ಶಾಲಾ ಸಮವಸ್ತ್ರದ ವಿರುದ್ಧವೆದ್ದ ಹಿಜಾಬ್ ವಿವಾದ ನ್ಯಾಯಾಲಯದಲ್ಲಿ ಬಿದ್ದುಹೋಗಿ ಸಮವಸ್ತ್ರವೇ ಶಾಲಾ ತರಗತಿಗಳಲ್ಲಿ ಸಮಾನತೆಯನ್ನು ಕಾಪಾಡಲು ಅಗತ್ಯವೆನ್ನುವ ನ್ಯಾಯಸಮ್ಮತಿ ದೊರಕಿತು. ನ್ಯಾಯಾಲಯದ ತೀರ್ಪನ್ನು ಒಪ್ಪಲಾರೆವು ಎನ್ನುತ್ತಾ ಬಂದ್ , ಪ್ರತಿಭಟನೆಗಳೂ ನಡೆಯಿತು. ಈ ಮೂಲಕ ದೇಶದ ಸೆಕ್ಯುಲರ್ ಎನ್ನಬಹುದಾದ ವ್ಯವಸ್ಥೆಗೆ ಹಿನ್ನೆಡೆಯಾಗುವ ನಡವಳಿಕೆಗಳು ಬಹಿರಂಗವಾಗಿಯೇ ಪ್ರಕಟವಾಯಿತು. ಇಂತಹ ಸಂದರ್ಭದಲ್ಲಿ ನಾವು ಈ ಇಡೀ ವಿದ್ಯಮಾನವನ್ನು ಸರಿಯಾಗಿ ಗ್ರಹಿಸಿಕೊಳ್ಳಬೇಕಾದರೆ ಶ್ರೀ ಹಮೀದ್ ದಲವಾಯಿಯವರ ಚಿಂತನೆಗಳೊಂದಿಗೆ ಮುಖಾಮುಖಿಯಾಗಬೇಕಾದ ಅಗತ್ಯವಿದೆ.
ಹಿಜಾಬ್ ವಿವಾದದಕ್ಕೆ ಮುಸ್ಲಿಂ ಸಮಾಜ ಹಾಗೂ ಸೆಕ್ಯುಲರ್ ಹಿಂದೂಗಳು ನೀಡಿದ ಪ್ರತಿಕ್ರಿಯೆ ಅರ್ಥವಾಗಬೇಕಾದರೆ ದಲವಾಯಿಯವರ “ಮುಸ್ಲಿಂ ಪಾಲಿಟಿಕ್ಸ್ ಇನ್ ಸೆಕ್ಯುಲರ್ ಇಂಡಿಯಾ” ಎನ್ನುವ ಕೃತಿಯನ್ನು ಅಧ್ಯಯನ ಮಾಡಬೇಕಾಗಿದೆ. (ಶ್ರೀ ಚಂದ್ರಶೇಖರ ಭಂಡಾರಿ ಕನ್ನಡಕ್ಕೆ ಅನುವಾದಿಸಿರುವ ‘ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ’ ಎಂಬ ಈ ಕೃತಿಯನ್ನು ಸಾಹಿತ್ಯ ಸಿಂಧು ಪ್ರಕಾಶನ ಪ್ರಕಟಿಸಿದೆ.) ಶ್ರೀ ಹಮೀದ್ ದಲವಾಯಿ ಭಾರತ ಕಂಡ ಓರ್ವ ಅಪೂರ್ವ ರಾಷ್ಟ್ರೀಯವಾದಿ ಚಿಂತಕ. ಸಂಯುಕ್ತ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿದ್ದವರು. ಮುಸ್ಲಿಂ ಸತ್ಯಶೋಧಕ್ ಮಂಡಲ್ ಸಂಸ್ಥೆಯ ಮೂಲಕ ಅವರು ಕಟ್ಟಿದ ಪ್ರಖರ ಚಿಂತನೆಗಳು ಇಂದಿಗೂ ಕಾರ್ಯಾನುಷ್ಠಾನ ಯೋಗ್ಯ. ಸೆಕ್ಯುಲರಿಸಂ, ಹಿಂದೂ – ಮುಸ್ಲಿಂ ಸಮಸ್ಯೆ, ಇಸ್ಲಾಂ ಮಾನಸಿಕತೆ, ಭಾರತದಲ್ಲಿನ ಓಲೈಕೆ ರಾಜಕಾರಣ ಇವೇ ಮೊದಲಾದ ಸಂಗತಿಗಳನ್ನು ಅತ್ಯಂತ ಕೂಲಂಕಷವಾಗಿ ಚಿಂತನೆ ನಡೆಸಿದವರು ದಲವಾಯಿಯವರು.
