ಒಬ್ಬ ವ್ಯಕ್ತಿಯ ಶಿಸ್ತುಬದ್ಧ ಬದುಕು, ಸಂಘಟನಾ ಚತುರತೆ, ಸ್ವಾರ್ಥರಹಿತ ಸಾಮಾಜಿಕ ಸೇವೆಯ ಆಶಯ ಆತನನ್ನು ನೆಲಮಟ್ಟದಿಂದ ಆಕಾಶದೆತ್ತರಕ್ಕೆ ಏರಿಸಬಲ್ಲದು. ಈ ಮಾತುಗಳಿಗೆ ನಮ್ಮ ಕಣ್ಣೆದುರಿರುವ ಜ್ವಲಂತ ಸಾಕ್ಷಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತರಾದ ಕಟೀಲ್ ಅವರು ಇಂದು ರಾಷ್ಟ್ರ ಮಟ್ಟದಲ್ಲಿ ಚಿರಪರಿಚಿತರಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಅವರೊಳಗಿನ ಸಮರ್ಪಣಾ ಮನೋಭಾವ, ಸಂಘಟನಾ ಚತುರತೆ ಎಂದರೆ ತಪ್ಪಾಗಲಾರದೇನೋ.
ಪುತ್ತೂರು ತಾಲೂಕಿನ ಪಾಲ್ತಾಡಿಯ ಕುಂಜಾಡಿ ಎಂಬ ಹಳ್ಳಿಯ ಹುಡುಗ ಇಂದು ಬಿಜೆಪಿ ರಾಜ್ಯಾಧ್ಯಕ್ಷ. ಶಾಲೆಗೆ ಹೋಗುವ ಸಂದರ್ಭದಲ್ಲಿಯೇ ಆರೆಸ್ಸೆಸ್ ಕಡೆ ಒಂದು ಸೆಳೆತ. ಸಂಘದ ಶಾಖೆಗಳಿಗೂ ಹೋಗಿ, ಸಂಘದ ಆದರ್ಶಗಳ ನೆರಳಲ್ಲೇ ಬೆಳೆದವರು ಕಟೀಲ್. ಸಂಘದ ಐಟಿಸಿ, ಒಟಿಸಿಗಳನ್ನು ಸಹ ಇವರು ಮುಗಿಸಿದ್ದಾರೆ. ಅಲ್ಲಿಂದ ಬಳಿಕ ಬಿಜೆಪಿಯೊಳ ಬಂದು ಮೂರು ಬಾರಿ ಸಂಸದರಾಗಿ, ಎರಡು ವರ್ಷಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದವಿಯನ್ನು ಅಲಂಕರಿಸಿದ ಕಟೀಲರ ಪರಿಶ್ರಮ, ನಿಸ್ವಾರ್ಥ ಸೇವೆಯೇ ಅವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ ಎಂದರೆ ಅದು ಅತಿಶಯವಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಳದಿಂದ ಬೇರು ಬಿಟ್ಟ ನಳಿನ್ ಕುಮಾರ್ ಕಟೀಲ್ ಎಂಬ ಪುಟ್ಟ ಸಸಿ, ಇಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ಯಶಸ್ವಿಯಾಗಿ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಆರಂಭದಲ್ಲಿ ಎಲೆ ಮರೆಯ ಕಾಯಿಯಂತೆ ಆರೆಸ್ಸೆಸ್ ಮೂಲಕವೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದ ಕಟೀಲ್ ಅವರಿಂದು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರಿಗೂ ಅಚ್ಚುಮೆಚ್ಚಿನ ವ್ಯಕ್ತಿ ಎಂದರೆ, ಅದರ ಹಿಂದಿರುವ ಅವರ ಸಮಾಜಮುಖಿ ಕೆಲಸಗಳನ್ನು ನಾವು ಗುರುತಿಸಲೇ ಬೇಕಾಗುತ್ತದೆ.
