ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಜಿ ಅವರ ಸರಕಾರವು 9 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅವರ ಸಾಧನೆಗಳ ಕುರಿತು ಜನರಿಗೆ ತಿಳಿಸಲು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಚುನಾವಣೆ ನಂತರದ ಪ್ರಥಮ ಸಭೆ ಇದಾಗಿದ್ದು, ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿದ್ದರು. ಹಲವು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಪರಿಣಾಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಪ್ರಧಾನನ ಕಾರ್ಯದರ್ಶಿ ಸಿದ್ದರಾಜು ಅವರು ಉಪಸ್ಥಿತರಿದ್ದರು. ಹಲವು ವಿಚಾರಗಳ ಕುರಿತು ಮಾತನಾಡಿದ್ದೇವೆ. ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಲಾಗಿದೆ ಎಂದರು. ಸಂಘಟನೆಯನ್ನು ಮತ್ತೆ ಬೇರು ಮಟ್ಟದಿಂದ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಹೊಸ ಕಾಂಗ್ರೆಸ್ ಸರಕಾರವು ದಾರಿ ತಪ್ಪಿಸುವ ಕೆಲಸ ಮಾಡಿತ್ತು. ಮೋಸ, ವಂಚನೆಗಳಿಂದ ಸರಕಾರ ಬರುವಂತಾಗಿದೆ. 5 ಗ್ಯಾರಂಟಿಗಳ ಮೂಲಕ ಜನರನ್ನು ದಾರಿ ತಪ್ಪಿಸಿ ಅವರ ಮತ ಗಳಿಸಿ ಈಗ ಎಲ್ಲಕ್ಕೂ ಕೂಡ ಅವರದೇ ರೀತಿಯಲ್ಲಿ ಕಂಡಿಷನ್ ಹಾಕಿ ಅವರನ್ನು ಕೆರಳಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವುದನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವ ಕುರಿತು ಸಂತಸ ಸೂಚಿಸಿದ ಅವರು, ಯಾರು ಕೆಲಸಗಳಿಗೆ ಹೋಗುತ್ತಾರೋ, ಯಾರು ಬಹುದೂರದಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೋ, ಸಂಬಳ ಕಡಿಮೆ ಇತ್ತೋ ಅಂಥವರಿಗೆ ಅನುಕೂಲ ಆಗಲಿದೆ. ಇದರಿಂದ ಸುಮ್ಮನೆ ಮನೆಯಲ್ಲಿ ಕುಳಿತವರು ಪುಕ್ಕಟೆ ಬಸ್ಸಿದೆ ಎಂದು ಓಡಾಟಕ್ಕೆ ಮನೆಯಿಂದ ಹೊರಕ್ಕೆ ಹೋಗುವ ಸಂದರ್ಭ ಬರಬಹುದು. ಮನೆಯಲ್ಲಿ ಗಂಡಸರು, ಹೆಂಗಸರು ಜಗಳ ಮಾಡದಿದ್ದರೆ ಸಾಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಬಸ್ ಸ್ಟಾಂಡ್ ಕಡೆ ಹೋಗಲಿ; ಅಲ್ಲಿ ಆಟೋ ಚಾಲಕರೂ ಜನರಿಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಅವರ ಅಹವಾಲುಗಳನ್ನೂ ಆಲಿಸಿ ಎಂದು ಮನವಿ ಮಾಡಿದರು. ಆಟೋ ಚಾಲಕರಿಗೆ ಬಹಳಷ್ಟು ಭರವಸೆ ಕೊಟ್ಟಿದ್ದರು. ಆದರೆ, ಈ ಸರಕಾರ ನಮಗೆ ಬರೆ ಹಾಕಲು ಮುಂದಾಗಿದೆ ಎಂದು ಅವರು ಆತಂಕ ಸೂಚಿಸುತ್ತಿದ್ದಾರೆ ಎಂದು ವಿವರಿಸಿದರು. ಅವರ ಆತಂಕವನ್ನೂ ಶಮನ ಮಾಡಿ ಎಂದರು.
