ಕಾರಣದಿಂದಾಗಿ ಕತ್ತಿ, ಖಡ್ಗ ಪ್ರದರ್ಶಿಸುವಾಗ ಪೊಲೀಸರು ತಡೆದಿಲ್ಲ. ಸಿದ್ದರಾಮಯ್ಯರ ಸರಕಾರದಲ್ಲಿ ಜನಸಾಮಾನ್ಯರಿಗೆ ಮಾತ್ರವಲ್ಲ; ಸ್ವತಃ ಎಸ್ಪಿ ಕೂಡ ಕಲ್ಲೇಟಿಗೆ ಗುರಿ ಆಗಬೇಕಿದೆ. ಪೊಲೀಸರಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪ ಸೂಚಿಸಿದರು.
ಬಂಧಿತರ ವಿವರ ಕೊಡಿ ಎಂದು ಗೃಹ ಸಚಿವ ಪರಮೇಶ್ವರ್ ಅವರನ್ನು ಆಗ್ರಹಿಸಿದರು. ಕೇವಲ ಮತ, ವೋಟಿಗಾಗಿ ಅಪರಾಧಿಗಳು, ಆರೋಪಿಗಳು, ಭಯೋತ್ಪಾದಕರು, ಕತ್ತಿ ಹಿಡಿದು ತಿರುಗಾಟ ಮಾಡುವವರು, ನಿಷೇಧಿತ ವಸ್ತು ಪ್ರದರ್ಶಿಸುವವರು, ಬಡವರು, ಸಾಮಾನ್ಯ ಹಿಂದೂಗಳ ಮನೆಗೆ ಕಲ್ಲು ಹೊಡೆಯುವವರ ಕುರಿತು ನೀವು ಸಹಾನುಭೂತಿ ತೋರುವ ಕಾರಣ ಭಯೋತ್ಪಾದನೆ ಗುಣಮಟ್ಟದ ಜನರು ಕೇಕೆ ಹಾಕಿ ನಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಗೃಹ ಸಚಿವ ಪರಮೇಶ್ವರ್, ಮುಖ್ಯಮಂತ್ರಿಗಳು, “ಒಂದೋ ಅವರು ನಮ್ಮವರು; ಕಲ್ಲು ಹೊಡೀತಾರೆ ಸಹಿಸಿಕೊಳ್ಳಿ ಎನ್ನಬೇಕು; ಇಲ್ಲವೇ ಕಾನೂನು ಕ್ರಮ ತೆಗೆದುಕೊಳ್ಳಿ” ಎಂದು ಆಗ್ರಹಿಸಿದರು. ಸರಕಾರಕ್ಕೆ ಶಕ್ತಿ, ತಾಕತ್ತು ಇದ್ದರೆ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಇಲ್ಲವಾದರೆ ರಾಜೀನಾಮೆ ಕೊಡಿ ಎಂದು ತಿಳಿಸಿದರು. ಇದು ಸಣ್ಣ ಘಟನೆಯಲ್ಲ; ಎಚ್ಚರಿಕೆ ವಹಿಸಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.