ಭಾರತದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದೊಡನೆ ಅಥವಾ ಓದಿದೊಡನೆ ಮೈ ಜುಮ್ಮೆನಿಸುತ್ತದೆ ಅಲ್ಲದೇ ಬ್ರಿಟಿಷರ ಬಗೆಗೆ ಕಡು ಕೋಪವೂ ಬರುತ್ತದೆ. ಒಂದು ಕಡೆ ಹೋರಾಟದ ಮೂಲಕ, ಕ್ರಾಂತಿಯ ಮೂಲಕ, ಲೇಖನಗಳ ಮೂಲಕ, ಭಾಷಣದ ಮೂಲಕ ಅಥವಾ ಕರಪತ್ರಗಳ ಮೂಲಕ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಸ್ವಾತಂತ್ರ್ಯ ಹೋರಾಟಗಾರರು ಒಂದು ಕಡೆಯಾದರೆ ಇನ್ನೊಂದೆಡೆ ಗೀತಾ ರಚನೆ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿದ್ದ ರವೀಂದ್ರನಾಥ ಟ್ಯಾಗೋರ್, ಬಂಕಿಮ್ ಚಂದ್ರರು ಇನ್ನೊಂದು ಕಡೆ.
ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಬರಹಗಾರರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಯರು ಪ್ರಮುಖರು. 1875 ರ ಒಂದು ರಜಾದಿನ ಬಂಕಿಮರು ರೈಲಿನಲ್ಲಿ ತಮ್ಮ ಊರಿನೆಡೆಗೆ ಪ್ರಯಾಣಿಸುತ್ತಿದ್ದರು. ಕಿಟಕಿಯಾಚೆಗೆ ಒಮ್ಮೆ ನೋಡಿದರು ವಿಸ್ತಾರವಾದ ಬಯಲು, ಹಚ್ಚ ಹಸುರಿನ ಪೈರುಗಳು, ಫಲ-ಪುಷ್ಪಗಳಿಂದ ಸಮೃದ್ಧವಾದ ತರುಲತೆಗಳು, ಮನಮೋಹಕವಾಗಿ ಹರಿಯುವ ಝರಿಗಳು – ಇವೆಲ್ಲವನ್ನೂ ನೋಡುತ್ತಾ ಬಂಕಿಮರ ಎದೆ ಸುಂದರ ಅನುಭೂತಿಯತ್ತ ಮುಖಮಾಡಿತು. ಆ ಅನುಭವವೇ ‘ವಂದೇ ಮಾತರಂ’ ಗೀತೆಗೆ ನಾಂದಿಯಾಯಿತು. ವಾಸ್ತವಿಕವಾಗಿ ಬಂಕಿಮರು ‘ವಂದೇ ಮಾತರಂ’ ಅನ್ನು ಮೊದಲೇ ಬರೆದಿದ್ದರೂ, ಅದು ಜನಸಮೂಹಕ್ಕೆ ದೊರೆತಿದ್ದು ಅನೇಕ ವರ್ಷಗಳ ನಂತರ. ‘ಆನಂದಮಠ’ ಎಂಬ ಕಾದಂಬರಿ ಮೂಲಕ. 1882 ರಲ್ಲಿ ಪ್ರಕಟವಾದ ‘ಆನಂದ ಮಠ’ಕಾದಂಬರಿ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಿಡಿದೇಳುವ ಹಾಗೆ ರಾಷ್ಟ್ರ ಪ್ರಜ್ಞೆ ಮೂಡಿಸಲಾಯಿತು. ಇದರಲ್ಲಿನ ವಂದೇ ಮಾತರಂ ಕವಿತೆ ಹೋರಾಟಗಾರರ ಪಾಲಿಗೆ ರಾಷ್ಟ್ರಗೀತೆಯಾಯಿತು. ಈ ಕವಿತೆಗೆ ರಾಗಸಂಯೋಜನೆ ಮಾಡಿದ್ದು ರವೀಂದ್ರ ನಾಥ್ ಟ್ಯಾಗೋರ್.
