ಪುಸ್ತಕ ಮಳಿಗೆಗೆ ಹೋಗುವುದೆಂದರೆ ನನಗಿಷ್ಟ. ಹೊಸ ಪುಸ್ತಕಗಳನ್ನು ಕೊಂಡು ತರುವ ಸಂಭ್ರಮವಂತೂ ಇದ್ದದ್ದೇ. ನನಗೆ ಅಷ್ಟೇ ಸಡಗರದ್ದೆನಿಸುವ ಕ್ರಿಯೆ ಪುಸ್ತಕಗಳ ಕ್ಷಿಪ್ರನೋಟ. ಪುಸ್ತಕಗಳ ಶೀರ್ಷಿಕೆ ನೋಡಿ, ಲೇಖಕರ ಕಿರುಪರಿಚಯವನ್ನೋದಿದರೇ ಎಷ್ಟೊಂದು ವಿಷಯ ತಿಳಿದಂತಾಗುತ್ತದೆ. ಮುನ್ನುಡಿ, ಬೆನ್ನುಡಿ ಹಾಗೂ ಬ್ಲರ್ಬ್ ಗಳನ್ನು ಓದಿದರಂತೂ ಮನಸ್ಸಿನ ಕಿಟಕಿ, ಬಾಗಿಲುಗಳು ಅಷ್ಟಷ್ಟು ತೆರೆದುಕೊಳ್ಳುತ್ತವೆ. ಅವು ತೆರೆದಷ್ಟೂ ನನಗೆ ಹೊಸಬೆಳಕಿನ ದರ್ಶನ, ಹೊಸಗಾಳಿಯ ಸ್ಪರ್ಶ!
ಆದರೆ ಅಸಂಖ್ಯ ಪುಸ್ತಕಗಳ ರಾಶಿಯೆದುರು ದಿಕ್ಕುತೋಚದಂತಾಗುವುದೂ ದಿಟವೇ. ಯಾವುದನ್ನು ಆರಿಸುವುದು, ಯಾವುದನ್ನು ಬಿಡುವುದು? ಪುಸ್ತಕದ ತೋರಣವನ್ನು ನೋಡಿ ಹೂರಣವನ್ನು ತಿಳಿಯಲಾದೀತೇ? ಗೆಳೆಯನೊಬ್ಬ ಎದುರಿಗೇ ಕುಳಿತು ತಾನು ಓದಿದ ಒಳ್ಳೆಯ ಪುಸ್ತಕದ ಕುರಿತು ಆತ್ಮೀಯವಾಗಿ ಒಂದು ನಾಲ್ಕು ಮಾತಾಡಿದರೆಷ್ಟು ಸೊಗಸು ಎನಿಸುತ್ತದೆ.
ಇಂಥ ಅನುಭವವನ್ನು ಕನ್ನಡ ನಾಡಿನ ಅಕ್ಷರಮೋಹಿಗಳಿಗೆ ನೀಡುತ್ತಿದೆ ‘ಸುಕೃತಿ’. (shorturl.at/gjyO1)
2020 ರ ಏಪ್ರಿಲ್ 14 ರಂದು ‘ಸುಕೃತಿ’ ಆರಂಭವಾಯಿತು. ಲಾಕ್ಡೌನಿನ ವಿಷಮ ಸಂದರ್ಭದಲ್ಲಿ ಹುಟ್ಟಿದ, ಚಿಂತನೆಗೆ ಇಂಬುನೀಡುವ ,ಆರೋಗ್ಯಕರ ಯೋಜನೆ ಇದು. ಸುಮಾರು 65000 ಪುಸ್ತಕಗಳನ್ನು ಓದಿ ಅರಗಿಸಿಕೊಂಡಿದ್ದ ಡಾ ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದೇ ಇದು ಆರಂಭವಾಗಿದ್ದು ಉಚಿತ ಮತ್ತು ಅರ್ಥಪೂರ್ಣವಾಗಿದೆ.
