ಸರ್ವಜನಾಂಗಗಳ ಶಾಂತಿಯ ತೋಟವಾದ ಬೆಂಗಳೂರು ನಗರದ ನಿರ್ಮಾತೃ ಹಿರಿಯ ಕೆಂಪೇಗೌಡರು ಎಂದರೆ ಅತಿಶಯೋಕ್ತಿಯಲ್ಲ. ಹೌದು. ಇಂದು ಬೆಂಗಳೂರು ಮಹಾನಗರ ವಿಶ್ವ ಪ್ರಸಿದ್ಧ ಸ್ಥಳವಾಗಿದೆ. ಮಾಹಿತಿ ತಂತ್ರಜ್ಞಾನದ ಈ ತವರೂರಿಗೆ ಹೊರನಾಡುಗಳಿಂದ ಜನರು ಬರುವುದು ಹೋಗುವುದು ಸಾಮಾನ್ಯವಾಗಿದೆ. ಇದನ್ನು ಈಗ ಕಾಸ್ಮೋಪಾಲಿಟನ್ ಸಿಟಿ ಎನ್ನುತ್ತಾರೆ. ಆದರೆ, ಅಸಲಿಗೆ ಇದು ಬಹಳ ಹಿಂದೆ ಅಂದರೆ ಆರಂಭದಲ್ಲಿಯೇ ಕಾಸ್ಮೋಪಾಲಿಟನ್ ಸಿಟಿ ಮತ್ತು ಸೆಕ್ಯೂಲರ್ ಸಿಟಿಯಾಗಿ ನಿರ್ಮಾಣಗೊಂಡಿರುವ ವಿಚಾರ ಬಹುಶಃ ಅನೇಕರಿಗೆ ತಿಳಿದಿರುವುದಿಲ್ಲ.
ವಿಜಯನಗರ ಸಾಮ್ರಾಜ್ಯದ ಅವನತಿಯ ಹಂತದಲ್ಲಿ ಆಡಳಿತ ವಿಕೇಂದ್ರಿಕರಣಗೊಂಡಗ ನಾಡಗೌಡರುಗಳು ತಮ್ಮ ನಾಡುಗಳನ್ನು ಆಳತೊಡಗಿದರು. (ಹಾಗೇ ಇದ್ದ ಯಲಹಂಕ ನಾಡು ಕೆಂಪೇಗೌಡರ ಮನೆತನದ ಕಾಲದಲ್ಲಿ ಪ್ರಸಿದ್ಧವಾಯಿತು.) ಕೆಂಪೇಗೌಡರ ವಂಶಸ್ಥರ ಮೂಲಪುರುಷ ರಣಭೈರೇಗೌಡ, ಈತನ ಮಗನಾದ ಜಯೇಗೌಡನು ೧೪೧೮ರ ವೇಳೆಗೆ ಯಲಹಂಕಕ್ಕೆ ಬಂದು ನೆಲೆಸಿದನು. ಈ ಗ್ರಾಮವನ್ನು ಹೊಯ್ಸಳರು ಯಲಹಕ್ಕೆ ಎಂದೂ, ಚೋಳರು ‘ಇಚ್ಛೆಪಕ್ಕಂ’ ಎಂದೂ ಕರೆಯುತ್ತಿದ್ದರು. 1433ರಲ್ಲಿ ಜಯೇಗೌಡನು ತೀರಿಕೊಂಡಾಗ ಇವನ ಹಿರಿಯಮಗ ಗಿಡ್ಡೇಗೌಡನು ಆಡಳಿತ ವಹಿಸಿಕೊಂಡನು. ಈತನಿಗೆ ಬಹುಕಾಲ ಮಕ್ಕಳಿರಲಿಲ್ಲ. ಮನೆ ದೇವರಾದ ಕೆಂಪಮ್ಮನನ್ನು ಈತನು ಭಕ್ತಿಯಿಂದ ಆರಾಧಿಸಲು ಒಂದು ಗಂಡು ಮಗುವಿನ ಜನನವಾಯಿತು. ಕುಲದೇವತೆಯ ಹೆಸರನ್ನು ಸೇರಿಸಿ ಕೆಂಪನಾಚೇಗೌಡ ಎಂದು ಆ ಮಗುವನ್ನು ಕರೆಯಲಾಯಿತು. ಹಾಗೂ, ಮುಂದೆ ಈ ಸಂತತಿಯಲ್ಲಿ ಜನಿಸಿದ ಮಕ್ಕಳಿಗೆ ಕೆಂಪಮ್ಮನ ಹೆಸರನ್ನು ಸೇರಿಸುವುದೂ ರೂಢಿಯಾಯಿತು. ಗಿಡ್ಡೇಗೌಡನ ನಂತರ ಬಂದ ಕೆಂಪನಾಚೇಗೌಡನು ದರ್ಘಕಾಲ ಆಳ್ವಿಕೆ ಮಾಡಿದನು. ಈತನ ಮಗನೇ ಹಿರಿಯ ಕೆಂಪೇಗೌಡ. ಈತನು ಪ್ರಾಪ್ತ ವಯಸ್ಕನಾಗುವ ವೇಳೆಗಾಗಲೇ ಯಲಹಂಕನಾಡು ಸಮೃದ್ಧವಾಗಿ ಬೆಳೆದಿತ್ತು. ಈ ಅಭಿವೃದ್ಧಿಯನ್ನು ಕಂಡು ಸಹಿಸದ ಸುತ್ತಮುತ್ತಲಿನ ಪಾಳೇಗಾರರು ಕೆಂಪೇಗೌಡನ ಮೇಲೆ ಎರಗಬೇಕೆಂದು ಹವಣಿಸುತ್ತಿದ್ದರು. ಆದರೆ, ತನ್ನ ಬುದ್ಧಿಚಾತರ್ಯದಿಂದ ಈತನು ಅವರ ಯೋಜನೆಗಳನ್ನು ವಿಫಲಗೊಳಿಸಿದನು.
ವಿಜಯನಗರದ ಅರಸನಾದ ಕೃಷ್ಣದೇವರಾಯನ ನಂತರ ಅವನ ತಮ್ಮ ಅಚ್ಯುತರಾಯನಿಗೆ 1529ರಲ್ಲಿ ಪಟ್ಟಾಭಿಷೇಕವಾದ ಸಮಯದಲ್ಲೇ ಅತಿಥಿಯಾಗಿ ಬಂದ ಕೆಂಪೇಗೌಡನಿಗೆ ನಗರವೊಂದನ್ನು ನಿರ್ಮಿಸಬೇಕೆಂಬ ಮಹದಾಸೆಯೂ ಇತ್ತು. ಒಂದು ದಿನ ತನ್ನ ಆಪ್ತ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿದನು. ಸಾಕಷ್ಟು ದೂರ ಬಂದ ಮೇಲೆ ಅವರು ಎತ್ತರವಾದ ಪ್ರದೇಶವೊಂದಕ್ಕೆ ಬಂದರು. ಅಲ್ಲಿಂದ ಕಂಡು ಬಂದ ವಿಶಾಲವಾದ ಬಯಲು ಪ್ರದೇಶವು ಕೆಂಪೇಗೌಡನ ಮನಸ್ಸಿಗೆ ಬಹುವಾಗಿ ಹಿಡಿಸಿತು. ಈ ಪ್ರದೇಶದಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ಹೊಸ ಊರೊಂದನ್ನು ಕಟ್ಟಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದನು. ತನ್ನ ಮನದಾಸೆಯನ್ನು ಆಪ್ತರೊಂದಿಗೆ, ಪಂಡಿತರೊಂದಿಗೆ ಸಮಾಲೋಚಿಸಿ ಕ್ರಿ.