ಬೆಂಗಳೂರು: ರಾಜ್ಯ ಸರಕಾರವು ಗುತ್ತಿಗೆದಾರರ ನ್ಯಾಯಯುತ ಬಿಲ್ಗಳನ್ನು ಕೂಡಲೇ ಪಾವತಿಸಿ ಉದ್ಯಾನಗಳ ನಗರ ಎನಿಸಿದ ಬೆಂಗಳೂರಿನಲ್ಲಿ ಕಾಮಗಾರಿಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒತ್ತಾಯಿಸಿದ್ದಾರೆ.
ಜನಾದೇಶ ಪಡೆದ ರಾಜ್ಯ ಸರಕಾರ ಸ್ವೇಚ್ಛಾಚಾರಿ, ಭ್ರಷ್ಟಾಚಾರಿ, ದುರಹಂಕಾರಿ ಆಡಳಿತ ನೀಡುತ್ತಿದೆ. ಕಳೆದ ಸುಮಾರು 85 ದಿನಗಳಲ್ಲಿ ಒಂದಲ್ಲ ಒಂದು ಹಗರಣದಲ್ಲಿ, ಭ್ರಷ್ಟಾಚಾರದಲ್ಲಿ, ಒಂದಲ್ಲ ಒಂದು ಜನವಿರೋಧಿ ನೀತಿಯಲ್ಲಿ ಹಾಗೂ ದ್ವೇಷದ ರಾಜಕಾರಣದಲ್ಲಿ ಸರಕಾರ ತನ್ನನ್ನು ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ರಾಜ್ಯ ಸರಕಾರವು ಜನವಿರೋಧಿ ಧೋರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಭ್ರಷ್ಟಾಚಾರ ಎನ್ನುವುದೇ ಸರಕಾರದ ಮೂಲ ಉದ್ದೇಶವಾಗಿದೆ. ಕೃಷಿ ಇಲಾಖೆ ಸೇರಿದಂತೆ ರಾಜ್ಯದ ಎಲ್ಲ ಇಲಾಖೆಗಳೂ ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸ್ವತಃ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಭ್ರಷ್ಟಾಚಾರದ ಪೋಷಣೆ ಮತ್ತು ಪಾಲನೆ ನಡೆಯುವುದು ಕಂಡುಬರುತ್ತಿದೆ. ರೈತ ವಿರೋಧಿ ಧೋರಣೆಗಳನ್ನು ಕಾಂಗ್ರೆಸ್ ಸರಕಾರ ತನ್ನದಾಗಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕೃಷಿ ಸಚಿವರ ಭ್ರಷ್ಟಾಚಾರದ ಕುರಿತು ಅಲ್ಲಿನ ನೌಕರರೇ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ವರ್ಗಾವಣೆ ದಂಧೆ ಒಳಗಡೆ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದಾರೆಂದು ಆರೋಪಿಸಿ ಸ್ವತಃ ಆ ಪಕ್ಷದ ಶಾಸಕರೇ ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಗುತ್ತಿಗೆದಾರರ ಹಣ ಪಾವತಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಮಗಾರಿಗೆ ಸಂಬಂಧಿಸಿದ ಹಣ ಪಾವತಿಗೆ ನಿರ್ಬಂಧ ವಿಧಿಸಿ ಪ್ರತಿಯೊಬ್ಬ ಕಂಟ್ರಾಕ್ಟರ್ ಬಳಿ ಕೂಡ ಹಣ ದೋಚುವ, ಹಗಲುದರೋಡೆ ಮಾಡುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿಗಳ ಸ್ಪಷ್ಟನೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕತ್ವದ ಸೂಚನೆ ಅನುಸಾರವಾಗಿ ಕರ್ನಾಟಕದ ಸರಕಾರವನ್ನು ಎಟಿಎಂ ಆಗಿ ಬಳಸಲು ಮುಂದಾದಂತಿದೆ. ಬೇರೆ ರಾಜ್ಯಗಳ ಚುನಾವಣೆಗೆ ಬೇಕಾದ ಕೋಟ್ಯಂತರ ಹಣ ಸಂಗ್ರಹ ಮಾಡುತ್ತಿರುವುದೂ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗುವಂತಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಪ್ರತಿಯೊಂದು ಸಚಿವಾಲಯಕ್ಕೂ ಇಂತಿಷ್ಟು ಹಣ ಸಂಗ್ರಹಕ್ಕೆ ಸೂಚಿಸಿದ್ದಾರೆ ಎಂಬುದು ರಾಜ್ಯದಲ್ಲಿ ಜನಜನಿತವಾಗಿದೆ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಜನಾಂದೋಲನ ರೂಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.