ಮಧ್ಯ ಕೇರಳದ ಒಂದು ಪುಟ್ಟ ಜಿಲ್ಲೆಯಾದ ತ್ರಿಶೂರ್ ಅನ್ನು ಜಾಗತೀನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದು ಒಂದು ಹಿಂದೂ ಧಾರ್ಮಿಕ ಉತ್ಸವ,ಅದುವೇ ತ್ರಿಶೂರ್ ಪೂರಂ. 1437 ವರ್ಷಗಳ ಐತಿಹ್ಯವುಳ್ಳ ಹಿಂದೂ ಉತ್ಸವವಾದ ಪೂರಂ , ದುರ್ಗೆ ಅಥವಾ ಕಾಳಿ ಮಾತೆಗೆ ಸಮರ್ಪಿಸಲ್ಪಡುವ ಜಾತ್ರೆಯಾಗಿದ್ದು ಸಾಮಾನ್ಯವಾಗಿ ಮಧ್ಯ ಕೇರಳ ಭಾಗದ ದೇವಾಲಯಗಳಲ್ಲಿ ಬೇಸಿಗೆ ಕಾಲದಲ್ಲಿ ನಡೆಸಲ್ಪಡುತ್ತದೆ. ತ್ರಿಶೂರ್ ಪೂರಂ ವರ್ಷಾಮ್ಪ್ರತಿ ಚೈತ್ರ ಮಾಸದ ಪೂರ್ವಾ ನಕ್ಷತ್ರದಂದು ನಡೆಸಲ್ಪಡುತ್ತದೆ. ಪಾಲಕ್ಕಾಡ್, ತ್ರಿಶೂರ್, ಮಲ್ಲಪ್ಪುರಂ ಜಿಲ್ಲೆಗಳಲ್ಲಿ ನಡೆಯುವ ಈ ಜಾತ್ರೆಯು ಕೇರಳದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯುವ ಸಾಂಸ್ಕೃತಿಕ ಉತ್ಸವವೂ ಹೌದು.
1798 ರಲ್ಲಿ ವರ್ಷಮಪ್ರತಿಯಂತೆ “ಆರಾಟ್ಟುಪುರಂ” ಗೆ ಹೊರಟ ತ್ರಿಶೂರ್ ಭಾಗದ ದೇವಾಲಯಗಳ ಮೆರವಣಿಗೆ ಭಾರೀ ಮಳೆಯ ಕಾರಣದಿಂದ ತಡವಾಗಿ ತಲುಪಿತು. ತಡವಾದ ಕಾರಣದಿಂದಾಗಿ ಈ ದೇವಾಲಯಗಳ ಸಾಂಸ್ಕೃತಿಕ ಪ್ರದರ್ಶನಕ್ಕೆ ಅನುಮತಿಯು ನಿರಾಕರಿಸಲ್ಪಟ್ಟಿತು. ಇದರಿಂದ ಕೋಪಗೊಂಡ ದೇವಾಲಯಗಳ ಪ್ರಮುಖರು, ಕೊಚ್ಚಿಯ ರಾಜನಾದ ‘ ಶಕ್ತನ್ ತಂಬುರಾನ್ ‘ ಎಂದು ಕರೆಯಲ್ಪಡುತಿದ್ದ ಶ್ರೀ ರಾಜ ರಾಜ ವರ್ಮಾರ ಬಳಿ ಹೋಗಿ ಅಸಮಾಧಾನವನ್ನು ತೋಡಿಕೊಂಡರು. ಧರ್ಮ ಭೀರು ಹಾಗು ಸಂಸ್ಕೃತಿಯನ್ನು ಆರಾಧಿಸುವವನೂ ಆದ ರಾಜನು ತ್ರಿಶೂರ್ ನ ವಡಕ್ಕನ್ ( ಪ್ರಸಿದ್ಧ ಶಿವ ದೇವಾಲಯ) ಸುತ್ತಲಿನ 10 ದೇವಾಲಯಗಳನ್ನು ಒಟ್ಟು ಸೇರಿಸಿ “ತ್ರಿಶೂರ್ ಪೂರಂ” ಎಂಬ ಉತ್ಸವವನ್ನು ಪ್ರಾರಂಭಿಸಿದ. ತ್ರಿಶೂರ್ ಪೂರಂ ಅನ್ನು ರಾಜ ರಾಜ ವರ್ಮನ ಕನಸಿನ ಕೂಸು ಎಂದು ಕರೆಯಲಾಗುತ್ತದೆ. ಈ ಪೂರಂನ ವಿಶೇಷತೆಯೆಂದರೆ ಪ್ರತೀವರ್ಷವೂ ಉತ್ಸವದ ಸಾಮಾಗ್ರಿಗಳು ಹೊಸದಾಗಿ ತಯಾರಿಸಲ್ಪಡುತ್ತದೆ.
