ಅನೇಕ ವರ್ಷಗಳಿಗೊಮ್ಮೆ ಯಾರಾದರೂ ಒಬ್ಬರು ಅಥವಾ ಒಂದು ಸಣ್ಣ ಗುಂಪು ಈಗಿನ ಸಮಾಜದ ಪರಿಸ್ಥಿತಿಯನ್ನು ಬದಲಾಯಿಸಲು ಮುಂದೆ ಬರುತ್ತಾರೆ. ಇವರು ದೂರದೃಷ್ಟಿ ಇರುವ ನಾಯಕರು. ಅವರು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಏನು ಪರಿವರ್ತನೆ ಮಾಡಬೇಕು ಎಂಬ ದೂರದೃಷ್ಟಿ ಇವರಿಗೆ ಇರುತ್ತದೆ.
ಚರಿತ್ರೆಯಲ್ಲಿ ನಾವು ದೂರದೃಷ್ಟಿ ಇರುವ ನಾಯಕರು ಮತ್ತು ಅವರು ಮಾಡಿದ ಪರಿವರ್ತನೆಗಳನ್ನು ನೋಡುತ್ತೇವೆ. ಅವರು ದೂರದೃಷ್ಟಿಯ ಪರಿವರ್ತನೆಯನ್ನು ಚಿಂತನೆ ಮಾಡಿ ಅದನ್ನು ಪ್ರಪಂಚದಲ್ಲಿ ಅಳವಡಿಸಲು ಕೆಲಸ ಮಾಡುತ್ತಾರೆ. ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಇವರು ರಾಜಕೀಯ ಕ್ಷೇತ್ರದಲ್ಲಿ ಅದ್ಭುತ ಪರಿವರ್ತನೆ ಮಾಡಿದ್ದಾರೆ. ಇದೇ ರೀತಿ ಜೆಫ್ ಬೆಜೊಸ್ ಮತ್ತು ಇಲಾನ್ ಮಸ್ಕ್ ಅವರು ವಾಣಿಜ್ಯ ಕ್ಷೇತ್ರದಲ್ಲಿ ಪರಿವರ್ತನೆ ಮಾಡಿದ್ದಾರೆ. ಈ ತರಹ ದೂರದೃಷ್ಟಿ ಇರುವ ನಾಯಕರು ಬಹಳ ಕಡಿಮೆ.
ಒಂದು ಆಧ್ಯಾತ್ಮಿಕ ಸಂದೇಶವಿರುವ ಧಾರ್ಮಿಕ ಚಲನಚಿತ್ರ ಮಾಡಬೇಕಾದರೆ ಇಂದಿನ ಪರಿಸ್ಥಿತಿಯಲ್ಲಿ ಬಹಳ ಕಷ್ಟದ ಕೆಲಸ. ಇಬ್ಬರು ದೂರದೃಷ್ಟಿ ಇರುವ ನಾಯಕರು ಕನ್ನಡ ಚಿತ್ರರಂಗವನ್ನು ನಮ್ಮ ಕಣ್ಣುಮುಂದೆಯೇ ಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹರಿದಾಸರ ಬಗ್ಗೆ ಚಲನಚಿತ್ರ ಬಂದು 50 ವರ್ಷಗಳಾಗಿವೆ. ಈಗಿನ ಚಲನಚಿತ್ರರಂಗದ ಪರಿಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿ ಈ ತರಹದ ಚಲನಚಿತ್ರಗಳನ್ನು ಮಾಡಲು ಅನುಕೂಲಕರವಾಗಿಲ್ಲ. ಈ ಚಿತ್ರದ ಕಲ್ಪನೆಯನ್ನು ಕೇಳಿದ ಎಲ್ಲ ಜನರು ಈ ನಾಯಕರಿಗೆ ಈ ಚಿತ್ರ ವಿಫಲವಾಗುತ್ತದೆ, ಮತ್ತು ಈ ಚಿತ್ರವನ್ನು ಮಾಡಲು ಸಾಧ್ಯವಿಲ್ಲ ಎಂದು ಋಣಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟರು.
ಆದರೂ ಇಬ್ಬರು ನಾಯಕರು ಎದೆಗುಂದದೆ ಈ ಚಿತ್ರದ ನಿರ್ಮಾಣವನ್ನು ಮುಂದುವರಿಸಿದರು. ಈ ಚಿತ್ರದಿಂದ ಪ್ರಾರಂಭವಾಗಿರುವ ಚಳುವಳಿಯು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಈ ದೂರದೃಷ್ಟಿಯ ನಾಯಕರು ಶ್ರೀ ತ್ರಿವಿಕ್ರಮ ಜೋಷಿ ಮತ್ತು ಡಾಕ್ಟರ್ ಮಧುಸೂದನ ಹವಲ್ದಾರ್. ಇವರಿಬ್ಬರು ಕನ್ನಡದಲ್ಲಿ ಹರಿದಾಸರ ಬಗ್ಗೆ ಆಧ್ಯಾತ್ಮಿಕ ಚಲನಚಿತ್ರಗಳನ್ನು ಮಾಡುವ ದೂರದೃಷ್ಟಿಯನ್ನು ಹೊಂದಿದ್ದರು. ಈ ಕಲ್ಪನೆಯನ್ನು ಬೆಂಬಲಿಸುವವರು ಬಹಳ ಕಡಿಮೆ ಜನ ಇದ್ದರು.
