ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ಇವರನ್ನು ನೋಡಿಯೇ ಹುಟ್ಟಿರಬೇಕು ಎಂದೆನಿಸುತ್ತದೆ. ಸಾಧಿಸುವ ಛಲವಿದ್ದರೆ, ಮಹತ್ವಾಕಾಂಕ್ಷೆಯಿದ್ದರೆ ಅದೆಂತಹ ಕಷ್ಟವನ್ನಾದರೂ ಎದುರಿಸಿ ನಿಲ್ಲಬಹುದು, ಜೀವನದಲ್ಲಿ ಆಗಸದೆತ್ತರಕ್ಕೆ ಏರಬಹುದು ಎಂಬುದನ್ನು ಸಾಧಿಸಿದ ತೋರಿಸಿರುವ ಛಲಗಾತಿ ಈಕೆ.
ನಾವು ಹೇಳ ಹೊರಟಿರುವುದು ಯುಎಸ್ಎನಲ್ಲಿ ಕೀಸ್ ಸಾಫ್ಟ್ವೇರ್ ಸೊಲ್ಯೂಷನ್ ಸಿಇಓ ಅನಿಲ್ ಜ್ಯೋತಿ ರೆಡ್ಡಿ ಬಗ್ಗೆ. ಹೌದು ಆಕೆ ನಿಜಕ್ಕೂ ಛಲಗಾತಿ, ಸಾಹಸಿ ಮಹಿಳೆ. ಕೃಷಿ ಕಾರ್ಮಿಕಳಾಗಿ ದಿನಕ್ಕೆ 5 ರೂಪಾಯಿ ದುಡಿಯುತ್ತಿದ್ದ ಆಕೆ ಈಗ ಸಾಫ್ಟ್ವೇರ್ ಕಂಪನಿಯೊಂದರ ಸಿಇಓ. ನಂಬಲು ಕಷ್ಟವಾದರೂ ಇದು ನಿಜ. ಮುಂದುವರೆಯಬೇಕೆಂಬ ಅದಮ್ಯ ಆಕಾಂಕ್ಷೆಯೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ತೆಲಂಗಾಣದವರಾದ ಜ್ಯೋತಿ ಭತ್ತದ ಗದ್ದೆಯಲ್ಲಿ ದುಡಿಯುತ್ತಿದ್ದವರು, ದಿನಕ್ಕೆ ಸಿಗುವ ಐದು ರೂಪಾಯಿಯಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆ ಇತ್ತು. ಐದು ವರ್ಷ ಕೃಷಿ ಕಾರ್ಮಿಕಳಾಗಿ ದುಡಿದ ಅವರಿಗೆ ಸ್ವಲ್ಪ ವಿದ್ಯಾಭ್ಯಾಸವಿದ್ದ ಕಾರಣ ಇತರ ಕೃಷಿ ಕಾರ್ಮಿಕರಿಗೆ ರಾತ್ರಿ ಶಾಲೆಯಲ್ಲಿ ಪಾಠ ಹೇಳಿಕೊಡುವ ಅವಕಾಶ ಲಭಿಸಿತು. ಇದನ್ನು ಚೆನ್ನಾಗಿ ಸದುಪಯೋಗಪಡಿಸಿಕೊಂಡ ಅವರು ಬಳಿಕ ಸರ್ಕಾರಿ ಶಿಕ್ಷಕಿಯಾಗಿ ನಿಯುಕ್ತಿಗೊಂಡರು. ಬಳಿಕ ಅವರ ಸಂಬಳ 150 ರೂಪಾಯಿಗೆ ಏರಿಕೆ ಕಂಡಿತು.
ಆದರೆ ಸರ್ಕಾರಿ ಕೆಲಸವೆಂದು ಅಲ್ಲೇ ನೆಲೆಯೂರುವ ಜಾಯಮಾನ ಮಹತ್ವಾಕಾಂಕ್ಷಿ ಜ್ಯೋತಿಯವರದಲ್ಲ. ತನ್ನ ದೂರದ ಸಂಬಂಧಿಯೊಬ್ಬರು ಅಮೆರಿಕಾಗೆ ಬರುವಂತೆ ಆಹ್ವಾನ ನೀಡಿದಾಗ ಮೊದಲು ಹಿಂಜರಿದರು ಬಳಿಕ ದೈರ್ಯ ಮಾಡಿ ಹೊರಟೇ ಬಿಟ್ಟರು. ಅಲ್ಲಿಗೆ ಹೊರಡುವ ಮುನ್ನ ಕಂಪ್ಯೂಟರ್ ಸಾಫ್ಟ್ವೇರ್ ಕ್ಲಾಸ್ಗೆ ಹೋಗಿ ಅದರ ಜ್ಞಾನವನ್ನು ಪಡೆದುಕೊಂಡರು.
