ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಪೂರ್ಣಗೊಳ್ಳುತ್ತಿದ್ದಂತೆ ಸ್ವತಂತ್ರ ಭಾರತದ ಇತಿಹಾಸದಲ್ಲಿನ ಇನ್ನೊಂದು ಮಹತ್ವದ ಬಿಡುಗಡೆಯ ಹೋರಾಟದ ಅಮೃತ ಮಹೋತ್ಸವದ ಆಚರಣೆಗೆ ದೇಶ ಅಣಿಗೊಳ್ಳುತ್ತಿದೆ. 1947 ರ ಆಗಸ್ಟ್ 15ರಂದು ದೇಶಾದ್ಯಂತ ಜನರು ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಬಿಡುಗಡೆಗೊಂಡ ಸಂಭ್ರಮದಲ್ಲಿದ್ದರೆ, ಭಾರತದ ಭಾಗವೇ ಆಗಿದ್ದ ಹೈದರಾಬಾದ್ನ ನಿಜಾಮನ ಸಂಸ್ಥಾನದ ಜನರು ಪಾಶವೀ ಆಡಳಿತಗಾರನ ಹಿಡಿತಕ್ಕೆ ಸಿಲುಕಿ ಕಣ್ಣೀರು ಸುರಿಸುತ್ತಾ ತಮ್ಮ ಬಿಡುಗಡೆಯ ಕ್ಷಣಕ್ಕಾಗಿ ಎದುರು ನೋಡುತ್ತಿದ್ದರು. ಬ್ರಿಟಿಷರು ಸ್ವಾತಂತ್ರ್ಯ ಘೋಷಣೆ ಮಾಡುತ್ತಲೇ ಅದು ನಮ್ಮ ಪಾಲಿಗೆ ಸೂತಕವೂ ಆಯಿತು. ಒಂದೆಡೆ ಭಾರತ ಇಬ್ಬಾಗವಾದರೆ, ಇನ್ನೊಂದೆಡೆ ಕುತಂತ್ರಿ ಬ್ರಿಟಿಷರು ಭಾರತದೊಳಗಿನ ಸಂಸ್ಥಾನಗಳಿಗೆ ಭಾರತದೊಂದಿಗೆ ವಿಲೀನಗೊಳ್ಳುವ ಅಥವಾ ಸ್ವತಂತ್ರ ರಾಜ್ಯವೇ ಆಗಿರುವ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದನ್ನೇ ಅವಕಾಶ ಮಾಡಿಕೊಂಡ ಹೈದರಾಬಾದಿನ ನಿಜಾಮ ಉಸ್ಮಾನ್ ಆಲಿಖಾನ್ ತಾನು ಸ್ವತಂತ್ರ ಭಾರತದೊಂದಿಗೆ ವಿಲೀನಗೊಳ್ಳದೆ ತಾನೇ ಪ್ರತ್ಯೇಕ ರಾಜ್ಯವಾಗಿ ಉಳಿಯುವ ಘೋಷಣೆಯನ್ನು ಮಾಡಿದ್ದು ಈ ಸಂಸ್ಥಾನದ ಜನರ ಕಣ್ಣೀರಿಗೆ ಕಾರಣವಾಗಿತ್ತು. ಸ್ವಾತಂತ್ರ್ಯದ ಕನಸು ಕಂಡಿದ್ದ ಜನ ನಿರಾಶೆಯ ನಡುವೆಯೂ ಮತ್ತೊಮ್ಮೆ ಬಿಡುಗಡೆಯ ಹೋರಾಟಕ್ಕೆ ದುಮುಕಿದರು. ಹೈದರಾಬಾದ್ ಸಂಸ್ಥಾನದಲ್ಲಂದು ವಂದೇ ಮಾತರಂ ಗೀತೆಯನ್ನು , ಭಾರತದ ತ್ರಿವರ್ಣ ದ್ವಜವನ್ನು ಹಾಗೂ ರಾಷ್ಟ್ರೀಯ ಕಾಂಗ್ರೇಸನ್ನು ನಿಷೇದಿಸಲಾಗಿತ್ತು. ಅಂತಹ ನಿಷೇಧವನ್ನು ಸ್ವಾಭಿಮಾನಿ ಭಾರತೀಯರು ಅಂದು ದಿಕ್ಕರಿಸಿ ಹೋರಾಟಕ್ಕೆ ಪಣತೊಟ್ಟರು. ಆರ್ಯ ಸಮಾಜದ ನೇತೃತ್ವದಲ್ಲಿ ನಡೆದ ವಂದೇ ಮಾತರಂ ಚಳವಳಿಯೂ ಸೇರಿದಂತೆ ಸಂಸ್ಥಾನದಾದ್ಯಂತ ನಡೆಯುತ್ತಿದ್ದ ಹೋರಾಟಗಳು ಜನಜಾಗೃತಿಯನ್ನು ಮಾಡುತ್ತಿತ್ತು.
