ಚಂಡೀಗಢ: ಹರಿಯಾಣದ ಮುಖ್ಯಮಂತ್ರಿಯಾಗಿ 54 ವರ್ಷದ ನಯಾಬ್ ಸಿಂಗ್ ಸೈನಿ ಇಂದು ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದು ದಾಖಲೆ ನಿರ್ಮಿಸಿದೆ.
ಚಂಡೀಗಢದ ಬಳಿಯ ಪಂಚಕುಲದ ಪರೇಡ್ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಪ್ರಮುಖ ನಾಯಕರು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಆಡಳಿತವಿರುವ ರಾಜ್ಯಗಳ 18 ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಈ ಬೃಹತ್ ರಾಜಕೀಯ ಸಭೆಯು ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಬಂದಿರುವ ಹಿನ್ನೆಲೆಯಲ್ಲಿ ಈ ಬೃಹತ್ ಸಮಾರಭ ಬಿಜೆಪಿ ಶಕ್ತಿ ಪ್ರದರ್ಶನವಾಗಿಯೂ ಗೋಚರಿಸಿದೆ.
ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸೈನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಸೈನಿ ಅವರಲ್ಲದೆ, ಬಿಜೆಪಿ ನಾಯಕರಾದ ಅನಿಲ್ ವಿಜ್, ಕ್ರಿಶನ್ ಲಾಲ್ ಪನ್ವಾರ್ ಮತ್ತು ರಾವ್ ನರಬೀರ್ ಸಿಂಗ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸೈನಿ ಅವರ ರಾಜಕೀಯ ಪಯಣ ಸುಮಾರು 30 ವರ್ಷಗಳನ್ನು ಸವೆಸಿದೆ. 1970 ರಲ್ಲಿ ಜನಿಸಿದ ಅವರು ಖಟ್ಟರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶಿಸಿದರು. ಸೈನಿ ಅವರು ಮೊದಲು 2014 ರಲ್ಲಿ ನರೇನ್ಗಢದಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ನಂತರ 2016 ರಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಕುರುಕ್ಷೇತ್ರದಿಂದ ಸಂಸದರಾಗಿದ್ದ ಅವಧಿಯಲ್ಲಿ ಅವರು ಮುನ್ನಲೆಗೆ ಬಂದರು, ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ನಿರ್ಮಲ್ ಅವರನ್ನು ಸೋಲಿಸುವ ಮೂಲಕ ಸುದ್ದಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.