ಅಮೆರಿಕಾಗೆ ಕಾಲಿಟ್ಟ ಕ್ಷಣದಿಂದ ಅಪಾರ ನರಕಯಾತನೆ ಅನುಭವಿಸಿದರು, ಅವರ ಸಹಾಯಕ್ಕೆ ಅವರ ಸಂಬಂಧಿಗಳೇ ಮುಂದೆ ಬರಲಿಲ್ಲ. ಕೊನೆಗೆ ಗುಜರಾತಿ ಕುಟುಂಬವೊಂದರ ಸಹಾಯ ಪಡೆದು ಅವರು ಅಲ್ಲಿ ನೆಲೆಸಿದರು. ಎಚ್೧ ವೀಸಾ ಪಡೆಯಲು ಅವರು ಪಟ್ಟ ಯಾತನೆ ಅವರ ತಲೆಯಲ್ಲಿ ಉಪಾಯವೊಂದು ಹೊಳೆಯುವಂತೆ ಮಾಡಿತು. ಅದರಂತೆ ಅವರು ವೀಸಾ ಬಗ್ಗೆ ಸಲಹೆ ನೀಡುವ ಒಂದು ಪುಟ್ಟ ಕಂನಿಯೊಂದನ್ನು ಆರಂಭಿಸಿದರು. ಹೀಗೆ ಮುಂದುವರೆದ ಅವರ ಯಶೋಗಾಥೆ ಇಂದು ಅವರನ್ನು ಕೀಸ್ ಸಾಫ್ಟ್ವೇರ್ ಸೊಲ್ಯೂಷನ್ ಸಿಇಓ ಆಗಿ ಮಾಡಿದೆ.
ಇಂದು ಜ್ಯೋತಿ ಕೋಟ್ಯಾಂತರ ಹಣ ಗಳಿಸುತ್ತಾರೆ. ಆದರೆ ತಾನು ಸವೆಸಿದ ಹಾದಿಯನ್ನು ಅವರೆಂದೂ ಮರೆತಿಲ್ಲ. ತಮ್ಮ ಊರಿಗೆ ಆಗಾಗ ಭೇಟಿ ನೀಡುತ್ತಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಹಣದ ನೆರವು ನೀಡುತ್ತಾರೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿ ಸಮಯ ವ್ಯಯಿಸುತ್ತಾರೆ. ಆರ್ಥಿಕ ಬೆಂಬಲ ನೀಡುತ್ತಾರೆ. ಬಡಬಗ್ಗರಿಗೆ ದಾನ ಧರ್ಮಗಳನ್ನು ಮಾಡುತ್ತಾರೆ. ಅದಕ್ಕಾಗಿಯೇ ಜ್ಯೋತಿ ರೆಡ್ಡಿ ಎಂದರೆ ಜನತೆಗೆ ಅಪಾರ ಪ್ರೀತಿ, ಗೌರವ.
ವಾಸ್ತವವನ್ನು ಸ್ವೀಕರಿಸಿ, ಯಾವ ಸ್ಥಿತಿಯೂ ಶಾಶ್ವತವಲ್ಲ, ನಮ್ಮ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕು, ಉತ್ತಮ ಕಾರ್ಯ ಮಾಡಿ, ಉತ್ತಮ ಜನರೊಂದಿಗೆ ಬೆರೆಯಿರಿ, ಅದ್ಭುತಗಳಿಗೆ ಕಾಯಬೇಡಿ, ಧೈರ್ಯವನ್ನು ಕಳೆದುಕೊಳ್ಳಬೇಡಿ. ನಮ್ಮ ಪ್ರತಿ ಪ್ರಾರ್ಥನೆಗೂ ದೇವರು ಉತ್ತರಿಸುತ್ತಾನೆ, ಪಡೆದುದನ್ನು ಮರಳಿ ನೀಡಿ, ಸ್ಫೂರ್ತಿ ತುಂಬಿ, ನಂಬಿಕೆ ಬೆಳೆಸಿ ಎಂದು ಚೈತನ್ಯ ತುಂಬುವ ಮಾತುಗಳನ್ನಾಡುತ್ತಾರೆ ಜ್ಯೋತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.