ನೇಪಾಳ ಎಂಬ ಪುಟ್ಟ ರಾಷ್ಟ್ರ ಆಧುನಿಕ ಪ್ರಜಾಪ್ರಭುತ್ವದ ಹಾದಿಯನ್ನು ತುಳಿದು ಅಬಬ್ಬಾ ಎಂದರೆ ಎರಡು ದಶಕ ಕಳೆದಿರಬಹುದು. ಅದಕ್ಕೂ ಮೊದಲು ಇದೊಂದು ಹಿಂದೂ ಕಿಂಗ್ಡಂ ಎಂದೇ ಖ್ಯಾತವಾಗಿತ್ತು. ಅಂದರೆ ಹಿಮಾಲಯದ ತಪ್ಪಲಿನ ಹಿಂದೂ ಸಾಮ್ರಾಜ್ಯ ಎಂದು ಅರ್ಥ. ಹಲವು ಶತಮಾನಗಳಿಂದ ಭಾರತೀಯ ಧರ್ಮಪರಂಪರೆಗೆ ಅಡಿಪಾಯ ಹಾಕಿದ್ದ, ಜಿಜ್ಞಾಸುಗಳ, ಪಂಡಿತರ, ಕವಿ ಕೋವಿದರ ಆಧ್ಯಾತ್ಮಿಕ ಮತ್ತು ಲೌಕಿಕ ಇಂಗಿತಗಳನ್ನು ತಣಿಸಿದ್ದ ಹಿಮಾಲಯದ ತಪ್ಪಲ ಭೂಪ್ರದೇಶವೇ ಈ ನೇಪಾಳ. ಪ್ರಾಕೃತಿಕ ಸೌಂದರ್ಯದೊಂದಿಗೆ ಹಿಂದೂ, ಬೌದ್ಧ ಧರ್ಮೀಯರ ಸಂಪ್ರದಾಯ, ಆಚರಣೆ, ತತ್ವಗಳನ್ನು ಕಾಪಾಡಿಕೊಂಡ ಬಂದಂತಹ ಪುಣ್ಯಭೂಮಿಯೂ ಇದೇ ಆಗಿದೆ. ರಾಮಾಯಣದಲ್ಲಿ ಬರುವ ಸೀತೆಯ ತವರು ಮನೆ ಜಾಣಕಪುರಿಯಾದರೆ, ಶಾಕ್ಯಮುನಿ ಬುದ್ಧ ಜನಿಸಿದ ಲುಂಬಿನಿಯು ಇದೇ ನೇಪಾಳದಲ್ಲಿದೆ. ಇಲ್ಲಿನ ಹಲವು ಧಾರ್ಮಿಕ ಕ್ಷೇತ್ರಗಳಿಗೆ ವಿಶ್ವದ ಹಲವು ಮಂದಿ ಧರ್ಮಾಸಕ್ತರು ತೆರಳಿ ಅನುಭೂತಿ ಪಡೆಯುತ್ತಾರೆ. ಇವಿಷ್ಟು ಶಾ ರಾಜವಂಶಜರು ಆಳಿದ ನೇಪಾಳ ಸಾಮ್ರಾಜ್ಯದ ಬಗ್ಗೆಗಿನ ಮುನ್ನುಡಿ.
ಭಾರತದ ಪೂರ್ಣ ಸಹಕಾರದ ತರುವಾಯ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಹಾದಿಯಲ್ಲಿ ಅಂಬೆಗಾಲಿಟ್ಟ ನೇಪಾಳದ ವರ್ತಮಾನ ಹೇಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಭಾವ ಈ ನೆಲದ ಮೇಲೆ ಎಷ್ಟಿದೆ. ನೆರೆಯ ಚೀನಾ ತನ್ನ ರಾಜತಾಂತ್ರಿಕ ಪ್ರಭಾವವು ಈ ನೆಲದ ಮೇಲೆ ಹೇಗಾಗುತ್ತಿದೆ ಎಂಬುದು ಪರಾಮರ್ಶಿಸಬೇಕಿರುವ ವಿಷಯ ಮತ್ತು ವಿಚಾರವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ನೇಪಾಳದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚೀನಿ ಭಾಷಾ ಕಲಿಕೆಯನ್ನು ಆರಂಭಿಸಲಾಗಿದೆ ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅಂದೇ ಭಾರತವು ಎಚ್ಚೆತ್ತುಕೊಂಡಿತ್ತು. ಯಾಕೆಂದರೆ ಇದು ಭಾರತಕ್ಕೆ ಸಣ್ಣ ವಿಚಾರವಾಗಿರಲಿಲ್ಲ. ಚೀನಾದ ವಿಸ್ತರಣಾವಾದ, ಆಧುನಿಕ ವ್ಯಾಪಾರೀ ದೃಷ್ಠಿಕೋನ ರೇಶ್ಮೇಯ ಹಾದಿಯನ್ನು ಮಾತ್ರ ಕ್ರಮಿಸದೆ ದಕ್ಷಿಣ ಏಷ್ಯಾ ರಾಷ್ಟ್ರಗಳು ಸಹಿತ ನೆರೆಯ ನೇಪಾಳದ ಮೇಲೂ ನೆಟ್ಟಿದೆ.
