ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಮಾಹಿತಿ ತೊಡೆದು ಹಾಕಿ, ಕ್ಯಾನ್ಸರ್ ರೋಗದ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಅಂತರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ (UICC) 2000 ನೇ ಇಸವಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಜಾರಿಗೆ ತಂದಿತು. 2019 ರಿಂದ2021 ರವರೆಗೆ ‘I can and I will’ ಅಂದರೆ ನನ್ನಿಂದ ಸಾಧ್ಯವಿದೆ ಮತ್ತು ನಾನು ಮಾಡುತ್ತೇನೆ ಎಂಬ ಧ್ಯೇಯ ವಾಕ್ಯದೊಂದಿಗೆ ಕ್ಯಾನ್ಸರ್ ರೋಗ ಪೀಡಿತರಿಗೆ ನೈತಿಕ ಬೆಂಬಲ ನೀಡುವ ಘೋಷವಾಕ್ಯದೊಂದಿಗೆ ಈ ಆಚರಣೆಯನ್ನು ಜಾಗತಿಕವಾಗಿ ಮಾಡಲಾಯಿತು. 2022 ರಲ್ಲಿ Close the Care Gap ಅಂದರೆ ಕ್ಯಾನ್ಸರ್ ಪೀಡಿತರಿಗೆ ಸಿಗುವ ಚಿಕಿತ್ಸೆಯ ಅಂತರವನ್ನು ಕಡಿಮೆ ಮಾಡೋಣ ಎಂಬ ಘೋಷ ವಾಕ್ಯದೊಂದಿಗೆ ಎಲ್ಲ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಲಿ ಎಂಬ ಧ್ಯೇಯದೊಂದಿಗೆ ಆಚರಣೆ ನಡೆಸಲು ಉದ್ಧೇಶಿಸಲಾಗಿದೆ. ಕ್ಯಾನ್ಸರ್ ರೋಗದ ಬಗೆಗಿನ ನಮಗೆ ತಿಳಿದಿರುವ ಸರಿಯಾದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡು, ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೈರ್ಯ ಮತ್ತು ಮನೋ ಸ್ಥೈರ್ಯ ನೀಡಿ, ನೈತಿಕ ಬೆಂಬಲವನ್ನು ಕೊಟ್ಟು ಅವರು ಕ್ಯಾನ್ಸರ್ ರೋಗವನ್ನು ಎದುರಿಸುವಲ್ಲಿ ಅವರಿಗೆ ಸಕಲ ರೀತಿಯ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಬೇಕು ಎಂಬ ಮಹೋನ್ನತವಾದ ಆಶಯವನ್ನು ಈ ’ಕ್ಯಾನ್ಸರ್ ದಿನಾಚರಣೆ’ ಹೊಂದಿದೆ.
ಏನಿದು ಕ್ಯಾನ್ಸರ್?
