ಇಸ್ಲಾಮಾಬಾದ್: ಪಾಕಿಸ್ಥಾನದ ಕರಕ್, ಖೈಬರ್-ಪಖ್ತುಂಖ್ವಾ (ಕೆಪಿ) ನಲ್ಲಿ ಪುನರ್ ನಿರ್ಮಾಣ ಮಾಡಲಾದ ಶ್ರೀ ಪರಮ ಹನ್ಸ್ ಜಿ ಮಹಾರಾಜ್ ದೇವಾಲಯವನ್ನು ಅಲ್ಲಿನ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಗುಲ್ಜಾರ್ ಅಹ್ಮದ್ ಅವರು ದೀಪಾವಳಿಯ ಸಂದರ್ಭದಲ್ಲಿ ಉದ್ಘಾಟಿಸಿದರು ಮತ್ತು ಈ ವಿಶೇಷ ಸಂದರ್ಭದಲ್ಲಿ ಹಿಂದೂ ಸಮುದಾಯವನ್ನು ಅಭಿನಂದಿಸಿದರು ಎಂದು ಮೂಲಗಳು ವರದಿ ಮಾಡಿವೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಸ್ಥಳೀಯ ಮುಸ್ಲಿಂ ಧರ್ಮಗುರುಗಳು ಮತ್ತು ಇತರರ ನೇತೃತ್ವದ ಉದ್ರಿಕ್ತರ ಗುಂಪೊಂದು ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ಕೆಡವಿತ್ತು. ಇದೀಗ ಅದನ್ನು ಮತ್ತೆ ಪುನರ್ ನಿರ್ಮಾಣ ಮಾಡಲಾಗಿದೆ.
ಸೋಮವಾರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಗುಲ್ಜಾರ್, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಪಾಕಿಸ್ಥಾನ ಸುಪ್ರೀಂಕೋರ್ಟ್ ಯಾವಾಗಲೂ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಭವಿಷ್ಯದಲ್ಲೂ ಅದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಸಂವಿಧಾನದ ಪ್ರಕಾರ, ಹಿಂದೂ ಸಮುದಾಯವು ಇತರ ಧರ್ಮಗಳ ಜನರಿಗೆ ಇರುವ ಸಮಾನವಾದ ಹಕ್ಕುಗಳನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರತಿಯೊಬ್ಬರೂ ತಮ್ಮ ಪವಿತ್ರ ಸ್ಥಳಗಳನ್ನು ಪ್ರೀತಿಸುತ್ತಾರೆ ಮತ್ತು ಯಾರ ಧಾರ್ಮಿಕ ಸ್ಥಳಕ್ಕೂ ಹಾನಿ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಅವರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಸುಪ್ರೀಂಕೋರ್ಟ್ ಭರವಸೆ ನೀಡುತ್ತದೆ ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಸಂವಿಧಾನದ ಅಡಿಯಲ್ಲಿ ಕರ್ತವ್ಯ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನ್ ಹಿಂದೂ ಕೌನ್ಸಿಲ್ನ ಪೋಷಕ ಮತ್ತು ಪಿಟಿಐ ಮುಖಂಡ ರಮೇಶ್ ಕುಮಾರ್, ಕರಕ್ ಘಟನೆಯನ್ನು ಸಕಾಲಿಕವಾಗಿ ಬಗೆಹರಿಸಿದ ಮುಖ್ಯ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವಾಲಯಗಳ ನಿರ್ವಹಣೆಯು ಇವಾಕ್ಯೂ ಪ್ರಾಪರ್ಟಿ ಟ್ರಸ್ಟ್ ಬೋರ್ಡ್ನ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ಥಾನದಲ್ಲಿ ಇತರ ನಾಲ್ಕು ಐತಿಹಾಸಿಕ ದೇವಾಲಯಗಳನ್ನು ಪುನರಾರಂಭ ಮಾಡಿದರೆ ಸಾವಿರಾರು ಹಿಂದೂಗಳಿಗೆ ಪ್ರಯೋಜನವಾಗುತ್ತದೆ ಮತ್ತು ಇದು ವಿಶ್ವದಲ್ಲಿ ದೇಶದ ಇಮೇಜ್ ಅನ್ನು ಸುಧಾರಿಸುತ್ತದೆ ಎಂದು ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.