ಇಲೆಕ್ಟ್ರಿಸಿಟಿ ಬಿಲ್ ಬಗ್ಗೆ ಹಲವಾರು ಟ್ರೋಲ್ ಆಗುತ್ತಿದೆ. ನನಗೂ ಫ್ರೀ ನಿನಗೂ ಫ್ರೀ ಬದಲಾಗಿ ಗ್ಯಾರಂಟಿ ಚಾಲನೆಗೆ ಬರುವ ಮೊದಲೇ ಎಲ್ಲ ಫ್ರೀಗಳೂ ಕಂಡಿಷನ್ಗೆ ಒಳಪಡುತ್ತಿವೆ. 200 ಯೂನಿಟ್ ಫ್ರೀ ಎಂದವರು 70 ಯೂನಿಟ್ ಬಳಸುವವರಿಗೆ ಶೇ 10 ಹೆಚ್ಚುವರಿ ಉಚಿತ ನೀಡಿ 77 ಯೂನಿಟ್ ಕೊಡುವ ಕಂಡಿಷನ್ ಹಾಕಿದ್ದಾರೆ. 5 ವರ್ಷ ಅಷ್ಟರಲ್ಲೇ ಇರದಿದ್ದರೆ ಅದನ್ನೂ ಕಳಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಈ ರೀತಿ ಮೋಸ- ವಂಚನೆ ಮಾಡಬಾರದಿತ್ತು ಎಂದು ಜನರೇ ತಿಳಿಸುತ್ತಿದ್ದಾರೆ. ಇದು ಗ್ಯಾರಂಟಿ ಸರಕಾರವಲ್ಲ; 420 ಸರಕಾರ ಎಂದು ವಾಟ್ಸಪ್ ಗಳಲ್ಲಿ ಜನರು ಸ್ಟೇಟಸ್, ಪೋಸ್ಟ್ ಹಾಕುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರೇ ನಿಮಗೆ 420 ಸರಕಾರ ಎಂದು ಹೇಳಿಸಿಕೊಳ್ಳಲು ಆಸೆ ಇತ್ತೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದು ಅನುಷ್ಠಾನ ಸಾಧ್ಯವಿಲ್ಲ ಎಂದು ಅನಿಸಿದ್ದರೆ ಈ ರೀತಿ ಗ್ಯಾರಂಟಿಗಳನ್ನು ನೀವ್ಯಾಕೆ ಕೊಡಬೇಕಿತ್ತು? ಇದು ಮೋಸ ಅಲ್ಲವೇ? ವಂಚನೆ ಅಲ್ಲವೇ ಎಂದು ಪ್ರಶ್ನಿಸಿದರು.
ನದಿ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನುವಂತಾಗಿದೆ. ನೀವು ಮತ ಪಡೆದಿದ್ದೀರಿ. ಸರಕಾರವನ್ನೂ ರಚಿಸಿದ್ದೀರಿ. ಇನ್ನು ಇವರನ್ನು ಯಾಕೆ ಪರಿಗಣಿಸಬೇಕು? 5 ವರ್ಷ ನನ್ನದೇ ಸರಕಾರ. ನಾನು ಮಾಡಿದರೆ ಮಾಡಬಹುದು. ಬಿಟ್ಟರೆ ಬಿಡಬಹುದು. ಕೇಳೋಕೆ ಇವರ್ಯಾರು? ಅನ್ನುವ ವಾದ ನಿಮ್ಮಲ್ಲಿ ಇದ್ದಂತಿದೆ. ಇಂಥ ವಾದ ಒಳ್ಳೆಯದಲ್ಲ. ಇದು ನೀತಿ, ಸಿದ್ಧಾಂತವಿಲ್ಲದ ಗಂಡಾಗುಂಡಿ ವ್ಯವಹಾರದಂತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಮೀರಿ ನಡೆಯುವ ನೀವು ಉತ್ತಮ ಆಡಳಿತ ಕೊಡಲಾಗದು. ಜನರ ನಂಬಿಕೆ ಉಳಿಸಿಕೊಳ್ಳಲು ಅಸಾಧ್ಯ ಎಂದು ತಿಳಿಸಿದರು. ಈಗಲಾದರೂ ಜನರಿಗೆ ಹೊರೆ ಅನಿಸುವ ವಿದ್ಯುತ್ ದರ ಹೆಚ್ಚಳಕ್ಕೆ ಒಪ್ಪದಿರಿ ಎಂದು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.