ಕ್ಯಾನ್ಸರ್ ಕಾಯಿಲೆ ಅಥವಾ ಅರ್ಬುದ ರೋಗ ಎನ್ನುವುದು ಜೀವಕೋಶಗಳ ಅನಿಯಂತ್ರಿತ ವಿಭಜನೆಯಿಂದಾಗಿ ಉಂಟಾಗುವ ಮಾಂಸದ ಗಡ್ಡೆಯಾಗಿರುತ್ತದೆ. ಆಂಗ್ಲಭಾಷೆಯಲ್ಲಿ ಟ್ಯೂಮರ್ ಎಂದೂ ಕರೆಯುತ್ತಾರೆ. ಈ ಟ್ಯೂಮರ್ ಗಡ್ಡೆಗಳಲ್ಲಿ ಎರಡು ವಿಧಗಳಿವೆ. ಮಾರಣಾಂತಿಕವಾಗುವ ವೇಗವಾಗಿ ಬೆಳೆಯುವ ಮತ್ತು ಮಾಂಸದ ಗಡ್ಡೆಯ ಸುತ್ತಕವಚವಿಲ್ಲದ ಟ್ಯೂಮರ್ಗಳನ್ನು ಮಾಲಿಗ್ನೆಂಟ್ ಅಥವಾ ತೀವ್ರತರವಾಗಿ ಬೆಳೆಯುವ ಟ್ಯೂಮರ್ ಎನ್ನಲಾಗುತ್ತದೆ. ಇನ್ನು ನಿಧಾನಗತಿಯಿಂದ ಬೆಳೆಯುವ ಮಾರಣಾಂತಿಕವಲ್ಲದ ಹಾಗೂ ಗಡ್ಡೆಯ ಸುತ್ತ ಹೊರಗವಚ ಅಥವಾ ಕ್ಯಾಪ್ಸೂಲ್ ಇರುವ ಮಾಂಸದ ಗಡ್ಡೆಗಳನ್ನು ಬಿನೈನ್ ಗಡ್ಡೆಗಳು ಎನ್ನಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ಗಡ್ಡೆಗಳನ್ನು ಸಾವ್ರತ್ರಿಕವಾಗಿ ಟ್ಯೂಮರ್ ಅಥವಾ ಮಾಂಸದ ಗಡ್ಡೆ ಎಂದುದಾಗಿ ಸಂಬೋಧಿಸಲಾಗುತ್ತದೆ. ಹಾಗೂ ಮಾಲಿಗ್ನೆಂಟ್ ಗಡ್ಡೆಗಳಿಗೆ ಹೆಚ್ಚಾಗಿ ಕ್ಯಾನ್ಸ್ರ್ ಎಂದೂ ಸಂಭೋಧಿಸಲಾಗುತ್ತದೆ. ಈ ಟ್ಯೂಮರ್ ದೇಹದ ಬೇರೆ ಬೇರೆ ಅಂಗಾಂಶಗಳಿಂದ ಜನ್ಮ ತಾಳಬಹುದು ಮತ್ತು ಯಾವ ಜೀವಕೋಶಗಳಿಂದ ಹುಟ್ಟಿದೆ ಎಂಬುದರ ಆದಾರದ, ಮೇಲೆ ಗಡ್ಡೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಚರ್ಮದ ಮೇಲ್ಭಾಗದ ಪದರದಿಂದ ಹುಟ್ಟುವ ತೀವ್ರತರವಾದ ಗಡ್ಡೆಗಳನ್ನು ಕಾರ್ಸಿನೋಮಾ ಎನ್ನಲಾಗುತ್ತದೆ. ಉದಾಹರಣೆಗೆ ಥೈರಾಯಿಡ್ ಕಾರ್ಸಿನೋಮ, ಮೆದೋಜಿರಕ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಇತ್ಯಾದಿ ಇನ್ನು ಚರ್ಮದ ಕೆಳಗಿನ ಭಾಗದ ಎಲುಬು, ಮಾಂಸಖಂಡಗಳು, ರಕ್ತನಾಳಗಳು, ಸ್ನಾಯಗಳು, ಅಸ್ಥಿಮಜ್ಜೆಗಳು ಮುಂತಾದ ಅಂಗಾಂಶಗಳಿಂದ ಹುಟ್ಟಿ ಬರುವ ತೀವ್ರತರವಾದ ಕ್ಯಾನ್ಸರ್ಗೆ ಸಾರ್ಕೋಮ ಎನ್ನಲಾಗುತ್ತದೆ. ಸಾರ್ಕೋಮಾ ಹೆಚ್ಚಾಗಿ ರಕ್ತದ ಮುಖಾಂತರ ದೇಹದೆಲ್ಲೆಡೆ ಬೇಗನೆ ಹರಡುತ್ತದೆ. ಇನ್ನೂ ಕಾರ್ಸಿನೋಮಾ ಹೆಚ್ಚಾಗಿ ಲಿಂಫ್ ಎಂಬ ಜೀವಕೋಶಗಳ ದ್ರವ್ಯಗಳ ಮುಖಾಂತರ ಹರಡುತ್ತದೆ.