ಆರಂಭದಲ್ಲಿ ಆರೆಸ್ಸೆಸ್ನ ಸಾಮಾನ್ಯ ಕಾರ್ಯಕರ್ತನಾಗಿ, ಸಂಘ ಪರಿವಾರದ ನಿಕಟವರ್ತಿಯಾಗಿ, ಪ್ರಚಾರಕರಾಗಿ ಬಳಿಕ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡವರು ಕಟೀಲ್. ಕಟೀಲ್ ಅವರ ಸಂಘಟನಾ ಚಾತುರ್ಯದ ಅರಿವಿದ್ದ ಬಿಜೆಪಿ ಅವರನ್ನು 2009 ರಲ್ಲಿ ದಕ್ಷಿಣ ಕನ್ನಡದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆ. ಕಾಂಗ್ರೆಸ್ನ ಜನಾರ್ಧನ ಪೂಜಾರಿ ವಿರುದ್ಧ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ ಕಟೀಲ್ ಅವರನ್ನು ಸೋಲಿಸಿ ವಿಜಯದ ನಗೆ ಬೀರುವ ಮೂಲಕ, ಇವರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದವರಿಗೆ ಸರಿಯಾದ ಉತ್ತರವನ್ನು ನೀಡುತ್ತಾರೆ. ಆ ಬಳಿಕ 2014, 2019 ರ ಲೋಕಸಭಾ ಚುನಾವಣೆಗಳಲ್ಲಿಯೂ ಇವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ದಕ್ಷಿಣ ಕನ್ನಡದ ಜನತೆ ಮತ ನೀಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶನ ಮಾಡಿದ್ದರು. ಈ ಎರಡು ಚುನಾವಣೆಗಳಲ್ಲೂ ಕಟೀಲ್ ವಿಜಯದ ನಗೆ ಬೀರಿದ್ದರು.
ಹೀಗೆ ಹ್ಯಾಟ್ರಿಕ್ ವಿಜಯದ ಮೂಲಕ ಮೂರು ಬಾರಿ ಸಂಸದರಾಗಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಅವರು, ಅದೆಷ್ಟೋ ವಿರೋಧಗಳು ತಮ್ಮ ಬಗ್ಗೆ ಕೇಳಿಬಂದರೂ ಎದೆಗುಂದದೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕಾರ್ಯವನ್ನು ಯಾವುದೇ ಸ್ವಾರ್ಥ ಇಲ್ಲದೆ ಮಾಡಿಕೊಂಡು ಬಂದವರು. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳೇ ಸಾಕ್ಷೀಭೂತವಾಗಿವೆ. ಪಕ್ಷದ ಸಂಘಟನೆಯಲ್ಲಿ ಅವಿರತ ಶ್ರಮಿಸಿ ತಳಮಟ್ಟದಿಂದ ಹಿಡಿದು, ರಾಷ್ಟ್ರೀಯ ನಾಯಕರ ವರೆಗೆ ಪ್ರಿಯವಾದ ನಳಿನ್ ಕುಮಾರ್ ಅವರ ಚತುರತೆಯನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ಎರಡು ವರ್ಷಗಳ ಹಿಂದೆ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತು.
ಬಹಳಷ್ಟು ನಿರೀಕ್ಷೆಗಳಿರುವ ಹುದ್ದೆಯನ್ನೇರಿದ ಕಟೀಲ್ ಅವರು ಈ ಸಂದರ್ಭದಲ್ಲಿಯೂ ತಮ್ಮ ಕರ್ತವ್ಯ ಮರೆಯಲಿಲ್ಲ. ಬದಲಾಗಿ ಇಡೀ ರಾಜ್ಯದ ಬಿಜೆಪಿ ಪಕ್ಷದ ತಳ ಮಟ್ಟದ ಕಾರ್ಯಕರ್ತರನ್ನು ತಲುಪಿ, ಅವರನ್ನು ಸಂಘಟಿಸಿ ಪಕ್ಷದ ಬಲವರ್ಧನೆಯ ಹಿನ್ನೆಲೆಯಲ್ಲಿ ಸಾಕಷ್ಟು ಕೆಲಸ ಮಾಡಿದರು. ಸಂಸದರಾಗಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಅಭಿವೃದ್ಧಿ ಬಗ್ಗೆ ಚಿತ್ತ ಹರಿಸಿದಂತೆಯೇ ಅವರು ರಾಜ್ಯಾಧ್ಯಕ್ಷ ಪದವಿಯಲ್ಲಿ ಕುಳಿತ ಬಳಿಕ ಇಡೀ ರಾಜ್ಯದ ಅಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದ ಮತ್ತು ಹೈಕಮಾಂಡ್ನ ಮೆಚ್ಚುಗೆ ಪಡೆದಿರುವುದು, ಅವರ ಕರ್ತವ್ಯಪರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಮುಖ್ಯವಾಗಿ ರಾಜ್ಯಾಧ್ಯಕ್ಷ ಪದವಿ ಸಿಕ್ಕ ಬಳಿಕ ಅವರು ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ, ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪೂರಕ ಪರಿಹಾರ ಒದಗಿಸಿಕೊಡುವ ಕೆಲಸವನ್ನು ಮಾಡಿದ್ದಾರೆ. ರಾಜ್ಯಾಧ್ಯಕ್ಷರಾದ ಬಳಿಕ ಅನೇಕ ಬಾರಿ ಇಡೀ ರಾಜ್ಯವನ್ನು ಸುತ್ತಿದ ಕೀರ್ತಿ ಅವರದ್ದು. ಹಾಗೆಯೇ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ, ಪಕ್ಷವನ್ನು ಮತ್ತಷ್ಟು ಸಶಕ್ತಗೊಳಿಸಿರುವ ಕೀರ್ತಿಯನ್ನು ಸಹ ನಾವು ಕಟೀಲ್ ಜಿ ಅವರಿಗೆ ನಿಸ್ಸಂಶಯವಾಗಿ ನೀಡಬಹುದು.