ಪೂರಂ ಅನ್ನು ಆಯೋಜಿಸುವಾಗ ರಾಜ 10 ದೇವಾಲಯಗಳನ್ನು 2 ವಿಭಾಗಗಳಲ್ಲಿ ಪರಾಂಬಕ್ಕಾವು ಮತ್ತು ‘ತಿರುವಂಬಾಡಿ’ ಎಂಬುದಾಗಿ ವಿಂಗಡಿಸುತ್ತಾನೆ. ‘ತಿರುವಂಬಾಡಿ’ ಭಾಗಕ್ಕೆ ಮುಖ್ಯಸ್ಥರನ್ನಾಗಿ ‘ತಿರುವಂಬಾಡಿ ಶ್ರೀಕೃಷ್ಣ ದೇವಾಲಯʼವನ್ನೂ ಪರಮೇಕ್ಕಾವು ಭಾಗಕ್ಕೆ ಮುಖ್ಯಸ್ಥರನ್ನಾಗಿ ‘ಪರಾಮಕ್ಕಾವು ಭಗವತೀ ದೇವಾಲಯʼವನ್ನೂ ನೇಮಿಸುತ್ತಾನೆ. ವಿಶೇಷವೆಂದರೆ ಈ 2 ದೇವಾಲಯಗಳ ನಡುವಿನ ದೂರ ಕೇವಲ 500 ಮೀಟರ್ಗಳು ಮಾತ್ರ.
ತಿರುವಂಬಾಡಿ ವಿಭಾಗದಲ್ಲಿ ತಿರುವಂಬಾಡಿ ಶ್ರೀಕೃಷ್ಣ ದೇವಾಲಯ, ಕಣಿಮಂಗಲಂ ಶಾಸ್ತಾ ದೇವಾಲಯ, ಲಾಲೂರ್ ಭಗವತೀ ದೇವಾಲಯ, ಅಯ್ಯಂಥೋಲ್ ಶ್ರೀ ಕಾತ್ಯಾಯನೀ ದೇವಾಲಯ, ನೆತಿಲಕ್ಕಾವು ಭಗವತೀ ದೇವಾಲಯಗಳಿದ್ದರೆ ಪರಮೇಕ್ಕಾವು ವಿಭಾಗದಲ್ಲಿ ಪರಮೇಕ್ಕಾವು ಭಗವತೀ ದೇವಾಲಯ, ಚೇಮಬುಕ್ಕಾವು ಭಗವತೀ ದೇವಾಲಯ, ಪರಮುಕ್ಕುಂಪಿಳ್ಳಿ ಶಾಸ್ತಾ ದೇವಾಲಯ, ಪೂಕಾಟ್ಟಿಕ್ಕಾರ ಕರಮುಕ್ಕು ಭಗವತೀ ದೇವಾಲಯ ಎಂಬುದಾಗಿ ವಿಭಾಗಿಸಲ್ಪಟ್ಟಿತು.
ಉತ್ಸವವು ಅಧಿಕೃತವಾಗಿ ಪೂರಂನ 7 ದಿನಗಳ ಮೊದಲು ಕೋಡಿಯೇಟಮ್ (ಧ್ವಜಾರೋಹಣ) ದಿಂದ ಪ್ರಾರಂಭವಾಗುತ್ತದೆ. ತ್ರಿಶೂರ್ ಪೂರಂನಲ್ಲಿ ಭಾಗವಹಿಸುವ ಎಲ್ಲಾ ದೇವಾಲಯಗಳ ಪ್ರತಿನಿಧಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದು ಮತ್ತೊಂದು ವಿಶೇಷ. ಪೂರಂ ನ ಹಲವು ಆಕರ್ಷಣೆಗಳಲ್ಲಿ ವೇದಿಕೆಟ್ಟು (ಸುಡುಮದ್ಧು ಪ್ರದರ್ಶನ) ಕೂಡಾ ಒಂದು. ಧ್ವಜಾರೋಹಣದ ನಾಲ್ಕನೆಯ ದಿನ ಸ್ವರಾಜ್ ಮೈದಾನದಲ್ಲಿ ಸಂಜೆ 7.15 ರಿಂದ ಒಂದು ಗಂಟೆಗಳ ಕಾಲ ಎರಡೂ ವಿಭಾಗಗಳಿಂದ ಹೊಸ ಹೊಸ ವಿನ್ಯಾಸದ ಸಿಡಿಮದ್ಧುಗಳ ಪ್ರದರ್ಶನ ನಡೆಯುತ್ತದೆ. 4 ಮತ್ತು 5 ನೇ ದಿನ ಪ್ರತೀವರ್ಷ ನೂತನವಾಗಿ ತಯಾರಿಸಲ್ಪಟ್ಟ ಆನೆಯ ಅಲಂಕಾರಿಕ ಸಾಮಗ್ರಿಗಳಾದ ನೆತ್ತಿಪಟ್ಟಂ, ಚಮಯಂ, ಅಳವಟ್ಟಮ್ (ನವಿಲುಗರಿಯ ಬೀಸಣಿಗೆ), ವೇಂಚಾಮರಾಮ್ (ರಾಜಬೀಸಣಿಗೆ), ಅಲಂಕೃತ ಛತ್ರಿ ಇವುಗಳ ಪ್ರದರ್ಶನ ವನ್ನು ಎರಡೂ ವಿಭಾಗದವರೂ ಬೇರೆ ಬೇರೆ ಸ್ಥಳಗಳಲ್ಲಿ ನಡೆಸುತ್ತಾರೆ.