ಶ. 1537 ರಲ್ಲಿ ಒಂದು ಶುಭದಿನವನ್ನು ತನ್ನ ಕನಸನ್ನು ನನಸಾಗಿಸುವ ನಗರದ ಸ್ಥಾಪನೆಗೆ ಕೆಂಪೇಗೌಡನು ಗೊತ್ತುಪಡಿಸಿದನು. ಅಂದು ತನ್ನ ಕುಟುಂಬದವರು, ಬಂಧು-ಬಾಂದವರೊಂದಿಗೆ ಭೂಮಿ ಪೂಜೆಯ ಸ್ಥಳಕ್ಕೆ ಬಂದನು. ಆ ಜಾಗವು ಈಗಿನ ಚಿಕ್ಕಪೇಟೆ ಚೌಕವಿರುವ ಸ್ಥಳ ಎಂದು ನಂಬಲಾಗಿದೆ. ಪೂಜಾದಿಗಳ ನಂತರ ನೇಗಿಲು ಕಟ್ಟಿದ ಎತ್ತುಗಳನ್ನು ನಾಲ್ಕೂ ದಿಕ್ಕುಗಳಿಗೆ ಕಳಿಸಲಾಯಿತು. ಈ ಎತ್ತುಗಳು ಸಾಗಿ ನಿಂತ ಸ್ಥಳಗಳಲ್ಲಿ ಪ್ರಮುಖ ಪ್ರವೇಶ ದ್ವಾರಗಳನ್ನು ನರ್ಮಿಸಲು ನರ್ಧರಿಸಲಾಯಿತು. ನಗರ ನಿರ್ಮಾಣಕ್ಕೆ ವಿಜಯನಗರದ ಅರಸರ ಅನುಮತಿಯನ್ನು ಕೆಂಪೇಗೌಡನು ಪಡೆದನು. ಆತನ ಹೆಂಡತಿ ಮತ್ತು ತಾಯಿ ಇದ್ದ ಗ್ರಾಮದ ಹೆಸರು ಬೆಂಗಳೂರು ಎಂದಿತ್ತು. ಆ ಹೆಸರು ಆತನಿಗೆ ಬಹಳವಾಗಿ ಹಿಡಿಸಿತು. ಆ ಹೆಸರನ್ನೇ ತನ್ನ ಪಟ್ಟಣಕ್ಕೂ ಇಡಲು ಆತನು ನಿರ್ಧರಿಸಿದನು. ವ್ಯವಸ್ಥಿತವಾದ ಯೋಜನೆಯೊಂದಿಗೆ ಬೆಂಗಳೂರು ಬಹುಬೇಗ ನಿರ್ಮಾಣವಾಯಿತು. ಹೀಗೆ ನಾಲ್ಕೂವರೆ ಶತಮಾನಗಳಿಗೂ ಹಿಂದೆ ಇಂದಿನ ಮಹಾನಗರ ಬೆಂಗಳೂರು ಒಂದು ಪಟ್ಟಣವಾಗಿ ಜನ್ಮ ತಾಳಿತು.
ತನ್ನ ನೆಚ್ಚಿನ ಊರು ನಿರ್ಮಾಣವಾಗುತ್ತಿದ್ದಂತೆ ಹಿರಿಯ ಕೆಂಪೇಗೌಡನು ತನ್ನ ಕುಟುಂಬದವರನ್ನು ಹೊಸ ರಾಜಧಾನಿಗೆ ಕರೆಸಿಕೊಂಡನು. ಅದೇ ರೀತಿ ಯಲಹಂಕದಿಂದ ಹೊಸ ಪಟ್ಟಣಕ್ಕೆ ಬಂದ ಪ್ರಜೆಗಳಿಗೂ ನಿವೇಶನಗಳನ್ನು ನೀಡಲಾಯಿತು. ಆಯಾ ವೃತ್ತಿಗಳನ್ನು ಮಾಡುವವರಿಗೆ ಸ್ಥಳಗಳನ್ನೂ ನಿಗದಿಪಡಿಸಲಾಯಿತು. ಕೇವಲ ಒಂದು ಜಾತಿಗೆ ಸೀಮಿತವಾಗದೆ ಅನ್ಯ ಸಮುದಯ ಇಲ್ಲಿ ನೆಲೆವೂರುವಂತೆ ಅವಕಾಶ ಮಾಡಿಕೊಟ್ಟನು.