ಕಟೀಲ್ ಅವರಿಗೆ ರಾಜ್ಯಾಧ್ಯಕ್ಷ ಪದವಿ ಹೂವಿನ ಹಾಸಿಗೆಯಾಗಿರಲಿಲ್ಲ, ಬದಲಾಗಿ ಹಲವು ಸವಾಲುಗಳನ್ನು ಅವರು ಎದುರಿಸಬೇಕಾಗಿ ಬಂದಿದೆ. ಈ ಎರಡು ವರ್ಷಗಳ ಅವರ ಅಧಿಕಾರದಲ್ಲಿ ಕೊರೋನಾ ಮಹಾಮಾರಿ ದೇಶವನ್ನು, ರಾಜ್ಯವನ್ನು ತಲ್ಲಣಗೊಳಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಸಂದರ್ಭದಲ್ಲಿ ಆರ್ಎಸ್ಎಸ್ ಸ್ವಯಂಸೇವಕರು, ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು ‘ಸೇವಾ ಹಿ ಸಂಘಟನ್’ ಎಂಬ ಚಿಂತನೆಯೊಂದಕ್ಕೆ ಮೂರ್ತ ರೂಪ ನೀಡಿದ, ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಕೀರ್ತಿ ಕಟೀಲ್ ಅವರಿಗೆ ಸಲ್ಲಬೇಕು. ಕೊರೋನಾ ಸಂಕಷ್ಟ, ಲಾಕ್ಡನ್ನಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಜನರು ಸೇವಾ ಹಿ ಸಂಘಟನ್ನಿಂದ ಪಡೆದ ಸಹಾಯ ಅಷ್ಟಿಷ್ಟಲ್ಲ.
ಇನ್ನು ಸಂಘ ಪರಿವಾರ ಮತ್ತು ಕಟೀಲ್ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಬರೆಯದಿದ್ದರೆ ಅವರ ಬಗ್ಗೆ ಏನೇ ಹೇಳಿದರೂ ಅಪೂರ್ಣವಾದೀತೇನೋ. ಒಂದರ್ಥದಲ್ಲಿ ಕಟೀಲ್ ಅವರು ಸಂಘಪರಿವಾರದ ಕೂಸು ಎಂದರೂ ತಪ್ಪಾಗಲಾರದು. ತಮ್ಮ ಬಾಲ್ಯದಿಂದ ಈ ವರೆಗೆ ಅವರು ಸಂಘ ಪರಿವಾರದ ಜೊತೆಗಿನ ತಮ್ಮ ಬಾಂಧವ್ಯವನ್ನು ಯಾವುದೇ ಲೋಪವಾಗದಂತೆ ಉಳಿಸಿಕೊಂಡು, ಅದಕ್ಕಾಗಿ ಕೆಲಸ ಮಾಡಿಕೊಂಡು ಬಂದಿರುವುದು ಅವರ ಮತ್ತು ಸಂಘಪರಿವಾರದ ನಡುವಿನ ನಂಟಿಗೆ ಸ್ಪಷ್ಟ ನಿದರ್ಶನ. ಹಾಗೆಯೇ ಹಿಡಿದ ಹಠ ಬಿಡದೆ ಕೆಲಸ ಮಾಡುವ ಈ ಸರಳ ಜೀವಿಯ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿಯೇ ಹೌದು.
ಕೊರೋನಾ ಸಂದರ್ಭದಲ್ಲಿ ಕಟೀಲ್ ಅವರು ಕೈಗೊಂಡ ಕಾರ್ಯಗಳು
ಕೋವಿಡ್ 2 ನೇ ಅಲೆ ಸಂದರ್ಭದಲ್ಲಿ ಕಟೀಲ್ ಅವರ ಜನಸ್ನೇಹಿ ಕಾರ್ಯಗಳು ಅವರನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದೆ.
