ಬೆಂಗಳೂರು: ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಬಿಜೆಪಿಯ 7 ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. 22ರಂದು ಈ ಪ್ರವಾಸ ಆರಂಭವಾಗಲಿದೆ. 22ರಿಂದ 26ರ ಒಳಗೆ ರಾಜ್ಯದ ಪ್ರವಾಸ ಮುಕ್ತಾಯವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗಳು, ಇಡೀ ಜಗತ್ತೇ ಭಾರತದ ಕಡೆಗೆ ಒಂದು ಸಾರಿ ತಿರುಗಿ ನೋಡುವಂತೆ ಸಾಧನೆಗಳನ್ನು ಮಾಡಿದ್ದನ್ನು ತಿಳಿಸಲಾಗುವುದು. ಇಡೀ ದೇಶದಲ್ಲಿ ರಸ್ತೆಗಳ ಕ್ರಾಂತಿ ಆಗಿದೆ. ವಿಮಾನನಿಲ್ದಾಣಗಳ ನಿರ್ಮಾಣ ಆಗಿದೆ. ರೈತರ ಖಾತೆಗೆ 6 ಸಾವಿರ ರೂ. ಹಾಕುತ್ತಿರುವುದು, ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಒದಗಿಸಿರುವುದು, ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆದು ಬಡವರಿಗೆ ಆರೋಗ್ಯ ಸೌಕರ್ಯ ಒದಗಿಸಿದ್ದು, ಮೆಡಿಕಲ್ ಕಾಲೇಜು ಹೆಚ್ಚಿಸಿರುವುದು, ಮೆಡಿಕಲ್ ಸೀಟ್ ಹೆಚ್ಚಳ, ಐಐಟಿ, ಏಮ್ಸ್ ಸಂಸ್ಥೆಗಳನ್ನು ದೊಡ್ಡ ಸಂಖ್ಯೆಯಲ್ಲಿ ತೆರೆದಿರುವುದನ್ನು ತಿಳಿಸಲಿದ್ದೇವೆ ಎಂದು ತಿಳಿಸಿದರು.
ಭಾರತ ಹಿಂದೆ ಆಮದು ರಾಷ್ಟ್ರವಾಗಿತ್ತು. ಈಗ ರಫ್ತು ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ. ಒಂದು ವರ್ಷಕ್ಕೆ 770 ಲಕ್ಷ ಬಿಲಿಯನ್ ಡಾಲರ್ ರಫ್ತು ಆಗುತ್ತಿರುವ ಕುರಿತು ತಿಳಿಸುತ್ತೇವೆ. ಮೊಬೈಲ್ ಉತ್ಪಾದನೆಯಲ್ಲೂ ಪ್ರಪಂಚದಲ್ಲಿ ಭಾರತ ಎರಡನೇ ರಾಷ್ಟ್ರವಾದುದು, ಕೋವಿಡ್ ಸಮರ್ಥ ನಿರ್ವಹಣೆ, ಜಿಡಿಪಿ ಹೆಚ್ಚಳ ಕುರಿತು ತಿಳಿಸಲಿದ್ದೇವೆ ಎಂದು ವಿವರ ನೀಡಿದರು.
ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿನ ಆಘಾತ ಆಗಿತ್ತು. ಮೋದಿಯವರ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಲಾಗುತ್ತದೆ ಎಂದು ತಿಳಿಸಿದರು. ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ 26ರಿಂದ ಜುಲೈ 5ರವರೆಗೆ ರಾಜ್ಯಾದ್ಯಂತ ಮನೆಮನೆಗೆ ತೆರಳಿ ‘ಮನೆಮನೆಗೆ ಮೋದಿ’ ಕರಪತ್ರ ವಿತರಿಸಲಾಗುವುದು. ಮೋದಿಯವರ ಸರಕಾರದ ಸಾಧನೆಗಳನ್ನು 50 ಲಕ್ಷ ಮನೆಗಳಿಗೆ ತಲುಪಿಸುತ್ತೇವೆ ಎಂದು ಹೇಳಿದರು.
ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪನವರ ತಂಡದಲ್ಲಿ ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ಪ್ರತಾಪಸಿಂಹ, ಪಿ.ಸಿ.ಮೋಹನ್, ಮುದ್ದುಹನುಮೇಗೌಡ, ಜಿ.ಎಸ್.ಬಸವರಾಜು, ಎಂ.ಪಿ.ರೇಣುಕಾಚಾರ್ಯ, ಮಾಧುಸ್ವಾಮಿ, ತೇಜಸ್ವಿ ಸೂರ್ಯ ಅವರು ಇರಲಿದ್ದಾರೆ. ಈ ತಂಡವು ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ ಎಂದರು.
ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ತಂಡದಲ್ಲಿ ಶ್ರೀರಾಮುಲು, ಭಗವಂತ ಖೂಬಾ, ಎಂ.ಪಿ.ದೇವೇಂದ್ರಪ್ಪ, ರಾಜೂಗೌಡ, ಪಿ.ವಿ.ನಾಯಕ್, ಕರಡಿ ಸಂಗಣ್ಣ, ಎಂ.ಪಿ.ಪ್ರಕಾಶ್ ಅವರ ಮಗಳಾದ ಶ್ರೀಮತಿ ಎಂ.ಪಿ.ಸುಮಾ ವಿಜಯ್ ಇರುವರು. ಇವರು ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂಡದಲ್ಲಿ ರಮೇಶ್ ಜಿಗಜಿಣಗಿ, ಗದ್ದಿಗೌಡರ, ಮಂಗಳಾ ಸುರೇಶ್ ಅಂಗಡಿ, ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜು, ವೀರಣ್ಣ ಚರಂತಿಮಠ, ರಮೇಶ್ ಕತ್ತಿ ಭಾಗವಹಿಸುವರು. ವಿಜಯಪುರ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದು ವಿವರಿಸಿದರು.
ಆರ್.ಅಶೋಕ್ ಅವರ ತಂಡದಲ್ಲಿ ಪ್ರತಾಪಸಿಂಹ, ಎಸ್.ಟಿ.ಸೋಮಶೇಖರ್, ಕೆ.ಜಿ.ಬೋಪಯ್ಯ, ಎ.ಟಿ.ರಾಮಸ್ವಾಮಿ, ಪಿ.ಸಿ.ಮೋಹನ್, ಮುನಿಸ್ವಾಮಿ, ಪ್ರೀತಂಗೌಡ, ಅಪ್ಪಚ್ಚು ರಂಜನ್, ಮಂಜುನಾಥ್ ಅವರು ಪಾಲ್ಗೊಳ್ಳುವರು. ಇವರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.
ಡಿ.ವಿ.ಸದಾನಂದ ಗೌಡ ಮತ್ತು ವಿ.ಸೋಮಣ್ಣರವರ ನೇತೃತ್ವದ ಮತ್ತೊಂದು ತಂಡವು ಶೋಭಾ ಕರಂದ್ಲಾಜೆ, ಪ್ರತಾಪಸಿಂಹ, ಗೋಪಾಲಯ್ಯ, ಮಲ್ಲಿಕಾರ್ಜುನಪ್ಪ, ವಿಜಯಶಂಕರ್, ಶ್ರೀನಿವಾಸ ಪ್ರಸಾದ್ ನಿರಂಜನ್, ವತ್ಸ, ರಾಮದಾಸ್, ನಾಗೇಂದ್ರ ಇರುವರು. ಈ ತಂಡವು ಚಾಮರಾಜನಗರ, ಮೈಸೂರು, ಮೈಸೂರು ಗ್ರಾಮಾಂತರ, ಮಂಡ್ಯ- ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತದೆ ಎಂದು ವಿವರ ನೀಡಿದರು.
ಪ್ರಲ್ಹಾದ ಜೋಷಿ ಮತ್ತು ಸಿ.ಟಿ.ರವಿ ಅವರ ನೇತೃತ್ವದ ತಂಡವು ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ವಿಜಯೇಂದ್ರ, ಪ್ರಮೋದ್ ಮಧ್ವರಾಜ್, ಬಿ.ವೈ.ವಿಜಯೇಂದ್ರ, ಶಿವರಾಮ ಹೆಬ್ಬಾರ್, ದಿನಕರ್ ಶೆಟ್ಟಿ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್ ಅವರನ್ನು ಒಳಗೊಂಡಿರುತ್ತದೆ. ಇವರು ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರಕನ್ನಡ (2), ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ ಎಂದರು.
ಈಶ್ವರಪ್ಪನವರ ತಂಡದಲ್ಲಿ ಸಿ.ಎನ್.ಅಶ್ವತ್ಥನಾರಾಯಣ, ಶಿವಕುಮಾರ್ ಉದಾಸಿ, ಅರವಿಂದ ಬೆಲ್ಲದ, ಬಿ.ಸಿ.ಪಾಟೀಲ, ಸಂಗಣ್ಣ ಕರಡಿ, ಶಂಕರ ಪಾಟೀಲ ಮುನೇನಕೊಪ್ಪ, ಬಿ.ಸಿ.ಪಾಟೀಲ, ಶಿವರಾಜ್ ಸಜ್ಜನ್ ಇರುತ್ತಾರೆ. ಹಾವೇರಿ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ಕೊಪ್ಪಳಗಳಲ್ಲಿ ಇವರು ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.