ನವದೆಹಲಿ: ಹಿರಿಯ ಸಾರ್ವಜನಿಕ ವ್ಯಕ್ತಿಗಳು, ಚಲನಚಿತ್ರ ಸೆಲೆಬ್ರಿಟಿಗಳು, ವಿದ್ಯಾರ್ಥಿಗಳು ಮತ್ತು ಎಲ್ಲಾ ವರ್ಗದ ಜನರು ನಡೆಯುತ್ತಿರುವ ಅಖಿಲ ಭಾರತ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದು, ಇದರ ಪರಿಣಾಮವಾಗಿ ಸೆಪ್ಟೆಂಬರ್ 17 ರಂದು ಮುಕ್ತಾಯಗೊಳ್ಳಲಿರುವ ಈ 75 ದಿನಗಳ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಬಗ್ಗೆ ಹರ್ಷ ವ್ಯಕ್ತಪಡಸಿದ್ದಾರೆ. ಅಲ್ಲದೇ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಲು ಮೀಸಲಾದ ವೆಬ್ಸೈಟ್ www.swachhsagar.org ಗೆ ಚಾಲನೆ ನೀಡಿದ್ದಾರೆ.
ದೇಶದ ಯುವಕರಿಗೆ ಸಮರ್ಪಿತವಾದ ಲೋಗೋ-ವಾಸುಕಿ ಎಂಬ ಅಭಿಯಾನಕ್ಕೂ ಸಚಿವರು ಚಾಲನೆ ನೀಡಿದ್ದಾರೆ. ಶಾಲಾ ವಿದ್ಯಾರ್ಥಿಗಳೊಂದಿಗೆ ಜನರು ಕೂಡ ತೀವ್ರ ಆಸಕ್ತಿ ವಹಿಸುತ್ತಾರೆ ಮತ್ತು ಕರಾವಳಿ ಮತ್ತು ಕಡಲತೀರದ ಸ್ವಚ್ಛತಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದಿದ್ದಾರೆ.
ಈ ರೀತಿಯ ಈ ಸುದೀರ್ಘ ಅಭಿಯಾನದ ಪ್ರಗತಿಯ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಡಾ. ಜಿತೇಂದ್ರ ಸಿಂಗ್, ಈ ಅಭಿಯಾನವನ್ನು ‘‘ಸಂಪೂರ್ಣ ಸರ್ಕಾರ’’ದ ವಿಧಾನದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಗಮನಸೆಳೆದರು, ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಾಗ್ಗೆ ಪುನರುಚ್ಚರಿಸುತ್ತಾರೆ, ಮತ್ತು ಭೂ ವಿಜ್ಞಾನ ಸಚಿವಾಲಯ, ಪರಿಸರ ಸಚಿವಾಲಯಗಳನ್ನು ಕಾರ್ಯಗತಗೊಳಿಸುವುದರ ಹೊರತಾಗಿ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಜಲಶಕ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ವಿದೇಶಾಂಗ ವ್ಯವಹಾರಗಳು ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯಗಳೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಅನೇಕ ಸಚಿವರು ಮತ್ತು ಸಂಸದರು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ನಿನ್ನೆಯಷ್ಟೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ.ತಮಿಳಿಸೈ ಸೌಂದರರಾಜನ್ ಮತ್ತು ಪುದುಚೇರಿಯ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಅವರೊಂದಿಗೆ ಕಡಲಕಿನಾರೆಯ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನದ ನೇತೃತ್ವ ವಹಿಸಿದ್ದರು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಪ್ರೊಮೆನೇಡ್ ಬೀಚ್ನಲ್ಲಿ ಶಾಲಾ ಮಕ್ಕಳು ಮತ್ತು ಬೀಚ್ ಬಳಕೆದಾರರು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ‘‘ಐ ಆಮ್ ಸೇವಿಂಗ್ ಮೈ ಬೀಚ್’’ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ಅಭಿಯಾನವನ್ನು ಗುರುತಿಸಲಾಯಿತು. ಇದರ ನಂತರ ಈ ಸಂದರ್ಭದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಗೆ ಬಹುಮಾನ ವಿತರಣೆ ನಡೆಯಿತು. 100 ಶಾಲಾ ವಿದ್ಯಾರ್ಥಿಗಳು, ಸೈಕ್ಲಿಸ್ಟ್ಗಳಿಂದ ನಡೆದ ವಾಕಥಾನ್ ಮತ್ತು ‘‘ಸಾಗರದೊಂದಿಗೆ ಸಂಪರ್ಕಿಸುವುದು’’ ಕುರಿತ ಫ್ಲೋಟ್ಗೆ ಗಣ್ಯರು ಹಸಿರು ನಿಶಾನೆ ತೋರಿಸಿದರು.