ಈ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು 22.82 ಲಕ್ಷಕ್ಕೂ ಹೆಚ್ಚು ಮಾಸ್ಕ್ ವಿತರಿಸಿದ್ದಾರೆ. ಆಹಾರ ವಿತರಣೆ – 29.28 ಲಕ್ಷಕ್ಕೂ ಹೆಚ್ಚು, ಪಡಿತರ ವಿತರಣೆ – 10.9 ಲಕ್ಷಕ್ಕೂ ಹೆಚ್ಚು, ಶವಸಂಸ್ಕಾರ ವ್ಯವಸ್ಥೆ – 5 ಸಾವಿರಕ್ಕೂ ಹೆಚ್ಚು, ಆಕ್ಸಿಜನ್ ವ್ಯವಸ್ಥೆ- 15 ಸಾವಿರಕ್ಕೂ ಹೆಚ್ಚು, ರೆಮಿಡಿಸೀವರ್ ವ್ಯವಸ್ಥೆ- 53 ಸಾವಿರಕ್ಕೂ ಹೆಚ್ಚು, ಒಟ್ಟು ಕಾರ್ಯಕರ್ತರ ಭಾಗವಹಿಸಿವಿಕೆ – 4.5 ಲಕ್ಷ ಗಳಷ್ಟು ಮೊದಲಾದ ಕಾರ್ಯಗಳನ್ನು ಸಂಘಟನಾತ್ಮಕ ನೆಲೆಯಲ್ಲಿ ಮಾಡುವ ಮೂಲಕ ಜನರಿಗೆ ಮತ್ತಷ್ಟು ಆತ್ಮೀಯರಾಗಿದ್ದಾರೆ.
ಹಾಗೆಯೇ, ಕೋವಿಡ್ 1, 2 ಹಾಗೂ 3ನೇ ಅಲೆಯ ದೃಷ್ಟಿಯಿಂದ ಕಾರ್ಯಕರ್ತರನ್ನೆ ಆರೋಗ್ಯ ಸ್ವಯಂಸೇವಕರನ್ನಾಗಿ ಮಾಡುವ ದೃಷ್ಟಿಯಿಂದ “ಆರೋಗ್ಯ ಸ್ವಯಂಸೇವಕರ ರಾಜ್ಯಮಟ್ಟದ ಅಭಿಯಾನ” ಏರ್ಪಡಿಸಲಾಗಿದೆ. ಪಕ್ಷದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಆರೋಗ್ಯ ಸ್ವಯಂಸೇವಕರ ಜಿಲ್ಲಾಮಟ್ಟದ ಅಭಿಯಾನ ನಡೆಸಲಾಗಿದೆ. ಬೂತ್ ಮಟ್ಟದಲ್ಲಿ “ಪಂಚರತ್ನ” ಎಂಬ ಕಲ್ಪನೆಯೊಂದಿಗೆ 5 ಜನ ಆರೋಗ್ಯ ಸ್ವಯಂಸೇವಕರನ್ನು ಜೋಡಿಸುವ ಕೆಲಸ ನಡೆದಿದೆ. ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಕಟೀಲ್ ಜಿ ಅವರ ಈ ಎಲ್ಲಾ ಕಾರ್ಯಗಳನ್ನು ನಾವು ಶ್ಲಾಘಿಸಲೇ ಬೇಕು.