ವರ್ತಮಾನದಲ್ಲಿ ನೇಪಾಳದ ರಾಜಕೀಯ ಹೇಗಿದೆ. ಪ್ರಜಾಪ್ರಭುತ್ವದ ಅಡಿಪಾಯ ಎಷ್ಟು ಪಕ್ವವಾಗಿದೆ. ಬಹು ಪಕ್ಷಗಳಿರುವ ನೇಪಾಳದಲ್ಲಿ ಸಂಸತ್ತಿನ ನಿರ್ಣಯಗಳು ಅಲ್ಲಿನ ವಿದೇಶಾಂಗ ನೀತಿಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸ್ವಲ್ಪ ಅವಲೋಕಿಸಿದರೆ ನೇಪಾಳದ ವಸ್ತುಸ್ಥಿತಿ ಮನವರಿಕೆಯಾಗುತ್ತದೆ. ನೇಪಾಳ ಪುಟ್ಟ ರಾಷ್ಟ್ರವಾದರೂ ಇಂದು ಆ ರಾಷ್ಟ್ರದ ವಿದೇಶಾಂಗ ನಿಲುವು ಪ್ರೋ ಚೀನಾವೇ ಅಥವಾ ಭಾರತದ ಆಪ್ತತೆಯನ್ನು ಹೊಂದಿದೆಯೇ ಎಂಬುದನ್ನು ಗಮನಿಸಬೇಕು. ಭೂತಾನ್ ಎಂಬ ಪುಟ್ಟ ರಾಷ್ಟ್ರವು ಭಾರತದ ಈಶಾನ್ಯ ಭಾಗದಲ್ಲಿದ್ದು, ಚೀನಾ ಮತ್ತು ಮಯನ್ಮಾರ್ ಗಳಿಗೆ ಅಂಟಿಕೊಂಡಿದ್ದರು ವರ್ಷಗಳಿಂದ ಅಲ್ಲಿನ ರಾಜಪ್ರಭುತ್ವ ಸದ್ಯದ ಪರಿಸ್ಥಿತಿಯಲ್ಲಿ ಅದರ ಪ್ರಜಾಪ್ರಭುತ್ವದ ಪಥ ಭಾರತದ ಮೇಲೆ ಅವಲಂಬಿತವಾಗಿದೆ. ವರ್ಷಗಳ ಹಿಂದೇಯೇ ಹ್ಯಾಪಿಯೆಸ್ಟ್ ನೇಶನ್ ಎಂದೆನಿಸಿಕೊಂಡಿರುವ ಭೂತಾನಿನ ಸುಖ ಸಮೃದ್ಧಿಗೆ ಕಾರಣ ಭಾರತವೇ ಆಗಿರುವುದರಲ್ಲಿ ಸಂದೇಹವಿಲ್ಲ. ಹೀಗೆ ಉದಾಹರಿಸುವುದಾದರೆ ಕಳೆದ ವರ್ಷ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ ಶ್ರೀಲಂಕಾವು ಭಾರತದ ಆರ್ಥಿಕ ನೆರವಿನಿಂದ ಚೇತರಿಸಿಕೊಳ್ಳುತ್ತಿದೆ. ಅಲ್ಲಿಯೂ ಚೀನಾದ ಕುಮ್ಮಕ್ಕು ಬಹಳಷ್ಟಿತ್ತು. ಹಂಬಂತೋಟ ಬಂದರು ನಿರ್ಮಾಣದಲ್ಲಿ ನೀಡಲ್ಪಟ್ಟ ಹೂಡಿಕೆಯ ಹಣ ಮತ್ತು ಸಾಲ ಮರುಪಾವತಿ ಎಂಬ ಕ್ಯಾತೆ ಎತ್ತಿತ್ತು ಚೀನಾ. ಇಷ್ಟು ಮಾತ್ರವಲ್ಲದೆ ಕಳಪೆ ಗುಣಮಟ್ಟದ ಚೀನಾದ ಸಾವಯವ ಗೊಬ್ಬರವು ಲಂಕಾದ ಆರ್ಥಿಕತೆಯನ್ನೇ ಬುಡಮೇಲುಗೊಳಿಸಿತ್ತು. ಇನ್ನು ಸಮೀಪದ ಮಯನ್ಮಾರಿನಲ್ಲಿ ಜುಂಟಾ ಮಿಲಿಟರಿ ಆಡಳಿತವಿದ್ದರೂ, ಅವರಿಗೆ ಭಾರತವು ಅತ್ಯಗತ್ಯವಾಗಿದೆ. ಭಾರತ ಮಯನ್ಮಾರ್ ಸ್ನೇಹ ಸಂಬಂಧವು ಬರ್ಮಾ ರೋಡನ್ನು ಕೂಡಾ ಸ್ಪರ್ಶಿಸಿದೆ. ಈಶಾನ್ಯದ ಮೂಲಕ ಹಾದು ಹೋಗುವ ಭಾರತ- ಥೈಲ್ಯಾಂಡ್ ಅಂತಾರಾಷ್ಟ್ರೀಯ ಹೆದ್ದಾರಿಯು ಇದೇ ಮಯನ್ಮಾರ್ ಮೂಲಕ ಹಾದುಹೋಗುತ್ತದೆ. ಇವೆಲ್ಲಾ ಭಾರತದ ಆ್ಯಕ್ಟ್ ಈಸ್ಟ್ ಪಾಲಿಸಿಯ ವಿಸ್ತೃತತೆ. ಈ ಬೆಳವಣಿಗೆಗಳೆಲ್ಲ ಹೆಮ್ಮೆಯ ವಿಚಾರಗಳೇ ಸರಿ. ಆದರೆ ನೇಪಾಳವೆಂಬ ಸಣ್ಣ ರಾಷ್ಟ್ರಕ್ಕೆ ಚೀನಾದ ಆಗಮನ, ಆ ರಾಷ್ಟ್ರದಲ್ಲಿ ಡ್ರ್ಯಾಗನ್ನಿನ ವಕ್ರನೋಟ ಅಸಹನೀಯ. ಈ ಹಿಂದಿನಿಂದಲೂ ಟಿಬೆಟ್ ಎಂಬ ಎತ್ತರದ ಪ್ರದೇಶದಲ್ಲಿ ತನ್ನ ಸಂಪೂರ್ಣ ಹಿಡಿತ ಸಾಧಿಸಿರುವ ಚೀನಾ, ಸದ್ಯದ ಪರಿಸ್ಥಿತಿಯಲ್ಲಿ ನೇಪಾಳದ ಉತ್ತರದಲ್ಲಿರುವ ಹಿಮಾಲಯದ ಗಡಿ ಪ್ರದೇಶಗಳ ತನಕ ರಸ್ತೆ ನಿರ್ಮಾಣವನ್ನು ಮಾಡಿಕೊಂಡಿದೆ. ಮುಂದೇ ನೇಪಾಳಕ್ಕೂ ರೈಲ್ವೇ ಸಂಪರ್ಕವನ್ನು ಕಲ್ಪಿಸಿ ವಾಣಿಜ್ಯಿಕ ವ್ಯವಹಾರಗಳನ್ನು ಮಾಡಬೇಕು ಎನ್ನುವ ತವಕದಲ್ಲಿದೆ. ಇತ್ತೀಚೆಗಷ್ಟೇ ನೇಪಾಳ ಚುನಾವಣೆ ಮುಗಿದು ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಪ್ರಚಂಡ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ. ಪುಟ್ಟ ರಾಷ್ಟ್ರದ ಹಲವು ಹಿರಿಯ ನಾಗರಿಕರು, ನಾಯಕರು ನೇಪಾಳ ಹಿಂದೂ ರಾಷ್ಟ್ರವಾಗಿದ್ದಾಗಲೇ ಚೆನ್ನಾಗಿತ್ತು. ಪ್ರಜಾಪ್ರಭುತ್ವದ ಮೂಲಕ ರಾಷ್ಟ್ರವು ಜಾತ್ಯಾತೀತವಾದ ಬೆನ್ನಲ್ಲೇ ಇಲ್ಲಿ ಕ್ರೈಸ್ತ ಪಾದ್ರಿಗಳ ಆಡಂಬೋಲ ಜಾಸ್ತಿಯಾಗಿದೆ. ಹೆಚ್ಚಿನ ಕಡೆಗಳಲ್ಲಿ ಚರ್ಚುಗಳ ನಿರ್ಮಾಣ ಎಗ್ಗಿಲ್ಲದೆ ಸಾಗಿದೆ ಎಂದು ಬೊಬ್ಬಿರಿಯುತ್ತಿದ್ದಾರೆ.
ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಧಾರ್ಮಿಕವಾಗಿ ಸಮಾನ ಯೋಚನೆಗಳ ತಳಹದಿಯಲ್ಲಿ ನೇಪಾಳಕ್ಕೆ ಭಾರತವೇ ಹತ್ತಿರ. ನೇಪಾಳದ ಬಿಸಿ ರಕ್ತದ ತರುಣರು ಇಂದಿಗೂ ಭಾರತದ ಗೋರ್ಖಾ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಶ್ಮೀರದ ಉತ್ತರದಲ್ಲಿರುವ ಎತ್ತರದ ಬೆಟ್ಟಸಾಲುಗಳಾಗಲಿ, ಈಶಾನ್ಯ ಭಾರತದ ಗುಡ್ಡಗಾಡುಗಳಾಗಲಿ ಗೋರ್ಖಾಲಿಯನ್ನು ಸ್ತುತಿಸುವ ಗೋರ್ಖಾಗಳಿಗೆ ಲೆಕ್ಕವಲ್ಲ. ಎಲ್ಲೆಲ್ಲಿಯೂ ಅವರಿಗೆ ಕಾಳಿ ಸ್ತುತಿಯೇ ಪ್ರೇರಣೆ. ಇಂತಹ ಅಪರೂಪದ ಸಾಮೀಪ್ಯವಿರುವ ಭಾರತಕ್ಕೆ ನೇಪಾಳವು ಅತಿ ಪ್ರಮುಖವಾದ ಮಿತ್ರರಾಷ್ಟ್ರವಾಗಿದೆ. ಆದರೆ ಚೀನಾದ ಕಾಕದೃಷ್ಠಿಯೂ ಇದೇ ನೇಪಾಳದ ಮೇಲಿದೆ ಎಂಬುದೂ ಅಷ್ಟೇ ಸತ್ಯ ಸಂಗತಿ. ಲಾಸಾದಿಂದ ನೇಪಾಳದ ಗಡಿ ತನಕ ರಸ್ತೆ ನಿರ್ಮಾಣ ಮಾಡಿರುವ ಚೀನಾ ಇನ್ನು ಮುಂದುವರಿದು