ಪುತ್ತೂರು : ರೈತನ ಕ್ಷೇಮಾಭಿವೃದ್ಧಿಯ ಹಿನ್ನಲೆಯಲ್ಲಿ ಬಹು ಕೃಷಿ ಪದ್ಧತಿ, ಗುಂಪು ಕೃಷಿ ಹಾಗೂ ಹೂಡಿಕೆದಾರರ ಸೃಷ್ಟಿ ಇಂದಿನ ಅಗತ್ಯ. ರೈತನಿಗೆ ಆರ್ಥಿಕ ಬೆಂಬಲ ದೊರಕಿದೊಡನೆ ಮತ್ತಷ್ಟು ಹುಮ್ಮಸ್ಸು ಮೂಡಲು ಸಾಧ್ಯ. ಖಾಸಗಿ ವ್ಯಕ್ತಿಗಳು ರೈತನ ಕೃಷಿಗೆ ಬೆಂಬಲವಾಗಿ ನಿಲ್ಲುವ ಅಗತ್ಯ ತುಂಬಾ ಇದೆ. ರೈತ ಸಾಲ ಮರು ಪಾವತಿ ಮಾಡುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಸಮಾಜದಲ್ಲಿ ಬಿತ್ತುವುದು ನಿಲ್ಲಬೇಕು. ಉತ್ತಮ ಬೆಳೆ ಹಾಗೂ ಧಾರಣೆ ದೊರಕಿದರೆ ಯಾವ ರೈತನೂ ಮರುಪಾವತಿ ಮಾಡದೆ ಇರುವುದಿಲ್ಲ ಎಂದು ಶಿವಮೊಗ್ಗದ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿ.ವಾಸುದೇವಪ್ಪ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರೈತರ ಆತ್ಮಹತ್ಯೆ – ಕಾರಣಗಳು ಮತ್ತು ಪರಿಹಾರಗಳು ಎಂಬ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ದೇಶದಲ್ಲಿ ಪ್ರಸ್ತುತ ೮ರಿಂದ ೯ ಶೇಕಡ ಕೃಷಿ ಭೂಮಿ ಕಡಿಮೆಯಾಗಿದೆ. ಆದಾಗ್ಯೂ ಉತ್ಪಾದನೆ ಹೆಚ್ಚಿದೆ. ಗಮನಾರ್ಹ ಸಂಗತಿಯೆಂದರೆ ಸಣ್ಣ ರೈತರೇ ಇಂದು ಹೆಚ್ಚಾಗಿ ನಿಜ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಆತ್ಮಹತ್ಯೆಗಳೂ ಮಧ್ಯಮ ವರ್ಗದ ರೈತರಲ್ಲೇ ಸಂಭವಿಸುತ್ತಿದೆ. ಆದುದರಿಂದ ಈ ರೈತರಿಗೆ ಸರ್ಕಾರದ ಬೆಂಬಲ ಅತೀವ ಅಗತ್ಯ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದ ರೀತಿ, ನಿರಾಸೆ ತಾಳದ ಹಾಗೆ ವಾತಾವರಣ ಸೃಷ್ಟಿಯಾಗಬೇಕಿದೆ. ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬಹುದು ಎಂಬ ಆತ್ಮಸ್ತೈರ್ಯ ರೈತರಲ್ಲಿ ತುಂಬಿಸಬೇಕಾಗಿದೆ ಎಂದು ನುಡಿದರು.
ನೀರು ಕೃಷಿಯ ಮೂಲ. ಆದರೆ ನೀರಿನ ಬಗೆಗಿನ ಅವಜ್ಞತೆ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಮಾರಕವಾಗಬಹುದು. ಪ್ರಸ್ತುತ ನೀರಿನ ನಿರ್ವಹಣೆ ಬಗೆಗೆ ವೈಜ್ಞಾನಿಕ ಸಂಗತಿಗಳು ಸಾಕಾರಗೊಂಡಿವೆ. ಅವುಗಳನ್ನು ಸಶಕ್ತವಾಗಿ ಬಳಸುವ ಬಗೆಗೆ ಯೋಚನೆ ನಡೆಯಬೇಕು. ವಿಯೆಟ್ನಾಂನಂತಹ ಸಣ್ಣ ರಾಷ್ಟ್ರದಲ್ಲಿಯೂ ಸಮುದ್ರದ ನೀರನ್ನು ಬಳಕೆ ಮಾಡುವ ವಿಧಾನ ಅಳವಡಿಸಿಕೊಂಡಿದ್ದಾರೆ. ಹೀಗಿರುವಾಗ ಭಾರತದಂತಹ ಬೃಹತ್ ದೇಶದಲ್ಲಿ ಇದು ಅಸಾಧ್ಯದ ಸಂಗತಿಯೇನಲ್ಲ ಎಂದು ಅಭಿಪ್ರಾಯಿಸಿದರು.
