ಬೆಂಗಳೂರು: ಪಂಜಾಬ್ನಲ್ಲಿ ಪ್ರಧಾನಿಯವರ ಭೇಟಿ ವೇಳೆ ಭದ್ರತಾ ವಿಫಲತೆ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಸುಳ್ಳು ಹೇಳಿದ್ದು, ಕಾಂಗ್ರೆಸ್ನವರು ಅವರಿಂದ ಸುಳ್ಳು ಹೇಳಿಸಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸುಳ್ಳನ್ನೇ ಹೇಳುವವರಿಗೆ ಮಾತ್ರ ಅವಕಾಶ ಇದೆ. ಆ ಪಕ್ಷದಲ್ಲಿದ್ದ ನಾನು ಸತ್ಯ ಹೇಳಲು ಬಿಜೆಪಿಗೆ ಬಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಸುಳ್ಳು ಹೇಳಿದ್ದನ್ನು ನಾನು ನೋಡಿರಲಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಅವರ ಕೈಯಲ್ಲಿ ಕಾಂಗ್ರೆಸ್ನವರು ಸುಳ್ಳು ಹೇಳಿಸಿದ್ದಾರೆ. ದಲಿತ ವಿಚಾರವನ್ನು ತಂದಿದ್ದಾರೆ. ಪಂಜಾಬ್ನ ದಲಿತ ಸಿಎಂ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಹೀಗೆ ಮಾಡಿದ್ದಾರೆ ಎಂದಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.
ಖಲಿಸ್ತಾನ ಮತ್ತು ಪಾಕಿಸ್ತಾನದ ಜೊತೆ ಪಂಜಾಬ್ ಸರಕಾರ ಕೈಜೋಡಿಸಿದೆ ಎಂದು ಅವರು ಟೀಕಿಸಿದರು. ಈ ಘಟನೆಯನ್ನು ದೇಶದ ಎಲ್ಲ ಪ್ರಜೆಗಳು ಖಂಡಿಸಬೇಕು ಎಂದು ಅವರು ನುಡಿದರು.
ಭದ್ರತಾ ವಿಫಲತೆಯು ಕ್ರಾಸ್ ಬಾರ್ಡರ್ ಟೆರರಿಸಂನ ಒಂದು ಭಾಗ. ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಪಾಕ್ ಜೊತೆ ಸೇರಿ ಈ ಕೃತ್ಯವನ್ನು ಪಂಜಾಬ್ ಸರಕಾರ ಮತ್ತು ಕಾಂಗ್ರೆಸ್ನವರು ಮಾಡಿದ್ದಾರೆ. ಇದರ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆ ಎಂದು ವಿವರಿಸಿದರು.
ಈ ಆರೋಪ ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಖರ್ಗೆಯವರನ್ನು ಪ್ರಶ್ನಿಸಿದ ಅವರು, ಪ್ರಧಾನಿಯವರು ಬರುವ ಮೊದಲು ಸರ್ವೇ ಮಾಡಿರ್ತಾರೆ. ಪಂಜಾಬ್ ಸಿಎಂ ರೈತರ ಮುಂದೆ ನಿಂತು ಮಾತನಾಡುವುದು ಅವಶ್ಯಕತೆ ಇತ್ತೇ? ಪ್ರಧಾನಿ ಬರುವಾಗ ಹೋರಾಟ, ಪ್ರತಿಭಟನೆಗೆ ಅವಕಾಶವಿಲ್ಲ. ಪಂಜಾಬ್ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ, ಮುಖ್ಯ ಕಾರ್ಯದರ್ಶಿ ಬರದಿರುವುದು ಏಕೆ? ಎಂದು ಕೇಳಿದರು.
ದಲಿತರೊಬ್ಬರನ್ನು ಸಿಎಂ ಮಾಡಿ ಅವರಿಗೆ ಅಪವಾದ ಬರಲು ಈ ರೀತಿ ಕಾಂಗ್ರೆಸ್ ಮಾಡಿಸಿತೇ? ಕೇವಲ 3 ತಿಂಗಳಿಗೆ ಅಲ್ಲಿ ದಲಿತ ಸಿಎಂ ಮಾಡಿದ್ದೇಕೆ? ಕರ್ನಾಟಕದಲ್ಲಿ ಆರು ದಶಕದಿಂದ ದಲಿತ ಸಿಎಂ ಬೇಡಿಕೆ ಇದ್ದರೂ ಮಾಡಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮಳೆ ಬಿದ್ದರೆ ಕಾಂಗ್ರೆಸ್ ಮುಖಂಡರು ಪಂಜಾಬ್ನಲ್ಲಿ ಕೊಡೆ ಹಿಡಿಯುವವರು ಎಂದು ವ್ಯಂಗ್ಯವಾಗಿ ತಿಳಿಸಿದರು.
ಇಂಥ ಭದ್ರತಾ ವಿಫಲತೆ ಯಾವತ್ತೂ ನಡೆದಿಲ್ಲ. ಕಾಂಗ್ರೆಸ್ ಇದರ ಬಗ್ಗೆ ಖುಷಿ ಪಡುತ್ತಿದೆ. ನಿಮಗೆ ಮೋದಿಯವರ ಬಗ್ಗೆ ದ್ವೇಷ ಇರಬಹುದು. ಈ ರೀತಿ ದ್ವೇಷ ಪಡುವುದು ಸರಿಯೇ? ಎಂದು ಕೇಳಿದರು. ಪ್ರಧಾನಿಯವರು ಅದೇ ರಸ್ತೆಯಲ್ಲಿ ಹೋದುದೇಕೆ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್ ದೊಡ್ಡ ಅವಿವೇಕಿ. ಇವರೆಲ್ಲ ರಾಜಕಾರಣಿಯಾಗಲು ಅರ್ಹರೇ? ಈ ದೇಶದ ಕಾನೂನಿಗಿಂತ ಅವರು ದೊಡ್ಡವರೇ? ಎಂದು ಕೇಳಿದರು.
ಕಾಂಗ್ರೆಸ್ನ ಸಂಭ್ರಮಕ್ಕೆ ದೇಶದ ಜನರು ಉತ್ತರ ಕೊಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ನ ಕೈಗೊಂಬೆ ಆಗಬಾರದು. ದಲಿತ ಸಮುದಾಯ ತಲೆ ತಗ್ಗಿಸುವಂತೆ ಮಾಡದಿರಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ತಾವೂ ದಲಿತ ಎಂದು ಹೇಳುವುದಾದರೆ ಪ್ರಧಾನಿಯವರೂ ಹಿಂದುಳಿದವರು. ಅವರೂ ದಲಿತರಲ್ಲವೇ? ಪ್ರಧಾನಿ ಬಗ್ಗೆ ಮಾತನಾಡುವ ಖರ್ಗೆಯವರಿಗೆ ಸಿದ್ದರಾಮಯ್ಯನವರು ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನವರು ಸುಳ್ಳು ಹೇಳುವುದನ್ನು ಬಿಡಬೇಕು. ಮುಂದಿನ ಚುನಾವಣೆಯಲ್ಲಿ 45- 50 ಲೋಕಸಭಾ ಸೀಟು ಕೂಡ ಕಾಂಗ್ರೆಸ್ಗೆ ಸಿಗುವುದಿಲ್ಲ. ಮೋದಿಯವರು ಇನ್ನಷ್ಟು ಶಕ್ತಿಯುತವಾಗಿ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.