ಒಂದೆಡೆ ನಿಜಾಮನ ಆಡಳಿತಾತ್ಮಕ ದಬ್ಬಾಳಿಕೆಯಾದರೆ, ಇನ್ನೊಂದೆಡೆ ನಿಜಾಮನ ಬೆಂಬಲದೊಂದಿಗೆ ಕಾಸಿಂ ರಜ್ವಿಯ ನೇತೃತ್ವದ ರಝಾಕಾರರೆಂಬ ಮತೀಯ ಮೂಲಭೂತವಾದಿಗಳು ಸಂಸ್ಥಾನದಾದ್ಯಂತ ನಡೆಸಿದ ಲೂಟಿ, ಅನ್ಯಾಯ, ಅತ್ಯಾಚಾರದಂತಹ ಅಮಾನುಷ ಕೃತ್ಯಗಳು ಹಿಂದುಗಳನ್ನು ದಮನಿಸುವ ಪ್ರಯತ್ನವಾಗಿತ್ತು.ಇದರ ಭಾಗವಾಗಿಯೇ ಹಿಂದುಗಳನ್ನು ಬಲವಂತವಾಗಿ ಮತಾಂತರಿಸುವ, ಒಪ್ಪದೇ ಹೋದವರನ್ನು ಹತ್ಯೆಗೈಯುವ, ಹಳ್ಳಿ ಹಳ್ಳಿಗಳಿಗೆ ನುಗ್ಗಿ ಸಂಪತ್ತನು ಲೂಟಿ ಮಾಡುವ, ಮನೆಯ ಹೆಣ್ಣು ಮಕ್ಕಳನು ಅತ್ಯಾಚಾರಗೈಯ್ದು ಪ್ರತಿರೋಧದ ಎಲ್ಲಾ ಧ್ವನಿಗಳನ್ನೂ ಮಟ್ಟ ಹಾಕಲಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ಹಿಂದುಗಳು ಗುಲಾಮರಾಗಿ ಮಾತ್ರ ಬದುಕಬಹುದೇ ಹೊರತು ಯಾವ ಗೌರವದ ಬದುಕೂ ಸಿಗಲಾರದ ಸ್ಥಿತಿಯಿತ್ತು. ಇಷ್ಟೆಲ್ಲಾ ದರ್ಪ – ದೌರ್ಜನ್ಯಗಳ ನಡುವೆಯೂ ಇಲ್ಲಿನ ಜನ ಹೈದರಾಬಾದ್ ಸಂಸ್ಥಾನ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಘಂಟಾಘೋಷವಾಗಿ ಸಾರಿ ಹೇಳಿದರು. ಅದಕ್ಕಾಗಿ ಹೋರಾಡಿದರು, ಹುತಾತ್ಮರಾದರು. ವಿಲೀನಕ್ಕಾಗಿ ಒತ್ತಾಯಿಸಿದ ಸತ್ಯಾಗ್ರಹಿಗಳ ಮೇಲೆ ಅಂದು ಕ್ರೂರ ದೌರ್ಜನ್ಯಗಳನ್ನು ನಡೆಸಲಾಗುತ್ತಿತ್ತು. ರಝಾಕಾರರ ಪಡೆ ಸತ್ಯಾಗ್ರಹಿಗಳ ಮನೆಯ ಮೇಲೆ ದಾಳಿ ನಡೆಸುವುದು, ಮನೆಗಳಿಗೆ ಬೆಂಕಿ ಹಚ್ಚುವುದು, ಮಾನಭಂಗ ಮಾತ್ರವಲ್ಲದೆ ಎಳೆಯ ಮಕ್ಕಳನ್ನೂ ಬಿಡದೆ ಕತ್ತರಿಸಿ ಹಾಕಿದ ನೂರಾರು ಘಟನೆಗಳು ಚರಿತ್ರೆಯಲ್ಲಿ ದಾಖಲಾಗಿದೆ. ಬಹುಶಃ ಇಷ್ಟೋಂದು ಭೀಕರ ಘಟನೆಗಳು ಭಾರತದ ಸ್ವಾತಂತ್ರ್ಯದ ಸಂಗ್ರಾಮದಲ್ಲೇ ನಡೆದಿರಲಾರದು. ಅಂತಹ ಸಂದರ್ಭದಲ್ಲಿ ಹಳ್ಳಿಯ ಜನರು ಭಯಭೀತರಾಗಿ ಊರು ತೊರೆದು ವಲಸೆಹೋಗಲಾರಂಭಿಸಿದಾಗ, ಜನರಿಗೆ ನೈತಿಕ ಸ್ಥೈರ್ಯವನ್ನು ತುಂಬಿ, ಹೋರಾಟದ ಕೆಚ್ಚನ್ನು ತುಂಬಲು ಅನೇಕ ಮಹನೀಯರು ತಾವೇ ಸ್ವತಃ ರಝಾಕಾರರ ವಿರುದ್ಧ ಹೋರಾಡುವ ತರುಣ ಪಡೆಗಳನ್ನು ಸಿದ್ಧಪಡಿಸಿ ಅವರಿಗೆ ಸೈನಿಕ ತರಭೇತಿ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು. ಊರುಗಳ ಮೇಲೆ ದಾಳಿಯಾದಾಗ ಇದೇ ತಂಡ ಪ್ರತಿದಾಳಿಯನ್ನು ಮಾಡುವ ಮೂಲಕ ರಝಾಕರರನ್ನು ಹಿಮ್ಮೆಟ್ಟಿಸುತ್ತಿದ್ದುದು ಸಾಹಸಮಯ ಹೋರಾಟಗಳಳ್ಲೊಂದಾಗಿದೆ. ನಿಶ್ಯಸ್ತ್ರರಾದ ಅಮಾಯಕ ಜನರ ಮೇಲೆ ದಾಳಿ ಮಾಡಿ ಹತ್ಯೆಗೈಯುವ ರಝಾಕಾರರ ಕ್ರೌರ್ಯದ ಅಟ್ಟಹಾಸಕ್ಕೊಂದು ಉದಾಹರಣೆಯಾಗಿ ಬೀದರ್ ಜಿಲ್ಲೆಯ ಗೋರಟಾ ಹಾಗೂ ಮುಚಳಂಬಿ ಗ್ರಾಮಗಳಲ್ಲಿ ನಡೆಸಿದ ಹಿಂಸೆಯೊಂದೇ ಸಾಕು. ಈ ಗ್ರಾಮದಲ್ಲಿ ನಡೆದ ಅಮಾನವೀಯ ಅಟ್ಟಹಾಸದ ದಾಳಿಯಲ್ಲಿ ಸುಮಾರು 200ಕ್ಕೂ ಅಧಿಕ ಜನರನ್ನು ದಾರುಣವಾಗಿ ಹತ್ಯೆಗೈಯಲಾಗಿತ್ತು. ಪ್ರಾಣ ಕಳೆದುಕೊಂಡ ಜಾನುವಾರುಗಳು, ಬೆಂಕಿಗಾಹುತಿಯಾದ ಬೆಳೆ, ಸುಟ್ಟುಹೋದ ಮನೆಗಳ ಸಂಖ್ಯೆಗೆ ಇಲ್ಲಿ ಲೆಕ್ಕವಿಲ್ಲ. ಮನೆಗಳಿಗೆ ಹಚ್ಚಿದ ಬೆಂಕಿಯಲ್ಲಿ ಮಕ್ಕಳು ಮಹಿಳೆಯರೆನ್ನದೆ ಜನ ಸುಟ್ಟು ಕರಕಲಾಗಿ ಹೋದರು. ಈ ಘಟನೆ ಜಲಿಯನಾವಾಲಾ ಬಾಗ್ನಲ್ಲಿ ನಡೆದ ಹತ್ಯಾಕಾಂಡಕ್ಕಿಂತ ಯಾವ ಪ್ರಮಾಣದಲ್ಲೂ ಕಡಿಮೆ ಏನಲ್ಲ. ಕಲ್ಯಾಣ ಕರ್ನಾಟಕ, ಮಹರಾಷ್ಟ್ರದ ಮರಾಠವಾಡ, ಇಂದಿನ ತೆಲಂಗಾಣದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಇಂತಹ ಸಾವಿನ ಅಟ್ಟಹಾಸವೇ ನಡೆದಿದೆ. ದುರಂತತವೆಂದರೆ ನಮ್ಮ ಇತಿಹಾಸ ಇದೆಲ್ಲವನ್ನು ಮರೆತಿದೆ. ಇಷ್ಟೆಲ್ಲಾ ಕ್ರೌರ್ಯದ ನಡುವೆಯೇ ತನ್ನ ರಾಜ್ಯವನ್ನು ಸ್ವತಂತ್ರವಾಗಿ ಉಳಿಸಿಕೊಳ್ಳಲು ನಿಜಾಮ ವಿಶ್ವಸಂಸ್ಥೆಗೂ ದೂರು ದಾಖಲಿಸಿದ್ದ.