ಕ್ಯಾನ್ಸರ್ ಬರಲು ಕಾರಣಗಳು
ಕ್ಯಾನ್ಸರ್ ರೋಗ ಬರಲು ನಿರ್ದಿಷ್ಟವಾದ ಕಾರಣ ಇದೆ ಎಂದು ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ. ಹತ್ತು ಹಲವು ಕಾರಣಗಳು ಒಟ್ಟು ಸೇರಿ ಜೀವ ಕೋಶಗಳ ಜೈವಿಕ ವಿಭಜನೆ ಕ್ರಿಯೆಯನ್ನು ಹೈಜಾಕ್ ಮಾಡಿ ಅನಿಯಂತ್ರಿಕ ಗಡ್ಡೆ ಬೆಳೆಯಲು ಪ್ರಚೋಧಿಸುತ್ತದೆ. ಆದರೆ ಹೆಚ್ಚಿನ ಎಲ್ಲಾ ಕ್ಯಾನ್ಸರ್ಗಳಿಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಅತಿಯಾದ ಬಳಕೆ ಕಾರಣ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದಲ್ಲದೆ ಆನುವಂಶಿಕ ಕಾರಣಗಳು, ಮಧ್ಯಪಾನ, ಅನಾರೋಗ್ಯಕರ ಜೀವನ ಶೈಲಿ, ಅನಾರೋಗ್ಯ ಪೂರ್ಣ ಆಹಾರ ಅದ್ಧತಿ, ಒತ್ತಡದ ಜೀವನ ಎಲ್ಲವೂ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದೂ ತಿಳಿದು ಬಂದಿದೆ. ಅತಿಯಾದ ಕೃತಕ ರಸದೂತಗಳ ಬಳಕೆ, ಅತಿಯಾದ ಗರ್ಭನಿರೋಧಕ ಮಾತ್ರೆಗಳ ಬಳಕೆಯಿಂದ ಮಹಿಳೆಯರಲ್ಲಿ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದೂ ಅಂದಾಜಿಸಲಾಗಿದೆ. ಅತಿಯಾದ ವಿಕಿರಣದ ವಾತಾವರಣಕ್ಕೆ ತೆರೆದುಕೊಳ್ಳುವುದು, ಅನಾರೋಗ್ಯಕರ ಲೈಂಗಿಕ ಜೀವನ, ಹತ್ತು ಹಲವು ಸಂಗಾತಿಗಳ ಜೊತೆ ಲೈಂಗಿಕ ಸಂಬಂಧ, ಹತ್ತಾರು ಬಾರಿ ಗರ್ಭ ಧರಿಸುವುದು, ಹೆಪಟೆಟಿಸ್ ಬಿ ಮತ್ತು ಸಿ ವೈರಾಣು ಸೋಂಕು, ಏಡ್ಸ್ ವೈರಾಣು ಸೋಂಕು, ಎಬ್ಸ್ಟೈನ್ಬಾರ್ ವೈರಾಣು ಸೋಂಕು, ಹ್ಯೂಮನ್ ಪಾಪಿಲೋಮ ವೈರಾಣು ಸೋಂಕು, ವಾಯು ಮಾಲಿನ್ಯ, ವಾತಾವರಣದ ವೈಪರೀತ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳು ದೇಹಕ್ಕೆ ಸೇರುವುದು, ( ಪೈಂಟರ್ಗಳು, ಸೀಸದ ಕಾರ್ಖಾನೆ ಕೆಲಸಗಾರರು) ಅತಿಯಾದ ರಾಸಾಯನಿಕಯುಕ್ತ ಜಂಕ್ ಆಹಾರ ಹಾಗೂ ಸಿದ್ಧ ಆಹಾರ ಸೇವನೆ ಎಲ್ಲವೂ ಕ್ಯಾನ್ಸರ್ಗೆ ಕಾರಣವಾಗುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಅನುವಂಶಿಕ ಕಾರಣ ಒಂದನ್ನು ಬಿಟ್ಟು ಉಳಿದೆಲ್ಲಾ ಕಾರಣಗಳನ್ನು ಸ್ವಯಂ ನಿಯಂತ್ರಣ ಸಾಧಿಸಿ, ಕ್ಯಾನ್ಸರ್ ಕಾರಕ ವಸ್ತುಗಳಿಗೆ ನಾವು ತೆರೆದುಕೊಳ್ಳದಿದ್ದಲ್ಲಿ ಕ್ಯಾನ್ಸರ್ ಮುಕ್ತ ಜೀವನ ಸಾಧಿಸಲು ಖಂಡಿತಾ ಸಾಧ್ಯವಿದೆ.
