“Global Hindutva Dismantling” ಹೆಸರಿನಲ್ಲಿ ಅಮೇರಿಕಾದ ಸುಮಾರು 40 ವಿಶ್ವವಿದ್ಯಾಲಯಗಳ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಸಮಾವೇಶ ಈಗಾಗಲೇ ಸಾಕಷ್ಟು ಪರ ವಿರೋಧಗಳ ಚರ್ಚೆಯನ್ನು ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಿದೆ. ಮೇಲ್ನೋಟಕ್ಕೆ ಈ ಸಮ್ಮೇಳನ ಹಿಂದುತ್ವವನ್ನು ವಿಮರ್ಶಿಸುವ ಒಂದು ಅಕಡೆಮಿಕ್ ಚಟುವಟಿಕೆ ಎಂಬ ಮುಖವಾಡವನ್ನು ಧರಿಸಿದ್ದರೂ ಆಂತರ್ಯದಲ್ಲಿ ಅದು ವಿಮರ್ಶೆಗಿಂತ ನಿಂದನೆಯನ್ನೆ ತನ್ನ ಅಜೆಂಡಾವಾಗಿರಿಸಿಕೊಂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಷ್ಟಕ್ಕೂ ಈ ಸಮ್ಮೇಳನವನ್ನು ಒಂದು ಶುದ್ಧ ಅಕಡೆಮಿಕ್ ಚಟುವಟಿಕೆ ಎನ್ನಲು ಬೇಕಾದ ಕನಿಷ್ಠ ಅರ್ಹತೆಯನ್ನೂ ಅದು ಉಳಿಸಿಕೊಂಡಿಲ್ಲ. ಕಾರಣ ಈ ಸಮ್ಮೆಳನದಲ್ಲಿ ಮಾತನಾಡಲಿರುವವರು ತಮ್ಮ ವಿಚಾರ ಸರಣಿಯಲ್ಲಾದರೂ ಪ್ರಾಮಾಣಿಕರೇ? ಎಂದು ನೋಡಿದರೆ ಅವರು ಹಿಂದುತ್ವದ ಬಗೆಗೆ ಪೂರ್ವಾಗ್ರಹ ಪೀಡಿತರೇ ಹೊರತು ನಿಷ್ಪಕ್ಷಪಾತಿ ಶೋಧಕರಲ್ಲ. ಹಿಂದುತ್ವವನ್ನು ಜಾಗತಿಕ ವೇದಿಕೆಗಳಲ್ಲಿ ಹಳಿಯುವ , ಆ ಮೂಲಕ ಕಲ್ಪಿತ ‘ಹಿಂದುಫೋಬಿಯಾ’ವನ್ನು ಜಗತ್ತಿನ ಮುಂದೆ ಬಿತ್ತುವ ಉದ್ದೇಶವಷ್ಟೆ ಇಲ್ಲಿ ಪ್ರದಾನವಾಗಿರುವುದು.