ಅಂತಿಮವಾಗಿ ಭಾರತ ಸರ್ಕಾರ ಈ ಎಲ್ಲಾ ಅನ್ಯಾಯದ ಆಡಳಿತಕ್ಕೊಂದು ಶಾಶ್ವತ ಅಂತ್ಯಹಾಡಲು ಯೋಜನೆ ರೂಪಿಸಿತು. ಒಂದೆಡೆ ವಿಶ್ವಸಂಸ್ಥೆಯ ಭಧ್ರತಾ ಸಭೆಯಲ್ಲಿ ವಿಚಾರಣೆ, ಚರ್ಚೆ ನಡೆಸುತ್ತಿದ್ದಂತೆ ಮೇಜರ್ ಜನರಲ್ ಜಿ.ಎನ್. ಚೌದರಿ ನೇತೃತ್ವದ ಸೇನೆ ಹೈದರಾಬಾದ್ಗೆ ಲಗ್ಗೆ ಇಟ್ಟಿತು. ನಿಜಾಮನ ಸೇನೆ ಹಾಗೂ ಕಾಸಿಂ ರಝ್ವಿಯ ರಝಾಕಾರರೆನ್ನುವ ಮತೀಯ ಸೈನಿಕರ ಪ್ರತಿರೋಧವನ್ನು ಭಾರತೀಯ ಸೇನೆ ಎದುರಿಸಬೆಕಾಗಿ ಬಂದಿತು. ಆದರೆ ಕೇವಲ 5 ದಿನಗಳ ಕಾರ್ಯಾಚರಣೆಯಲ್ಲಿ ಭಾರತದ ಸಾರ್ವಭೌಮತೆಗೆ ಸವಾಲಾಗಿ, ಪ್ರತ್ಯೇಕ ರಾಷ್ಟ್ರವೊಂದರ ವಿಷಬೀಜವಾಗಿ ಮೊಳಕೆಯೊಡೆಯುತ್ತಿದ್ದ ನಿಜಾಮನ ಪ್ರತ್ಯೇಕ ಸಾಮ್ರಾಜ್ಯದ ಮೊಳಕೆಯನ್ನು ಆತನ ಮುಂದೆಯೇ ಮಟ್ಟಹಾಕಲಾಯಿತು. ಯಾವ ನಿಜಾಮನು ಭಾರತದ ಸೌಹಾರ್ಧತೆಯ ಮಾತುಕತೆಗಳನ್ನು ದಿಕ್ಕರಿಸಿ , ಭೌಗೋಳಿಕವಾಗಿ ಭಾರತದ ಹೃದಯಭಾಗದಂತಿದ್ದ ಹೈದರಾಬಾದ್ ಮೂಲಕ ಪ್ರತ್ಯೇಕ ರಾಷ್ಟ್ರವೊಂದರ ಅಸ್ತಿತ್ವಕ್ಕೆ ಅಡಿಗಲ್ಲು ಹಾಕಹೊರಟಿದ್ದನೋ , ಅಂತಹ ನಿಜಾಮನು ಭಾರತದ ವೀರ ಸೈನಿಕರ ಗೆಲುವಿನೊಂದಿಗೆ ಸೋತು ಪ್ರಾಣಬಿಕ್ಷೆಯೊಂದಿಗೆ ಶರಣಾಗಿದ್ದ. ಸರ್ದಾರ್ ಪಟೇಲರ ನಾಯಕತ್ವದಲ್ಲಿ ನಡೆಸಿದ ಆಪರೇಷನ್ ಪೋಲೋ ಕೇವಲ ಐದು ದಿನಗಳಳ್ಳಿ ಮಟ್ಟಹಾಕಿದಾಗ ನಿಜಾಮನು ಶರಣಾಗಿ ವಿಲೀನ ಒಪ್ಪಂದಕ್ಕೆ ಸಹಿ ಮಾಡಬೇಕಾಯಿತು. ಸರ್ದಾರ್ ಪಟೇಲರ ಇಚ್ಛಾಶಕ್ತಿ ದೌರ್ಜನ್ಯಗಳಿಂದ ಕುಂದಿ ಹೋಗಿದ್ದ ಈ ನಾಡಿನ ಜನರ ನೋವನ್ನು ಕೊನೆಗೊಳಿಸಿತು.