ಭಾರತದ ಹಿಂದೂ – ಮುಸ್ಲಿಂ ಐಕ್ಯತೆಯ ಸಮಸ್ಯೆಯನ್ನು ಸಮಗ್ರವಾಗಿ ಪರಿಶೀಲಸಿ ಅವರು ತಳೆದ ನಿಲುವೆಂದರೆ, “ಮುಸ್ಲಿಂ ಕೋಮುವಾದವನ್ನು ದೂರ ಮಾಡುವ ಪ್ರಯತ್ನಕ್ಕೆ ಅಡ್ಡಿಯಾಗಿ ನಿಂತಿರುವ ಅತಿದೊಡ್ಡ ಬಂಡೆಗಲ್ಲೆಂದರೆ ‘ಸೆಕ್ಯುಲರ್ ಹಿಂದುಗಳೇ’. ಮುಸ್ಲೀಮರ ಪ್ರತ್ಯೇಕತೆ ಮತ್ತು ಕೋಮುವಾದವನ್ನು ಪೋಷಿಸುತ್ತಿರುವುದು ಇವರೇ” ಎಂದು ಖಡಾಖಂಡಿತವಾಗಿ ನುಡಿದಿದ್ದರು. ಮುಸ್ಲಿಂ ಸಮುದಾಯ ಭಾರತವನ್ನು ‘ದಾರ್ – ಉಲ್ – ಇಸ್ಲಾಂ’ ಆಗಿ ಪರಿವರ್ತಿಸುವ ಕನಸನ್ನು ಕೈಬಿಡದೆ ಕೋಮುವಾದವನ್ನು ಪೋಷಿಸುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯೆಯಾಗಿ ಮಾತ್ರವೇ ಹಿಂದೂ ಕೋಮುವಾದ ತಲೆ ಎತ್ತಿದೆ ಎಂದು ವಿಶ್ಲೇಷಿಸಿದ್ದರು. ಇದಕ್ಕೆ ಪರಿಹಾರ ಮುಸ್ಲಿಂ ಸಮಾಜ ದಾರ್ ಉಲ್ ಇಸ್ಲಾಂನ ಕನಸನ್ನು ತ್ಯಜಿಸುವುದರಲ್ಲಿದೆ. ಅದಕ್ಕಾಗಿ ಸಮಾಜದ ಆಧುನೀಕರಣ ಒಂದೇ ಪರಿಹಾರ ಎಂದು ಭಾವಿಸಿದ್ದರು. ತಮ್ಮೆಲ್ಲಾ ಸಮಸ್ಯೆಗೆ ಹಿಂದೂಗಳು ಕಾರಣವೆನ್ನುವ ಬದಲು ಆತ್ಮಶೋಧನೆ, ಆತ್ಮವಿಮರ್ಶೆಯ ಮನೋಭಾವವನ್ನು ಬೆಳೆಸಿಕೊಳ್ಳದೇ ಹೋದುದು ಮತ್ತು ಆಧುನಿಕ ಶೈಕ್ಷಣಿಕ ಸುಧಾರಣೆಗೆ ಒಳಪಡದೇ ಹೋದುದರಲ್ಲಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹಿಂದೂ ಮುಸ್ಲೀಮರು ಪರಸ್ಪರ ಸಮೀಪಕ್ಕೆ ಬರುವ ಎಲ್ಲಾ ಸಂದರ್ಭಗಳೂ ಪ್ರತ್ಯೇಕತಾವಾದಿ ರಾಷ್ಟ್ರೀಯತೆಯ ಮನೋಭಾವದ ಕಾರಣದಿಂದ ಸಾಧ್ಯವಾಗಲಿಲ್ಲ. ಹಿಂದೂ ಮುಸ್ಲೀಮರು ಜತೆಜತೆಯಾಗಿಯೇ ಕಟ್ಟಿಕೊಳ್ಳಬಹುದಾಗಿದ್ದ ಭವ್ಯ ಭವಿಷ್ಯ ಮುಸಲ್ಮಾನರು ಆಧುನಿಕ ಶಿಕ್ಷಣಕ್ಕೆ ಬೆನ್ನುಹಾಕಿದ ಘಟನೆ ಮತ್ತು ಭಾರತೀಯ ರಾಷ್ಟ್ರವಾದವನ್ನು ನಿರಾಕರಿಸಿ ಪ್ರತ್ಯೇಕ ಪಾಕೀಸ್ಥಾನದ ಬೇಡಿಕೆಯ ಹಿಂದೆ ಹೋದುದರಿಂದ ತಪ್ಪಿಹೋಯಿತು. ಭಾರತವನ್ನು ಇಸ್ಲಾಮೀಕರಿಸುವ ಕನಸು ಮತ್ತು ಪ್ರತ್ಯೇಕ ರಾಷ್ಟ್ರೀಯತೆಯ ಕನಸು ಕಾಣುವವರೆಗೆ ಒಂದಾಗುವುದು ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಪಾದಿಸಿದರು. ಗಾಂಧಿ, ನೆಹರು ಹಿಂದೂ ಉದಾರವಾದಿ, ಮಾನವತಾವಾದಿ ಪರಂಪರೆಗೆ ಸಂಕೇತವಾಗಿದ್ದರು. ಹಿಂದೂಗಳು ಅವರ ನಾಯಕತ್ವವನ್ನೂ ಸ್ವೀಕರಿಸಿದ್ದರು. ಆದರೆ ಅದೇ ಸಂದರ್ಭದಲ್ಲಿ ಭಾರತೀಯ ಮುಸಲ್ಮಾನರೇಕೆ ತಮ್ಮದೇ ಆದ ಓರ್ವ ಗಾಂಧಿಯನ್ನು ಸೃಷ್ಟಿಸಲಿಲ್ಲ? ಅಬ್ದುಲ್ ಗಫರ್ ಖಾನ್ ಅವರೊಂದಿಗೂ ಸ್ಪಂಧಿಸಲಿಲ್ಲ? ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು? ಎನ್ನುವಾಗ “ ಭಾರತೀಯ ಮುಸಲ್ಮಾನರ ಸಮಸ್ಯೆಗಳಿಗೆ ಸಮರ್ಥವಾದ ಒಂದೇ ಪರಿಹಾರವಿರುವುದು, ತಮ್ಮ ಐತಿಹಾಸಿಕ ಪೂರ್ವಾಗ್ರಹಗಳನ್ನು ಅವರು ಪೂರಾ ತ್ಯಜಿಸುವುದರಲ್ಲಿ ಮತ್ತು ಇತಿಹಾಸ ಮತ್ತು ಪರಂಪರೆಗಳು ತಮ್ಮಲ್ಲಿ ಸೃಷ್ಟಿಸಿರುವ ತಪ್ಪು ಕಲ್ಪನೆಗಳನ್ನು ಪೂರಾ ನಿಗ್ರಹಿಸಿದಾಗ ಮಾತ್ರ” ( ಪುಟ- 8) ಎಂದಿದ್ದರು.