ವಂದೇ ಮಾತರಂ ನಲ್ಲಿ ಭಾರತ ಮಾತೆಯ ಸೌಂದರ್ಯದ ವರ್ಣನೆಯನ್ನು ಅದ್ಭುತವಾಗಿ ಮಾಡಲಾಗಿದೆ. ಭಾರತೀಯರಿಗೆಲ್ಲ ಸುಲಭವಾಗಿ ಅರ್ಥವಾಗುವಂತೆ ಸರಳ ಸಂಸ್ಕೃತ ಶಬ್ದಗಳ ಪ್ರಯೋಗ. ಬಂಗದರ್ಶನ ಪತ್ರಿಕೆಯಲ್ಲಿ ಆನಂದ ಮಠ ಕಾದಂಬರಿ ಧಾರಾವಾಹಿಯಾಗಿ ಮೂಡಿಬಂತು. ಪರಕೀಯರ ದಾಸ್ಯದ ವಿರುದ್ಧ ದೇಶಪ್ರೇಮಿ ಸನ್ಯಾಸಿಗಳು ಹೋರಾಟದ ಕಥೆ ಇದು. ಕಾದಂಬರಿಯಲ್ಲಿ ಸನ್ಯಾಸಿಗಳು ಸ್ಫೂರ್ತಿಯಾಗಿ “ವಂದೇ ಮಾತರಂ’ ಹಾಡುತ್ತಾರೆ. ಭಾರತ ಮಾತೆಯನ್ನು ದುರ್ಗೆಯಾಗಿ ಪೂಜಿಸುತ್ತಾರೆ. ಆನಂದ ಮಠ ಒಂದು ರಾಷ್ಟ್ರಪ್ರೇಮದ ಕಥೆ. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ ದೇಶಪ್ರೇಮಿಗಳ ಕಥೆ. “ಮಾತೃ ಭೂಮಿಯೇ ನಮ್ಮ ತಾಯಿ, ನಮಗೆ ಬೇರೆ ತಂದೆ, ತಾಯಿ, ಪತ್ನಿ, ಮಕ್ಕಳು, ಮನೆ, ಕುಟುಂಬ ಇಲ್ಲ. ನಮ್ಮ ಬಂಧು ಇವಳೊಬ್ಬಳೇ. ಸುಜಲೆ, ಸುಫಲೆ, ಮಲಯಜ ಶೀತಲೆ’ ಎನ್ನುತ್ತಾರೆ ಇವರು.
1905ರ ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಟಾಗೋರರ ಸೋದರ ಸೊಸೆ ಸರಳಾದೇವಿ ಚೌದುರಾಣಿ ವಂದೇಮಾತರಂ ಗೀತೆ ಹಾಡಿದರು. ಸಭೆಯಲ್ಲಿದ್ದ ಜನರಲ್ಲಿ ವಿದ್ಯುತ್ ಹರಿದಂತೆ ಆಗಿತ್ತು. ಆ ದಿನದಿಂದ ವಂದೇ ಮಾತರಂ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯ ಪ್ರೇಮಿಯ ಮಂತ್ರವಾಯಿತು. ದೇಶದ ಸುತ್ತ ರಾಷ್ಟ್ರ ಪ್ರೇಮದ ಸಂದೇಶ ಸಾರಿ ಜನಜಾಗೃತಿ ಹುಟ್ಟಿಸಿತ್ತು. 1906ರಲ್ಲಿ ಬಿಪಿನ್ ಚಂದ್ರಪಾಲ್ ವಂದೇ ಮಾತರಂ ಪತ್ರಿಕೆಯನ್ನು ಆರಂಭಿಸಿದರು. ಬ್ರಿಟಿಷ್ ಸರ್ಕಾರ 1907 ರಲ್ಲಿ ವಂದೇ ಮಾತರಂ ಪತ್ರಿಕೆಯ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಬಿಪಿನ್ ಚಂದ್ರಪಾಲ್ರನ್ನು ಬಂಧಿಸಿತು. ಕೋಲ್ಕತಾದ ಲಾಲ್ ಬಜಾರ್ನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೆ ನ್ಯಾಯಾಲಯದ ಹೊರಗೆ ಸಾವಿರಾರು ಯುವಕರು ದಿನ ರಾತ್ರಿಯೆನ್ನದೆ ಘೋಷಣೆ ಕೇಳಿ ಬರುತ್ತಿದ್ದದ್ದು ವಂದೇ ಮಾತರಂ. ಲಾಠೀಚಾರ್ಜ್ ನಡೆಸಿದರೂ ಅವರ ಧ್ವನಿ ಅಡಗಿಸುವ ಪ್ರಯತ್ನದಲ್ಲಿ ಸರಕಾರ ವಿಫಲವಾಗಿತ್ತು. ಪ್ರತಿಯೊಂದು ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವುದು ವಾಡಿಕೆಯೇ ಆಯಿತು. “ನಾವು ವಂದೇ ಮಾತರಂ ಹಾಡುವುದು ಸಮಗ್ರ ದೇಶಕ್ಕೆ ವಂದನೆ ಸಲ್ಲಿಸಿದಂತೆ ” ಎಂದಿದ್ದರು ಗಾಂಧೀಜಿ.