ಪುಸ್ತಕದ ಕುರಿತು ಓದುಗರು ಮಾತನಾಡಿರುವ ವಿಡಿಯೋಗಳು ಇಲ್ಲಿ ಲಭ್ಯ. ಇದುವರೆಗೂ ಒಟ್ಟು 180 ವಿಡಿಯೋಗಳು ಲಭ್ಯವಿವೆ. 140 ಜನ ಓದುಗರು ಮಾತನಾಡಿದ್ದಾರೆ. ಸಾಮಾನ್ಯವಾಗಿ 10-15 ನಿಮಿಷಗಳೊಳಗೆ ಒಂದು ಪುಸ್ತಕದ ಪರಿಚಯವನ್ನು ನಾವು ನೋಡಬಹುದು. ಇದರಿಂದ ಪುಸ್ತಕ ಓದಿರದವರಿಗೆ ಪುಸ್ತಕಕ್ಕೊಂದು ಪ್ರವೇಶ ಸಿಗುತ್ತದೆ; ಓದಿದದವರಿಗೆ ಮರು ಓದಿನ ಪ್ರೇರಣೆಯಾಗುತ್ತದೆ ಮತ್ತು ಹೊಸ ಒಳನೋಟಗಳು ದಕ್ಕುತ್ತವೆ.
ಕುಮಾರವ್ಯಾಸಭಾರತದಂತಹ ಅಭಿಜಾತ ಕೃತಿಯಿಂದ ಹಿಡಿದು ಈಚೆಗೆ ಬಿಡುಗಡೆಯಾದ ‘ಆವಿಷ್ಕಾರದ ಹರಿಕಾರ” ದಂತಹ ಪುಸ್ತಕಗಳ ಪರಿಚಯವೂ ಇಲ್ಲಿದೆ. ಕನ್ನಡ ಸಾಹಿತ್ಯದ ದಿಗ್ಗಜರಾದ ಡಿವಿಜಿ,ಕುವೆಂಪು, ಕಾರಂತ, ಮಾಸ್ತಿ, ಭೈರಪ್ಪರಿಂದ ಮೊದಲುಗೊಂಡು ಸಹನಾ ವಿಜಯಕುಮಾರರಂತಹ ಉದಯೋನ್ಮುಖ ಬರೆಹಗಾರರ ಕೃತಿಗಳ ಕುರಿತು ಓದುಗರು ಇಲ್ಲಿ ಮಾತನಾಡಿದ್ದಾರೆ.
ಇಲ್ಲಿ ಮಾತನಾಡಿದವರಲ್ಲೂ ಅದೇ ವೈವಿಧ್ಯವನ್ನು ನಾವು ನೋಡಬಹುದು. ಶತಾವಧಾನಿ ಗಣೇಶರಂತಹ ಘನವಿದ್ವಾಂಸರು “ಮೇಘದೂತ – ಒಂದು ಹಳೆಯ ಕಥೆ” ಯಂತಹ ಅಪರೂಪದ ಕೃತಿರತ್ನದ ಬಗ್ಗೆ ತಿಳಿಸಿದ್ದಾರೆ. ಸಾವರ್ಕರರ ಬಗ್ಗೆ ಸಂಶೋಧನಾ ಗ್ರಂಥವನ್ನು ಬರೆದ ವಿಕ್ರಂ ಸಂಪತ್ ಸ್ವತಃ ತಮ್ಮ ಪುಸ್ತಕದ ಕುರಿತು ಮಾತನಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಮಾಳವಿಕಾ ಅವಿನಾಶ್ರಂತಹ ಕನ್ನಡ ಸಾಂಸ್ಕೃತಿಕ ಲೋಕದ ತಾರೆಗಳು ಇರುವಂತೆ ಡಾ. ನಾ. ಸೋಮೇಶ್ವರ, ಡಾ ಗಣೇಶಯ್ಯನವರಂತಹ ಪ್ರಸಿದ್ಧ ಚಿಂತಕರೂ ಇಲ್ಲಿದ್ದಾರೆ. ಹಾಗೆಂದು ಪುಸ್ತಕ ಪರಿಚಯ ಮಾಡುವವರು ಖ್ಯಾತನಾಮರಾಗಿರಬೇಕೆಂದೇನೂ ಇಲ್ಲ. ವಿವಿಧ ವೃತ್ತಿಗಳಲ್ಲಿರುವವರು, ಗೃಹಿಣಿಯರು, ವಿದ್ಯಾರ್ಥಿಗಳೂ ತಮ್ಮ ಇಷ್ಟದ ಹೊತ್ತಗೆಗಳ ಕುರಿತು ಮಾತನಾಡಿದ್ದಾರೆ.