ಭಾರತದಲ್ಲಿ ಸಂಪೂರ್ಣವಾಗಿ ಸೆಕ್ಯುಲರ್ ಎನ್ನುವ ಮುಸಲ್ಮಾನ ವರ್ಗವೇ ಇಲ್ಲ. ಹೀಗಿರುವಾಗ “ಸಮಾನವಾದ ಭಾರತೀಯ ರಾಷ್ಟ್ರೀಯತೆಯಲ್ಲಿ ಮುಸಲ್ಮಾನ ಸಮಾಜವನ್ನು ಪೂರಾ ಸಮಾವೇಶಗೊಳಿಸಿದಾಗಲೇ ಒಂದು ಸೆಕ್ಯುಲರ್ ಭಾರತೀಯ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುವುದು ಸಾಧ್ಯವಾಗುತ್ತದೆ” ( ಪುಟ – 9)ಎನ್ನುವ ಪರಿಹಾರದ ದಾರಿಯನ್ನೂ ಸೂಚಿಸಿದ್ದರು. ಮುಸ್ಲಿಂ ಸಮಾಜದ ಕೋಮುವಾದಿ ಮನಸ್ಥಿತಿಯನ್ನು ಕಂಡು ಹಿಂದುಗಳು ಸುಧಾರಣಾ ವಿರೋಧಿಗಳಾದರೆ ಅದು ಆತ್ಮಘಾತುಕವಾದ ಪ್ರಯತ್ನವಾಗುತ್ತದೆ. ಹಿಂದುಗಳು ಆಧುನಿಕಗೊಂಡಾಗ, ಸಾಮಾಜಿಕ ಪ್ರಗತಿಯನ್ನು ಹೊಂದುವುದನ್ನು ಮುಸ್ಲೀಮರು ಮನಗಂಡಾಗ ಮುಸ್ಲಿಂ ಕೋಮುವಾದ ವಿಫಲವಾಗಬಹುದು ಎನ್ನುವ ಆಶಾವಾದವನ್ನು ದಲವಾಯಿಯವರು ಹೊಂದಿದ್ದರು. ಭಾರತದ ಪ್ರಗತಿ ಹಿಂದುಗಳ ಆಧುನಿಕತೆ, ಪ್ರಗತಿಪರ ಮಾನಸಿಕತೆ ಮತ್ತು ಕ್ರಿಯಾಶೀಲತೆಯಲ್ಲೇ ಅವಲಂಭಿಸಿದೆ. ಆಧುನಿಕಗೊಳ್ಳುವ ಎಲ್ಲಾ ಅವಕಾಶಗಳನ್ನು ಮುಸ್ಲಿಂ ಸಮಾಜ ನಿರಾಕರಿಸಿತು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಮುಸಲ್ಮಾನ ಬಹುಸಂಖ್ಯಾತರಾಗಿರುವ ಎಲ್ಲಾ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ರಾಷ್ಟ್ರವಾಗಿಸುವ ಚಳವಳಿಯಲ್ಲಿ ಭಾಗಿಯಾದುದು ಹೀನಾಯವಾದ ಪಾಪ ಕೃತ್ಯ ಎನ್ನುತ್ತಾರೆ. ‘ರಾಷ್ಟ್ರವಾದಿ ಮುಸಲ್ಮಾನ’ ಎನ್ನುವುದು ಕೇವಲ ಒಂದು ಕಲ್ಪನೆಯಾಗಬಹಬುದು, ಯಾಕೆಂದರೆ ಮುಸ್ಲಿಂ ಲೀಗ್ ಮತ್ತು ರಾಷ್ಟ್ರವಾದಿ ಮುಸ್ಲಿಂಮರ ನಡುವೆ ವ್ಯತ್ಯಾಸವೇನೂ ಉಳಿದಿಲ್ಲ ಎನ್ನುವುದನ್ನು ನಿದರ್ಶನ ಸಹಿತವಾಗಿಯೇ ವಿವರಿಸುತ್ತಾರೆ. ಜಿನ್ನಾ ಗಾಂಧಿ ಮತ್ತು ನೆಹರು ಅವರನ್ನೂ ಹಿಂದೂ ಕೋಮುವಾದಿಗಳು ಎಂದೇ ಟೀಕಿಸುತ್ತಿದ್ದರು. ಹೀಗಾಗಿ ನಿಜವಾದ ಸಂಘರ್ಷವಿದ್ದುದು ಹಿಂದು ಮತ್ತು ಮುಸಲ್ಮಾನ ಕೋಮುವಾದಿಗಳ ನಡುವೆ ಅಲ್ಲ, ಸಂಘರ್ಷವಿದ್ದುದು ಗಾಂಧಿ ಮತ್ತು ನೆಹರು ಅವರ ಸೆಕ್ಯುಲರ್ ರಾಷ್ಟ್ರೀಯತೆ ಮತ್ತು ಭಾರತೀಯ ಮುಸಲ್ಮಾನರ ಮತೀಯ ರಾಷ್ಟ್ರೀಯತೆಗಳ ನಡುವೆ (ಪುಟ -38) ಎನ್ನುತ್ತಾರೆ.