ಭಾರತದಲ್ಲಿ ಪ್ರತಿ ಅರ್ಧ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದಕ್ಕೆ ಕಾರಣ ಏನು ಎಂಬುದರ ಅಧ್ಯಯನ ಅತ್ಯಂತ ಅಗತ್ಯ. ಯಾಕೆಂದರೆ ಕೃಷಿ ಅಭ್ಯುದಯ ಹೊಂದಿದರೆ ಎಲ್ಲವೂ ಸುಧಾರಣೆಗೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಕೃಷಿಕನಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಜರೂರಾಗಿ ನಡೆಯಬೇಕು ಎಂದರಲ್ಲದೆ ರೈತರ ಆತ್ಮಹತ್ಯೆಯನ್ನು ಗಮನಿಸಿದರೆ ಗಂಡುಮಕ್ಕಳೇ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿರುವುದು ಕಾಣಿಸುತ್ತಿದೆ. ಮಹಿಳೆಯರೂ ಗಟ್ಟಿ ಮನಸ್ಸಿನಿಂದ ಜೀವನ ನಡೆಸುತ್ತಿರುವಾಗ ಪುರುಷರಲ್ಲೂ ಈ ತೆರನಾದ ಮನೋಭಾವ ಬೆಳೆಯಬೇಕು ಎಂದು ಹೇಳಿದರು.
ಜಾಗತೀಕರಣ ನೀತಿಯಲ್ಲಿ ಕೃಷಿಗೆ ಆದ್ಯತೆ ಇಲ್ಲ : ದಿಕ್ಸೂಚಿ ಭಾಷಣ ಮಾಡಿದ ಶಿವಮೊಗ್ಗದ ನಿವೃತ್ತ ಪ್ರಾಚಾರ್ಯ ಪ್ರೊ. ಕುಮಾರ ಸ್ವಾಮಿ ಮಾತನಾಡಿ ಜಾಗತೀಕರಣಕ್ಕೆ ನಮ್ಮನ್ನು ನಾವು ತೆರೆದುಕೊಂಡ ನಂತರದಲ್ಲಿ ರೈತರ ಆತ್ಮಹತ್ಯೆ ಗಂಭೀರ ಸ್ವರೂಪ ತಳೆಯಿತು. ಅದಕ್ಕಿಂತ ಹಿಂದೆ ಇತರ ಎಲ್ಲಾ ವರ್ಗದ ಜನರ ಆತ್ಮಹತ್ಯೆಯಂತೆ ರೈತರ ಆತ್ಮಹತ್ಯೆಯೂ ಸಾಮಾನ್ಯ ವಿಷಯವಾಗಿತ್ತು. ಆದರೆ ೧೯೯೫ರ ನಂತರ ರೈತರ ಆತ್ಮಹತ್ಯೆ ಎಂಬ ಹೊಸ ನಕಾರಾತ್ಮಕ ಬೆಳವಣಿಗೆ ಮೂಡಿ ಬರಲಾರಂಭಿಸಿತು. ಜಾಗತೀಕರಣ ನೀತಿಯಲ್ಲಿ ಕೃಷಿಗೆ ಆದ್ಯತೆ ಇಲ್ಲದಿರುವುದೇ ಇದಕ್ಕೆ ಕಾರಣ. ಇತ್ತ ಸರ್ಕಾರಗಳೂ ನಿರಂತರವಾಗಿ ಕೃಷಿಯನ್ನು ನಿರ್ಲಕ್ಷಗೊಳಿಸುತ್ತಾ ಬಂದವು ಎಂದರು.
