ಪರಕೀಯ ಪ್ರಜ್ಞೆಯಿಂದ ನರಳುವ, ವಸಾಹತುಶಾಹಿ ಮಾನಸಿಕತೆಯ, ಆತ್ಮಗ್ಲಾನಿಗೆ ಒಳಗಾದ , ಅವಕಾಶವಾದಿಗಳಾದ ನಾಯಕರ, ಇತಿಹಾಸಗಾರರ, ಸಾಹಿತಿಗಳ, ಕವಿಗಳ , ರಾಜಕಾರಣಿಗಳ ಹೀಗೆ ಅನೇಕರ ಪ್ರಭಾವಕ್ಕೆ ಒಳಗಾಗಿ ಈ ಭವ್ಯ ರಾಷ್ಟ್ರದ ಪ್ರಜೆಗಳ ಮನದಲ್ಲಿ ” ತನ್ನ ಪೂರ್ವಜರು ತನ್ನ ರಾಷ್ಟ್ರಕ್ಕಾಗಿ, ತನ್ನ ಸಂಸ್ಕೃತಿಗಾಗಿ ವೀರಭಾವದಿಂದ ಎದ್ದು ನಿಂತುದೇ ತೀರ ವಿರಳ” ಎಂಬ ಬೌದ್ಧಿಕ ವಿಸ್ಮೃತಿಯ ಆಖ್ಯಾನವನ್ನು ವ್ಯವಸ್ಥಿತವಾಗಿ ಸ್ವಾತಂತ್ರ್ಯ ನಂತರ ನಿರ್ಮಿಸಲಾಯಿತು. ಈ ಬೂಟುನೆಕ್ಕುವ ಮನಸ್ಥಿತಿಯನ್ನು ತೊಳೆದು ರಾಷ್ಟ್ರಜಾಗೃತಿಯ ಕಾರ್ಯವನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ಕಳೆದ ಎಂಟು ವರುಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಕಳೆದ ಆ.15 ರ ಸ್ವಾತಂತ್ರ್ಯ ದಿನೋತ್ಸವದಂದು ತಮ್ಮ ಭಾಷಣದಲ್ಲಿ ವಸಾಹತುಶಾಹಿ ಗುರುತುಗಳನ್ನು ಅಳಿಸುವ ಪಣ ತೊಡಲು ಕರೆ ನೀಡಿದ್ದರು.
ಕಳೆದ ಒಂದು ವಾರದೊಳಗೆ ಎರಡೆರಡು ದಾಸ್ಯದ ಸಂಕೇತವನ್ನು ಕೇಂದ್ರ ಸರ್ಕಾರ ಕಿತ್ತುಬಿಸಾಡಿದೆ. ಮೊದಲನೆಯದ್ದು ಬಹು ದಶಕಗಳಿಂದ ಭಾರತೀಯ ನೌಕಾಪಡೆಯ ಲಾಂಛನದ ಭಾಗವಾಗಿದ್ದ ಕೆಂಪು ಬಣ್ಣದ ಸೇಂಟ್ ಜಾರ್ಜ್ ಕ್ರಾಸ್ ಅನ್ನು ತೆಗೆದು ಅಷ್ಟಭುಜಾಕೃತಿಯನ್ನು ಸೇರಿಸಿದ್ದು . ಮುನ್ನಲೆಯಲ್ಲಿ ಇದು ಕೇವಲ ಲಾಂಛನದ ಬದಲಾವಣೆ ಆಗಿದ್ದರೆ, ಹಿನ್ನಲೆಯಲ್ಲಿ ಅಗಾಧ ತಾತ್ಪರ್ಯವನ್ನು ಈ ಅಷ್ಟಭುಜಕೃತಿ ಒಳಗೊಂಡಿದೆ. ಈಗ ಆಯ್ಕೆ ಮಾಡಿಕೊಂಡಂತಹಾ ಲಾಂಛನ ಯುಗಪುರುಷ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯ ಭಾಗವಾಗಿತ್ತು. ಶಿವಾಜಿ ಮಹಾರಾಜರ ರಾಜಮುದ್ರೆ ” ಶುಕ್ಲಪಕ್ಷದ ಚಂದ್ರನಂತೆ , ಸ್ವರಾಜ್ಯ ವಿಸ್ತರಣೆಯಾಗುತ್ತಾ ಹೋಗುತ್ತದೆ . ಶಹಾಜಿಯ ಮಗ ಶಿವಾಜಿಯು ಪ್ರಜೆಗಳ ಕಲ್ಯಾಣವನ್ನು ಬಯಸುತ್ತಾನೆ ” ಎನ್ನುವ ಮರಾಠಿ ವಾಕ್ಯಗಳನ್ನು ಒಳಗೊಂಡ ಅಷ್ಟಭುಜಾಕೃತಿ ಆಗಿತ್ತು. ಒಂದು ಕಡೆಯಲ್ಲಿ ವಸಾಹತುಶಾಹಿಯನ್ನು ಅಳಿಸುವ ಪ್ರಯತ್ನವಾದರೆ , ಇನ್ನೊಂದೆಡೆ ಭಾರತದ ಕ್ಷಾತ್ರಪರಂಪರೆಯನ್ನು ನೆನಪಿಸಿ ಸ್ವರಾಜ್ಯಕ್ಕೆ ಬದುಕುವ ಭಾವದ ಜಾಗೃತಿ. ಯಾವ ನೌಕಾ ಶಕ್ತಿಯಿಂದ ಭಾರತ ಸಶಕ್ತವಾಗಿದೆಯೋ ಅಲ್ಲಿ ಯಾವುದೇ ಪರಕೀಯ ಭಾವನೆಗೆ ಜಾಗವಿಲ್ಲ. ಸ್ವರಾಜ್ಯಕ್ಕೆ ಹಾಗೂ ಸ್ವಧರ್ಮ ರಕ್ಷಣೆಗೆ ತನ್ನ ಜೀವನ ಸವೆಸಿದ , ರಾಷ್ಟ್ರಭಕ್ತರ ಆರಾಧ್ಯದೈವವಾದ ಛತ್ರಪತಿ ಶಿವಾಜಿಯ ಶೌರ್ಯಗಾಥೆಯನ್ನು ನೆನಪಿಸಿ , ಸ್ಮರಿಸಿ , ಅದನ್ನೇ ಜೀವನ ಕ್ರಮವಾಗಿಸುವ ಬಗೆಯಿದು. ಯಾವ ಪರಕೀಯರು ಸಮುದ್ರದ ಮುಖಾಂತರ ಭಾರತವನ್ನು ದಾಸ್ಯದ ಕೊಂಡಿಗೆ ನೂಕಲು ಬರುತಿದ್ದರೋ , ಅದೇ ಸಮುದ್ರವನ್ನು ಶಕ್ತಿಯನ್ನಾಗಿಸಿ 60ಕ್ಕಿಂತ ಹೆಚ್ಚು ಯುದ್ಧ ನೌಕೆಗಳು ಹಾಗೂ 5000ಕ್ಕಿಂತ ಹೆಚ್ಚು ಸೈನಿಕರ ಸೈನ್ಯವನ್ನು ಕಟ್ಟಿ ಭಾರತದ ನೌಕಾ ಪಿತಾಮಹ ಛತ್ರಪತಿ ಶಿವಾಜಿ ಮಹಾರಾಜರಿಗೆ ಈ ಗೌರವ ಕೊಡದೆ ,
ಕಳೆದ 75 ವರ್ಷಗಳಿಂದ ಯಾರೋ ಪರಕೀಯರ ಸೇಂಟ್ ಜಾರ್ಜ್ ಕ್ರಾಸ್ ಹಾಕಿದರೆ ಎಲ್ಲಿಂದ ಸ್ವಾಮಿ ರಾಷ್ಟ್ರಭಕ್ತಿ ಉದ್ದೀಪನಗೊಳ್ಳಬೇಕು. ಒಬ್ಬ ಧ್ಯೇಯ ಜೀವಿಯ ಕುರುಹು ಮುಂದೆ ಚಿಂತನೆಗೆ ಮಾರ್ಗ ಮಾಡಿಕೊಳ್ಳುತ್ತದೆ, ಚಿಂತನೆ ಓದಿಗೆ ಪ್ರೇರೇಪಿಸುತ್ತದೆ ,ಓದು ಆಲೋಚನೆಗೆ ಮುನ್ನುಡಿಯಿಡುತ್ತದೆ , ಕೊನೆಗೆ ಈ ಬೌದ್ಧಿಕ ಸಂಪತ್ತು ರಾಷ್ಟ್ರದ ಅಭ್ಯುದಯಕ್ಕೆ ಕಾರಣೀಭೂತವಾಗುತ್ತದೆ. ಇದನ್ನೇ ನೌಕಾಪಡೆ ಹೊಸ ಲಾಂಛನದ ಬಿಡುಗಡೆ ದಿನ ಹೇಳಿದ್ದು ” ಎರಡು ಚಿನ್ನದ ಬಣ್ಣದ ಬಾರ್ಡರ್ ನ ಅಷ್ಟಭುಜಕೃತಿಯು ಭಾರತದ ಮಹಾ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಅವರಿಂದ ಸ್ಫೂರ್ತಿ ಪಡೆದಿದೆ. ಸಮುದ್ರ ಸುರಕ್ಷತೆ ಕಡೆಗಿನ ಅವರ ದೃಷ್ಟಿಕೋನವು ವಿಶ್ವಾಸಾರ್ಹ ನೌಕಾ ಸಾಧನೆಯನ್ನು ಸಾಧ್ಯವಾಗಿಸಿತ್ತು”.