ದಲವಾಯಿಯವರು ಒಟ್ಟು ಮುಸ್ಲಿಂ ಮಾನಸಿಕತೆಯನ್ನು ವಿಮರ್ಶಿಸುವಾಗ ಚಾರಿತ್ರಿಕವಾಗಿ ಮತಗಳು ಎದುರಿಸಿದ ಆಕ್ರಮಣ , ಬಲತ್ಕಾರಗಳನ್ನು ನೆನಪಿಸಿಕೊಳ್ಳುತ್ತಾರೆ. ಮುಸ್ಲಿಂ ಆಕ್ರಮಣಕ್ಕೆ ತುತ್ತಾದಾಗ ಹಿಂದುಗಳನ್ನು, ಕ್ರೈಸ್ತರನ್ನು ಬಲತ್ಕಾರದಿಂದ ಇಸ್ಲಾಮ್ಗೆ ಮತಾಂತರಗೊಳಿಸಿದಂತೆ ಕ್ರೈಸ್ತ ದೇಶಗಳಲ್ಲಾಗಲೀ, ಹಿಂದೂಗಳೆ ಆಗಲೀ ಮುಸಲ್ಮಾನರನ್ನು ಆಳಿದಾಗ ಒತ್ತಾಯಪೂರ್ವಕ ಮತಾಂತರ ಮಾಡಿದ ಇತಿಹಾಸವೇ ಇಲ್ಲ. ಮುಸ್ಲಿಂ ಸಮಾಜ ಮಧ್ಯಯುಗದ ವಿಧಾನದಿಂದ ಆಧುನಿಕತೆಯತ್ತ ತೆರೆದುಕೊಂಡಿಲ್ಲ. ಹೀಗಿರುವ ಭಾರತದಲ್ಲಿನ ಸೆಕ್ಯುಲರ್ ಎನ್ನಲಾಗುವ ಎಲ್ಲ ರಾಜಕೀಯ ಪಕ್ಷಗಳೂ ಸಹ ಭಾರತೀಯ ಮುಸಲ್ಮಾನರನ್ನು ಮಧ್ಯಯುಗೀನ ಸ್ಥಿತಿಯಲ್ಲಿಯೇ ಉಳಿಸುವುದರಲ್ಲಿ ಒಮ್ಮತ ಹೊಂದಿದಂತೆ ಕಾಣುತ್ತದೆ . ಇದೆಲ್ಲದರ ಪರಿಣಾಮ ಹಿಂದುಗಳಲ್ಲಿ ಕಾಣುವ ಉದಾರವಾದಿ ಪ್ರವೃತ್ತಿಯು ಕ್ಷೀಣಿಸಲು ಭಾರತೀಯ ಮುಸಲ್ಮಾನರ ಕೋಮುವಾದಿ ಪ್ರವೃತ್ತಿಯೇ ಕಾರಣವಾಗುತ್ತಿದೆ ಎನ್ನುವುದರ ಕಡೆಗೆ ಗಮನ ಸೆಳೆಯುತ್ತಾರೆ.