ರಾಜಧಾನಿ ಕಾಠ್ಮಂಡುವಿಗೆ ರೈಲ್ವೇ ಹಳಿ ನಿರ್ಮಾಣ ಮಾಡುವ ದೂರದೃಷ್ಠಿ ಹೊಂದಿದೆಯಂತೆ! ಇದು ಕೇವಲ ವ್ಯಾಪಾರಿ ಧ್ಯೇಯವಾಗಿದ್ದರೆ ಸ್ವಲ್ಪ ಸಹಿಸಬಹುದಿತ್ತು. ಆದರೆ ಅದರ ಹಿಂದೆ ಭಾರತ ವಿರೋಧಿ ಮನಸ್ಥಿತಿಯೂ ಇದೆ. ಕಳೆದ ಹತ್ತು ವರ್ಷಗಳಿಂದ ಪಾಕಿಸ್ಥಾನದ ಕುಮ್ಮಕ್ಕುಗಳಿಗೆ ಕ್ಯಾರೇ ಎನ್ನದ ಭಾರತಕ್ಕೆ ಇಂದು ಸ್ವಲ್ಪ ಮಟ್ಟಿಗೆ ಟಕ್ಕರ್ ನೀಡುತ್ತಿರುವುದು ಚೀನಾ ಮಾತ್ರ. ಹಾಗೇ ಕೆಣಕಲ್ಪಟ್ಟರೆ ಚೀನಾದ ಮೇಲೆ ಎರಗಲು ಭಾರತದ ಸೈನಿಕ ಶಕ್ತಿ ಸರ್ವ ಸನ್ನದ್ಧವಾಗಿದೆ ಎಂಬುದು ಖರೆ. 1962 ರಂತಿಲ್ಲ ಇಂದಿನ ಭಾರತವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಾಕಿಸ್ಥಾನದ ದಶಕಗಳ ಪ್ರಾಕ್ಸಿ ವಾರಿಗೆ ತಕ್ಕ ಉತ್ತರ ನೀಡಿರುವ ಭಾರತ, ಇಂದು ಚೀನಾ ಭಾರತದೊಂದಿಗೆ ಮುಂದುವರಿಸಿರುವ ಸೈಕಾಲಜಿಕಲ್ ವಾರ್ ಫೇರ್ ಗೂ ಉತ್ತರ ನೀಡಿದೆ. ಗಾಲ್ವಾನ್ ನಲ್ಲಿಯೂ ಇದೇ ಆಗಿರುವುದು. ದಕ್ಷಿಣದ ಹಿಂದೂ ಮಹಾಸಾಗರ, ಪೂರ್ವದ ಬಂಗಾಳಕೊಲ್ಲಿ, ಪಶ್ಚಿಮದ ಅರಬ್ಬಿ ಕಡಲಿನ ಮೇಲೆ ಭಾರತದ ಪಾರಮ್ಯ ತನ್ನ ಸಾಮುದ್ರಿಕ ವ್ಯಾಪಾರಕ್ಕೆ ತೊಂದರೆ ಎಂಬ ಅರಿವು ಚೀನಾಕ್ಕಿದೆ. ಇದೇ ಕಾರಣಕ್ಕೆ ಭಾರತದ ಆಪ್ತ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಹಪಹಪಿ ಚೀನಾದ್ದು. ಅದಕ್ಕೆ ಸರಿಯಾದ ಮದ್ದನ್ನು ಅರೆಯುತ್ತಿರುವ ಭಾರತ ಇಂದು ಇಂಡೋ-ಫೆಸಿಫಿಕ್ ರಾಷ್ಟ್ರಗಳೊಂದಿಗೆ ತನ್ನ ಸ್ನೇಹವನ್ನು ಚಾಚಿ, ರಾಜತಾಂತ್ರಿಕವಾಗಿ ಪ್ರಮುಖ ಹೆಜ್ಜೆಯನ್ನು ಇಟ್ಟು ಯಶಸ್ವಿಯಾಗುತ್ತಿದೆ. ಇಂದು ದಕ್ಷಿಣ ಚೀನಾ ಸಮುದ್ರದಲ್ಲೂ ಚೀನಾದ ಪಾರಮ್ಯ ಅಷ್ಟರ ಮಟ್ಟಿಗಿರಲಿಕ್ಕಿಲ್ಲ ಯಾಕೆಂದರೆ ಚೀನಾದ ನಡೆಗೆ ಈಗಾಗಲೇ ಪ್ರಬಲ ಅರ್ಥಿಕತೆಗಳಾದ ಜಪಾನ್ ಮತ್ತು ಕೊರಿಯಾ ಅಪಸ್ವರವೆತ್ತಿವೆ. ಆಂತರಿಕ ಸಮಸ್ಯೆಗಳು ಚೀನಾಗೂ ಇರುವ ಕಾರಣ ಚೀನಾದ ವಿದೇಶಾಂಗ ನೀತಿ ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿದೆಯೆಂದೇ ಹೇಳಬಹುದು. ಈ ಹಿಂದೆ ತೈವಾನ್ ಮತ್ತು ಚೀನಾ ಮಧ್ಯೆ ಏರ್ಪಟ್ಟ ಯುದ್ಧ ಸನ್ನಿವೇಶ ಇದಕ್ಕೆ ಪುಷ್ಠಿ ನೀಡುತ್ತದೆ.
