ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಸೆಪ್ಟೆಂಬರ್ 27 ರಂದು ಈ ದಿನವನ್ನು ಆಚರಿಸಲಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ (UNWTO) ಆಚರಿಸಿತು. ಅನೇಕ ದೇಶಗಳ ಪ್ರವಾಸೋದ್ಯಮ ಮಂಡಳಿಗಳು ತಮ್ಮ ನಗರಗಳು, ರಾಜ್ಯಗಳು ಅಥವಾ ದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಕರ್ಷಕ ಕೊಡುಗೆಗಳನ್ನು ನೀಡುವುದರೊಂದಿಗೆ ಈ ದಿನವನ್ನು ಆಚರಿಸುತ್ತವೆ.
ಈ ವರ್ಷದ ಥೀಮ್ ” ಪ್ರವಾಸೋದ್ಯಮವನ್ನು ಪುನರ್ವಿಮರ್ಶಿಸುವುದು” ಎಂಬುದಾಗಿದೆ. ಶಿಕ್ಷಣ ಮತ್ತು ಉದ್ಯೋಗಗಳ ಮೂಲಕ ಅಭಿವೃದ್ಧಿಗಾಗಿ ಪ್ರವಾಸೋದ್ಯಮವನ್ನು ಪುನರ್ವಿಮರ್ಶಿಸುವುದು. ಭೂಮಿ ಮೇಲೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಅದನ್ನು ಹೆಚ್ಚು ಸಮರ್ಥನೀಯವಾಗಿ ಬೆಳೆಸುವ ಅವಕಾಶಗಳನ್ನು ಸೃಷ್ಟಿಸುವುದು ಇದರ ಗುರಿಯಾಗಿದೆ.
ಪ್ರವಾಸೋದ್ಯಮ ಅತ್ಯುತ್ತಮ ಉದ್ಯೋಗ ಅವಕಾಶಗಳನ್ನು ಒದಗಿಸುವ ವಲಯವೂ ಆಗಿದೆ. ಒಂದು ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳೆದರೆ ಅಲ್ಲಿ ನೂರಾರು ಮಂದಿಗೆ ಜೀವನೋಪಾಯ ದೊರೆಯುತ್ತದೆ. ಅಂಗಡಿ ಮುಂಗಟ್ಟುಗಳು ತಲೆ ಎತ್ತುತ್ತವೆ. ರೆಸಾರ್ಟ್, ಉಪಹಾರ ಗೃಹಗಳು ತೆರೆಯಲ್ಪಡುತ್ತದೆ. ಇದರಿಂದ ಆ ಇಡೀ ಪ್ರದೇಶವೇ ಅಭಿವೃದ್ಧಿಯಾಗುತ್ತದೆ.
ಕೊರೋನಾ ಮಹಾಮಾರಿ ಜಗತ್ತನ್ನು ಅಪ್ಪಳಿಸಿದ ಬಳಿಕ ಪ್ರವಾಸೋದ್ಯಮ ನೆಲಕಚ್ಚಿತ್ತು. ಇದರಿಂದ ಪ್ರವಾಸೋದ್ಯಮವನ್ನೇ ನಂಬಿದ್ದ ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್ ಮುಂತಾದ ರಾಷ್ಟ್ರಗಳು ಹೆಚ್ಚು ತೊಂದರೆಗೀಡಾದವು. ಇದೀಗ ಮತ್ತೆ ಜಗತ್ತಿನಲ್ಲಿ ಪ್ರವಾಸೋದ್ಯಮ ಮತ್ತೆ ಚಿಗುರತೊಡಗಿದೆ.
ಪ್ರವಾಸ ಎಂಬುದು ಕೇವಲ ತಿರುಗಾಟವಲ್ಲ ಅದು ಅನುಭವವನ್ನು ಗಳಿಸುವ ಮಹತ್ವದ ಅವಕಾಶ. ಹೆಚ್ಚು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿದಂತೆ ನಮ್ಮ ಅನುಭವಗಳು, ಚಿಂತನೆಗಳು, ಜ್ಞಾನ ಭಂಡಾರಗಳು ವೃದ್ಧಿಯಾಗುತ್ತದೆ. ಇನ್ನೊಬ್ಬರ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ತಿಳಿದುಕೊಳ್ಳವ ಅವಕಾಶ ಸಿಗುತ್ತದೆ. ಪ್ರತಿಯೊಂದು ಐತಿಹಾಸಿಕ ಸ್ಥಳಗಳಲ್ಲಿ ಗತ ಇತಿಹಾಸದ ವೈಭವ ಅಡಗಿರುತ್ತದೆ, ಪ್ರತಿ ಪ್ರದೇಶದ ಮಣ್ಣಲ್ಲೂ ಅಲ್ಲಿನ ಸಂಸ್ಕೃತಿಯ ಘಮ ಇರುತ್ತದೆ. ಅದನ್ನು ಆಸ್ವಾದಿಸಬೇಕು ಮತ್ತು ಅನುಭವಿಸಬೇಕು ಎಂದರೆ ಅದಕ್ಕೆ ಪ್ರವಾಸ ಹೊರಡಬೇಕು. ಪ್ರವಾಸ ಸಿರಿವಂತರಿಗೆ ಮಾತ್ರ ಎಂಬ ಭಾವನೆ ಇದೆ. ಆದರೆ ಒಂದಿಷ್ಟು ಹಣವನ್ನು ಕೂಡಿಟ್ಟು ಕಡಿಮೆ ಖರ್ಚಿನ ಮಾರ್ಗಗಳನ್ನು ಹುಡುಕಿ ಅತ್ಯುತ್ತಮ ಸ್ಥಳಗಳನ್ನು ವೀಕ್ಷಣೆ ಮಾಡಬಹುದು. ಮನಸ್ಸಲ್ಲಿ ಇಚ್ಛೆ ಇದ್ದರೆ ಯಾವುದೂ ಅಸಾಧ್ಯವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.