ಪ್ರಸ್ತುತ ವರ್ಷ ದೇಶದ ವಿವಿಧ ಕ್ಷೇತ್ರಗಳಿಂದ ಒಟ್ಟು ಮೂರು ಲಕ್ಷದ ಅರವತ್ತು ಸಾವಿರ ಕೋಟಿ ರೂಗಳಷ್ಟು ಸಾಲ ಮರುಪಾವತಿಯಾಗದೆ ಉಳಿದಿದೆ. ಮುಂದಿನ ವರ್ಷ ಇದು ನಾಲ್ಕು ಲಕ್ಷ ಕೋಟಿಗೆ ಇದು ಏರಿಕೆಯಾಗಬಹುದೆಂದು ಅಂದಾಜಿಸಲಾಗಿದೆ. ಕೋಟಿಗಟ್ಟಳೆ ಸಾಲವನ್ನು ಮರುಪಾವತಿ ಮಾಡದ ಉದ್ಯಮಿಗಳಿದ್ದಾರೆ. ಅವರ್ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆದರೆ ಐವತ್ತು ಸಾವಿರ, ಒಂದು ಲಕ್ಷದಷ್ಟು ಸಾಲಕ್ಕೊಳಗಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತ ಎಂದರು.
ರೈತರು ತಮ್ಮ ಸಮಸ್ಯೆಗಳನ್ನು ರಾಷ್ಟ್ರ, ರಾಜ್ಯ, ಜಿಲ್ಲೆ ಮಾತ್ರವಲ್ಲದೆ ಗ್ರಾಮ ಮಟ್ಟದಲ್ಲೂ ಚರ್ಚಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಮಾತ್ರವಲ್ಲದೆ ರೈತರ ಮಾತನ್ನು ಸರ್ಕಾರ ಅತ್ಯಂತ ವಿನೀತವಾಗಿ ಕೇಳಿಸಿಕೊಳ್ಳಬೇಕು. ಇದರೊಂದಿಗೆ ಕೃಷಿಗೆ ಪೂರಕ ಹೂಡಿಕೆಯನ್ನು ಸರ್ಕಾರ ಹೆಚ್ಚಿಸಬೇಕು. ಜತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಬ್ಯಾಂಕ್ಗಳನ್ನು ಆರಂಭಿಸಬೇಕು. ಎ.ಪಿ.ಎಂ.ಸಿ ಯನ್ನು ಮತ್ತಷ್ಟು ಸದೃಢಗೊಳಿಸಬೇಕು, ಖಾಸಗಿ ಮಾರುಕಟ್ಟೆಗೂ ಉತ್ತಮ ಅವಕಾಶ ಕಲ್ಪಿಸಿಕೊಡಬೇಕು. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ಅಲ್ಲದೆ ಸಾವಯವ, ನೈಸರ್ಗಿಕ ಕೃಷಿಯೆಡೆಗೆ ರೈತರನ್ನು ಆಕರ್ಷಿಸಬೇಕು. ಇಂತಹ ಹಲವು ಕ್ರಮಗಳನ್ನು ಕೈಗೊಂಡರೆ ರೈತರ ಆತ್ಮಹತ್ಯೆ ತಡೆಯಲು ಸಾಧ್ಯ ಎಂದು ಸಲಹೆ ನೀಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ. ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಲ್ಲೊಬ್ಬರಾದ ಡಾ.ವಿಘ್ನೇಶ್ವರ ವರ್ಮುಡಿ ರಚಿಸಿದ ರೈತರ ಆತ್ಮಹತ್ಯೆ – ಕಾರಣಗಳು ಮತ್ತು ಪರಿಹಾರೋಪಾಯಗಳು ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ವೆನಿಲ್ಲಾ ಮಾರುಕಟ್ಟೆಯ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಗಳಿಸಿದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವಿಷ್ಣು ಕುಮಾರ್ ಅವರನ್ನು ಅಭಿನಂದಿಸಲಾಯಿತು.
ವಿವೇಕಾನಂದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್, ಐಎಎಸ್, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಎನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಕನ್ಯಾ ಎಂ.ಎಸ್ ಆಶಯ ಗೀತೆ ಹಾಡಿದರು.
ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.