1948, ಸೆಪ್ಟಂಬರ್ 17ರಂದು ಹೈದರಾಬಾದ್ ಸಂಸ್ಥಾನ ಸ್ವತಂತ್ರ ಭಾರತದ ಭಾಗವಾಯಿತು. ಈ ಭಾಗದ ಜನ ಸ್ವಾತಂತ್ರ್ಯದ ಸವಿಯನ್ನು ಅಂದು ಸಂಭ್ರಮಿಸಿದರು. ಭಾರತ ಸ್ವತಂತ್ರವಾದ ಒಂದು ವರ್ಷ ಒಂದು ತಿಂಗಳ ಬಳಿಕ ಹೈದರಾಬಾದ್ ಸಂಸ್ಥಾನದ ಜನರ ಗುಲಾಮಿತನದ ಕಳಂಕವನ್ನು ನಿವಾರಿಸಿತು. ಈ ಸ್ವಾತಂತ್ರ್ಯದ ಸಂಭ್ರಮಕ್ಕೆ ಎಪ್ಪತ್ತೈದು ವರ್ಷಗಳು ತುಂಬುತ್ತಿದೆ. ಈ ಆಚರಣೆ ಕೇವಲ ಒಂದು ದಿನದ ನೆನಪಿಗಷ್ಟೇ ಸೀಮಿತವಾಗದೆ, ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾಗ ಇಡೀ ದೇಶವೇ ಈ ಸಂಭ್ರಮದಲ್ಲಿ ಭಾಗಿಯಾಗಿ ಹೇಗೆ ವರ್ಷವಿಡೀ ನಾನಾ ಕಾರ್ಯಕ್ರಮಗಳ ಮೂಲಕ ಹೋರಾಟಗಾರರನ್ನು, ಹುತಾತ್ಮರನು ಸ್ಮರಿಸುವ ನೂರಾರು ಕಾರ್ಯಕ್ರಮಗಳಾಗಿತ್ತೋ, ಅದೇ ಮಾದರಿಯಲ್ಲಿ ಈ ವರ್ಷ ಹೈದರಾಬಾದ್ ವಿಮೋಚನೆಯ ಅಮೃತ ಮಹೋತ್ಸವವೂ ಸಂಭ್ರಮದೊಂದಿಗೆ ನಡೆಯಬೇಕಾಗಿದೆ. ಈ ಹೋರಾಟದಲ್ಲಿ ಬಲಿದಾನವನ್ನು ಮಾಡಿದ ವೀರರ ಸ್ಮರಣೆಯಾಗಬೇಕಾಗಿದೆ. ಎಲ್ಲೆಲ್ಲಿ ರಝಾಕಾರರ ಹಿಂಸೆಯಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರೋ, ಎಲ್ಲಿಲ್ಲಿ ಈ ದುರುಳರ ಅಟ್ಟಹಾಸವನ್ನು ಊರ ಜನರೇ ಹೋರಾಡಿ ಮಟ್ಟ ಹಾಕಿದ್ದರೋ, ಅಲ್ಲೆಲ್ಲಾ ಈ ಪರಾಕ್ರಮದ ಸ್ಮರಣೆಯನ್ನು ಬಲಿದಾನಿಗಳ ನೆನಪಿನೊಂದಿಗೆ ನಡೆಸಬೇಕಾಗಿದೆ. ಮಾತ್ರವಲ್ಲವಲ್ಲದೆ, ದೇಶದ ನಾನಾ ಭಾಗಗಳ ಜನರಿಗೆ ಈ ಹೋರಾಟದ ಸಾಹಸಗಾಥೆಯನ್ನು, ಜನರನುಭವಿಸಿದ ಕ್ರೌರ್ಯದ ಕಥನಗಳನ್ನೂ ತಿಳಿಸಿಕೊಡಬೇಕಾಗಿದೆ. ದೇಶದ ಎಲ್ಲೆಡೆಯೂ ಈ ಕುರಿತು ಚಿಂತನ ಮಂಥನಗಳು, ವಿಚಾರ ಸಂಕಿರಣಗಳು ನಡೆಯಲಿ. ಸರ್ಕಾರವೂ ಈ ಹೋರಾಟದ ಕುರಿತ ಕಥನಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸಲು ಸೂಕ್ತ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಬಲಿದಾನ ನಡೆದ ಊರುಗಳಲ್ಲಿ ಇಂದಿಗೂ ಈ ಹುತಾತ್ಮರನ್ನು ಸ್ಮರಿಸುವ ಒಂದು ಸಣ್ಣ ಸ್ಮಾರಕವೂ ಇಲ್ಲ. ಅಂತಹ ಊರುಗಳಲ್ಲಿ ಸರ್ಕಾರವೇ ಹುತಾತ್ಮ ಸ್ಮಾರಕದ ನಿರ್ಮಾಣವನ್ನು ಮಾಡಬೇಕಿದೆ. ಈ ಸ್ಮಾರಕಗಳು ದೇಶದ ನಾನಾ ಭಾಗಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳಾಗುವಂತೆ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆನ್ನು ತೋರಿಸಬೇಕಾಗಿದೆ. ಜತೆಗೆ ಈ ಭಾಗದ ವಿಶ್ವವಿದ್ಯಾಲಯಗಳಲ್ಲೊಂದು ಅತ್ಯುನ್ನತ ಅಧ್ಯಯನ ಪೀಠದ ಸ್ಥಾಪನೆ, ಹೈದರಾಬಾದ್ ಮುಕ್ತಿ ಸಂಘರ್ಷದ ಕುರಿತು ಸಂಶೋಧನಾತ್ಮಕ ಕೃತಿಗಳ ರಚನೆಗೆ ವಿಶೇಷ ಅನುದಾನವನ್ನು ನೀಡಬೇಕಿದೆ.
ನಿಜಾಮನಿಂದ ಆಳಲ್ಪಟ್ಟ ಪ್ರದೇಶಗಳು ಇಂದಿಗೂ ಸಂಪೂರ್ಣವಾಗಿ ಕಳಂಕ ಮುಕ್ತವಾಗಿಲ್ಲ. ಈ ಪ್ರದೇಶಗಳು ದೇಶದ ಉಳಿದ ಭಾಗಗಳಿಗಿಂತ ಶೈಕ್ಷಣಿಕವಾಗಿ, ಸಾಮಜಿಕವಾಗಿ, ಆರ್ಥಿವಾಗಿ ಹಿಂದುಳಿಯುವಿಕೆಯ ಒಂದು ಶಾಪ ಶಾಶ್ವತವಾಗಿ ಬಾಧಿಸುತ್ತಿದೆ. ಈ ಶಾಪ ವಿಮೋಚನೆಗೆ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ಪ್ರವೃತ್ತವಾಗಬೇಕಾಗಿದೆ. ಈ ಅಮೃತಮಹೋತ್ಸವ ಈ ಭಾಗದ ಜನರ ಶಾಶ್ವತ ಸಂಭ್ರಮವಾಗಲಿ. ನಮ್ಮ ಹಿರಿಯರ ಬಲಿದಾನ, ತ್ಯಾಗಗಳು ವ್ಯರ್ಥವಾಗಿಲ್ಲ ಎನ್ನುವ ವಿಶ್ವಾಸವನ್ನು ಮೂಡಿಸಲಿ.
✍️ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.