ಸ್ವಾತಂತ್ರ್ಯ ಚಳವಳಿಯ ಬೀಜ ಮಂತ್ರವಾಗಿತ್ತು ವಂದೇ ಮಾತರಂ. ದಮನಿಸಿದಷ್ಟು ಮತ್ತೆ ಮತ್ತೆ ಬಲವಾಗಿ ಕೇಳಿಸುತಿದ್ದ ಈ ಕೂಗನ್ನು ಅಡಗಿಸುವುದೇ ಬ್ರಿಟಿಷ್ ಅಧಿಕಾರದ ಮುಂದಿನ ಸವಾಲಾಗಿತ್ತು. ದೇಶದಲ್ಲಿ ವಿದ್ಯುತ್ಸಂಚಾರ ಮಾಡಿಸಿದ್ದ ಈ ಮಂತ್ರ ಶಕ್ತಿಯ ಮುಂದೆ ಬ್ರಿಟಿಷ್ ಆಳ್ವಿಕೆಯ ಅಡಿಪಾಯವೇ ನಡುಗಿತ್ತು.!
ಕ್ರಾಂತಿಕಾರಿ ಸೂರ್ಯಸೇನ್ ರವರ ಚಟುವಟಿಕೆಗಳನ್ನು ಸಹಿಸಿಕೊಳ್ಳಲಾಗದ ಬ್ರಿಟಿಷರು ಅವರನ್ನು ಬಂಧಿಸಿದರು ತಮ್ಮ ತೆರನಾದ ಕ್ರೌರ್ಯವನ್ನು ಪ್ರದರ್ಶಿಸಿದ್ದರು. ಬಂಧನದ ನಂತರವೂ, ಸೂರ್ಯಸೇನ್ ಜೈಲಿನಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಲೇ ಇದ್ದರು, ಅದನ್ನು ತಡೆಯಲು, ಬ್ರಿಟಿಷರು ಅವನ ಮೇಲೆ ಅನೇಕ ದೌರ್ಜನ್ಯಗಳನ್ನು ಎಸಗಿದರು. ಅವರ ದವಡೆ ಹಲ್ಲು ಮುರಿದರು ಮತ್ತು ಕೈಬೆರಳುಗಳ ಉಗುರುಗಳನ್ನು ಕಿತ್ತಿದರು! ವಿಚಾರಣೆ ನಡೆದು ಅವರಿಗೆ ಮರಣದಂಡನೆ ವಿಧಿಸಲಾಯಿತು.! ವಂದೇ ಮಾತರಂ ಕೇಳಿದರೆ ಬ್ರಟಿಷರಿಗೆ ಎಲ್ಲಿಲ್ಲದೆ ಉರಿ ಹತ್ತುತ್ತಿತ್ತು ಅಂದರೆ ಆ ಗೀತೆ ಅದೆಷ್ಟರ ಮಟ್ಟಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿತ್ತು ಎಂಬುದನ್ನು ನಾವು ಗಮನಿಸಬೇಕು.
ಒಂದೆರಡು ದಿನದ ಹಿಂದೆ ಕರ್ನಾಟಕದ ಮಾ.ಮು ಓರ್ವರು ‘ ಏಯ್ ವಂದೇ ಮಾತರಂ ಬೇಡಯ್ಯ’ ! ಎಂದು ಹೇಳಿದ್ದನ್ನು ನೋಡಿದ್ದೇವೆ. ಇಷ್ಟೆಲ್ಲ ಇತಿಹಾಸ ಇರುವ , ಇಷ್ಟೆಲ್ಲ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ್ದ ಗೀತೆ ಬಗ್ಗೆ ಅವರಿಗೇಕೆ ಅಷ್ಟೊಂದು ಸಿಟ್ಟು ಎಂಬುದು ಎಲ್ಲರ ಪ್ರಶ್ನೆಯಾಗಿದೆ.?