ತಡೆಗಟ್ಟುವುದು ಹೇಗೆ?
ಧೂಮಪಾನ, ಮಧ್ಯಪಾನ ವರ್ಜಿಸಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖಂಡಿತವಾಗಿಯೂ ಸೇವಿಸಬಾರದು. ಆರೋಗ್ಯಪೂರ್ಣ ಜೀವನ ಪದ್ಧತಿ, ಪರಿಪೂರ್ಣ ಸಮತೋಲಿತ ಆಹಾರ, ಶಿಸ್ತುಬದ್ಧ ಜೀವನ ಶೈಲಿ, ನಿರಂತರ ದೈಹಿಕ ವ್ಯಾಯಾಮ ಒತ್ತಡವಿಲ್ಲದ ಜೀವನ ಕ್ರಮ ರೂಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ವಿಕಿರಣ ಸೂಸುವ ವಾತಾವರಣವಿದ್ದಲ್ಲಿ ಅಥವಾ ವೃತ್ತಿ ಸಂಬಂಧಿ ಕ್ಯಾನ್ಸರ್ಕಾರಕ ವಸ್ತುಗಳಿಗೆ ತೆರೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇದ್ದಲ್ಲಿ ವೃತ್ತಿಯನ್ನು ಬದಲು ಮಾಡಿ. ಅನುವಂಶೀಯ ಕಾರಣವಿದ್ದಲ್ಲಿ ನಿರಂತರವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ. ಅತಿಯಾದ ಗರ್ಭನಿರೋಧಕ ಮಾತ್ರೆ ಮತ್ತು ರಸದೂತಗಳ ಅನಿಯಂತ್ರಿಕ ಬಳಕೆಗೆ ಕಡಿವಾಣ ಹಾಕಬೇಕು. ಆರೋಗ್ಯಪೂರ್ಣ ಲೈಂಗಿಕ ಹವ್ಯಾಸ ರೂಡಿಸಿಕೊಂಡು ವೈರಸ್ ಸೋಂಕು ತಗಲದಂತೆ ಎಚ್ಚರವಹಿಸಿ ಕಾಲಕಾಲಕ್ಕೆ ನಿಯಮಿತವಾಗಿ ಮತ್ತು ನಿರಂತರವಾಗಿ ವೈದ್ಯರ ಮಾರ್ಗದರ್ಶನದಿಂದ ಅರ್ಬುದ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ, ನೂರು ಕಾಲ ಸುಖವಾಗಿ ಬದುಕಬಹುದು.
ಚಿಕಿತ್ಸೆ ಹೇಗೆ?
ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಶೇಕಡಾ ೯೦ರಷ್ಟು ಅರ್ಬುದ ರೋಗವನ್ನು ಸರ್ಜರಿ ಮುಖಾಂತರ ತೆಗೆಯಲಾಗುತ್ತದೆ. ಆದರೆ ಕೆಲವೊಂದು ಅರ್ಬುದ ರೋಗವನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ. ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೇ ಹಂತದಲ್ಲಿ) ಸರ್ಜರಿಯ ಜೊತೆಗೆ ಕಿಮೋಥೆರಪಿ ಮತ್ತು ರೆಡೀಯೋಥೆರಪಿಯ (ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು.
ಕೊನೆಮಾತು
ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೇ ಅಗ್ರಸ್ಥಾನವನ್ನು (ಮೊದಲ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ ೧೬ ಮಿಲಿಯನ್ ಮಂದಿ ಕ್ಯಾನ್ಸರ್ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ,ಗಂಟಲು, ಶ್ವಾಸಕೋಸ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ (ವೃಷಣ) ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ ಎರಡನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ, ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಬಡತನ, ಮೂಢನಂಬಿಕೆ ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ.
ಭಾರತ ದೇಶವೊಂದರಲ್ಲಿ ವರ್ಷಕ್ಕೆ 14 ಲಕ್ಷ ಜನರು ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇಕಡಾ 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತಂಬಾಕಿನ ವಿವಿಧ ರೂಪಗಳಾದ ಗುಟ್ಕಾ, ಪಾನ್ಪರಾಗ್, ಮಾರುತಿ ಮತ್ತು ಮಾಣಿಕ್ಚಂದ್ ಮುಂತಾದುವುಗಳಿಂದ ಬಾಯಿ, ನಾಲಗೆ, ಗಂಟಲು ಮುಂತಾದ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತದೆ. ಇದರ ಜೊತೆಗೆ ಧೂಮಪಾನ, ಮಧ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ. ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತದೆ. ಸಮಾಧಾನಕರವಾದ ಅಂಶವೆಂದರೆ ಕ್ಯಾನ್ಸರ್ನ್ನು ಈ ದುಶ್ಚಟಗಳಿಂದ ನಿಯಂತ್ರಿಸಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
ಅರ್ಬುದ ರೋಗ ಎನ್ನುವುದು ಗುಣಪಡಿಸಲಾಗುದ ರೋಗ ಎನ್ನುವುದು ಖಂಡಿತವಾಗಿಯೂ ನಿಜವಲ್ಲ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಸೂಕ್ತ ಚಿಕಿತ್ಸೆ ನೀಡಬಹುದು. ಮತ್ತು ನಿರಂತರವಾಗಿ ವೈದ್ಯರ ಸಲಹೆ ಮಾರ್ಗದರ್ಶನಗಳ ಮುಖಾಂತರ ನೆಮ್ಮದಿಯಿಂದ ಬದುಕಬಹುದು. ಬಾಯಿ, ಸ್ತನ, ಜನನಾಂಗ ಮುಂತಾದ ಎಲ್ಲಾ ಅರ್ಬುದ ರೋಗಗಳನ್ನು ಆರಂಭದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ ಮುಂದುವರಿದ ಹಂತದಲ್ಲಿ ಅರ್ಬುದ ರೋಗ ಚಿಕಿತ್ಸೆಗೆ ಖಂಡಿತ ಸ್ಪಂದಿಸಲಿಕ್ಕಿಲ್ಲ. ಮತ್ತು ಮಾರಣಾಂತಿಕವಾಗುವುದರಲ್ಲಿ ಸಂಶಯವೇ ಇಲ್ಲ. ಬಡತನ, ಅನಕ್ಷರತೆ ಅಜ್ಞಾನ, ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ನ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಪ್ರತಿಯೊಬ್ಬ ವಿದ್ಯಾವಂತ ಪ್ರಜೆ ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಅರ್ಬುದ ರೋಗವನ್ನು ಖಂಡಿತವಾಗಿಯೂ ಜಯಿಸಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಸುಖ ಶಾಂತಿ ನೆಮ್ಮದಿ ಮತ್ತು ಭವಿಷ್ಯ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.