ಈ ಸಮ್ಮೇಳನದ ಕುರಿತು ಈಗಾಗಲೇ ಜಗತ್ತಿನಾದ್ಯಂತ ನೂರಾರು ವಿದ್ವಾಂಸರು, ಚಿಂತಕರು ತಮ್ಮ ವಿರೋಧವನ್ನು ಪ್ರಕಟಿಸಿದ್ದಾರೆ. ಸ್ವತಃ ಅಮೇರಿಕಾದ ಸೆನೆಟ್ ಸದಸ್ಯರೇ ಈ ಸಮ್ಮೆಳನದ ಆಯೋಜಕರಿಗಿರುವ ದುರುದ್ದೇಶವನ್ನು ಬಯಲಿಗೆಳೆದಿದ್ದಾರೆ. ಜನರ ಪ್ರತಿರೋಧವನ್ನು ಅರಿತು ಕೆಲವು ವಿಶ್ವವಿದ್ಯಾಲಯಗಳು ತಮ್ಮ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವುದು ಮಾತ್ರವಲ್ಲದೇ, ತಮ್ಮ ಪೂರ್ವಾನುಮತಿ ಇಲ್ಲದೆಯೇ ವಿಶ್ವವಿದ್ಯಾಲಯದ ಹೆಸರನ್ನು ಆಯೋಜಕರು ದುರುಪಯೋಗ ಪಡಿಸಿರುವುದರ ಬಗೆಗೂ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ನಡುವೆಯೂ ಈ ಸಮ್ಮೇಳನ ಸೆಪ್ಟೆಂಬರ್ 10-12 ರವರೆಗೆ ನಡೆಯಬಹುದು. ಹಿಂದುತ್ವವನ್ನು ವಿರೋಧಿಸುವುದನ್ನೆ ತಮ್ಮ ವೃತ್ತಿಯನ್ನಾಗಿಸಿಕೊಂಡ ಕೆಲವರು ತಮ್ಮ ನಾಲಗೆಯ ಚಪಲವನ್ನು ತೀರಿಸಿಕೊಳ್ಳಲೂಬಹುದು. ಹಾಗೆಂದು ಇದೇ ಮೊದಲ ಬಾರಿಗೆ ಹಿಂದುತ್ವವನ್ನು ಕಿತ್ತೆಸೆಯುವ, ನಿರ್ಮೂಲನ ಮಾಡುವ ಕಾರ್ಯವೊಂದು ಇಲ್ಲಿ ಉದ್ಘಾಟನೆಯಾಗುತ್ತಿಲ್ಲ. ಇದು ಮೊಘಲರಿಂದ ಬ್ರಿಟಿಷರವರೆಗೆ ನಡೆಸಿದ ವಿಫಲ ಪ್ರಯತ್ನದ ಮತ್ತೊಂದು ಆವೃತ್ತಿಯಷ್ಟೇ. ಹಾಗೆಂದು ಈಗ ಹಿಂದುಗಳು ಈ ವಿದ್ಯಮಾನವನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ. ಕುಳಿತುಕೊಂಡಿಲ್ಲ ಕೂಡ. ಒಂದು ಕಾಲಕ್ಕೆ ಭಾರತದ ಮಾಧ್ಯಮಗಳು, ಬುದ್ಧಿಜೀವಿಗಳು, ಅಕಡೆಮಿಕ್ ಸಂಸ್ಥೆಗಳು ಹಾಗೂ ಕೆಲವು ರಾಜಕಾರಣಿಗಳು ಹಿಂದುತ್ವದ ವಿರುದ್ಧ ನಡೆಸುತ್ತಿದ್ದ ವೈಚಾರಿಕ ದಾಳಿಗಳನ್ನು ಜನ ಅಮಾಯಕರಾಗಿ ನೋಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಜನರಲ್ಲಿ ಜಾಗೃತಿ ನಿರ್ಮಾಣವಾಗಿದೆ. ಹಿಂದುತ್ವ ಅವರಲ್ಲಿ ಎಚ್ಚೆತ್ತ ಪ್ರಜ್ಞೆಯಾಗಿದೆ. ಹಾಗಾಗಿ ಇಂತಹ ಅಪಸವ್ಯಗಳಿಗೆಲ್ಲ ನಿರೀಕ್ಷೆಗೂ ಮೀರಿದ ಉತ್ತರ ಬರಲಾರಂಬಿಸಿರುವುದು ಆ ವಲಯವನ್ನು ನಿದ್ದೆಗೆಡಿಸಿರುವುದು ನಿಜ. ಈ ಪ್ರಯತ್ನದ ಸಾಫಲ್ಯತೆಗಿಂತಲೂ ಅದು ಉಂಟುಮಾಡುವ ಸಾಮಾಜಿಕ, ರಾಜಕೀಯ ಗೊಂದಲಗಳಿAದಲೇ ಪ್ರಯೋಜನ ಪಡೆಯಲು ಹೊಂಚು ಹಾಕುವ ಮಂದಿಗೆ ವೈಚಾರಿಕವಾಗಿಯೇ ತಕ್ಕ ಉತ್ತರವನ್ನೂ ನೀಡಬೇಕಾಗಿದೆ.