ನೆಹರು ಅವರನ್ನು ಮುಸ್ಲಿಂ ಪರವಾಗಿದ್ದವರೆಂದು ಸಾಮಾನ್ಯವಾಗಿ ಟೀಕಿಸಲಾಗುತ್ತದೆ. ಆದರೆ ದಲವಾಯಿಯವರು ಇನ್ನೊಂದು ಮುಖವನ್ನು ಗುರುತಿಸುತ್ತಾರೆ. ಭಾರತದಲ್ಲಿ ಮುಸ್ಲಿಂ ರಾಜಕಾರಣದ ಹಿಂದಿರುವ ಚಾರಿತ್ರಿಕ ಶಕ್ತಿಗಳನ್ನು ಯಥಾರ್ಥವಾಗಿ ತಿಳಿದಿದ್ದ ಪ್ರಾಯಶಃ ಏಕಮಾತ್ರ ಮುತ್ಸದ್ದಿಯಾಗಿದ್ದವರು ನೆಹರು ಎನ್ನುತ್ತಾರೆ. ಇಂತಹ ಸನ್ನಿವೇಶದಲ್ಲಿ ತಾನೊರ್ವ ಮುಸಲ್ಮಾನರ ಹಿತಾಸಕ್ತಿಗಳ ರಕ್ಷಕನೆಂಬಂತೆ ಅವರು ಸರ್ವೇ ಸಾಮಾನ್ಯವಾಗಿ ಬಿಂಬಿಸಿಕೊಳ್ಳುತ್ತಿದ್ದುದು ಮುಸಲ್ಮಾನರ ಇನ್ನೊಂದು ಬಲವಾದ ರಾಜಕೀಯ ಪಕ್ಷವು ಪುನಃ ತಲೆ ಎತ್ತದಂತೆ ತಡೆಯುವ ಉದ್ದೇಶದಿಂದಲೇ ಎನ್ನುತ್ತಾರೆ. ಆದರೆ ಮುಂದೆ ಇಂದಿರಾ ಗಾಂಧಿ ನೆಹರು ಹಾಕಿದ್ದ ಸೆಕ್ಯುಲರ್ ರಾಷ್ಟ್ರವಾದದ ತಳಹದಿಯನ್ನು ದುರ್ಬಲಗೊಳಿಸಿದರು ಎನ್ನುವುದನ್ನೂ ಗುರುತಿಸುತ್ತಾರೆ. ಸಾಮಾನ್ಯವಾಗಿ ಹಿಂದೂಗಳ ವಿಷಯಕ್ಕೆ ಬಂದಾಗ ನಮ್ಮ ಸಮಾಜವನ್ನು ಆಧುನಿಕಗೊಳಿಸಲು ತಾವು ಬದ್ಧರೆಂದು ಹೇಳಿಕೊಳ್ಳುವ ವಾಮ ಪಂಥೀಯರು ಮುಸಲ್ಮಾನ ಪ್ರತ್ಯೇಕತವಾದ ಮತ್ತು ಮತನಿಷ್ಠೆಯನ್ನು ಬೆಂಬಲಿಸುತ್ತಿರುವುದು ಮಾತ್ರ ರಾಜಕಾರಣದ ವಿಷಾದಕರ ವ್ಯಂಗ್ಯ ಎನ್ನುತ್ತಾರೆ. ಅವಕಾಶವಾದಿಗಳಾಗಿ ಮುಸ್ಲಿಂ ಲೀಗಿನ ನಾಯಕರೂ ಕೂಡ ಏಕಾಏಕಿ ಕಮ್ಯುನಿಷ್ಠರಾದ ಉದಾಹರಣೆಗಳೊಂದಿಗೆ, ಮುಸ್ಲಿಂ ಕೋಮುವಾದಿಗಳು ಮತ್ತು ಕಮ್ಯುನಿಷ್ಠರು ಪರಸ್ಪರ ಹೇಗೆ ಸಹಕರಿಸುತ್ತಾರೆ ಎನ್ನುವುದನ್ನು ಗುರುತಿಸುತ್ತಾರೆ. ಹಾಗಾದರೆ ಮುಸ್ಲಿಂ ಸಮಾಜವನ್ನು ರಾಷ್ಟ್ರೀಯ ಪ್ರವಾಹದಲ್ಲಿ ಒಂದಾಗಿಸಲು ಇರುವ ಪರಿಹಾರ ಸೂತ್ರವೇನು ? ಎನ್ನುವಾಗ “ ಮುಸಲ್ಮಾನರಲ್ಲಿ ಆಧುನಿಕವಾದ ಮತ್ತು ಉದಾರವಾದ ಮನೋಧರ್ಮವನ್ನು ಲಕ್ಷ್ಯಪೂರ್ವಕವಾಗಿ ಪೋಷಿಸುವುದರ ಮೂಲಕ ಮಾತ್ರ ರಾಷ್ಟ್ರೀಯ ಏಕಾತ್ಮತೆಯ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೇ ಹೊರತು , ಸ್ವಘೋಷಿತ ಸೆಕ್ಯುಲರ್ ರಾಜಕೀಯ ಪಕ್ಷಗಳ ತುಷ್ಟೀಕರಣದ ನೀತಿಯಿಂದಲ್ಲ” ಎನ್ನುತ್ತಾರೆ.