ಬಟ್ಟೆಗಳನ್ನು ನೇಯುವವರಿಗೆ ನೀಡಿದ ಜಾಗ ಅರಳೇಪೇಟೆಯಾಯಿತು. ಬಳೆ ಅರಿಶಿನ ಕುಂಕುಮ ಮೊದಲಾದ ಮಂಗಳದವ್ಯಗಳ ಮಾರಾಟದ ಜಾಗ ಬಳೇಪೇಟೆ, ಸಗಟು ವ್ಯಾಪಾರಿಗಳಿಗೆ ದೊಡ್ಡಪೇಟೆ, ಚಿಲ್ಲರೆ ವ್ಯಾಪಾರದ ಜಾಗ ಚಿಕ್ಕಪೇಟೆ, ಅಕ್ಕಿ ಮಾರಾಟವಾಗುವ ಜಾಗ ಅಕ್ಕಿಪೇಟೆ, ಹಾಗೆಯೇ ರಾಗಿಪೇಟೆ, ಕುಂಬಾರಪೇಟೆ. ಹೀಗೆ, ವೃತ್ತಿ ಹಾಗೂ ವ್ಯಾಪಾರದ ಸರಕಿಗೆ ಅನುಸಾರವಾಗಿ ಪೇಟೆಗಳು ನಿರ್ಮಾಣವಾದವು. ಪರಸ್ಥಳಗಳಿಂದಲೂ ವ್ಯಾಪಾರಿಗಳು ಇಲ್ಲಿಗೆ ಬಂದು ನೆಲೆಸಲಾರಂಭಿಸಿದರು. ಕ್ರಮೇಣ ಇಂತಹ ವಿಭಾಗಗಳ ಸಂಖ್ಯೆಯು ಜಾಸ್ತಿಯಾಗಿ ಇಂದಿಗೂ ಹಳೇ ಬೆಂಗಳೂರು ವಿಭಾಗದಲ್ಲಿ ಸುಮಾರು ಅರವತ್ತನಾಲ್ಕು ಪೇಟೆಗಳಿವೆ. ಹೀಗೆ, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿಯಾಗಿ ಅಗಲೇ ನಿರ್ಮಾಣಗೊಂಡಿತ್ತು. ಹೀಗೇ ಎಲ್ಲಾ ಜನಾಂಗದವರಿಗೂ ಜಾಗ ನೀಡಿದ್ದಲ್ಲದೆ. ಅವರಿಗೆ ದೇವಸ್ಥಾನಗಳನ್ನು ಕಟ್ಟಲು ಅವಕಾಶ ಮಾಡಿಕೊಟ್ಟು ಅವರ ಹಬ್ಬಹರಿದಿನ ಮತ್ತು ಅವರ ರ್ಮವನ್ನು ಆಚರಿಸಲು ಅನುಕೂಲ ಮಾಡಿಕೊಟ್ಟನು. ಅದರಂತೆ ಇಂದೂ ಸಹ ನಾವು ಅನೇಕ ದೇವಸ್ಥಾನಗಳನ್ನು ನೋಡಬಹುದು. ತಿಗಳರ ದೇವಸ್ಥಾನ, ನಗರತ್ತರ ದೇವಸ್ಥಾನ, ಉಪ್ಪಾರ ದೇವಸ್ಥಾನ, ಕಮ್ಮಾರ ದೇವಸ್ಥಾನ ಕೋಮಟಿ ವೆಂಕಟಟೇಶ್ವರ ಮುಂತಾದವುಗಳನ್ನು ಕಾಣಬಹುದು. ಅದರಂತೆ ತಿಗಳರಪೇಟೆ, ನಗರತರ ಪೇಟೆ, ಉಪ್ಪಾರಪೇಟೆ, ಕಮ್ಮಾರ ಪೇಟೆ ಈ ತರಹ ಪೇಟೆಗಳನ್ನು ನಾವು ಇಂದು ಸಹ ಕಾಣಬಹುದು. ಹೀಗೆ ಎಲ್ಲಾ ಜನಾಂಗದವರಿಗೂ ಇಲ್ಲಿ ನೆಲೆಯುರಲು ತಮ್ಮ ಧರ್ಮ ಮತ್ತು ವ್ಯಾಪಾರವನ್ನು ಮಾಡಲು ಅವಕಾಶ ಮಾಡಿಕೊಟ್ಟ ಓರ್ವ ಅಪರೂಪದ ಜಾತ್ಯಾತೀತ ದೊರೆ ಹಿರಿಯ ಕೆಂಪೇಗೌಡರು ಎನ್ನಬಹುದು.
ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮಾಡಿಕೊಟ್ಟ ಕೆಂಪೇಗೌಡ, ವ್ಯವಸಾಯ ಹಾಗೂ ಕುಡಿಯುವ ನೀರಿಗಾಗಿ ಕೆರೆ ಹಾಗೂ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿದನುಮನೆದೇವತೆ ಕೆಂಪಮ್ಮನ ಹೆಸರಿನ ಕೆಂಪಾಬುಧಿಕೆರೆ, ಧರ್ಮ ತನ್ನ ನಾಡಿನಲ್ಲಿ ಶಾಶ್ವತವಾಗಿ ನೆಲೆಸಲಿ ಎಂದು ಸರ್ಮಿಸಿ ಧರ್ಮಂಬುಧಿ ಕೆರೆ, ಕಟ್ಟಿಸಿದ. ಅಲಸೂರು ಕೆರೆ, ಕಾರಂಜಿಕೆರೆ ಇವೆಲ್ಲ ಆತನ ಕಾಲದ ಕೊಡುಗೆಗಳೇ. ಅದೇ ರೀತಿ ತನ್ನ ಪ್ರಜೆಗಳ ಒಳಿತಿಗೋಸ್ಕರ ದೇವಾಲಯಗಳನ್ನೂ ನರ್ಮಿಸಿದನು. ಹಾಗೂ ಹಳೆಯ ದೇವಾಲಯಗಳನ್ನು ಅಭಿವೃದ್ಧಿಗೊಳಿಸಿದನು. ದೊಡ್ಡ ಗಣೇಶ, ದೊಡ್ಡ ಬಸವಣ್ಣ ಅಲಸೂರು ಸೋಮೇಶ್ವರ, ಗವಿಗಂಗಾಧರೇಶ್ವರ ಇವೆಲ್ಲ ಆತನ ಕಾಲದ ದೇವಾಲಯಗಳೇ.
ಕೋಟೆಯ ಹೊರಭಾಗದ ಸುತ್ತಲೂ ಶತ್ರುಗಳು ಸುಲಭವಾಗಿ ಬರದಂತೆ ಕಂದಕಗಳನ್ನು ಮಾಡಿಸಿದ್ದನು. ಆ ಕಂದಕಗಳಿದ್ದ ಜಾಗ ಈಗ ರಸ್ತೆಗಳಾಗಿ ಬಿಟ್ಟಿವೆ. ಹಿರಿಯ ಕೆಂಪೇಗೌಡನ ಜೀವನ, ಆತನು ನರ್ಮಿಸಿದ ಊರು, ಕೆರೆ ದೇವಾಲಯಗಳು ಇವನ್ನೆಲ್ಲಾ ಅಧ್ಯಯನ ಮಾಡಿದಾಗ ತಿಳಿದು ಬರುವುದಿಷ್ಟು. ಆತನು ಬಹಳ ವಿಶಾಲ ಹೃದಯದವನು, ವೈಜ್ಞಾನಿಕ ಮನೋಭಾವದವನು. ಏನು ಮಾಡಿದರೂ ಅದು ಬೃಹತ್ ಪ್ರಮಾಣದಲ್ಲಿರಬೇಕು, ಹಾಗೂ ಚಿರಕಾಲ ಉಳಿಯುವಂತಿರಬೇಕು. ಆತನು ಈ ದೂರದೃಷ್ಟಿಯಿಂದ ನರ್ಮಿಸಿದ ರಚನೆಗಳ ಪೈಕಿ ಕೆಲವು ಇಂದಿಗೂ ನಮ್ಮೊಂದಿಗಿವೆ.
ತನ್ನ ಸೀಮೆಯಲಿದ್ದ ಎಲ್ಲ ಪ್ರಮುಖ ರಸ್ತೆಗಳಿಗೂ ಆತನು ಸಾಲು ಮರಗಳನ್ನು ಅದರಲೂ ಮುಖ್ಯವಾಗಿ ಹೊಂಗೇ ಮರಗಳನ್ನು ನೆಡಿಸಿದ್ದನು. ಈ ಮರಗಳು ದಾರಿಹೋಕರಿಗೆ ನೆರಳನ್ನೂ ತಂಪನ್ನೂ ಕೊಡುತ್ತಿದ್ದುದಲ್ಲದೆ ಹೊಂಗೆ ಎಣ್ಣೆ ತಯರಿಸಲೂ ಉಪಯೋಗವಾಗುತ್ತಿದ್ದವು. ಹಾಗೆಯೇ, ಅಲ್ಲಲ್ಲಿ ಹೊರೆಗಲ್ಲುಗಳನ್ನು ನಿರ್ಮಿಸಿದ್ದನು. ತಲೆಯ ಮೇಲೆ ಹೊರೆಹೊತ್ತು ಹೋಗುವವರು ಮರ್ಗ ಮಧ್ಯೆ ಈ ಕಲ್ಲುಗಳ ಮೇಲೆ ಹೊರೆ ಇಳಿಸಿ ಆಯಾಸ ಪರಿಹಾರ ಮಾಡಿಕೊಂಡು ಮುಂದೆ ಸಾಗುತ್ತಿದ್ದರು. ಈ ರೀತಿ ಸಾಗುವ ಪ್ರಯಾಣಿಕರಿಗಾಗಿ ಅಲ್ಲಲ್ಲಿ ಛತ್ರಗಳೂ ಇದ್ದವು.
