ಕೋಟ : ಅನಿಧಿಷ್ಟವಧಿ ವಿದ್ಯುತ್ ಕಡಿತದ ವಿರುದ್ಧ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕರು ಸಾಲಿಗ್ರಾಮದಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು ಹಾಗೂ ಕೋಟ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಜಯಕರ್ನಾಟಕ ಉಡುಪಿ ಜಿಲ್ಲೆ, ಸಾಲಿಗ್ರಾಮ ಮತ್ತು ಸಾಸ್ತಾನ ಘಟಕ ಆಶ್ರಯದಲ್ಲಿ ಪರಿಸರದ ಅನೇಕ ಸಂಘಟನೆಗಳ ಸಹಕಾರದೊಂದಿಗೆ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ವಿದ್ಯುತ್ ಕಡಿತದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲೆಯಾದ್ಯಂತ ಹೋರಾಟ.ಬಿಲ್ ಪಾವತಿಗೆ ನಕಾರ ಆಂದೋಲನ : ಯಾವುದೇ ಸೂಚನೆ ನೀಡದೆ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಸಂಘಟನೆ ವತಿಯಿಂದ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಹಾಗೂ ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸುವ ಅಂದೋಲನ ಕೈಗೊಳ್ಳಲಾಗುವುದು ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ತಿಳಿಸಿದರು. ವಿದ್ಯುತ್ ನೀಡಿಕೆಯಲ್ಲಿ ಗ್ರಾಮೀಣ ಭಾಗಕ್ಕೆ ತಾರತಮ್ಯ ಮಾಡಬಾರದು ಹಾಗೂ ವಿದ್ಯುತ್ ನಿಲುಗಡೆಯ ಕುರಿತು ಪೂರ್ವ ಮಾಹಿತಿ ನೀಡಬೇಕು ಎಂದು ಜಯ ಕರ್ನಾಟಕ ಸಾಲಿಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಗಾಣಿಗ ತಿಳಿಸಿದರು.
ಪ್ರತಿಭಟನೆಗೆ ಮುನ್ನ ಮಾಬುಕಳ ಬಸ್ಸು ನಿಲ್ದಾನದಿಂದ ಸಾಲಿಗ್ರಾಮದವರೆಗೆ ವಾಹನ ಜಾಥ ನಡೆಯಿತು. ಅನಂತರ ಸಾಲಿಗ್ರಾಮದಿಂದ ಕೋಟದವರೆಗೆ ಪಂಜಿನ ಮೆರವಣಿಗೆಯಲ್ಲಿ ಸಾಗಿ ಕೋಟ ಮೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು. ಜಿಲ್ಲಾ ಜಯಕರ್ನಾಟಕ ಸಂಘಟನೆಯ ಗೌರವ ಸಲಹೆಗಾರ ಬಿ.ಸುಧಾಕರ ರಾವ್, ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಸಾಸ್ತಾನ ಘಟಕದ ಅಧ್ಯಕ್ಷ ಪ್ರತಾಪ್ ಶೆಟ್ಟಿ ಪ್ರತಿಭಟನಾ ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.
ಜಯ ಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಮಾಧ್ಯಮ ವಕ್ತಾರ ಎಸ್.ಎಸ್ ತೋನ್ಸೆ, ಉಡುಪಿ ತಾಲೂಕು ಅಧ್ಯಕ್ಷ ನಿರಂಜನ್ ಹೆಗ್ಡೆ, ಕುಂದಾಪುರ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ, ಸಾಲಿಗ್ರಾಮ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸತೀಶ್ ಮರಕಾಲ, ಕೋಟ ಪಾಂಚಜನ್ಯ ಸಂಘಟನೆಯ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಸಾಲಿಗ್ರಾಮ ಘಟಕದ ಕಾರ್ಯಾಧ್ಯಕ್ಷ ನಾಗೇಶ್ ಆಚಾರ್, ಕಾರ್ಯದರ್ಶಿ ಸಂಪತ್ ಕುಮಾರ್, ಸಾಸ್ತಾನ ಘಟಕದ ಕಾರ್ಯದರ್ಶಿ ಸಹದೇವ ಪೂಜಾರಿ, ಪ.ಪಂ.ಸದಸ್ಯ ಶಿವ ಪೂಜಾರಿ, ಸಂಘಟನೆಯ ರಮೇಶ ಮೆಂಡನ್ ಮುಂತಾದವರು ಉಪಸ್ಥಿತರಿದ್ದರು. ಮೆಸ್ಕಾಂ ಸಹಾಯಕ ಕಾರ್ಯಕಾರಿ ಅಭಿಯಂತರ ಪ್ರಶಾಂತ್ ಪುತ್ರನ್ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಸಹಾಯಕ ಅಭಿಯಂತರ ಗುರುಪ್ರಸಾದ್, ಕಿರಿಯ ಅಭಿಯಂತರ ಸುಧೀಂದ್ರ ವೈಭವ ಶೆಟ್ಟಿ, ಮೇಲ್ವಿಚಾರಕ ಚಂದ್ರ ಉಪಸ್ಥಿತರಿದ್ದರು. ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ ಅವರ ನೇತƒತ್ವದಲ್ಲಿ ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.