ಮಂಗಳೂರು: ಪ್ರಮುಖ ಗ್ರಾಮೀಣ ಬ್ಯಾಂಕಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು, ಅಟಲ್ ಪಿಂಚಣಿ ಯೋಜನೆಯ (ಏಪಿವೈ) ಅನುಷ್ಠಾನಕ್ಕೆ ಸಂಬಂಧಿಸಿ 2022-23 ರ ಅವಧಿಯಲ್ಲಿ ಮಾಡಿದ ಉತ್ತಮ ಸಾಧನೆಗೆ ಸಂಬಂಧಿಸಿ ಮತ್ತೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಬುಧವಾರದಂದು ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಮ್ ಭಂಡಿವಾಡ ಅವರು ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಕಾರ್ಯದರ್ಶಿ ಡಾ. ವಿವೇಕ ಜೋಶಿ ಅವರಿಂದ ಅವರಿಂದ ಪ್ರಶಸ್ತಿ ಫಲಕ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿ ಎಫ಼್ ಆರ್ ಡಿ ಏ) ಅಧ್ಯಕ್ಷ ಡಾ. ದೀಪಕ ಮೊಹಾಂತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಕಾಂತ ಭಂಡಿವಾಡ ಅವರು, ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕು ಪರಮಾದ್ಯತೆ ನೀಡಿದೆ. ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ವರದಾನವಾಗಿದೆ ಎಂದರು.
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು ಈ ವರೆಗೆ 342852 ಅಟಲ್ ಪಿಂಚಣಿ ಖಾತೆಗಳನ್ನು ಮಾಡಿಸಿದೆ. ಈ ದಾಖಲೆಗಿಂತ ರೈತರು, ರೈತ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರು, ನಿಶ್ಚಿತ ಪಿಂಚಣಿ ಇಲ್ಲದ ಶ್ರಮಿಕರು ತಮ್ಮ 60 ನೇ ವರ್ಷದ ನಂತರ ನಿಶ್ಚಿಂತ ಬದುಕು ಸಾಗಿಸಲು ಅನುಕೂಲವಾಗಲಿದೆ ಎಂಬುದೇ ಸಮಾಧಾನದ ವಿಷಯ ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು ಪ್ರಶಸ್ತಿ ಬ್ಯಾಂಕಿನ ಗೌರವ ಹೆಚ್ಚಿಸಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಅತ್ಯಂತ ಸಕ್ರಿಯವಾಗಿ ಪಾಲುಗೊಂಡಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗುವುದು ಎಂದೂ ಅವರು ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾಡಿದ್ದೇನು:
2022-23 ನೇ ಹಣಕಾಸು ವರ್ಷದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ಼್ ಆರ್ ಡಿ ಏ) ಬ್ಯಾಂಕಿಗೆ ಪ್ರತಿ ಶಾಖೆಗೆ 80 ಖಾತೆಗಳ ಸರಾಸರಿಯಲ್ಲಿ 50320 ಖಾತೆಗಳ ಗುರಿ ನೀಡಿತ್ತು. ಅದಕ್ಕೆ ಪ್ರತಿಯಾಗಿ ಬ್ಯಾಂಕು121 ರ ಸರಾಸರಿಯಲ್ಲಿ 76569 ಖಾತೆಗಳನ್ನು ಮಾಡಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ. ಇದು ದಕ್ಷಿಣ ಭಾರತ ಮಟ್ಟದಲ್ಲಿ ಉಳಿದೆಲ್ಲ ಬ್ಯಾಂಕುಗಳ ಸರಾಸರಿಗಿಂತ ಹೆಚ್ಚಿನದ್ದಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕಳೆದ ಮೇ ತಿಂಗಳಿನಲ್ಲಿ ಒಂದೇ ದಿನ 44000 ಕ್ಕೂಹೆಚ್ಚಿನ ಖಾತೆಗಳನ್ನು ಲಾಗಿನ್ ಮಾಡಿಸುವ ಮೂಲಕ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು. ಪ್ರಸ್ತುತ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು ಮಂಗಳೂರಿನಿಂದ ವಿಜಯಪುರದವರೆಗೆ ಒಂಭತ್ತು ಜಿಲ್ಲೆಗಳ ಕಾರ್ಯ ಪರಿಧಿಯಲ್ಲಿ 629 ಶಾಖೆಗಳನ್ನು ಹೊಂದಿದ್ದು 33150 ಕೋಟಿ ರೂ. ವಹಿವಾಟು ಹೊಂದಿದ ಪ್ರಮುಖ ಗ್ರಾಮೀಣ ಬ್ಯಾಂಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.