ಕಾರಣವಿಷ್ಟೇ ಭಾರತ ಒಂದು ರಾಷ್ಟ್ರವಾಗಿ ಏಕತೆಯಿಂದ ಮುನ್ನಡೆಯುತ್ತಿದೆ ಜೊತೆಗೆ ಮಾ.ಮು ಪಕ್ಷ ದಿನೇ ದಿನೇ ನೆಲ ಕಚ್ಚುತ್ತಿದೆ ಎಷ್ಟೆಂದರೆ ಎಲೆಕ್ಷನ್ ನಿಂತರೆ ಠೇವಣಿಯೂ ಬಾರದಷ್ಟು! ಇದಕ್ಕೆಲ್ಲ ಕಾರಣ ನಾವೆಲ್ಲ ಭಾರತೀಯರು ನಾವೆಲ್ಲ ಒಂದು ಎಂಬ ಕಲ್ಪನೆ ಭಾರತೀಯರ ಮನದಲ್ಲಿ ಮೂಡುತ್ತಿರುವುದು. ಇನ್ನು ವಂದೇ ಮಾತರಂ ಗೀತೆಯಿಂದ ಇನ್ನಷ್ಟು ರಾಷ್ಟ್ರ ಪ್ರಜ್ಞೆ ಜಾಗೃತವಾಗಿಬಿಟ್ಟರೆ ನಮ್ಮ ಪೊಳ್ಳು ಸಿದ್ದಾಂತಗಳನ್ನು ಕೇಳಲು ಜನವೇ ಇರುವುದಿಲ್ಲವಲ್ಲ ಎಂಬ ಚಿಂತೆ ಅವರಿಗೆ. ವಂದೇ ಮಾತರಂ ಗೆ ಇಂದಿನ ವಿರೋಧ ಅಲ್ಲ ಅಂದೆ ಅದನ್ನು ಮುಸ್ಲಿಂ ಲೀಗ್ ಕೂಡಾ ವಿರೋಧಿಸುತ್ತದೆ.! ಹೌದು
1923 ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಸೇರಿದಂತೆ ಎಲ್ಲರೂ ವಂದೇ ಮಾತರಂ ಹಾಡಲು ನಿಂತಾಗ ಮುಸ್ಲಿಂ ಲೀಗ್ ನ ಸ್ಥಾಪಕರೊಬ್ಬರಲ್ಲಾಗಿದ್ದ ಮೌಲಾನಾ ಅಹಮದ್ ಅಲಿ ಇದನ್ನು ವಿರೋಧಿಸಿದ್ದರು ಕೇಳಿದರೆ ನಮ್ಮ ಧರ್ಮದ ಕಾನೂನಿನಂತೆ ಸಂಗೀತ ನಿಷಿದ್ಧ ಎಂದರು.!
ಇಂದು ಆ ಮಾ.ಮು ಯಾರನ್ನು ಓಲೈಸಲು ವಂದೇ ಮಾತರಂ ಹಾಡಲು ಚಕಾರ ಎತ್ತುತ್ತಿದ್ದಾರೆ.? ಒಂದು ಕಡೆ ದೇಶದಲ್ಲಿ ನಾನು ಚಾಲ್ತಿಯಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ನಾಟಕವಾಡುತ್ತಿದ್ದರೆ ಇಲ್ಲಿ ಭಾರತವನ್ನು ಒಡೆಯುವ ಕೆಲಸವನ್ನು ಮಾ.ಮು ಮಾಡುತ್ತಿದ್ದಾರೆ.! ನಮ್ಮೆಲ್ಲರ ತಾಯಿ ಆ ಭಾರತಿ ಎಂದು ಹೇಳಲೂ ಮನಸ್ಸು ಒಪ್ಪುತ್ತಿಲ್ಲ ಎಂದರೆ ಅದೆಷ್ಟರ ಮಟ್ಟಿಗೆ ಕಮ್ಯುನಿಸಂ ನ ಅಫೀಮು ತುಂಬಿರಬಹುದು…?
ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದೇ, ಬೆಂಬಲಿಸುವುದೇ ರಾಷ್ಟ್ರ ದ್ರೋಹದ ಕೆಲಸ ಎಂದು ನಂಬಿರುವ ನಿಮ್ಮಂಥವರಿಂದ ಸದೃಢ ಭಾರತದ ಕನಸು ಸಾಧ್ಯವೇ ಇಲ್ಲ.! ತಾಯಿ ಭಾರತಿಯ ಗುಣಗಾನ ಮಾಡಲೂ ಪುಣ್ಯ ಬೇಕು ಬಿಡಿ. ನಾವು ಬ್ರಿಟಿಷರಿಗೆ ಮತ್ತು ದೇಶದ ವಿರೋಧಿಗಳಿಗೆ ಮಾತ್ರ ವಂದೇ ಮಾತರಂ ಹೇಳಿದರೆ ಉರಿ ಹತ್ತುತ್ತಿತ್ತು ಎಂದು ಹೇಳಿದ್ದೆವು ಆದರೆ……
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.