ಪೂರಂ ಬೇರೆ ಬೇರೆ ದೇವಾಲಯಗಳಲ್ಲಿ ಮುಂಜಾವಿನ ಸಮಯದಲ್ಲಿ ಪ್ರಾರಂಭಗೊಂಡು ವಡಕ್ಕುಂನಾಥ ದೇವಾಲಯವನ್ನು ಮೆರವಣಿಗೆಯ ಮೂಲಕ ಪ್ರವೇಶಿಸುತ್ತದೆ. ಈ ಸಮಯದಲ್ಲಿ 200 ಜನ ಕಲಾವಿದರನ್ನೊಳಗೊಂಡ ‘ಮೇಳʼ ಒಂದು ಪ್ರಮುಖ ಆಕರ್ಷಣೆ . ಮೇಳ ಎಂಬುದು 5 ಬೇರೆ ಬೇರೆ ವಾದ್ಯಗಳ ಜುಗಲ್ಬಂದಿ ಮದ್ದಳೆ, ಕೊಂಬು, ಕೈತಾಳ, ಎಡಕ್ಕ, ತಿಮಿಳ (ಎರಡೂ ಮರಳು ಗಡಿಯಾರದ ಆಕೃತಿಯಲ್ಲಿರುವ ಕೇರಳದ ವಾದ್ಯಗಳು). ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ದೇವಾಲಯದ ಒಳಗೆ ಪಂಚಾರಿ ಮೇಳ (ಇದು ದೇವಾಲಯದ ಒಳಗೆ ಮಾತ್ರ ಬಳಸಲ್ಪಡುತ್ತದೆ) ಪ್ರಾರಂಭಗೊಳ್ಳುತ್ತದೆ. ಪೂರಂನಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ ಸಾಲಂಕೃತ ಗಜಗಳ ಸಾಲು. ತ್ರಿಶೂರ್ ಪೂರಂನಲ್ಲಿ 50 ಆನೆಗಳು ಅಲಂಕೃತಗೊಳ್ಳುತ್ತವೆ.
ದೇವಾಲಯದ ಒಳಗೆ ಉತ್ಸವ ಮುಗಿಯುತ್ತಿದ್ದಂತೆ ಎರಡೂ ವಿಭಾಗದ ತಂಡಗಳು ದೇವಾಲಯದ ಪಚ್ಚಿಮ ಬಾಗಿಲಿನಿಂದ ಒಳಗೆ ತೆರಳಿ ದಕ್ಷಿಣ ಬಾಗಿಲಿನಿಂದ ಹೊರಗೆ ಬಂದು ಎದುರು ಬದುರಾಗಿ ನಿಂತುಕೊಳ್ಳುತ್ತಾರೆ. ಈ ಸಂಧರ್ಭದಲ್ಲಿ ಎರಡೂ ಭಾಗದವರು ಪ್ರದರ್ಶನದಲ್ಲಿ ಇರಿಸಿದ್ದ ಛತ್ರಿಗಳನ್ನು ಆನೆಯ ಮೇಲೇರಿ ಬಂದು ಪರಸ್ಪರ ಬದಲಾಯಿಸಿಕೊಳ್ಳುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಈ ಕಾರ್ಯಕ್ರಮವು ಕುಡಮಟ್ಟಮ್ ಎಂದು ಕರೆಯಲ್ಪಡುತ್ತದೆ. ನಂತರ ಎರಡೂ ತಂಡಗಳು ದೇವಾಲಯದ ಪಶ್ಚಿಮ ಭಾಗದಲ್ಲಿ ಸೇರುತ್ತವೆ. ಈ ಸಂಧರ್ಭದಲ್ಲಿ ನಡೆಯುವ ವಾದ್ಯ ಸ್ಪರ್ಧೆಯು ಲೋಕ ಪ್ರಸಿದ್ಧವಾದದ್ದು. ಈ ಕಾರ್ಯಕ್ರಮ ಹಲವು ಗಂಟೆಗಳ ಕಾಲ ನಿರಂತರ ನಡೆಯುತ್ತದೆ. ಬಿಡು ಬೇಸಿಗೆಯ ಕಾವಿನಲ್ಲೂ ಜನರು ಚೆಂಡೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗಂಟೆಗಳ ಕಾಲ ನಿಂತಿರುತ್ತಾರೆ.