ಈ ಸಮಾವೇಶದ ಮೂಲಕ ಹಿಂದೂ ಧರ್ಮವನ್ನು, ಭಾರತದಲ್ಲಿ ಪ್ರಜಾಸತ್ತಾತ್ಮಕವಾಗಿಯೇ ಆಯ್ಕೆಯಾಗಿ ಆಳುತ್ತಿರುವ ಬಿಜೆಪಿ ಸರ್ಕಾರವನ್ನು , ಭಾರತವನ್ನು ರಾಷ್ಟ್ರೀಯತೆಯ ಆಧಾರದಲ್ಲಿ ಸಂಘಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿಶ್ವದ ಚಿಂತಕ ವಲಯದ ಮುಂದೆ, ಅಕಾಡೆಮಿಕ್ ವಲಯದಲ್ಲಿ ಭಯಾನಕವಾಗಿ ಚಿತ್ರಿಸುವ ಏಕೈಕ ಅಜೆಂಡಾವನ್ನು ಹೊಂದಿದೆ. ಇದರ ಮೂಲಕ ಹಿಂದೂ ವಿರೋಧಿ ಮಾನಸಿಕತೆಯನ್ನು ರೂಪಿಸಿ, ದ್ರುವೀಕರಣವನ್ನು ಮಾಡುತ್ತಾ ಮುಂದಿನ ಚುನಾವಣೆಯ ವೇಳೆಗೆ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗೆಗೆ ಜಾಗತಿಕ ಮಟ್ಟದಲ್ಲಿ ಅಪನಂಬಿಕೆಯನ್ನು ಬಿತ್ತಿ ಅಧಿಕಾರದಿಂದ ಕೆಳಗಿಳಿಸುವ ಸಂಚಿನ ಭಾಗವಾಗಿದೆ. ಈಗಾಗಲೇ ನಾನಾ ರೂಪದಲ್ಲಿ ಭಾರತದ ಒಳಗಡೆ ನಡೆಯುತ್ತಿರುವ ಈ ಪ್ರಯತ್ನಕ್ಕೆ ಜಾಗತಿಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಆ ಮೂಲಕ ಹಿಂದುತ್ವದ ಬಗೆಗೆ ನಕಾರಾತ್ಮಕ ಭಾವನೆಯನ್ನು ಮೂಡಿಸುವ ಪ್ರಯತ್ನದ ಮುಂದುವರಿಕೆಯೇ ಈ ಸಮ್ಮೇಳನ. ಹಿಂದುತ್ವವನ್ನು ಉಚ್ಛಾಟನೆ ಮಾಡುವುದು ಅಥವಾ ಹಿಂದುತ್ವವನ್ನು ಕಿತ್ತೆಸೆಯುವುದು ಎಂದರೆ ಏನು? ಸೂಕ್ಷ್ಮವಾಗಿ ವಿವೇಚಿಸಿದರೆ ಇದು ಮಾನವೀಯತೆಯ ಜೀವನ ಕ್ರಮವೊಂದರ ಕಿತ್ತೆಸೆಯುವಿಕೆ ಅಲ್ಲವೇ? ಯಾವ ದರ್ಶನಗಳು ‘ವಸುದೈವ ಕುಟುಂಬಕಂ’ ಎನ್ನುವ ತತ್ವಜ್ಞಾನದ ಮೂಲಕ ಜಗತ್ತೇ ಒಂದು ಕುಟುಂಬವೆಂಬ ವಿಶ್ವಾತ್ಮಕ ಭಾವನೆಯನ್ನು