ಇನ್ನೊಂದು ಪ್ರಧಾನಮಂತ್ರಿಗಳ ಪಂಚಪ್ರಾಣದ ಅಂಗವಾದ ರಾಜಪಥ ರಸ್ತೆಯು ಕರ್ತವ್ಯ ಪಥವಾದದ್ದು. 1911 ರಲ್ಲಿ ಐದನೇ ಕಿಂಗ್ ಜಾರ್ಜ್ ದೆಹಲಿಯ ದರ್ಬಾರಿಗೆ ಬಂದ ಎನ್ನುವ ಒಂದೇ ಕಾರಣಕ್ಕೆ ರಸ್ತೆಗೆ ಕಿಂಗ್ಸ್ ವೇ ಎನ್ನುವುದಾಗಿ ನಾಮಕರಣ ಮಾಡಲಾಯಿತು. ಸ್ವಾತಂತ್ರ್ಯ ನಂತರವೂ ಅದು ಹಿಂದಿ ಆವೃತ್ತಿಯ ರಾಜಪಥವಾಯಿತು. ಈ ವಸಾಹತುಶಾಹಿ ವಿಸ್ಮೃತಿಯನ್ನು ತೊಡೆದುಹಾಕಲು ಇಂದು ಕರ್ತವ್ಯಪಥವಾಗಿ ನಮ್ಮ ಮುಂದೆ ಮರುನಾಮಕರಣಕೊಂಡಿದೆ. ದೇಶಕ್ಕೆ 2047ಕ್ಕೆ ಸ್ವಾತಂತ್ರ್ಯ ಬಂದು ನೂರುವರ್ಷ ತುಂಬುವ ಹೊತ್ತಿಗೆ ನಮ್ಮ ಹಕ್ಕುಗಳ ಜೊತೆಗೆ ದೇಶದೆಡೆಗೆ ನಮ್ಮ ಕರ್ತವ್ಯವನ್ನು ನೆರೆವೇರಿಸುವ ಪ್ರಧಾನಮಂತ್ರಿಗಳ ಚಿಂತನೆಯ ಒಂದು ಭಾಗ ಈ ಕರ್ತವ್ಯಪಥ. ಕೇವಲ ‘Right to rule ‘ ನಮ್ಮ ಸಂಸ್ಕೃತಿಯಲ್ಲ ‘ Duty to work ‘ ಕೂಡ ಎನ್ನುವ ಗುರಿ ನಮ್ಮದಾಗಲಿ.
ನಮ್ಮ ಪ್ರತಿಯೊಂದು ಚಿಂತನೆ ರಾಷ್ಟ್ರದ ಏಳ್ಗೆಗೆ ಪೂರಕವಾಗಿರಲಿ. ಯಾವ ರಾಷ್ಟ್ರ ಸ್ವಾಭಿಮಾನವನ್ನು ಕಳೆದುಕೊಂಡಿದೆಯೂ ಅದು ಏನೇನು ಸಾಧಿಸಲು ಸಾಧ್ಯವಿಲ್ಲ ಎನ್ನುವ ವಿಚಾರ ಮಂಥನಗೈದು, ಹೀನಾಯ – ಅಸಡ್ಡೆಗಳನ್ನು ಸಹಿಸಿದೆವು ಬಹುಕಾಲ , ಇನ್ನೇನಿದ್ದರೂ ಕೇವಲ ಜಗತ್ತಿಗೆ ಬೆಳಕ ನೀಡುವ ಭಾರತ ರಾಷ್ಟ್ರದ ಪುನರ್ವೈಭವದ ಗುರಿ.
ಜೈ ಹಿಂದ್
✍️ಕೌಶಿಕ್ ಗಟ್ಟಿಗಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.