ಹಿಂದೂ ಬುದ್ದಿಜೀವಿಗಳು ಸೆಕ್ಯುಲರ್ ಆದರ್ಶಕ್ಕೆ ಸರಿಹೊಂದದ ನಿಲುವುಗಳನ್ನು ವಿರೋಧಿಸಿದಂತೆ ಮುಸ್ಲಿಂ ಬುದ್ದಿಜೀವಿಗಳು ನಡೆದುಕೊಂಡಿಲ್ಲ ಎನ್ನುವುದಕ್ಕೆ 60-70 ರ ದಶಕದ ಘಟನೆಗಳ ಅನೇಕ ನಿದರ್ಶನಗಳನ್ನು ನೀಡುತ್ತಾರೆ. ಹಿಂದು ಮುಸ್ಲಿಂ ಉಭಯ ಸಮುದಾಯಗಳ ವಿಚಾರವಂತರ ನಡುವೆ ಅವರನ್ನು ಪ್ರತ್ಯೇಕವಾಗಿರಿಸುವ ಕಂದಕವು ಅತಿ ವಿಶಾಲವಾಗಿರುವುದೇ ಅವರಲ್ಲಿ ಸೆಕ್ಯುಲರ್ ಸ್ವರೂಪದ ಏಕಮಾನಸಿಕತೆಯನ್ನು ರೂಪಿಸುವುದರಲ್ಲಿಯ ನಿಜವಾದ ಅಡ್ಡಿಯಾಗಿದೆ. ಹಿಂದೂ ದರ್ಮದ ವಿಮರ್ಶೆಯನ್ನು ಮಾಡುವ ಹಿಂದೂ ಬುದ್ದಿಜೀವಿಗಳನ್ನು ಹಿಂದುಗಳು ಸ್ವೀಕರಿಸಿದಂತೆ, ಮುಸ್ಲಿಂ ಸಮಾಜದ ವಿಮರ್ಶೆಯನ್ನು ಮಾಡುವ ಮುಸ್ಲಿಂ ಬುದ್ಧಿಜೀವಿಗಳನ್ನು ಮುಸ್ಲಿಂ ಸಮಾಜ ಸ್ವೀಕರಿಸದೇ ಹೋದುದೇ ಬಹುದೊಡ್ಡ ಸಮನಸ್ಯೆಯಾಗಿದೆ. ನೆಹರು ಅವರನ್ನು ಹಿಂದುಗಳು ತಮ್ಮ ನಾಯಕರನ್ನಾಗಿ ಸ್ವಿಕರಿಸಿದಂತೆ , ಎಂ.ಸಿ.ಛಾಗ್ಲಾ ಅವರನ್ನು ಮುಸ್ಲಿಂ ಸಮಾಜ ಸ್ವೀಕರಿಸಿಸಲಿಲ್ಲ ಎನ್ನುವ ವ್ಯಥೆಯನ್ನು ವ್ಯಕ್ತಪಡಿಸುತ್ತಾರೆ. ಈ ಸಮಸ್ಯೆಯ ಪರಿಹಾರವೆಂದರೆ, ಇಂದು ಮುಸಲ್ಮಾನರಿಗೆ ಬೇಕಾಗಿರುವುದು ಮುಸಲ್ಮಾನರ ಮತೀಯ ಹಿತಾಸಕ್ತಿಗಳ ರಕ್ಷಕರು ನಾವು ಎನ್ನುವವರಲ್ಲ, ಸಂಪೂರ್ಣ ಭಾರತೀಯ ಸಮಾಜದ ವಿವಿಧ ವರ್ಗ ಮತ್ತು ಸ್ಥರದವರನ್ನು ಮುನ್ನಡೆಸುವ ನಾಯಕತ್ವ. ಕಾಂಗ್ರೆಸ್, ಮಾರ್ಕ್ಸ್ವಾದಿ ಪಕ್ಷಗಳ ಮುಸ್ಲಿಮ್ ನಾಯಕತ್ವ ಹೀಗಿದೆಯೇ ಎನ್ನುವುದನ್ನು