ಬಿತ್ತಿದೆಯೋ ಅಂತಹ ಭಾವನೆಯನ್ನು ಕಿತ್ತೆಸೆಯುವುದೇ ಅಲ್ಲವೇ? ವೇದ, ಉಪನಿಷದ್,ಗೀತೆ, ಜನಪದ ಕಾವ್ಯ, ನಂಬಿಕೆಗಳು ಎಲ್ಲವೂ ‘ದೇವನೊಬ್ಬ ನಾಮ ಹಲವು’ ಎಂದು, ಯಾವ ವಿಧದ ಪೂಜೆಯಾದರೂ ಅಂತಿಮವಾಗಿ ಅದು ಒಬ್ಬನೇ ಭಗವಂತನಿಗೆ ತಲುಪುವುದೆನ್ನುವುದನ್ನು ಬಲವಾಗಿ ನಂಬಿ ಪ್ರತಿಪಾದಿಸುತ್ತಾ ಬಂದಿದೆಯೋ ಅಂತಹ ಚಿಂತನೆಯ ನಿರ್ಮೂಲನೆಯೇ ಅಲ್ಲವೇ? ಕಲ್ಲು, ಮಣ್ಣು, ಮರ, ನೀರು, ಪ್ರಾಣಿ, ಪಕ್ಷಿಗಳನ್ನು ಪೂಜನೀಯವಾಗಿ ಕಂಡು ಆರಾಧಿಸುತ್ತಾ ಬಂದಿದೆಯೋ ಅಂತಹ ಪರಂಪರೆಯ ನಿರ್ಮೂಲನೆಯೇ ಅಲ್ಲವೇ? ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಮಹಾತ್ಮ ಗಾಂಧಿ ಮೊದಲಾದ ಮಹಾ ಪುರುಷರು ಯಾವ ಹಿಂದುತ್ವವನ್ನೇ ತಮ್ಮ ಬದುಕಿನ ಪಥದ ಬೆಳಕಾಗಿ ಕಂಡಿದ್ದರೋ ಅಂತಹವರ ವಿಚಾರದ ನಿರ್ಮೂಲನೆಯೇ ಆಲ್ಲವೇ ? ಆಹಾರ, ಉಡುಗೆ ತೊಡುಗೆ, ಪೂಜಾ ವಿಧಾನ,ನಂಬಿಕೆ , ಪರಂಪರೆ ಹೀಗೆ ಎಲ್ಲವುಗಳಲ್ಲಿಯೂ ಬಹುತ್ವವನ್ನು ತನ್ನ ಒಡಲೊಳಗೆ ಪೋಷಿಸಿಕೊಂಡು ಬಂದ ಹಿಂದುತ್ವವನ್ನು ನಿರ್ಮೂಲನ ಮಾಡುವುದೆಂದರೆ ಅಂತಿಮವಾಗಿ ಜಗತ್ತು ಏಕರೂಪತೆಯ ಕಡೆಗೆ ಚಲಿಸುವುದೆಂದೇ ಅರ್ಥವಲ್ಲವೇ? ಹಾಗಾದರೆ ಇಂತಹ ಶ್ರೀಮಂತ ಪರಂಪರೆಯನ್ನು, ಮುಕ್ತ ಚಿಂತನೆಯ ಮಾರ್ಗವನ್ನು ಉಚ್ಛಾಟನೆಗೊಳಿಸಿದ ಮೇಲೆ ಜಗತ್ತು ಹೊರಳಿಕೊಳ್ಳುವುದು ಯಾವ ಕಡೆಗೆ? ನನ್ನ ದೇವರೇ ಸತ್ಯ, ನನ್ನ ಪೂಜಾ ವಿಧಾನವೇ ಸತ್ಯ, ನನ್ನ ದಾರಿ ಮಾತ್ರ ಮೋಕ್ಷವನ್ನು ಕೊಡಬಲ್ಲುದೆನ್ನುವ ಸೆಮೆಟಿಕ್ ಪದ್ಧತಿಯ ಕಡೆಗೆಯೇ?
ಶತಮಾನಗಳ ಕಾಲ ಹಿಂದುತ್ವವನ್ನು ದಮನಿಸಲು ಪ್ರಯತ್ನಿಸಿದ ಮೊಘಲರಿಗೆ, ಬ್ರಿಟಿಷರಿಗೆ, ಪೋರ್ಚುಗೀಸರಿಗೆ ಸಾಧ್ಯವಾಗದ ಕೆಲಸವನ್ನು ಕೆಲವು ಯಕಶ್ಚಿತ್ ಬುದ್ದಿಜೀವಿಗಳು ಮಾಡಬಹುದೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಆದರೆ ಭಾರತದೊಳಗೆ ಜಾತಿಯನ್ನು , ಭಾಷೆಯನ್ನು , ಲಿಂಗ ತಾರತಮ್ಯವನ್ನು ಮುಂದಿಟ್ಟುಕೊಂಡು ಹಿಂದುತ್ವವನ್ನು ವಿಧವಿಧವಾಗಿ ಭಂಜನೆ ಗೈಯುವುದನ್ನೇ ರೂಢಿಯಾಗಿಸಿಕೊಂಡ ಈ ವರ್ಗ ಮತ್ತೆ ಪ್ರಾಯೋಜಿತವಾದ ಈ ಕಾರ್ಯಕ್ರಮದಲ್ಲಿ ಸೇರಿಕೊಂಡಿದೆ. ಹಿಂದುಗಳನ್ನು ಬಲವಂತವಾಗಿ ಮತಾಂತರಿಸಿದಾಗ, ಬಲತ್ಕಾರಕ್ಕೆ ಬಗ್ಗದವರನ್ನು ಹತ್ಯೆಗೈದಾಗ, ಹಿಂದುಗಳು ಹಿಂದುಗಳಾಗಿ ಬದುಕಲು ಜಿಜಿಯಾ ತಲೆಗಂದಾಯ ಹಾಕಿದಾಗ, ದೇಗುಲಗಳನ್ನು ದ್ವಂಸಗೈದಾಗಲೂ ಹಿಂದುತ್ವ ನಾಶವಾಗದೆ ಉಳಿದಿದೆ. ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ಒಂದು ಪರಕೀಯ ದಾಳಿಗೆ ತತ್ತರಿಸಿ ತನ್ನ ಸ್ವಂತಿಕೆಯನ್ನು ಕಳೆದು ಹೇಳ ಹೆಸರಿಲ್ಲದಂತೆ ನಾಶವಾದ ಉದಾಹರಣೆಗಳು ಕಣ್ಮುಂದೆಯೇ ಇರುವಾಗ, ಶತಮಾನಗಳ ಕಾಲ ಪರಕೀಯ ಮತೀಯ ಆಕ್ರಮಣವನು ಎದುರಿಸಿ, ಕ್ಷಾತ್ರಗುಣದಿಂದ ಹೋರಾಡಿ, ತ್ಯಾಗ ಬಲಿದಾನಗೈದು, ದೇವರು ಧರ್ಮವನ್ನು ಉಳಿಸಿದ ಪರಂಪರೆಯೇ ಇಲ್ಲಿರುವುದು. ಅಂತಹ ಸವಾಲುಗಳನ್ನು ಎದುರಿಸಿ ಹಿಂದುತ್ವ ಉಳಿದಿದೆ ಎಂದರೆ ಅದು ದುರ್ಬಲವಲ್ಲ. ಯಾರೋ ಕೈಯಲ್ಲಿ ಕತ್ತಿ ಹಿಡಿದಾಗ, ಇನ್ಯಾರೋ ಕೈಯಲ್ಲಿ ಸುತ್ತಿಗೆ ಹಿಡಿದಾಗ ಹಿಂದುತ್ವ ಕಂಪಿಸಲಾರದು. ಯಾಕೆಂದರೆ ಅದರ ಬೇರುಗಳು ಸಾವಿರಾರು ವರ್ಷಗಳ ಅವಿಚ್ಛಿನ್ನ ಪರಂಪರೆಯಲ್ಲಿದೆ. ಹಿಂದುತ್ವವವನ್ನು ಉಚ್ಛಾಟಿಸುವ ಕೆಲಸವನ್ನು ಶತಮಾನಗಳ ಕಾಲ ಈ ದೇಶದಲ್ಲಿ ಯುದ್ಧಧ ರೂಪದಲ್ಲೇ ಮಾಡಲಾಗಿದೆ. ಆಮೀಷದಿಂದ ನಡೆಸಿದ ಪ್ರಯತ್ನಗಳು ಒಂದೆಡೆಯಾದರೆ, ಭಯವನ್ನು ಹುಟ್ಟಿಸಿ ನಡೆಸಿದ ಪ್ರಯತ್ನಗಳು ಇನ್ನೊಂದೆಡೆಯಿದೆ. ಈ ಸಾಲಿಗೆ ಅಮೇರಿಕಾದ ಈ ಸಮ್ಮೇಳನ ಹೊಸ ಸೇರ್ಪಡೆಯಷ್ಟೇ.
