ನವದೆಹಲಿ : ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಇಂದು, ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ 9,871.00 ಕೋಟಿ ರೂ. 7 ನೇ ಮಾಸಿಕ ಕಂತಿನ ವಿಕೇಂದ್ರೀಕರಣ ನಂತರದ ಆದಾಯ ಕೊರತೆಯ (ಪಿಡಿಆರ್ಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಈ ಕಂತಿನ ಬಿಡುಗಡೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಪಿಡಿಆರ್ಡಿ ಅನುದಾನವಾಗಿ 69,097.00 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದಂತಾಗಿದೆ.
ಈ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್ಡಿ ಆದಾಯ ಕೊರತೆ ಅನುದಾನದ ಮೊತ್ತವನ್ನು ಅನುಬಂಧದಲ್ಲಿ ನೀಡಲಾಗಿದೆ.
ಸಂವಿಧಾನದ ಪರಿಚ್ಛೇದ 275 ರ ಅಡಿಯಲ್ಲಿ ರಾಜ್ಯಗಳಿಗೆ ಪಿಡಿಆರ್ಡಿ ಅನುದಾನವನ್ನು ಒದಗಿಸಲಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಆಯೋಗವು ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ.
ಈ ಅನುದಾನವನ್ನು ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ನಿರ್ಧರಿಸುತ್ತದೆ. 2021-22ರ ಆರ್ಥಿಕ ವರ್ಷದ ಮೌಲ್ಯಮಾಪನವನ್ನು ಪರಿಗಣಿಸಿದ ನಂತರ ರಾಜ್ಯದ ಆದಾಯ ಮತ್ತು ವೆಚ್ಚದ ಮೌಲ್ಯಮಾಪನದ ನಡುವಿನ ಅಂತರವನ್ನು ಆಧರಿಸಿ ಅನುದಾನ ಮೊತ್ತವನ್ನು ನಿರ್ಧರಿಸಲಾಗಿದೆ.
ಹದಿನೈದನೆಯ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ 69,097.00 ಕೋಟಿ ರೂ.ಗಳನ್ನು (ಶೇ.58.33) ಇದುವರೆಗೆ ಬಿಡುಗಡೆ ಮಾಡಲಾಗಿದೆ.
ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಇವು 15 ನೇ ಹಣಕಾಸು ಆಯೋಗವು ಪಿಡಿಆರ್ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.