ಎಲ್ಲ ಗುರುಗಳ ದಾಸವರೇಣ್ಯರ ಆಶೀರ್ವಾದಗಳೂ ಕೂಡ ಈ ಚಲನಚಿತ್ರಕ್ಕೆ ಇದೆ. Dr ಮಧುಸೂಧನ್ ಹವಾಲ್ದಾರ್ ಅವರು ಈ ಚಿತ್ರವನ್ನು ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಯವರ ಆಶೀರ್ವಾದದಿಂದ ಕಳೆದ ವರ್ಷ ಅಧಿಕ ಮಾಸದಲ್ಲಿ ಪ್ರಾರಂಭ ಮಾಡಿದರು. ಅವರ ಜೊತೆ ಶ್ರೀ VB ಜೋಶಿ ಮತ್ತು ಶ್ರೀ ತ್ರಿವಿಕ್ರಮ ಜೋಶಿ ಅವರು ಸೇರಿ ಈ ಚಲನ ಚಿತ್ರದ ನಿರ್ಮಾಣ ಕಾರ್ಯದಲ್ಲಿ ತೊಡಗಿದರು.ಬಹಳ ಅಡಚನೆ ಗಳಿದ್ದರೂ ಎರಡು ನಾಯಕರು ಅವರ ಗುರಿಯ ಬಳಿಗೆ ಸೇರಲು ಪ್ರಯತ್ನ ಮಾಡಿದರು. ಅವರು ಶ್ರೀ ಜಗನ್ನಾಥ ದಾಸರ ಜೀವನ ಮತ್ತು ಸಂದೇಶವನ್ನು ವಾಸ್ತವಿಕವಾಗಿ ಚಿತ್ರೀಕರಣ ಮಾಡಿದ್ದಾರೆ. ಅವರು ಆಯ್ಕೆ ಮಾಡಿದ ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ಅವರು ಸೃಜನಶೀಲ ಸಂಗೀತವನ್ನು ಸೃಷ್ಟಿಸಿದ್ದಾರೆ. ಈ ಚಿತ್ರದ ಛಾಯಾಗ್ರಾಹಕರು ವಿಜಯ್ ಅತ್ಯುತ್ತಮ ರೀತಿಯಲ್ಲಿ ಆ ಕಾಲದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ವಸ್ತ್ರವಿನ್ಯಾಸ, ಸಂಭಾಷಣೆ, ಸಂಪಾದನೆ ಎಲ್ಲವನ್ನೂ ಕಲಾವಿದರು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದಾರೆ. ನಿರ್ದೇಶಕ ಡಾ. ಮಧುಸೂದನ್ ಹವಾಲ್ದಾರ್ ಅವರು ಎಲ್ಲ ಅಂಶಗಳನ್ನು ಸೂತ್ರದ ರೀತಿಯಲ್ಲಿ ಸೇರಿಸಿ ಒಂದು ಅತ್ಯುತ್ತಮ ವಾದ, ಮನಸೆಳೆಯುವ ಚಲನಚಿತ್ರವನ್ನು ಮಾಡಿದ್ದಾರೆ.
ಎರಡು ನಾಯಕರು ಈ ಚಲನಚಿತ್ರವನ್ನು ಬಹಳ ಕಷ್ಟಗಳಿದ್ದರೂ ಈ ಚಲನಚಿತ್ರವನ್ನು ಸಾರ್ವಜನಿಕ ವೀಕ್ಷಣೆಗೆ ಸಮರ್ಪಿಸಿದ್ದಾರೆ. ಭಾರತದ ಹೊರಗೆ ಮತ್ತು ಒಳಗೆ ನಲವತ್ತಕ್ಕೂ ಹೆಚ್ಚುಸ್ವಯಂಸೇವಕರು ಚಲನಚಿತ್ರವನ್ನು ಪ್ರಚಾರ ಮಾಡಲು ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದ್ದಾರೆ. ಪ್ರಪಂಚದ ಆದ್ಯಂತ ಸಂಗೀತ ಮತ್ತು ನೃತ್ಯ ಕಲಾವಿದರನ್ನು ಈ ಚಲನಚಿತ್ರದ ರಾಯಭಾರಿಗಳಾಗಿ ಸೇರಿಸಿದ್ದಾರೆ. ಭಾರತದಲ್ಲಿ ಮತ್ತು ಭಾರತದ ಹೊರಗೆ ಜನರು ಬಹಳ ಸಂಖ್ಯೆಯಲ್ಲಿ ಈ ಚಲನಚಿತ್ರಕ್ಕೆ ಸ್ಪಂದಿಸಿದ್ದಾರೆ.