ಅಕಡೆಮಿಕ್ ವೇಷವನ್ನು ಧರಿಸಿದ ಸ್ವಘೋಷಿತ ವಿದ್ವಾಂಸರು ಈ ಯುದ್ಧದಲ್ಲಿ ಕಾಲಾಳುಗಳು ಮಾತ್ರ. ಅವರು ಸ್ವಯಂ ಆಗಿ ಯುದ್ಧವನ್ನು ಮಾಡುತ್ತಿಲ್ಲ. ಪಶ್ಚಿಮದ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಹುನ್ನಾರವನ್ನು ಜಾರಿಗೊಳಿಸಲು ಬಳಸುವ ಭಾರತೀಯ ಮುಖವಾಣಿಗಳಷ್ಟೆ. ಹಿಂದುತ್ವವನ್ನು ನಿಂದಿಸಿ ಮಾತನಾಡಬಲ್ಲ ಅವರ ಸಾಮರ್ಥ್ಯವೇ ಅವರಿಗಿರುವ ಅರ್ಹತೆಯಾಗಿದೆ. ಈ ಸಮ್ಮೇಳನ ಹಿಂದು ವಿರೋಧಿಯಾದ ಧ್ವನಿಯಷ್ಟೆ ಅಲ್ಲ, ಅದು ಭಾರತವಿರೋಧಿ ಧ್ವನಿಯೂ ಹೌದು. ಹಿಂದುತ್ವವನ್ನು ನಿಂದಿಸುವ ನೆಪದಲ್ಲಿ , ಭಾರತವನ್ನೂ, ಇಲ್ಲಿನ ಪ್ರಸ್ತುತ ಸರ್ಕಾರವನ್ನು ನಿಂದನೆ ಮಾಡುವುದು ಈ ವಿದ್ವಾಂಸರ ಪ್ರಕಾರ ಅಕಡೆಮಿಕ್ ಚಟುವಟಿಕೆ!. ಆನಂದ ಪಟವರ್ಧನ್, ಕವಿತಾ ಕೃಷ್ಣನ್, ಆಯೆಷಾ ಕಿದ್ವಾಲ್, ಮೀನಾ ಕಂದಸ್ವಾಮಿ, ನೇಹಾ ದಿಕ್ಷಿತ್ ಮೊದಲಾದವರ ‘ವಿದ್ವತ್ ಚರಿತ್ರೆ’ ಗೊತ್ತಿದ್ದವರಿಗೆ ಅವರ ಮಾನಸಿಕತೆಯನ್ನು ಗ್ರಹಿಸಲು ಕಷ್ಟವಾಗಲಾರದು.
ಸೆಪ್ಟೆಂಬರ್ 11ರಂದೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಕೇವಲ ಆಕಸ್ಮಿಕವಾಗಿರಲಾರದು. ಅಮೇರಿಕಾದ ನೆಲ ಸೆಪ್ಟೆಂಬರ್ 11 ರ ಎರಡು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. 128 ವರ್ಷಗಳ ಹಿಂದೆ ಇದೇ ಅಮೇರಿಕಾದ ನೆಲದಲ್ಲಿ ಭಾರತದ ಸಂತ ಸ್ವಾಮಿ ವಿವೇಕಾನಂದರು ಭಾರತದ ಹಿರಿಮೆಯನ್ನು, ಹಿಂದುತ್ವದ ವೈಶಾಲ್ಯತೆಯನ್ನು ಜಗತ್ತಿಗೆ ಸಾರಿದ ದಿನ, ಆ ಮೂಲಕ ವಿವೇಕಾನಂದರು ವಿಶ್ವ ವಿಜೇತನಾದ ದಿನವೂ ಹೌದು. ಸೆಪ್ಟೆಂಬರ್ 11, ಇಪ್ಪತ್ತು ವರ್ಷಗಳ ಹಿಂದೆ ಇದೇ ಅಮೇರಿಕಾದ ಅವಳಿ ಕಟ್ಟಡಗಳ ಮೇಲೆ ಭಯಾನಕ ಬಾಂಬ್ ದಾಳಿ ನಡೆದು ಸಾವಿರಾರು ಅಮಾಯಕರು ಬಲಿಯಾದ ದಿನವೂ ಹೌದು. ಅಮೇರಿಕಾಗೆ ಹಿಂದುತ್ವವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಪರಿಶ್ರಮ ಬೇಕಾಗಿರಲಿಲ್ಲ. ಅದು ಒಮ್ಮೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ತಿರುವಿ ಹಾಕಿದ್ದರೆ ಸಾಕಿತ್ತು. ತಾನು ಉಚ್ಛಾಟಿಸಲು ಹೊರಟಿದ್ದು ಎಂತಹ ಉದಾತ್ತ ವಿಶ್ವ ಮಾನವ ತತ್ವವನ್ನು ಎನ್ನುವುದು ಗೊತ್ತಾಗುತ್ತಿತ್ತು. ಹಾಗೇಯೆ 20 ವರ್ಷಗಳ ಹಿಂದೆ ನಡೆದ ದಾಳಿಯ ಹಾಗೂ ಆ ನಂತರ ನಡೆದ ಜಾಗತಿಕ ವಿದ್ಯಮಾನಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಹಿಂದುತ್ವದ ಹಿರಿಮೆ, ಅದರ ಉಳಿವಿನ ಅಗತ್ಯ ಏನೆಂದೂ ಅರ್ಥವಾಗುತ್ತಿತ್ತು. ಆದರೆ ಕೆಲವೇ ಕೆಲವು ಪೂರ್ವಾಗಹ್ರ ಪೀಡಿತ ಭಾರತ ವಿರೋಧಿ ಮಾನಸಿಕತೆಯ ವ್ಯಕ್ತಿಗಳು ಸೇರಿಕೊಂಡಂತಿರುವ ಈ ಸಮ್ಮೇಳನದಿಂದ ಆಗುವಂತಹದ್ದೇನೂ ಇಲ್ಲ. ಈಗಾಗಲೇ ಅಮೇರಿಕಾದ ಅನೇಕ ವಿಶ್ವವಿದ್ಯಾಲಯಗಳಿಗೂ ಇದು ಅಂದಾಜಾಗಿದೆ. ಜಗತ್ತಿನಾದ್ಯಾಂತ ನೂರಾರು ಸಂಖ್ಯೆಯ ಅಕಡೆಮಿಕ್ ವಲಯದ ವಿದ್ವಾಂಸರು ಪತ್ರಗಳ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಸ್ವತಃ ಅಮೇರಿಕಾದಲ್ಲಿರುವ ಹಿಂದು ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ನೂರಾರು ವರ್ಷಗಳಿಂದ ತಾವು ಹೋದೆಡೆಯೆಲ್ಲಾ ಸಾಮರಸ್ಯದ ಬದುಕನ್ನು ಮುನ್ನಡೆಸುತ್ತಿರುವ ಹಿಂದುಗಳನ್ನು ಭಯೋತ್ಪಾಧಕರೆನ್ನುವಂತೆ ಬಿಂಬಿಸುವ ಈ ಪ್ರಯತ್ನಗಳನ್ನು ವೈಚಾರಿಕವಾಗಿಯೇ ಎದುರಿಸಬೇಕಾಗಿದೆ. ಹಿಂದುತ್ವವನ್ನು ಉಚ್ಛಾಟಿಸುವ ಆಶಯದ ಪೊಳ್ಳುತನವನ್ನು ಜಗತ್ತಿನ ಮುಂದೆ ತೆರೆದಿಡಬೇಕಾಗಿದೆ.
ಬ್ರಿಟಿಷರ ಆಳ್ವಿಕೆಗೆ ಒಳಗಾದಾಗ ಭಾರತದ ಚರಿತ್ರೆಯನ್ನು, ಪರಂಪರೆಯನ್ನು ನಕಾರಾತ್ಮಕವಾಗಿ ಚಿತ್ರಿಸುವ ಪ್ರಯತ್ನ ನಡೆದಿತ್ತು. ಭಾರತದ ಬಗೆಗೆ ಒಂದು ಕತ್ತಲೆಯ ಯುಗದ ಚರಿತ್ರೆಯನ್ನು ಕಟ್ಟಲಾಗಿತ್ತು. ಆದರೆ ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು, ಆನಂದ ಕುಮಾರಸ್ವಾಮಿ, ಶ್ರೀ ಧರಮ್ಪಾಲ್ ಮೊದಲಾದ ಶ್ರೇಷ್ಟ ಸಾಧಕರು, ವಿದ್ವಾಂಸರು ಭಾರತದ ನೈಜ ವೈಭವವನ್ನು ದಾಖಲೆಗಳ ಸಹಿತವಾಗಿಯೇ ಮಂಡಿಸಿದ ಪರಿಣಾಮವಾಗಿ ವಸಾಹತುಶಾಹಿಯ ಕಪಟತನಗಳು ಬಯಲಾಯಿತು. ಈಗ ಭಾರತದಲ್ಲಿರುವ ಹಿಂದು ವಿರೋಧಿಗಳನ್ನೇ ವಿದ್ವಾಂಸರ ರೂಪದಲ್ಲಿ ಬಳಸಿಕೊಂಡು ಭಾರತವನ್ನು ನಿಂದಿಸುವ ಇನ್ನೊಂದು ಪ್ರಯತ್ನ ಮುಂದುವರಿದಿದೆ. ಇವರ ವಿಚಾರದ ಪೊಳ್ಳುತನವೂ ಬಯಲಾಗುತ್ತಲೇ ಇದೆ. ಹೀಗಿದ್ದರೂ ಜಗತ್ತಿನ ಮತೀಯ ಶಕ್ತಿಗಳಿಗೆ ತಮ್ಮ ಮತ ವಿಸ್ತರಣೆಗೆ ಫಲವತ್ತಾದ ಹೊಸನೆಲವೊಂದು ಬೇಕಾಗಿದೆ. ಭಾರತದ ನೆಲದಲ್ಲಿ ತಮ್ಮ ಮತ ವಿಸ್ತರಣೆಯ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆ ಪ್ರಯತ್ನದ ಭಾಗವಾಗಿಯೇ ಹಿಂದುಗಳನ್ನು ನೈತಿಕವಾಗಿ, ಮಾನಸಿಕವಾಗಿ ಕುಗ್ಗಿಸಿ ಅವರೊಳಗೊಂದು ಕೀಳರಿಮೆಯನ್ನು ಬಿತ್ತುವ ಕೆಲಸ ಆರಂಭವಾಗಿದೆ. ಈ ಸಮ್ಮೇಳನ ಅಂತಹ ಪ್ರಯತ್ನದ ಮುಂದುವರಿದ ಭಾಗವಷ್ಟೇ. ಋಷಿ ಮುನಿಗಳು, ಶರಣರು, ಸಾಧುಗಳು,ದಾಸರು,ತತ್ವಪದಕಾರರು ಹುಟ್ಟಿ ಸಾಧನೆಗೈದ ಈ ನೆಲದ ಚೆಲುವೇ ಹಿಂದುತ್ವ. ಕಾಲ ಕಾಲಕ್ಕೆ ತನ್ನನ್ನು ತಾನೇ ಸ್ವ ವಿಮರ್ಶೆಗೆ ಹಚ್ಚಿಕೊಂಡು ಕಾಲಬಾಹಿರ ಸಂಗತಿಗಳನ್ನು ತಾನೆ ತೊಡೆದು ಹಾಕುವ ಮೂಲಕ ನಿತ್ಯ ಪರಿವರ್ತನಶೀಲ ಗುಣದಿಂದಾಗಿಯೇ ಜಗತ್ತಿನ ದಾರ್ಶನಿಕರ ಗಮನಸೆಳೆದ ಹಿಂದುತ್ವಕ್ಕೆ ಎಂದಿಗೂ ಸಾವಿಲ್ಲ.
✍️ ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.