ಇತ್ತೀಚಿನ ವರದಿಯ ಪ್ರಕಾರ ಚೀನಾವು ನೇಪಾಳದಲ್ಲಿ ಭಾರಿ ಹೂಡಿಕೆಗೆ ಮುಂದಾಗಿದೆಯಂತೆ. ಹೂಡಿಕೆಯು ನೇಪಾಳದ ಆರ್ಥಿಕತೆಯನ್ನು ಬಡಿದೆಬ್ಬಿಸಲಿದೆ ಎಂಬುದು ಚೀನಾದ ವಾದ. ಚೀನಾದ ಹೂಡಿಕೆಯು ಪ್ರಮುಖವಾಗಿ ಒಟ್ಟು 9 ಯೋಜನೆಗಳ ಮೂಲಕ ನಡೆಯಲಿದೆ. ಒಂಬತ್ತು ಯೋಜನೆಗಳಲ್ಲಿ ಹೊಸ ಹೆದ್ದಾರಿಗಳು, ಸುರಂಗ ಮಾರ್ಗಗಳು, ಅಣೆಕಟ್ಟುಗಳು, ನೂತನ ರೈಲ್ವೇ ಪಥಗಳ ನಿರ್ಮಾಣ ನಡೆಯಲಿವೆ. ಇದರ ಹೊರತಾಗಿ ನೇಪಾಳದಲ್ಲಿ ತಾಂತ್ರಿಕ ಕೇಂದ್ರಗಳನ್ನು ನಿರ್ಮಿಸಲಿದೆ ಚೀನಾ. ನೇಪಾಳ್ ಚೈನಾ ಟ್ರಾನ್ಸ್ -ಹಿಮಾಲಯನ್ ಮಲ್ಟಿ ಡೈಮೆಂಸನಲ್ ಕನೆಕ್ಟಿವಿಟಿ ಸಿಸ್ಟಂ ಎಂಬ ದೊಡ್ಡ ಹೆಸರನ್ನು ಇದಕ್ಕೆ ನೀಡಲಾಗಿದೆ. ವರದಿಯ ಪ್ರಕಾರ 2020-21 ರಲ್ಲಿ ನೇಪಾಳವು ಚೀನಾದಿಂದ ಒಟ್ಟು 233.92 ಶತಕೋಟಿ ರೂ. ಗಳ ಸರಕುಗಳನ್ನು ಆಮದು ಮಾಡಿಕೊಂಡಿದೆ. ನೇಪಾಳದ ರಫ್ತು ಕೇವಲ ಒಂದು ಶತಕೋಟಿ ರೂ.ಗಳು ಮಾತ್ರ. ರಫ್ತಿನಲ್ಲಿ ಉಣ್ಣೆ ಮತ್ತು ಲೋಹದ ಕರಕುಶಲ ವಸ್ತುಗಳು ಸೇರಿವೆ. ನೇಪಾಳ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳಲ್ಲಿ ಇಲೆಕ್ಟ್ರಿಕಲ್ ಉಪಕರಣಗಳು, ಯಾಂತ್ರಿಕ ಪರಿಕರಗಳು, ಸಿದ್ಧ ಉಡುಪುಗಳು ಮತ್ತು ಸಂವಹನ ಸಾಧನಗಳು ಸೇರಿದ್ದವು. ಈ ವ್ಯಾಪಾರವು ಚೀನಾದ ಪಾರಮ್ಯ ಮತ್ತು ಪ್ರಭಾವವನ್ನು ನೇಪಾಳದ ಮೇಲೆ ಹರಿಸುವುದೇ ಆಗಿದೆ. ಚೀನಾದ ಈ ವ್ಯಾಪಾರೀ ನೀತಿಯಿಂದ ನೇಪಾಳಿ ಯುವಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ ಮಾತ್ರವಲ್ಲ ದೊಡ್ಡ ಸಂಖ್ಯೆಯ ನೇಪಾಳಿ ಯುವಜನರು ಉತ್ತರ ಭಾರತ ಮತ್ತು ಜನಸಂಖ್ಯಾ ನಿಬಿಡ ಈಶಾನ್ಯ ಭಾರತದತ್ತ ಮುಖ ಮಾಡುತ್ತಿದ್ದಾರೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ ನೇಪಾಳದಲ್ಲಿ ಮಾಂಡರಿನ್ ಭಾಷೆಯು ಕಡ್ಡಾಯ ಕಲಿಕಾ ಭಾಷೆಯಾಗಿದೆ ಮಾತ್ರವಲ್ಲ ನೇಪಾಳಿ ವಿದ್ಯಾರ್ಥಿಗಳಿಗೆ ಚೀನಿ ಸ್ಕಾಲರಶಿಪ್ ನೀಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಈ ವರದಿಯು ನೇಪಾಳದಲ್ಲಿ ಚೀನೀಯರು ಹೋಟೆಲು ಉದ್ಯಮ, ವ್ಯಾಪಾರಿ ಮಳಿಗೆಯನ್ನು ಆರಂಭಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡುತ್ತದೆ.
