ಬೆಳ್ತಂಗಡಿ : ಪ್ರೀತಿಯ ಆತ್ಮಗಳು ಒಟ್ಟು ಸೇರಿದಾಗ ಜಗತ್ತು ಸುಂದರವಾಗಬಹುದು. ಧರ್ಮವನ್ನು ಸರಳವಾಗಿ ಮತ್ತು ಸೂಕ್ಷ್ಮವಾಗಿ ಜಗತ್ತಿಗೆ ತಿಳಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದು ಇವರು ಶ್ರೇಷ್ಠ ಗುರುಗಳು ಎಂದು ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಭಾನುವಾರ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರುವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 161ನೇ ಗುರುಜಯಂತಿ ಹಾಗೂ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ದೀಕ್ಷಾ ಗ್ರಂಥಿಧಾರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ತಾಲೂಕಿನ ಬಿಲ್ಲವ ಸಂಘಟನೆ ಜಿಲ್ಲೆಯಲ್ಲೇ ಬಲಿಷ್ಠವಾಗಿದ್ದು ಉತ್ತಮ ಕೆಲಸ ಮಾಡುತ್ತಿದೆ. ಜಾತಿಯ ವ್ಯಾಪ್ತಿಯಲ್ಲಿ ಇತರ ಜಾತಿಗಳಿಗೆ ತೊಂದರೆಯಾಗದೆ ಜಾತಿ ಸಂಘಟನೆಯನ್ನು ಸಂಘಟಿಸುವುದು ತಪ್ಪಲ್ಲ. ಆದರೆ ಸಂತರು, ದಾರ್ಶನಿಕರನ್ನು ಜಾತಿಯ ನೆಲೆಯಲ್ಲಿ ನೋಡಬಾರದು. ಕನ್ಯಾಡಿ ಶ್ರೀರಾಮ ಕ್ಷೇತ್ರ ಶಿಕ್ಷಣ ಹಾಗೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ದೇಶಾದ್ಯಂತ 9 ಮಠಗಳನ್ನು ಹೊಂದಿದೆ. 400 ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವೃತ್ತಿ ತರಬೇತಿ ಶಿಕ್ಷಣ ನೀಡುತ್ತಿದ್ದು ಇದಕ್ಕೆ ಉತ್ತರ ಭಾರತದಲ್ಲಿರುವ ಸುಮಾರು 20ಲಕ್ಷಕ್ಕೂ ಅಧಿಕ ಮಠದ ಭಕ್ತರು ಹಾಗೂ ಇತರ ಜಿಲ್ಲೆಯ ಭಕ್ತರ ಸಹಕಾರದಿಂದ ನಡೆಯುತ್ತಿದೆ ಎಂದರು.
ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ ಸಮಾಜಕ್ಕೆ ಬೆಳಕನ್ನು ತೋರಿಸುವ ಕಾರ್ಯ ನಾರಾಯಣ ಗುರುಗಳು ಮಾಡಿದ್ದಾರೆ. ನಾವು ದೇವರು ಎಂದರೆ ಒಳ್ಳೆಯ ಗುಣಗಳ ಸಮೂಹವೇ ಎನ್ನಬೇಕು. ಅಲ್ಲಿ ಕೆಟ್ಟದೆಂಬುದು ಇರಬಾರದು. ಸಮಾಜಕ್ಕೆ ಒಳ್ಳಯದಾಗುವ ಎಲ್ಲರನ್ನು ನಗಿಸುವ ಕಾರ್ಯವೇ ದೇವರೆಂದು ನಂಬಬೇಕು ಎಂದರು.
ಸ್ವರ್ಣ ಕೇದಗೆ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ್ ಆಳ್ವ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು, ಕೋಟಿ ಚೆನ್ನಯ್ಯರು ಒಂದು ಜಾತಿ, ಭಾಷೆಗೆ ಸೀಮಿತರಾದವರಲ್ಲ. ಯಾರಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ ಇದೆಯೋ ಅವರಿಗೆ ಸೀಮಿತರಾದವರು. ಇಂದು ಯುವ ಪೀಳಿಗೆಯ ಮೇಲೆ ಬೇರೆ ಬೇರೆ ಮಾಧ್ಯಮಗಳ ಮುಖಾಂತರ ಜಾಗತೀಕ ಮಟ್ಟದಲ್ಲಿ ದಾಳಿಯಾಗುತ್ತಿದ್ದು ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಇದಕ್ಕೆ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಿ ಮಕ್ಕಳ ದೌರ್ಬಲ್ಯವನ್ನು ಪತ್ತೆ ಹಚ್ಚಿ ಸರಿಪಡಿಸುವ ಅಗತ್ಯವಿದೆ. ೩ ಸಾವಿರ ಜಾತಿ, ೩ ಸಾವಿರ ಭಾಷೆ ನೂರಕ್ಕೂ ಅಧಿಕ ಮತಗಳಿದ್ದು ಇವುಗಳ ಬಗ್ಗೆ ಅಧ್ಯಯನ ನಡೆಸಿ ಸಮಾನತೆಯನ್ನು ಕಾಪಾಡಬೇಕು ಎಂದರು.
ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ತಲೆ ನಿಲ್ಲಲು ಶ್ರೀ ನಾರಾಯಣ ಗುರುಗಳ ತತ್ವವೇ ಕಾರಣವಾಗಿದೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜ ಗುರುತಿಸುವುದರ ಜೊತೆಗೆ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ನಿವೃತ್ತ ಎಸ್ಪಿ, ಗು. ನಾ. ಸ್ವಾ. ಸೇ. ಸಂಘದ ಅಧ್ಯಕ್ಷ ಪಿತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಟ, ಚಲನಚಿತ್ರ ನಿರ್ದೇಶಕ ನಿರ್ಮಾಪಕ ರಾಜಶೇಖರ ಕೋಟ್ಯಾನ್, ಬೆಂಗಳೂರು ಬಿಲ್ಲವ ಅಶೋಶಿಯೇಷನ್ ಅಧ್ಯಕ್ಷ ಎಂ. ವೇದಕುಮಾರ್, ನಿವೃತ್ತ ಹಿರಿಯ ಪೊಲೀಸ್ ಆಧಿಕಾರಿ ಬಿ. ಕೆ. ಶಿವರಾಮ್, ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ, ಗು. ನಾ. ಸ್ವಾ. ಸೇ. ಸಂಘದ ನಿಕಟ ಪೂರ್ವ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಉದ್ಯಮಿ ಹೇಮಂತ್ ಗೇರುಕಟ್ಟೆ, ಪಡುಮಲೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ನ ಲೀಲಾವತಿ ದೂಮಪುಜಾರಿ, ಗು. ನಾ. ಸ್ವಾ. ಸೇ. ಸಂಘದ ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ, ಕಾರ್ಯದರ್ಶಿ ಪದ್ಮನಾಭ ಸಾಲ್ಯಾನ್, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ವಿನೋದಿನಿ ರಾಮಪ್ಪ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೊ| ಎಸ್. ಪ್ರಭಾಕರ್ ಅವರಿಗೆ ಸನ್ಮಾನಿಸಲಾಯಿತು. ರಾಜ್ಯದಲ್ಲಿ ದ್ವಿತಿಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ರಶ್ಮಿತಾ ಪುರುಷೋತ್ತಮ ಪೂಜಾರಿ, ಎಸ್ಎಸ್ಎಲ್ಸಿಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಕ್ಷಾ ಜಯಾನಂದ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಜೆಸಿ ಸೆನೆಟರ್ ಸಂಪತ್ ಸುವರ್ಣ, ನಾಟಿ ವೈದ್ಯ ಅಣ್ಣು ಪೂಜಾರಿ ನಾವೂರು, ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ನಾರಾಯಣ ಪೂಜಾರಿ ಉಜಿರೆ, ನಾಟಿ ವೈದ್ಯ ಉಮೇಶ್ ಪೂಜಾರಿ ಶಿಶಿಲ ಇವರನ್ನು ಸನ್ಮಾನಿಸಲಾಯಿತು.
ಗು. ನಾ. ಸ್ವಾ. ಸೇ. ಸಂಘದ ಸಲಹಾ ಸಮಿತಿ ಪದಾಧಿಕಾರಿ ಭಗೀರಥ ಜಿ. ಸನ್ಮಾನಿತರ ಪರಿಚಯ ಮಾಡಿದರು. ಪಿತಾಂಬರ ಹೆರಾಜೆ ಸ್ವಾಗತಿಸಿ, ಯುವ ಬಿಲ್ಲವ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ವಂದಿಸಿದರು. ಗುರುದೇವ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಗುಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.