ನನಗೆ ‘ಸುಕೃತಿ’ಯ ಬಗ್ಗೆ ತಿಳಿದಿದ್ದು ನನ್ನ ಸ್ನೇಹಿತ ಕಿರಣ್ರಿಂದ. ಭೈರಪ್ಪನವರ 90ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಎಲ್ಲ ಕೃತಿಗಳ ಪರಿಚಯಮಾಲಿಕೆಯನ್ನು ‘ಸುಕೃತಿ’ಯವರು ಯೋಜಿಸಿದ್ದರು. ಅದರ ಅಂಗವಾಗಿ ನನಗೆ ‘ಜಲಪಾತ’ದ ಕುರಿತು ಮಾತನಾಡುವ ಸುಯೋಗ ದೊರಕಿತು. ಇಷ್ಟದ ಕೃತಿಯನ್ನು ಆರಿಸಿ, ಅದನ್ನು ಪದೇ ಪದೇ ಓದಿ, ಪೂರಕ ಸಾಮಗ್ರಿಯನ್ನು ಸಂಗ್ರಹಿಸಿ, ಲಿಖಿತ ರೂಪ ಕೊಟ್ಟು, ಬಲ್ಲವರಿಂದ ಪರಿಶೀಲನೆ ಮಾಡಿಸಿ, ತಿದ್ದಿ ಕಡೆಗೆ ವಿಡಿಯೋ ಮಾಡುವ ಅನುಭವ ಮಧುರಯಾತನೆಯೇ ಹೌದು.
ಭೈರಪ್ಪನವರ ಕೃತಿಮಾಲಿಕೆಯಂತೆಯೇ ಇತರ ವಿಶೇಷ ಸರಣಿಗಳನ್ನೂ ‘ಸುಕೃತಿ’ ಆಯೋಜಿಸಿದೆ. ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವಗಳಲ್ಲದೇ ಸ್ವಾಮಿ ವಿವೇಕಾನಂದ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ, ವಿಶ್ವ ಯೋಗ ದಿನ ಮತ್ತು ಕಾರ್ಗಿಲ್ ವಿಜಯ ದಿನಗಳಂತಹ ವಿಶೇಷ ಸಂದರ್ಭಗಳ ಕುರಿತೂ ಇಂತಹ ಮಾಲಿಕೆಗಳಿವೆ. ‘ವಿಶ್ವ ಪುಸ್ತಕ ದಿನ’ದ ಓದುಗರ ಸಂದರ್ಶನ ಮಾಡಿ ಪುಸ್ತಕ ಓದುವಿಕೆ, ಅವರ ಪುಸ್ತಕ ಸಂಗ್ರಹಗಳ ಕುರಿತು ಕೇಳಿದ್ದೂ ಬಹಳ ಸ್ವಾರಸ್ಯಕರವಾಗಿದೆ.
[pdf-embedder url=”https://news13.in/wp-content/uploads/2021/11/Celebrety-Clips.pdf” title=”Celebrety Clips”]
2021 ರ ಕನ್ನಡ ರಾಜ್ಯೋತ್ಸವವನ್ನು ನಾವೀಗ ಆಚರಿಸುತ್ತಿದ್ದೇವೆ. ನವೆಂಬರಿನಲ್ಲಿ ಪ್ರತಿದಿನವೂ ಹೊಸತೊಂದು ಪುಸ್ತಕವನ್ನು ತಿಳಿಯುವ ಅವಕಾಶ ನಮಗಿದೆ. ಒಂದೇ ತಿಂಗಳಿನಲ್ಲಿ 60 ಪುಸ್ತಕಗಳ ಪರಿಚಯವನ್ನು ನಾವು ಮಾಡಿಕೊಳ್ಳಬಹುದು. ಇದು ಕನ್ನಡಹಬ್ಬದ ಸಂಭ್ರಮದ ಸಮಯ. ಬನ್ನಿ, ಕನ್ನಡದ ಶ್ರೀಮಂತ ಸಾಹಿತ್ಯಸಾಗರಲ್ಲೊಂದು ವಿಹಾರ ಮಾಡೋಣ. ತೆರೆತೆರೆಯಾಗಿ ಬರುವ ಜ್ಞಾನತರಂಗಗಳಿಗೆ ತೆರೆದುಕೊಳ್ಳೋಣ.
✍️ ಅಜಯ್ ಸ್ವರೂಪ್
ಐಟಿ ಉದ್ಯೋಗಿ, ಮೈಸೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.