ಚೀನಾದ ರಾಜಕೀಯ ಪಂಡಿತರು ನೇಪಾಳದ ಬಗ್ಗೆ ಮತ್ತೊಂದು ಹಾಸ್ಯಾಸ್ಪದ ಅಂಶವನ್ನು ಮುಂದಿಟ್ಟಿದ್ದಾರೆ. ನೇಪಾಳದ ಆಸ್ಮಿತೆ ಮತ್ತು ಸಮಾಜದ ಮುಖವಾಗಿರುವ ಹಿಂದೂ ಧರ್ಮೀಯರು ಇತರೆ ಧರ್ಮೀಯರಾದ ಬೌದ್ಧರು, ಮುಸ್ಲಿಮರು ಮತ್ತು ಕ್ರೈಸ್ತರ ಬದುಕನ್ನು ದುಸ್ತರತೆಯತ್ತ ಒಯ್ಯುತ್ತಿದ್ದಾರೆ. ಹಿಂದುಳಿದ ನೇಪಾಳಿ ಮೂಲದವರನ್ನು ಹಿಂದೂಗಳು ಅಂಧಕಾರಕ್ಕೆ ದೂಡುತ್ತಿದ್ದಾರೆಂಬುದು ಅವರ ಅಂಬೋಣ. ಇದರ ಹಿಂದೆಯೇ ಚೀನಾದ ಬಿ.ಆರ್.ಐ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ತೀವ್ರಗತಿಯಲ್ಲಿ ನಿರ್ಮಿಸುವ ಇರಾದೆ ಚೀನಾದ್ದು, ನೇಪಾಳದ ಉತ್ತರ ಭಾಗದ ಹತೋಟಿಯೂ ಚೀನಾಕ್ಕೆ ಪ್ರಮುಖವಾಗಿದೆ. ಟಿಬೆಟ್ ಮೇಲಿನ ಸಂಪೂರ್ಣ ಹತೋಟಿ, ಅಲ್ಲಿನ ಜನಸಾಮಾನ್ಯರು ನೇಪಾಳಕ್ಕಾಗಲಿ, ಭಾರತಕ್ಕಾಗಲಿ ಬರದಂತೆ ತಡೆಯುವುದು ಮಾತ್ರವಲ್ಲ ಟಿಬೆಟ್ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ದನಿಯನ್ನು ಸಂಪೂರ್ಣ ಅಡಗುವಂತೆ ಮಾಡುವುದು ಚೀನಾದ ಮುಖ್ಯ ಗುರಿಗಳಲ್ಲೊಂದು. ನೇಪಾಳ ಗಡಿಯುದ್ದಕ್ಕೂ ಹಲವು ಚೆಕ್ ಪಾಯಿಂಟ್ ಗಳನ್ನು ನಿರ್ಮಿಸಿರುವ ಚೀನಾ, ಟಿಬೆಟ್ ಜನಸಾಮಾನ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದರ ಜೊತೆ ಜೊತೆಯಲ್ಲಿ ನೇಪಾಳದಲ್ಲೂ ತನ್ನ ಇರುವಿಕೆಯನ್ನು ಬಲಪಡಿಸುವ ದುರುದ್ದೇಶ ಹೊಂದಿದೆ. ಭಾರತ ನೇಪಾಳ ಸಂಬಂಧಗಳು ಕೂಡಾ ಸ್ಥಳೀಯ ರಾಜಕಾರಣದ ಮೇಲೆ ಅವಲಂಬಿತವಾಗಿದೆ. ಈ ಹಿಂದೆ ಕೆ.ಪಿ ಶರ್ಮಾ ಒಲಿ ಆ ದೇಶದ ಪ್ರಧಾನಿಯಾಗಿದ್ದಾಗ ಭಾರತ- ನೇಪಾಳ ಸಂಬಂಧಗಳು ಹೇಳುವಷ್ಟರ ಮಟ್ಟಿಗೆ ಇರಲಿಲ್ಲ, ಶೇರ್ ಬಹಾದೂರ್ ದೇವುಬಾ ನೇಪಾಳದ ಪ್ರಧಾನಿಯಾಗಿದ್ದಾಗ ಭಾರತ ನೇಪಾಳದ ಮಧ್ಯೆ ಹೊಸ ಶಕೆಯ ಆರಂಭವಾಗಿತ್ತು ಎಂದೇ ಹೇಳಬಹುದು. ದೇವುಬಾ ಅವಧಿಯಲ್ಲಿ ಭಾರತ -ನೇಪಾಳದ ಮಧ್ಯೆ ಹೊಸ ಸ್ನೇಹ ಸಂಬಂಧಗಳು ಏರ್ಪಟ್ಟವು. ಪ್ರಧಾನಮಂತ್ರಿ ನರೇಂದ್ರ ಮೋದಿ 2022 ರ ಬುದ್ಧ ಪೂರ್ಣಿಮಾದಂದು ನೇಪಾಳದ ಲುಂಬಿನಿಗೆ ತಲುಪಿ ಪ್ರಾರ್ಥನೆ ಸಲ್ಲಿಸಿದ್ದರು. ಎರಡು ರಾಷ್ಟ್ರಗಳ ಮಧ್ಯೆ ಇರುವ ಸಾಂಸ್ಕೃತಿಕ ಕೊಂಡಿಗಳಂತೆ ರಾಜತಾಂತ್ರಿಕ ಸಂಬಂಧಗಳು ಗಟ್ಟಿಯಾಗಬೇಕಿರುವ ಸಂದೇಶವನ್ನು ಈ ಸಂದರ್ಭ ನೀಡಲಾಯಿತು. ಇದೇ ಸಂದರ್ಭ ಎರಡು ದೇಶಗಳಲ್ಲಿರುವ ರಾಮಾಯಣ ಸರ್ಕಿಟ್ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲಾಯಿತು. ಅಂದೇ ನೇಪಾಳವು ಭಾರತಕ್ಕೆ ವೆಸ್ಟ್ ಸೇಟಿ ಹೈಡ್ರೊ ಪವರ್ ಯೋಜನೆಯನ್ನು ಪೂರ್ಣಗೊಳಿಸುವಂತೆ ಕೇಳಿಕೊಂಡಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಹಭಾಗಿತ್ವ, ಐಸಿಸಿಆರ್ ಮೂಲಕ ಸಾಂಸ್ಕೃತಿಕ ಅನುಸಂಧಾನ, ಲುಂಬಿನಿ ಬೌದ್ಧ ವಿಶ್ವವಿದ್ಯಾನಿಲಯದಲ್ಲಿ ಡಾ. ಅಂಬೇಡ್ಕರ್ ಸಂಶೋಧನಾ ಪೀಠದ ರಚನೆಯು ಪ್ರಧಾನಿ ಭೇಟಿ ಸಂದರ್ಭದಲ್ಲಿ ಏರ್ಪಟ್ಟ ಪ್ರಮುಖ ವಿಚಾರಗಳು.