ದೈವಭಕ್ತಿಯೇ ಪ್ರಧಾನವಾಗಿದ್ದ ಆತನ ಕಾಲದಲ್ಲಿ ಅನೇಕ ಮಠಗಳೂ ಅಗ್ರಹಾರಗಳೂ ಸ್ಥಾಪನೆಯಾದವು. ಇಂದಿಗೂ ಇರುವ ಕೆಂಪಾಪುರ ಅಗ್ರಹಾರ ಇದಕ್ಕೆ ಉದಾಹರಣೆ.
ಆತನ ಆಸ್ಥಾದಲ್ಲಿ ಎಂಟು ಜನ ಮಂತ್ರಿಗಳಿದ್ದರು. ಅವಶ್ಯಕತೆ ಬಿದ್ದಾಗ ಇವರೊಂದಿಗೆ, ಊರಿನ ಹಿರಿಯರೊಂದಿಗೆ ಅವನು ಸಮಾಲೋಚನೆ ಮಾಡುತ್ತಿದ್ದನು. ಗ್ರಾಮಗಳಲ್ಲಿ ಆಡಳಿತ ಪದ್ಧತಿಯ ವ್ಯವಸ್ಥೆಯಾಗಿ ಕೂಟ ಹಾಗೂ ಗ್ರಾಮ ಪಂಚಾಯಿತಿಗಳಿರುತ್ತಿದ್ದವು. ಇವುಗಳ ಕರ್ಯವೆಂದರೆ ಸಾಮಾಜಿಕ ವ್ಯವಹಾರಗಳನ್ನು ವಿಚಾರಿಸುವುದು, ತೆರಿಗೆಗಳನ್ನು ವಸೂಲು ಮಾಡುವುದು. ವಿದ್ಯಾಪ್ರಚಾರ ಮಾಡುವುದು, ಕೆರೆ ಕಾಲುವೆಗಳ ದುರಸ್ತಿ, ರಸ್ತೆಗಳ ನಿರ್ಮಾಣ, ದೇವಾಲಯಗಳ ಉಸ್ತುವಾರಿ ರಥೋತ್ಸವಗಳ ಮೇಲ್ವಿಚಾರಣೆ ಇತ್ಯಾದಿ.’
ಈತನ ಕಾಲದಲ್ಲಿ ‘ಬಾರಾಲೂತಿ’ (ಹನ್ನೆರಡು ವಿಭಾಗಗಳ) ಪದ್ಧತಿಯಿತ್ತು. ಶ್ಯಾನುಭೋಗ, ಪಟೇಲ, ಜೋಯಿಸ, ಕಮ್ಮಾರ, ಅಗಸ, ನಾಯಿಂದ, ತೋಟಿ, ತಳವಾರ, ನೀರುಗಂಟಿ, ಅಕ್ಕಸಾಲೆ, ಕುಂಬಾರ ಇವು ಆ ಹನ್ನೆರಡು ವಿಭಾಗಗಳು, ಈ ಉತ್ಪತ್ತಿಯಲ್ಲಿ ಪ್ರಮುಖ ಭಾಗವನ್ನು ಸೈನ್ಯದ ಖರ್ಚಿಗಾಗಿ ಬಳಸುತ್ತಿದ್ದರು. ಸೈನಿಕರು ರೈತ ಕುಟುಂಬದವರಾಗಿದ್ದು ಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಸೇರುತ್ತಿದ್ದರು.