ವಿಶ್ಲೇಷಿಸುತ್ತಾ, ಮಾಕ್ಸ್ವಾದಿಗಳೆನ್ನುವಂತಹ ಮುಸಲ್ಮಾನ ನಾಯಕರೂ ತಮ್ಮ ಸಾರ್ವಜನಿಕ ಬದುಕನ್ನು ಮತೀಯ ಹಿತಾಸಕ್ತಿಯಿಂದ ಕುಲಗೆಡಿಸಿಕೊಂಡಿರುವ ಉದಾಹರಣೆಗಳನ್ನು ನೀಡುತ್ತಾರೆ. ಸೆಕ್ಯುಲರ್ ವಿರೋಧಿಗಳಂತೆ ವರ್ತಿಸಿದ ಪ್ರಕರಣಗಳೇ ಇರುವುದಲ್ಲದೇ ತಾವು ಭಾರತೀಯರಂತೆ ವ್ಯವಹರಿಸಲು ಅವರು ವಿಫಲರಾಗುತ್ತಿರುವುದನ್ನು ತೋರಿಸುತ್ತಾರೆ. ಜತೆಗೆ ಸೆಕ್ಯುಲರ್ ಹಿಂದುಗಳೂ ಮತೀಯವಾದಿ ಮುಸಲ್ಮಾನರ ಬೇಡಿಕೆಗಳನ್ನು ಬೆಂಬಲಿಸುತ್ತಿರುವುದೇ ಒಂದು ವ್ಯಂಗ್ಯವೆನ್ನುತ್ತಾರೆ.
ಭಾರತದಲ್ಲಿ ಹಿಂದೂ ಸಮಾಜದಲ್ಲಿರುವ ಚಲನಶೀಲತೆ ಮುಸ್ಲಿಂ ಸಮಾಜದಲ್ಲಿ ಇಲ್ಲ. ಇಸ್ಲಾಮಿನ ಚಲನಶೀಲತೆ ಕೇವಲ ಮತ ವಿಸ್ತರಣೆಗಾಗಿ ಮಾತ್ರ ಬಳಕೆಯಾಗುತ್ತಿದೆ. ಈ ಮನಸ್ಥಿತಿಯನ್ನು ದಲವಾಯಿಯವರು ‘ ಆತ್ಮನಾಶದ ಬೀಜ’ ಎನ್ನುತ್ತಾರೆ. ಹಿಂದೂ ಸಮಾಜವನ್ನು ಆಧುನೀಕರಿಸಲು ನೆಹರು , ಸಾವರ್ಕರ್ ಪ್ರಯತ್ನಿಸಿದರು. ಭಾರತದ ಮುಸಲ್ಮಾನರು ತಮ್ಮಲ್ಲಿ ಓರ್ವ ನೆಹರು ಮತ್ತು ಓರ್ವ ಸಾವರ್ಕರ್ರನ್ನು ಇನ್ನೂ ಪ್ರಾದುರ್ಭಾವಗೊಳಿಸಬೇಕಷ್ಟೇ. ಆದರೆ “ಭಾರತೀಯ ಮುಸಲ್ಮಾನರು ಉದಾರವಾದಿಗಳಾಗುವುದು ಉದಾರವಾದಿ ಹಿಂದುಗಳು ಕೋಮುವಾದಿ ಹಿಂದುಗಳನ್ನು ನಿಂದಿಸುವಾಗ ಮಾತ್ರ” ಎನ್ನುತ್ತಾರೆ. ಈ ಎಲ್ಲಾ ವಿಚಾರಗಳನ್ನು ನಮ್ಮ ವರ್ತಮಾನದಲ್ಲಿ ಚರ್ಚೆಗೆ ಒಳಪಡಿಸಬೇಕಾದ ಅವಶ್ಯಕತೆ ತುಂಬಾ ಇದೆ.
✍️ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.