ಪ್ರಧಾನಿ ಮೋದಿ ಕಳೆದ ಬಾರಿ ನೇಪಾಳ ಭೇಟಿಯಲ್ಲಿದ್ದಾಗ ಭಾರತ-ನೇಪಾಳ ಸಂಬಂಧಗಳು ಹಿಮಾಲಯದಷ್ಟು ಗಟ್ಟಿಯಾಗಿರಲಿವೆ ಎಂದಿದ್ದರು. ಡಿಸೆಂಬರ್ 25, 2022 ರಂದು ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪುಷ್ಪ ಕುಮಾರ್ ದಹಾಲ್ ʼಪ್ರಚಂಡʼ ಅವರಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದರು ಕೂಡಾ. ಪ್ರಚಂಡ ಅಧಿಕಾರವಧಿಯಲ್ಲಿ ಭಾರತ –ನೇಪಾಳದ ಮಧ್ಯೆಯಿರುವ ರಾಜಕೀಯ ಆರ್ಥಿಕ ಸಾಂಸ್ಕೃತಿಕ ಸಂಬಂಧಗಳು ಹೊಸ ಅರ್ಥ ಪಡೆಕೊಳ್ಳಲಿವೆ ಎಂದು ನಂಬಲಾಗಿದೆ.
ಈ ಹಿಂದೆ ಒಲಿ ಸರಕಾರವಿದ್ದ ಸಂದರ್ಭ ಅದು ಸಂಪೂರ್ಣ ಚೀನಾಪರ ವಾಲಿತ್ತು ಮಾತ್ರವಲ್ಲ ಲಿಂಪಿಯಾಧುರ, ಕಾಲಪಾನಿ, ಲಿಪುಲೇಕ್ ಗಳಲ್ಲಿ ಗಡಿ ವಿಚಾರದಲ್ಲಿ ಸಮಸ್ಯೆ ಎದುರಾಗುವಂತೆ ಮಾಡಿತ್ತು. ಇದರ ಜೊತೆಜೊತೆಯಲ್ಲಿ ರಾಮನ ಜನ್ಮಸ್ಥಳದ ಬಗ್ಗೆಯೂ ಪ್ರಶ್ನೆಯನ್ನು ಎಬ್ಬಿಸಲಾಗಿತ್ತು. ನೇಪಾಳದಲ್ಲಿ ಕೊರೊನಾ ಹರಡಲು ಭಾರತವೇ ಕಾರಣ ಮತ್ತು ಇದು ಇಂಡಿಯನ್ ವೈರಸ್ ಎಂದು ಓಲಿ ಭಾರತದ ಮೇಲೆ ಮಾತಿನ ದಾಳಿಯನ್ನು ಮಾಡಿದ್ದರು. ಇದು ಅಂದಿನ ನೇಪಾಳದ ಪ್ರಾದೇಶಿಕ ರಾಜಕೀಯ ಅಸ್ಥಿರತೆಗೆ ಹಿಡಿದ ಕನ್ನಡಿಯೂ ಆಗಿತ್ತು. ಪ್ರಸ್ತುತ ನೇಪಾಳದ ನಡೆ ಎತ್ತ ಸಾಗಲಿದೆ ಎಂಬುದೂ ಕುತೂಹಲದ ವಿಚಾರವೂ ಹೌದು. ಪ್ರಚಂಡ ಓರ್ವ ಕಮ್ಯೂನಿಸ್ಟ್ ನಾಯಕರಾಗಿದ್ದರೂ ಕೂಡಾ ರಾಜತಾಂತ್ರಿಕ ವಸ್ತುಸ್ಥಿತಿಗಳನ್ನು ಅರಿತಿರುವ ಪ್ರಬುದ್ಧ ನಾಯಕರಾಗಿದ್ದಾರೆ. ಅಂತಾರಾಷ್ಟ್ರೀಯ ಸ್ತರದಲ್ಲಿ ಚೀನಾದ ನಡೆಯ ಬಗ್ಗೆಯೂ ಪ್ರಚಂಡರಿಗೆ ಅರಿವಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ ಮೋಹನ ಕ್ವಾತ್ರಾ ಭೇಟಿಯು ಮುಖ್ಯವಾಗಿದೆ. ಈ ಸಂಧರ್ಭ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭರತ್ ರಾಜ್ ಪೌದ್ಯಾಲ್ ಅವರನ್ನು ಭೇಟಿ ಮಾಡಿದ ಕ್ವಾತ್ರಾ ಮಾತುಕತೆ ನಡೆಸಿದ್ದಾರೆ. ನೇಪಾಳದಿಂದ ಭಾರತಕ್ಕೆ ದೀರ್ಘಕಾಲದ ತನಕ ಪಡೆಯಬಹುದಾದ ಜಲವಿದ್ಯುತ್ ಶಕ್ತಿ ವಿನಿಮಯದ ಬಗ್ಗೆ ಮಾತುಕತೆ ನಡೆಸಲಾಗಿದೆ. ನೇಪಾಳಕ್ಕೆ ಭಾರತದ ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಹಿಂದಿನಿಂದಲೂ ನೇಪಾಳಕ್ಕೆ ಭಾರತದ ಉನ್ನತ ಅಧಿಕಾರಿ ತೆರಳಿದ್ದಾರೆ ಎಂದರೆ ಆ ದೇಶದ ಅಗತ್ಯತೆಗಳ ಪಟ್ಟಿಯನ್ನು ಪಡೆಯುದಷ್ಟೇ ಆಗಿರುತ್ತಿತ್ತು. ಯಾಕೆಂದರೆ ಭಾರತದ ಸಮೀಪರ್ತಿ ದೇಶಗಳು ಭಾರತವನ್ನು ಹೆಚ್ಚಾಗಿ ಅವಲಂಬಿಸಿವೆ. ನೇಪಾಳವು ಇದರಿಂದ ಹೊರತಲ್ಲ. ಆದರೆ ಕ್ವಾತ್ರಾ ಅವರ ನೇಪಾಳ ಭೇಟಿಯು ಅತಿ ಪ್ರಮುಖವಾಗಿದೆ ಯಾಕೆಂದರೆ ನೇಪಾಳ ಮತ್ತು ವಿಶ್ವರಾಷ್ಟ್ರಗಳ ಸಂಬಂಧಗಳು ಇಂದು ಮಂಥನ ಕಾಲದಲ್ಲಿದೆ.