ಈ ಚಲನಚಿತ್ರದ ಸಂದೇಶ ಮತ್ತು ಅದರಲ್ಲಿ ತೋರಿಸಿರುವ ಸೃಜನಾತ್ಮಕ ದೃಶ್ಯಗಳು, ಅಭಿನಯ, ಮತ್ತು ಸಂಗೀತದಿಂದ ಜನರು ಬಹಳ ಪ್ರಭಾವಿತರಾಗಿದ್ದಾರೆ. ಹರಿದಾಸರ ಜೀವನ ಮತ್ತು ಅವರ ಶಾಶ್ವತ ಸಂದೇಶಗಳಿಂದ ಸಂದೇಶಗಳಿಗೆ ಜನರು ಸ್ಪಂದಿಸಿದ್ದಾರೆ.
ಕೆಲವು ಜನರು ಚಿತ್ರಮಂದಿರಗಳಿಗೆ ಅನೇಕ ದಶಕಗಳ ನಂತರ ಈ ಚಲನಚಿತ್ರವನ್ನು ನೋಡಲು ಹೋಗಿದ್ದೇವೆ ಎಂದು ಹೇಳಿದ್ದಾರೆ. ಬೇರೆಯವರು ಮಕ್ಕಳಿಗೆ ಹರಿದಾಸ ಚರಿತ್ರೆಯನ್ನು ಅವರ ಜೀವನವನ್ನು ಈ ಚಲನಚಿತ್ರ ಉತ್ತಮ ರೀತಿಯಲ್ಲಿ ಪರಿಚಯ ಮಾಡಿಸುತ್ತಿದೆ ಎಂದಿದ್ದಾರೆ.ಈ ಆಧ್ಯಾತ್ಮಿಕ ಸಂದೇಶವಿರುವ ಶ್ರೀ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನು ದೃಶ್ಯಮಾಧ್ಯಮದ ಮೂಲಕ ತೋರಿಸಿರುವುದು ಮುಂದಿನ ಜನಾಂಗಕ್ಕೆ ಬಹಳ ಅನುಕೂಲಕರವಾಗಿರುತ್ತದೆ. ಈ ಚಲನಚಿತ್ರ ಕೇವಲ ಮನರಂಜನೆಯ ಕ್ಷೇತ್ರವನ್ನು ಬಿಟ್ಟು, ಶೈಕ್ಷಣಿಕ ಕ್ಷೇತ್ರವನ್ನು ಪ್ರವೇಶಿಸಿ ಜನರಿಗೆ ಹರಿದಾಸರ ಸಂದೇಶ, ಅವರ ಜೀವನ ಮೌಲ್ಯಗಳು , ಮತ್ತು ಅವರ ಜೀವನ ಚರಿತ್ರೆ ತೋರಿಸುತ್ತಿದೆ. ಈ ಚಲನಚಿತ್ರ ಈಗ ಕಣ್ಮರೆಯಾಗಿರುವ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳ ಕೆಲಸವನ್ನು ಸ್ವಲ್ಪ ಸಣ್ಣ ಪ್ರಮಾಣದಲ್ಲಿ ಮಾಡುತ್ತಿದೆ. ಈ ತರಹದ ಚಲನಚಿತ್ರಗಳು ಇನ್ನು ಮುಂದೆ ಇನ್ನೂ ಅನೇಕ ರೀತಿಯ ಸಾಮಾಜಿಕ ಪರಿವರ್ತನೆಯನ್ನು ಮಾಡಬಹುದು.
ನಾವೆಲ್ಲರೂ ಚಲನಚಿತ್ರ ತಂಡಕ್ಕೆ ಇದೇ ರೀತಿ ಯಶಸ್ಸು ಸಿಗಲಿ, ಇದೇ ತರಹ ಚಲನಚಿತ್ರರಂಗದ ಮತ್ತು ಸಾಮಾಜಿಕ ಪರಿವರ್ತನೆ ಮಾಡಲಿ ಎಂದು ಹಾರೈಸುತ್ತೇವೆ. ನಮ್ಮ ಭಾವನೆಗಳು ಮತ್ತು ಪ್ರಾರ್ಥನೆಗಳು ಈ ಚಲನಚಿತ್ರದ ತಂಡದ ಜೊತೆ , ಮತ್ತು ಅವರು ಮಾಡುತ್ತಿರುವ ಇನ್ನು ಮೂರು ಚಲನಚಿತ್ರಗಳಾದ ಶ್ರೀ ಜಗನ್ನಾಥದಾಸರು ಭಾಗ-2, ಪ್ರಸನ್ನವೆಂಕಟದಾಸರು ಶ್ರೀವಿಜಯದಾಸರು, ಚಲನಚಿತ್ರಗಳ ಜೊತೆ ಇರುತ್ತದೆ. ಎಲ್ಲರೂ ಸಾಮಾಜಿಕ ಪರಿವರ್ತನೆ ಮಾಡುತ್ತಿರುವ ಈ ಚಲನಚಿತ್ರಗಳನ್ನು ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ.
✍️ವಾಸುದೇವ ಮೂರ್ತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.