ಸಮಸ್ತ ಸೈನ್ಯದ ಅಧಿಪತಿ ಹಿರಿಯ ಕೆಂಪೇಗೌಡನೇ ಆಗಿದ್ದನು. ತನ್ನ ನಾಡಿನ ರ್ವತೋಮುಖ ಬೆಳವಣಿಗೆಗೆ ಕೆಂಪೇಗೌಡನಿಗೆ, ಹಿಂದೂ ಸಾಮ್ರಾಜ್ಯದ ವಿಜಯನಗರದ ಆಡಳಿತ ಮಾದರಿಯಾಗಿತು.
ಹೀಗೆ ಬೆಂಗಳೂರನ್ನು ಶ್ರದ್ಧೆ ಪರಿಶ್ರಮಗಳಿಂದ ಒಂದು ಪ್ರಮುಖ ವಾಣಿಜ್ಯ ಕೇಂದ್ರವನ್ನಷ್ಟೇ ಅಲ್ಲದೆ “ಕಲ್ಯಾಣ ನಗರ” ವನ್ನಾಗಿಸಿದ ಹಿರಿಯ ಕೆಂಪೇಗೌಡ. He was a true secular king with the scientific attitude and a great visionary ಎನ್ನಬಹುದು. ಇಂದು ಅನೇಕ ಊರುಗಳು ಮತ್ತು ಪಟ್ಟಣಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿರುವುದನ್ನು ನಾವು ನೋಡುತ್ತೇವೆ. ಆದರೆ, ಬೆಂಗಳೂರು ಮಾತ್ರ ತನ್ನ ಮೂಲ ಸೊಗಡನ್ನು ಈಗಲೂ ಒಂದಿಷ್ಟು ಪ್ರಮಾಣದಲ್ಲಿ ಉಳಿಸಿಕೊಂಡಿದೆ. ಮರಾಠರು, ಮೊಘಲರು, ಬ್ರಿಟಿಷರು, ರಾಜಮನೆತನದವರು ಹೀಗೆ ಅನೇಕ ಆಡಳಿತಗಳನ್ನು ಕಂಡರೂ ಸಹ ತನ್ನ ಮೂಲ ಸ್ವರೂಪವ ಮಾತ್ರ ಗಣನೀಯವಾಗಿ ಬದಲಾವಣೆಯಾಗಿಲ್ಲ. ಈಗಲೂ ಸಹ ಹಬ್ಬಹರಿದಿನಗಳಲ್ಲಿ ಹಳೆ ಬೆಂಗಳೂರಿನ ವಾತಾವರಣವೇ ಬೇರೆಯಾಗಿರುತ್ತದೆ. ಜೊತೆಗೆ ಇಂದಿಗೂ ಸಹ ಅನೇಕ ದೇವಸ್ಥಾನಗಳು ತಮ್ಮ ಉತ್ಸವ, ರಥೋತ್ಸವಗಳನ್ನು ಅಂದಿನಂತಯೇ ಇಂದಿಗೂ ಸಹ ತಮ್ಮ ಉತ್ಸವಗಳನ್ನು ಇತರ ಅಚರಣೆಗಳನ್ನೂ ನಡೆಸಿಕೊಂಡು ಬಂದಿರುವುದಕ್ಕೆ ಕೆಂಪೇಗೌಡರು ಹಾಕಿದ ಭದ್ರಬುನಾದಿ ಅನ್ನಬಹುದು. ಅನೇಕ ಜನಾಂಗದವರು ಇಲ್ಲಿ ಬಂದು ನೆಲೆಸಿದರು ಇಂದಿಗೂ ಬೆಂಗಳೂರಿನಲ್ಲಿ ಜಾತಿಗಳ ಮಧ್ಯೆ ಬಹುದೊಡ್ಡ ಗಲಬೆಗಳು ನಡೆಯದಿರುವುದಕ್ಕೆ ಇದಕ್ಕೆ ಸಾಕ್ಷಿಯಾಗಿದೆ.