ನೇಪಾಳದಲ್ಲಿ ಹೊಸ ಪಕ್ಷವು ಅಧಿಕಾರಕ್ಕೇರಿದೆ. ಚೀನಾ ಹೇಗೆ ನೇಪಾಳದಲ್ಲಿ ತನ್ನ ಆಸಕ್ತಿಯನ್ನು ತೋರುತ್ತಿದೆಯೋ ಹಾಗೆ ಅಮೇರಿಕವು ತನ್ನ ಹಿತಾಸಕ್ತಿಗಳಿಗೆ ಅನುಸಾರವಾಗಿ ನೇಪಾಳದಲ್ಲಿ ಕಾರ್ಯಚರಿಸುತ್ತಿದೆ. ಇತ್ತೀಚೆಗೆ ಅಮೇರಿಕದ ವರಿಷ್ಠ ಅಧಿಕಾರಿಗಳು ನೇಪಾಳಕ್ಕೆ ಬಂದು ಹೋಗಿದ್ದಾರೆ. ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾದ ವಕ್ರನೋಟಕ್ಕೆ ಎದುರಾಗಿ ಭಾರತ ಅಮೇರಿಕ ರಾಷ್ಟ್ರಗಳೆರಡು ರಾಜತಾಂತ್ರಿಕ ನೀತಿಯನ್ನು ಅನುಸರಿಸಬಹುದು ಮಾತ್ರವಲ್ಲ ಅನುಸರಿಸಲೇಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪಶ್ಚಿಮದ ಹಲವು ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ದೂರದ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೂ ಭಾರತ ಸಂಬಂಧವನ್ನು ಉತ್ತಮಪಡಿಸಿದ್ದಾರೆ. ಇಂಡೋ ಫೆಸಿಫಿಕ್ ಬಗ್ಗೆ ಅತೀವ ಕಾಳಜಿ ವಹಿಸಿರುವ ಭಾರತ ತನ್ನ ಸಮೀಪರ್ತಿ ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಿರುವುದು ಇಂದಿನ ಆದ್ಯತೆಯಾಗಿದೆ. ಕ್ವಾತ್ರಾ ತಮ್ಮ ನೇಪಾಳ ಭೇಟಿಯಲ್ಲಿ ಅಲ್ಲಿನ ರಾಷ್ಟ್ರಪತಿ ಬಿಂದ್ಯಾದೇವಿ ಭಂಡಾರಿ, ಪ್ರಧಾನಿ ಸಹಿತ ವಿರೋಧ ಪಕ್ಷದ ನಾಯಕರನ್ನು ಸಹ ಭೇಟಿಯಾಗಿದ್ದಾರೆ. ಕಾಠ್ಮಂಡುವಿಗೆ ಚೀನಾ ಒಡ್ಡುತ್ತಿರುವ ಆಮಿಷದ ಬಗ್ಗೆ ಭಾರತ ಎಚ್ಚೆತ್ತುಕೊಳ್ಳಬೇಕಿದೆ. ನೇಪಾಳದಲ್ಲಿ ಯಾವ ಸರಕಾರಗಳು ಅಧಿಕಾರಕ್ಕೆ ಏರಿದರೂ ಅಲ್ಲಿನ ವಿದೇಶಾಂಗ ನೀತಿ ಭಾರತದ ಪರವಿರುವಂತೆ ನೋಡಿಕೊಳ್ಳುವುದು ಭಾರತಕ್ಕೆ ಒಳಿತು ಹೊರತು ಕೆಡುಕಲ್ಲ.
ಶತಮಾನಗಳಿಂದ ನೇಪಾಳಿ ಮೂಲದ ಗೋರ್ಖಾಗಳು ಸಮಸ್ತ ಭರತ-ವರ್ಷದ ರಕ್ಷಕರಂತಿದ್ದಾರೆ, ಅವರಿಗೆ ರಾಜಕೀಯ ಭೌಗೋಳಿಕ ಭಿನ್ನತೆಯ ವಿಚಾರಗಳು ಬಾಧಿಸುದಿಲ್ಲ! ಹಾಗೇ ಗೋರ್ಖಾಲಿಯು ಭಾರತ- ನೇಪಾಳ ಸ್ನೇಹಮಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರೇರಣೆ ನೀಡಲಿ.
✍️ವಿವೇಕಾದಿತ್ಯ ಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.