ಹಾಗೆಯೇ ಕಟೀಲ್ ಸಮರ್ಥ ನಾಯಕತ್ವದಲ್ಲಿ ಕೇಂದ್ರ ಮಂತ್ರಿಗಳ ಜನಾಶೀರ್ವಾದ ಯಾತ್ರೆ 4 ತಂಡಗಳಲ್ಲಿ ನಡೆದು ಜನಮನ ತಲುಪುವಲ್ಲಿ ಯಶಸ್ವಿಯಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಿದ್ದಾರೆ. ಮಾನ್ಯ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ 4,47,000 ಗಿಡ ನೆಡಲಾಗಿದೆ. 3,10,000 ಬೀಜದುಂಡೆಗಳನ್ನು ನೆಡಲಾಗಿದೆ. ಆ ಮೂಲಕ ಪರಿಸರ ಸಂರಕ್ಷಣೆ, ಗಿಡ ಮರಗಳ ರಕ್ಷಣೆಗೂ ಅವರು ಮಹತ್ವದ ಕ್ರಮಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಇವರ ಸಂಘಟನಾತ್ಮಕ ಪ್ರತಿಭೆಯನ್ನು ಸಹಿಸದ ಹಲವರು ಇವರನ್ನು ವಿರೋಧಿಸಿದ್ದು, ಅಪವಾದಗಳನ್ನು ಮಾಡಿದ್ದೂ ಇದೆ. ಆದರೆ ಕಟೀಲ್ ಅವರು ಮಾತ್ರ ಆ ಎಲ್ಲಾ ಕೆಸರೆರಚುವವರ ನಡುವೆ ತಾವರೆಯಂತೆ ಅರಳಿದ್ದಾರೆ. ಎಲ್ಲಾ ವಿಚಾರಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಂಪೂರ್ಣ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಎರಡು ವರ್ಷಗಳ ತಮ್ಮ ರಾಜ್ಯಾಧ್ಯಕ್ಷ ಪದವಿಯಲ್ಲಿ ರಾಜ್ಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಅವರ ಮೂಲಕ ಜನಮುಖಿ ಕಾರ್ಯಗಳು ನಡೆಯಲಿ. ಸಮಾಜದ ಅಭ್ಯುದಯವಾಗಲಿ ಎಂಬ ಆಶಯ ನಮ್ಮದು.
ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಪ್ರಮುಖ ಸಂಘಟನಾತ್ಮಕ ಹೆಜ್ಜೆಗಳು :
🔷 ಕಾರ್ಯಕರ್ತರ ಕಾರ್ಯಕ್ಷಮತೆ ಹೆಚ್ಚಳ ಮತ್ತು ನೈಪುಣ್ಯತೆ ತರುವ ನಿಟ್ಟಿನಲ್ಲಿ ಎಲ್ಲ ಮಂಡಲಗಳಲ್ಲಿ ಅಭ್ಯಾಸ ವರ್ಗಗಳ ಆಯೋಜನೆ
🔷 ಸಾಮಾನ್ಯ ಕಾರ್ಯಕರ್ತನನ್ನೂ ಜನಸೇವಕರನ್ನಾಗಿ ಪರಿವರ್ತಿಸಬೇಕೆಂಬ ಸಂಕಲ್ಪದೊಂದಿಗೆ ಜನಸೇವಕ ಯಾತ್ರೆಗಳ ಆಯೋಜನೆ
🔷 ಕಾರ್ಯಕರ್ತರ ತರಬೇತಿ ಮತ್ತು ಕಾರ್ಯಕರ್ತರಲ್ಲಿ ಸಂಘಟನಾ ಬದ್ಧತೆ ರೂಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳ ಅನಾವರಣ
🔷 ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷದ ಜನಪ್ರತಿನಧಿಯನ್ನಾಗಿ ನೇಮಿಸಲು ಅವಕಾಶ ಮಾಡಿಕೊಟ್ಟಿದ್ದು, ಯುವಕ, ಮಹಿಳೆಯರಿಗೆ ಆದ್ಯತೆ
🔷 ಗ್ರಾಮ ಗ್ರಾಮಗಳಲ್ಲಿ ಬಿಜೆಪಿ ಗೆಲುವಿಗೆ ಗ್ರಾಮ ಸ್ವರಾಜ್ಯ ಸಮಾವೇಶ ಆಯೋಜನೆ
🔷 ಗ್ರಾಮಗಳ ಜನಪ್ರತಿನಿಧಿಗಳಿಗೆ ಗೌರವ ಸಲ್ಲಿಸುವ ಗ್ರಾಮ ಸೇವಕ್ ಸಮಾವೇಶ ಆಯೋಜನೆ
🔷 ಹಿರಿಯರಿಗೆ ಮತ್ತು ಪಕ್ಷದ ಪ್ರಮುಖರಿಗೆ ಹಾಗೂ ಸಮಾಜದ ವಿವಿಧ ವರ್ಗದ ಜನರಿಂದ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ “ಜನಾಶೀರ್ವಾದ ಯಾತ್ರೆ” ಆಯೋಜನೆ
🔷 ಬೂತ್ಗಳಲ್ಲಿ ಪೇಜ್ ಪ್ರಮುಖರ ಪರಿಕಲ್ಪನೆಯ ಸಮರ್ಪಕ ಅನುಷ್ಠಾನ, ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರ ನೇಮಕ, ಪಂಚರತ್ನ ಸಮಿತಿ ರಚನೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನಳಿನ್ ಕುಮಾರ್ ಕಟೀಲ್ ಅವರಿಗೆ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.