80 ವರ್ಷದ ವಿಮಲಾ ಕೌಲ್ ನಿವೃತ್ತ ಶಿಕ್ಷಕಿ, ಈ ಇಳಿ ವಯಸ್ಸಿನಲ್ಲಿ ಅವರಿಗೆ ಮಕ್ಕಳು, ಗಂಡನೊಂದಿಗೆ ಕಾಲ ಕಳೆಯುತ್ತಾ ನೆಮ್ಮದಿಯಿಂದ ಜೀವನ ಸಾಗಿಸಬಹುದು. ಆದರೆ ಕಾಲವನ್ನು ಸುಖಾಸುಮ್ಮನೆ ವ್ಯರ್ಥ ಮಾಡುವುದು ಅವರಿಗೆ ಬೇಕಾಗಿಲ್ಲ.
20 ವರ್ಷಗಳ ಹಿಂದೆ ಅವರಿಗೆ ನಿವೃತ್ತಿಯಾಗಿದೆ, ಆದರೂ ಅವರು ತಮ್ಮ ಶಿಕ್ಷಕಿ ವೃತ್ತಿಯನ್ನು ಮುಂದುವರೆಸಿದ್ದಾರೆ. ಆದರೆ ಬಿಡಿಗಾಸನ್ನೂ ಪಡೆಯುವುದಿಲ್ಲ. ಅವರು ಪಾಠ ಹೇಳಿಕೊಡುವುದು ಅನಾಥ ಮಕ್ಕಳಿಗೆ. ದೆಹಲಿಯಲ್ಲಿನ ಮದನ್ಪುರ್ ಖಾದರ್ ಗ್ರಾಮಕ್ಕೆ ತೆರಳಿದರೆ ಅವರ ವಿದ್ಯಾ ಸೇವೆಯ ಅರಿವಾಗುತ್ತದೆ.
ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಗದ ಬಡ ಮತ್ತು ಅನಾಥ ಮಕ್ಕಳಿಗೆ ಕಳೆದ 20 ವರ್ಷಗಳಿಂದ ವಿಮಾಲ ಕೌಲ್ ಮತ್ತು ಅವರ ಪತಿ ವಿದ್ಯೆ ಕಲಿಸುತ್ತಿದ್ದಾರೆ. ಈ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ತಮ್ಮ ಹಣ, ಸಮಯ, ಶಕ್ತಿ ಎಲ್ಲವನ್ನೂ ಈ ದಂಪತಿಗಳು ತ್ಯಾಗ ಮಾಡುತ್ತಿದ್ದಾರೆ.
ಈ ಗ್ರಾಮಕ್ಕೆ ಮೊದಲು ಬಂದಾಗ ಮಕ್ಕಳು ಶಾಲೆಗೆ ಹೋಗದೆ ಅಲ್ಲಲ್ಲಿ ಓಡಾಡುತ್ತಾ ಸಮಯ ವ್ಯರ್ಥ ಮಾಡುವುದನ್ನು ನೋಡಿದೆ, ಮನಸ್ಸಿಗೆ ಬೇಸರವಾಯಿತು. ಹೀಗಾಗಿ ಅವರಿಗೆ ಶಿಕ್ಷಣ ನೀಡಲು ಮುಂದಾದೆ. 1995ರಲ್ಲಿ ಮೊದಲು ಐದು ಮಕ್ಕಳನ್ನು ಸೇರಿಸಿ ಶಿಕ್ಷಣ ಕೊಡಲು ಆರಂಭಿಸಿದೆ ಎನ್ನುತ್ತಾರೆ ವಿಮಲಾ.
ಹಿಂದೆ ಮಕ್ಕಳನ್ನು ಪಕ್ಕದ ಸರಿತ ವಿಹಾರ್ ನಗರಕ್ಕೆ ಕರೆದುಕೊಂಡು ಬರುತ್ತಿದ್ದ ಇವರು, ಒಂದು ಪಾರ್ಕ್ನಿಂದ ಇನ್ನೊಂದು ಪಾರ್ಕ್ಗೆ ತೆರಳಿ ಇವರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಪಾಠ ಹೇಳಿಕೊಡಲು ಕಟ್ಟಡ ಇರಲಿಲ್ಲ, ಕಟ್ಟಡ ಖರೀದಿಸುವಷ್ಟು ಹಣವೂ ಅವರಿಗಿರಲಿಲ್ಲ. ಹಾಗಾಗೀ ಪಾರ್ಕ್ನಲ್ಲಿ ಪಾಠ ಹೇಳಿಕೊಡುತ್ತಿದ್ದರು. ಆದರೆ ಇದು ಕಷ್ಟವಾಗಿ ಇವರ ಪಾಠಶಾಲೆಯೇ ಮುಚ್ಚುವ ಹಂತಕ್ಕೆ ತಲುಪಿತ್ತು. ಆಗ ಇವರ ಸಹಾಯಕ್ಕೆ ಧಾವಿಸಿದ್ದು ಮಾಳವಿಯಾ ಟ್ರಸ್ಟ್. ಈ ಟ್ರಸ್ಟ್ ಅವರ ಪಾಠಶಾಲೆಗೆ ನಾಲ್ಕು ಕೊಠಡಿಗಳ ಒಂದು ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ.
ತಾವಿಲ್ಲದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇತರ ಶಾಲೆಯ ನಾಲ್ಕು ಶಿಕ್ಷಕರನ್ನು ಅವರು ನೇಮಿಸಿಕೊಂಡಿದ್ದಾರೆ. ಇವರಿಲ್ಲದ ವೇಳೆ ಅವರು ಮಕ್ಕಳಿಗೆ ಪಾಠ ಮಾಡುತ್ತಾರೆ. ಇದೀಗ ವಿಮಲಾ ಅವರ ಬಳಿ 110 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಇಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡಲಾಗುತ್ತದೆ, ವಿಮಲಾ ಮತ್ತು ಅವರ ಪತಿ ಈ ತಮ್ಮ ಶಾಲೆಯನ್ನು ಉತ್ತಮವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಅನಾಥ, ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಅವರ ಈ ಸಾಧನೆಗೆ ನಮ್ಮದೊಂದು ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.