ಅದರೆ ಇಂದು ಕೆಲವರು ಒಂದೇ ಜಾತಿಗೆ ಕೆಂಪೇಗೌಡರನ್ನು ಸೀಮಿತ ಮಾಡುವ ಅಲೋಚನೆಗಳು ಕಾಣುತ್ತಿರುವುದು ಬೇಸರವಾಗುತ್ತದೆ. ನಾವು ಇಂದು Global investor’s meet, cosmopolitan city, secular city, green city ಎಂದೇಲ ಮಾತುಗಳನ್ನು ಕೇಳುತ್ತೇವೆ. ಅದರೆ ೪೦೦ ವರ್ಷಗಳ ಹಿಂದೆಯೇ ಈ ಪ್ರಯೋಗಗಳನ್ನು ಮಾಡಿ ಯಶಸ್ಸನ್ನು ಕಂಡ ಹಿರಿಯ ಕೆಂಪೇಗೌಡರನ್ನು ನಾವು ಅತ್ಯಂತ ಗೌರವಪರ್ವಕವಾಗಿ ಸ್ಮರಿಸಲೇಬೇಕು. ಕೆಂಪೇಗೌಡರ ವಿಶಾಲ ಹೃದಯದ ಅಲೋಚನೆ, ಅವನ ಆಡಳಿತ ಕಾರ್ಯವೈಖರಿ, ನಗರ ನಿರ್ಮಾಣದ ದೃಷ್ಟಿಕೋನ ಈ ವಿಚಾರಗಳನ್ನು ಬೆಂಗಳೂರಿನ ನಿವಾಸಿಗಳಿಗೆ ಮತ್ತು ಇಲ್ಲಿಗೆ ಬಂದು ನೆಲೆವೂರಿ, ಇಲ್ಲಿಯೇ ಜೀವನ ಕಟ್ಟುವ ಜನರಿಗೆ ತಿಳಿಸಲೇಬೇಕು. ಕೇವಲ ಟ್ರಾಫಿಕ್ ಸಮಸ್ಯೆಯೊಂದನ್ನು ಹಿಡಿದು ಇಡಿ ಬೆಂಗಳೂರನ್ನು ಬಾಯಿಗೆ ಬಂದಂತೆ ಬೈಯುವ ಜನರಿಗೆ ಕಂಪೇಗೌಡರ ಪಾಠವನ್ನು ತಿಳಿಸಬೇಕಾಗುವ ಯೋಜನೆ ಮಾಡಿದರೆ ಒಳೆಯದು ಮತ್ತು ಕೆಂಪೇಗೌಡ ಕಂಡ ಕನಸಿನ ಬೆಂಗಳೂರನ್ನು ಉಳಿಸುವ ಹೊಣೆಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕಾಗಿದೆ.
ಹೀಗಾಗಿ ಅತನನ್ನು ಒಂದು ಜಾತಿಗೆ ಸೀಮಿತ ಮಾಡದೆ ಸರ್ವಜನಾಂಗದ ದೊರೆ ಎಂದು ಅರಿತು ಕಾರ್ಯಕ್ರಮಗಳನ್ನು ಅಯೋಜಿಸುವ ಅವಶ್ಯಕತೆ ಇದೆ.
ಈಗ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗುತ್ತಿದೆ. ಈ ಸುಸಂರ್ಭದಲ್ಲಿೆ ಕೆಂಪೇಗೌಡರ ಜೀವನ ಮತ್ತು ಇತಿಹಾಸವನ್ನು ತಿಳಿಸುವ ವಿಚಾರಗಳನ್ನು ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಅಳವಡಿಸಿದರೆ ಇಂದಿನ ಯುವಪೀಳಿಗೆಗೆ ಕೊಡುಗೆಯನ್ನು ಕೊಟ್ಟಂತಾಗುತ್ತದೆ. ಅಲ್ಲದೆ ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಕಟ್ಟಡಗಳಲೂ ಹಿರಿಯ ಕೆಂಪೇಗೌಡರ ಭಾವಚಿತ್ರವನ್ನು ಅಳವಡಿಸಿದರೆ ಅವರ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ತಂದೆಯಂತೆಯೇ ಮಗ ಎರಡನೇ ಕೆಂಪೇಗೌಡರು ಸಹ ಅಷ್ಟೇ ವೈಜ್ಞಾನಿಕ ಮನೋಭಾವದೊಂದಿಗೆ ಬೆಂಗಳೂರನ್ನು ಮತ್ತಷ್ಟೂ ಅಧುನೀಕರಣಗೊಳಿಸಿದ್ದರು ಎಂಬುದು ಸಹ ನಾವೂ ಮರೆಯಲೇಬಾರದ ಐತಿಹಾಸಿಕ ಸಂಗತಿ.
✍️ಹರ್ಷ ಸಮೃದ್ಧ
ಲೇಖಕರು, ಪ್ರಕಾಶಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.