ಬೆಂಗಳೂರು: ‘ನನ್ನ ಮಣ್ಣು ನನ್ನ ದೇಶ’ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದರು.
ನಗರದ ಕಾಡಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ಪುಣ್ಯ ಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯ ದಿನವಿದು ಎಂದರು.
ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಇಡೀ ರಾಜ್ಯದ ಎಲ್ಲ ಪುಣ್ಯ ಸ್ಥಳಗಳಿಂದ ಮಣ್ಣು ತರಲಾಗಿತ್ತು. ಇವತ್ತು ಇಡೀ ದೇಶದ ಕೆಲಸ ನಡೆದಿದೆ. ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ನಡೆದಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದು ಇಡೀ ರಾಜ್ಯದಲ್ಲಿ ಅಕ್ಟೋಬರ್ 30ರವರೆಗೆ ಇದು ನಡೆಯಲಿದೆ ಎಂದರು.
ದೇಶದ ಸಮಸ್ತ ಜನತೆಗೆ ಶ್ರೀಕೃಷ್ಣ ಜಯಂತಿಯ ಶುಭಾಶಯ ಕೋರಿದ ಅವರು, ಭಗವದ್ಗೀತೆಗೆ ಪೂರಕ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು. ದೇಶಪ್ರೇಮ ಇಮ್ಮಡಿಗೊಳಿಸುವ ಮತ್ತು ದೇಶಕ್ಕೆ ಗೌರವ ಕೊಡುವ ಕಾರ್ಯಕ್ರಮ ಇದಾಗಿದೆ. ಈ ಅದ್ಭುತ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸಬೇಕೆಂದು ಅವರು ವಿನಂತಿಸಿದರು.
ಭಾರತ ಹೆಸರು ಬದಲಾವಣೆ ಯಾವಾಗಲೋ ಆಗಬೇಕಿತ್ತು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭರತ ಭೂಮಿಯಲ್ಲಿ ನಾವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲೇ ಭಾರತ ಎಂಬ ಒಂದೇ ಹೆಸರನ್ನು ಈ ಭೂಮಿಗೆ ಇಡಬೇಕಾಗಿತ್ತು. ವಿದೇಶಿ ಪ್ರೇಮದ ಜನರು ಇದ್ದ ಕಾರಣ ಆ ‘ಇಂಡಿಯ’ ಶಬ್ದ ಬಂದಿದೆ ಎಂದು ಈ ಕುರಿತ ಪ್ರಶ್ನೆಗೆ ಪ್ರಶ್ನೆಗೆ ಡಿ.ವಿ.ಸದಾನಂದ ಗೌಡ ಅವರು ಉತ್ತರ ನೀಡಿದರು.
ಇವತ್ತು ಭಾರತವು ಯಶಸ್ವಿ ದೇಶವಾಗಿದೆ. ದೇಶಕ್ಕೆ ನಮ್ಮ ಮಣ್ಣಿನ ಆಚಾರ, ವಿಚಾರ, ಸಂಸ್ಕøತಿ, ಪರಂಪರೆಗಳ ಆಧರಿತ ಹೆಸರಿರಬೇಕು ಎಂದು ನುಡಿದರು. ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ. ಇಸ್ರೇನ್, ಜಪಾನ್ ಇದಕ್ಕೆ ಉದಾಹರಣೆ ಎಂದು ನುಡಿದರು. ರಾಜಕೀಯ ಕಾರಣಕ್ಕಾಗಿ ಇಂಡಿಯ ಹೆಸರಿಗೆ ಪ್ರಾಮುಖ್ಯತೆ ನೀಡಿದ್ದು ದುರ್ದೈವ ಎಂದು ತಿಳಿಸಿದರು. ಇವತ್ತಾದರೂ ಒಳ್ಳೆಯ ದಿನ ಬಂದಿದೆ ಎಂದು ತಿಳಿಸಿದರು.
ಸನಾತನ ಹಿಂದೂ ಧರ್ಮ ಪುರಾತನ ಕಾಲದ್ದು. ಅದರ ಬೇರುಗಳು ಆಳವಾಗಿವೆ. ಡಾ. ಪರಮೇಶ್ವರ್ ಅವರಿಗೂ ಅದರ ಬೇರು ಕಂಡುಹಿಡಿಯಲು ಸಾಧ್ಯವಿಲ್ಲ. ಅದೇ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಆ ಧರ್ಮದ ಕುರಿತು ಮಾತನಾಡುವಾಗ ಸ್ವಲ್ಪ ಪರಿಜ್ಞಾನ ಇಟ್ಟುಕೊಂಡು ಮಾತನಾಡುವುದು ಸೂಕ್ತ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಕಾಶ್ರಾಜ್ ಅವರ ಮಾತು ಬಾಲಿಶ; ಇಂಥ ಮಾತು ಅವರಿಗೆ ಗೌರವ ತರುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು. ನೀರು ಬಿಡುವ ವಿಚಾರದಲ್ಲಿ ‘ಇಂಡಿಯ’ದ ಪಾಲುದಾರರಾಗಿ ವರ್ತಿಸುತ್ತಿದ್ದಾರೆ. ಇದು ಕರ್ನಾಟಕ ಜನರಿಗೆ ಮಾಡಿದ ದ್ರೋಹ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ನಾಡಿನ ಉದ್ದಗಲಕ್ಕೂ ಮಣ್ಣು ಸಂಗ್ರಹ ಕಾರ್ಯಕ್ರಮ ನಡೆದಿದೆ. ದೇಶದ ಪುಣ್ಯ ಭೂಮಿಯ ಮಣ್ಣಿಗೆ ಗೌರವ ಸಲ್ಲಿಸುವ ಅಭಿಯಾನ ಇದಾಗಿದೆ ಎಂದರು. ಭಾರತ ಒಂದು ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇದು ಎಂದು ತಿಳಿಸಿದರು.
ಸನಾತನ ಧರ್ಮವನ್ನು ಇಡೀ ವಿಶ್ವ ಒಪ್ಪಿದೆ. ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಈ ಧರ್ಮ ಸರ್ವಶ್ರೇಷ್ಠ. ಇತ್ತೀಚೆಗೆ ಹುಟ್ಟಿದ ಧರ್ಮಗಳ ತಪ್ಪನ್ನು ತಪ್ಪೆಂದು ಹೇಳಲು ಇವರಿಗೆ ಧೈರ್ಯ ಇಲ್ಲ. ದುರಹಂಕಾರದ ಮಾತನಾಡುವುದು ಸರಿಯಲ್ಲ ಎಂದು ಈ ಕುರಿತ ಪ್ರಶ್ನೆಗೆ ಅವರು ಉತ್ತರ ಕೊಟ್ಟರು.
ಸಂಸದ ಪಿ.ಸಿ.ಮೋಹನ್, ಕಾರ್ಯಕ್ರಮದ ನೇತೃತ್ವ ವಹಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.