ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಭಾರತವನ್ನು ಕ್ಯಾನ್ಸರ್ ರೀತಿಯಲ್ಲಿ ಕಾಡುತ್ತಿದೆ ಮತಾಂತರ. ಆಸೆ ಆಮಿಷಗಳಿಗೆ ಬಲಿಯಾಗಿ, ಬೆದರಿಕೆಗಳಿಗೆ ಅಂಜಿ ಅದೆಷ್ಟೋ ಜನ ಭಾರತದ ಸನಾತನವಾದ ಸಂಸ್ಕೃತಿಯಿಂದ ಬೇರೆಯಾಗಿದ್ದಾರೆ. ಸ್ವ-ಇಚ್ಛೆಯಿಂದ ಮತಾಂತರವಾಗಲು ಕಾನೂನಿನಡಿ ನೀಡಿದ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ವಿದೇಶಿ ಮತಗಳ ಅನುಯಾಯಿಗಳು ವ್ಯವಸ್ಥಿತವಾದ ರೀತಿಯಲ್ಲಿ ಮತಾಂತರ ದಂಧೆ ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ ಮತಾಂತರದ ಬಗ್ಗೆ ನೀಡಿದ ಅನಿಸಿಕೆ ನಮ್ಮ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದಂತಿದೆ. “ಬಲವಂತದ ಮತಾಂತರ ತಡೆಯದೇ ಇದ್ದರೆ ಮುಂದೆ ಅಪಾಯವಿದೆ” ಎಂಬ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಮುಂದೊಂದು ದಿನ ಭಾರತ ಭಾರತವಾಗಿ ಉಳಿಯುವುದು ಕಷ್ಟವಿದೆ.
“ಬಲವಂತ ಆಮಿಷ ಮತ್ತು ವಂಚನೆಯ ಮೂಲಕ ಮಾಡಲಾಗುವ ಮತಾಂತರಗಳು ದೇಶದ ಭದ್ರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಹಾಗೂ ನಾಗರಿಕರ ಆತ್ಮಸಾಕ್ಷಿಯ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲದು” ಎಂದು ಸರ್ವೋಚ್ಛ ನ್ಯಾಯಾಲಯ ಎಚ್ಚರಿಸಿದೆ.
“ಧಾರ್ಮಿಕ ಸ್ವಾತಂತ್ರ್ಯ ಇರಬಹುದು ಆದರೆ ಬಲವಂತದ ಮತಾಂತರದಿಂದ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಆಯ್ಕೆ ಮಾಡುವ ಹಕ್ಕಿದೆ, ಆದರೆ ಬಲವಂತದ ಮತಾಂತರದಿಂದ ಅಥವಾ ಪ್ರಲೋಭನೆಯಿಂದ ಇದು ನಡೆಯಕೂಡದು” ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠ ಹೇಳಿದೆ.
ನವೆಂಬರ್ 22 ಅಥವಾ ಅದಕ್ಕೂ ಮೊದಲು ಬಲವಂತದ ಮತಾಂತರಗಳನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ ಎಂಬುದರ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ಆದೇಶಿಸಿದೆ. ಬಲವಂತದ ಮತಾಂತರಗಳು ಬಡವರು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚು ಕಂಡುಬಂದಿವೆ ಎಂದು ಅದು ಹೇಳಿದೆ.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬುಡಕಟ್ಟು ಪ್ರದೇಶಗಳಲ್ಲಿ ಬಲವಂತದ ಮತಾಂತರಗಳು ಅಧಿಕವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಕ್ಕಿ, ಗೋಧಿ, ಬಟ್ಟೆ, ಇತ್ಯಾದಿಗಳನ್ನು ನೀಡಿ ಮತಾಂತರ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಒಬ್ಬನ ಆತ್ಮಸಾಕ್ಷಿಯನ್ನು ಹತ್ತಿಕ್ಕಬಹುದೇ ಹೊರತು ಆತನ ಮೂಲ ನಂಬಿಕೆಯ ಜೊತೆ ಚೌಕಾಶಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಮತಾಂತರದ ವಿರುದ್ಧ ಅರ್ಜಿದಾರರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಮಾತನಾಡಿ, ಬಲವಂತದ ಮತಾಂತರದ ವಿರುದ್ಧ ವಿಶೇಷ ಕಾನೂನು ಇರಬೇಕು ಅಥವಾ ಈ ಕಾಯ್ದೆಯನ್ನು ಭಾರತೀಯ ದಂಡ ಸಂಹಿತೆಯಲ್ಲಿ ಅಪರಾಧ ಎಂದು ಸೇರಿಸಬೇಕು ಎಂದು ವಾದಿಸಿದ್ದಾರೆ. ಆದರೆ ಇಲ್ಲಿರುವ ತೊಂದರೆ ಎಂದರೆ ಬಲಿಪಶುಗಳ ಪರವಾಗಿ ಯಾರು ದೂರು ನೀಡುತ್ತಾರೆ ಎಂಬುದು. ಸಂಬಂಧಪಟ್ಟ ರಾಜ್ಯ ಮುಂದಾಗದಿದ್ದರೆ ಕೇಂದ್ರ ಹೆಜ್ಜೆ ಮುಂದಿಡಬೇಕು ಎಂದು ಹೇಳಿದ್ದಾರೆ
ಸರ್ಕಾರಗಳು ಬಲವಂತದ ಮತಾಂತರಗಳನ್ನು ನಿಲ್ಲಿಸಲು ಅತ್ಯಂತ ಗಂಭೀರ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಸುಪ್ರೀಂ ಕೂಡ ಹೇಳಿದೆ.
ಸರ್ವೋಚ್ಛ ನ್ಯಾಯಾಲಯದ ಎಚ್ಚರಿಕೆಯನ್ನು ನಮ್ಮ ವ್ಯವಸ್ಥೆ ಗಂಭೀರವಾಗಿ ಪರಿಗಣಿಸದೇ ಹೋದರೆ ಮುಂದೊಂದು ದಿನ ದೊಡ್ಡ ಅಪಾಯವೇ ಎದುರಾಗಲಿದೆ. “ಒಂದು ವೇಳೆ ಒಬ್ಬ ವ್ಯಕ್ತಿ ಅನ್ಯ ಧರ್ಮಕ್ಕೆ ಮತಾಂತರವಾದರೆ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಿಲ್ಲ, ಬದಲಿಗೆ ಹಿಂದುಗಳಿಗೆ ಒಬ್ಬ ಶತ್ರು ಕೂಡ ಹುಟ್ಟಿಕೊಳ್ಳುತ್ತಾನೆ” ಎಂದು ವಿವೇಕಾನಂದರು ಹೇಳಿದ್ದನ್ನು ನಾವೆಂದೂ ಮರೆಯಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.