ನಂತರದಲ್ಲಿ ನಡಿಯುವುದೇ ಅದ್ಭುತವಾದ ಸುಡುಮದ್ದು ಪ್ರದರ್ಶನ, ಇದನ್ನು ನೋಡಲು ದೇಶದೆಲ್ಲೆಡೆ ಇಂದ ಜನರು ಲಕ್ಷಗಳ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಎರಡೂ ವಿಭಾಗಗಳ ದೇವಾಲಯಗಳ ಮುಖ್ಯಸ್ಥರು ತಮ್ಮ ತಮ್ಮ ಭಾಗಗಳಲ್ಲಿ ಸಿಡಿಮದ್ಧುಗಳನ್ನೂ ಸಿಡಿಸುತ್ತಾರೆ. ಪೂರಂನ 7 ನೇ ಹಾಗು ಕೊನೆಯ ದಿನವಾದ ಅಂದು ತ್ರಿಶೂರ್ನ ಆಕಾಶ ವಿವಿಧ ಬಣ್ಣಗಳಲ್ಲಿ ಕಂಗೊಳಿಸುತ್ತದೆ. ಕೊನೆಯ ದಿನ ಉಪಚಾರಂ ಚೋಲ್ಲಿ ಪರಿಯಿಲ್ (ವಿದಾಯ) ವು ಪೂರಂನ ಕೊನೆಯ ಕಾರ್ಯಕ್ರಮ. ಮೊದಲನೆಯ ದಿನ ತರಲ್ಪಟ್ಟ ಎರಡೂ ವಿಭಾಗಗಳ ಮುಖ್ಯ ದೇವಾಲಯಗಳ ಮೂರ್ತಿಗಳನ್ನು ಅವರವರ ದೇವಾಲಯಗಳಿಗೆ ಮರಳಿ ತೆಗೆದುಕೊಂಡು ಹೋಗುವುದರೊಂದಿಗೆ ಪೂರಂ ಸಂಪನ್ನವಾಗುವುದು. ತ್ರಿಶೂರ್ ಅಲ್ಲದೆ ಇನ್ನು ಹಲವು ದೇವಾಲಯಗಳಲ್ಲೂ ಪೂರಂ ನಡೆಸಲಾಗುತ್ತದೆ, ಆದರೆ ಇಲ್ಲಿಯ ಮೇಳ, ಆನೆಗಳ ಪಡೆ, ಉತ್ಸವದ ಗಾಂಭೀರ್ಯ ಇಲ್ಲಿಯ ಪೂರಂ ಅನ್ನು ಉತ್ಸವಗಳ ರಾಜ ಎನ್ನುವಂತೆ ಮಾಡಿದೆ. ಮಾತ್ರವಲ್ಲದೆ ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಈ ಉತ್ಸವವು ‘ದೇವ ಸಭೆ ಅಥವಾ ದೇವ ಸಂಗಮ” ಎಂದು ಈ ಹಬ್ಬವು ಪ್ರಸಿದ್ಧಿಯನ್ನೂ ಪಡೆದಿದೆ.
ಈ ಬಾರಿಯ ತ್ರಿಶೂರ್ ಪೂರಂ ಹಬ್ಬವು “ಪೂರಂ ನಕ್ಷತ್ರಂ ಮೇ 10, 2022 ರಂದು ಸಂಜೆ 06:40 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11, 2022 ರಂದು ಸಂಜೆ 07:28” ಕ್ಕೆ ಮುಕ್ತಾಯವಾಗುತ್ತದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.