2022ರ ಜುಲೈ 5ರಂದು ಪ್ರಾರಂಭಿಸಲಾದ 75 ದಿನಗಳ ಕರಾವಳಿ ಸ್ವಚ್ಛತಾ ಅಭಿಯಾನದ ಮೊದಲ 20 ದಿನಗಳಲ್ಲಿ ಸಮುದ್ರ ತೀರಗಳಿಂದ 200 ಟನ್ ಗಿಂತಲೂ ಹೆಚ್ಚು ಕಸವನ್ನು, ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಮುದ್ರ ತೀರದಿಂದ ತೆಗೆದುಹಾಕಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು .
2022ರ ಸೆಪ್ಟೆಂಬರ್ 17 ರಂದು ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದಂದು ಮುಕ್ತಾಯಗೊಳ್ಳುವ ‘‘ಸ್ವಚ್ಛ ಸಾಗರ, ಸುರಕ್ಷಿತ್ ಸಾಗರ’’ ಬಗ್ಗೆ ಜಾಗೃತಿ ಮೂಡಿಸಲು 2022 ರ ಜುಲೈ 5 ರಂದು ಪ್ರಾರಂಭಿಸಲಾದ 75 ದಿನಗಳ ಸುದೀರ್ಘ ಅಭಿಯಾನಕ್ಕೆ 24 ರಾಜ್ಯಗಳಿಂದ ಇಲ್ಲಿಯವರೆಗೆ 52000 ಕ್ಕೂ ಹೆಚ್ಚು ಸ್ವಯಂಸೇವಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ಸಂತೃಪ್ತಿಯಿಂದ ಹೇಳಿದರು.
ಕರಾವಳಿ ಸ್ವಚ್ಛತೆಯನ್ನು ಜನ ಆಂದೋಲನವಾಗಿ ಪರಿವರ್ತಿಸಲು ಸರ್ಕಾರೇತರ ಸಂಸ್ಥೆಗಳು, ನಾಗರಿಕ ಗುಂಪುಗಳು, ಮಕ್ಕಳು ಮತ್ತು ಯುವ ವೇದಿಕೆಗಳು, ಕಾರ್ಪೊರೇಟರ್ಗಳು, ಲಾಭರಹಿತ ಸಂಸ್ಥೆಗಳು, ಕಾನ್ಸುಲರ್ ಸಿಬ್ಬಂದಿ ಮತ್ತು ಕರಾವಳಿ ರಾಜ್ಯಗಳ ಮುನ್ಸಿಪಲ್ ಕಾರ್ಪೊರೇಷನ್ಗಳನ್ನು ಬಳಸಿಕೊಳ್ಳುವಂತೆ ಸಚಿವರು ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನದಲ್ಲಿ ಮುಂದಾಳತ್ವ ವಹಿಸಿದ್ದಾರೆ ಮತ್ತು 7500 ಕಿಲೋಮೀಟರ್ ಉದ್ದದ ಭಾರತದ ಕರಾವಳಿ ಮಾರ್ಗವನ್ನು ಮನುಕುಲಕ್ಕೆ ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರವಾಗಿಡಲು ಇಡೀ ರಾಷ್ಟ್ರವನ್ನು ಪ್ರೇರೇಪಿಸಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ಪುನರುಚ್ಚರಿಸಿದರು.
2022 ರ ಸೆಪ್ಟೆಂಬರ್ 17 ರಂದು ‘‘ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ’’ದಂದು ಸಮುದ್ರ ತೀರಗಳಿಂದ 1,500 ಟನ್ ಕಸ, ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಗುರಿಯನ್ನು ಸಾಧಿಸಲು ನಾಗರಿಕ ಸಮಾಜದ ಸದಸ್ಯರ ಸಕ್ರಿಯ ಸಹಕಾರವನ್ನು ಡಾ. ಜಿತೇಂದ್ರ ಸಿಂಗ್ ಕೋರಿದರು. ಸೆಪ್ಟೆಂಬರ್17 ರಂದು ದೇಶಾದ್ಯಂತ 75 ಬೀಚ್ ಗಳಲ್ಲಿಪ್ರತಿ ಕಿಲೋಮೀಟರ್ ಕರಾವಳಿಗೆ 75 ಸ್ವಯಂಸೇವಕರೊಂದಿಗೆ ನಡೆಸಲಾಗುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಈ ವರ್ಷದ ಕಾರ್ಯಕ್ರಮವು ದೇಶದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು.
*
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.