ಸ್ವಾತಂತ್ರದ 75 ನೇ ವರ್ಷದಲ್ಲಿ ಈ ಹೂಗುಚ್ಚಗಳ ಕಡೆಗೆ ಒಮ್ಮೆ ಲಕ್ಷ್ಯ ವಹಿಸೋಣ.
ಯಾವುದೇ ಗಣ್ಯ ವ್ಯಕ್ತಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛವನ್ನು ನೀಡುವಂತಹದು ರೂಢಿಗತ ಅಭ್ಯಾಸವಾಗಿದೆ. ಆದರೆ ಅದನ್ನು ಪಡೆದುಕೊಂಡ ವ್ಯಕ್ತಿ ಅದನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಬದಲಾಗಿ ಅದನ್ನು ತನ್ನ ಭದ್ರತಾ ಸಿಬ್ಬಂದಿಗಳಿಗೆ ಹಸ್ತಾಂತರಿಸಿ ಬಿಡುತ್ತಾರೆ. ಭದ್ರತಾ ಸಿಬ್ಬಂದಿ ಮುಂದಿನ ಸುತ್ತಿನ ಭದ್ರತಾ ಸಿಬ್ಬಂದಿಗೆ ಇದನ್ನ ದಾಟಿಸುತ್ತಾನೆ. ಕೊನೆಯಲ್ಲಿ ಆ ಕಚೇರಿಯ ಅಥವಾ ಆ ಸ್ಥಳದ ಕೊಟ್ಟಕೊನೆಯ ಸಿಬ್ಬಂದಿಗೆ ತಲುಪುತ್ತದೆ. ಈ ಹೂಗಳು ಅತ್ತ ಗೊಬ್ಬರವೂ ಆಗದೆ, ಮರುದಿನ ಕಸದ ಗಾಡಿಗೆ ಸೇರುವುದು ಎಲ್ಲರಿಗೂ ತಿಳಿದ ವಿಚಾರ.
ಇದರಿಂದ ಹೂಗಳನ್ನು ಬೆಳೆಯುವ ಕೃಷಿಕರಿಗೆ ಏನೋ ಸಣ್ಣಪುಟ್ಟ ಲಾಭ ಬರಬಹುದು. ಆದರೆ ಮಧ್ಯವರ್ತಿಗಳಿಗೆ ಹಾಗೂ ಪೂರೈಕೆದಾರರಿಗೆ ದೊಡ್ಡ ಪ್ರಮಾಣದ ಲಾಭ. ಬೆಳೆಗಾರರು ಸಂಪೂರ್ಣವಾಗಿ ಇದರ ಲಾಭವನ್ನು ಪಡೆಯುವುದಿಲ್ಲ. ಬದಲಾಗಿ ರೈತನಿಂದ ಪಡೆದುಕೊಂಡು, ಅದನ್ನು ವ್ಯಾಪಾರೀಕರಣಕ್ಕೆ ಒಳಪಡಿಸುವವರು ಇದರ ಹೆಚ್ಚಿನ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಅದರ ಬದಲು ಸ್ವಾತಂತ್ರ್ಯದ 75 ರ ಈ ಸಂಭ್ರಮದ ಸಂದರ್ಭದಲ್ಲಿ ಒಂದು ಗುಲಾಬಿ ಹೂವನ್ನು ನೀಡುವ ರೂಢಿಯನ್ನು ಕೇಂದ್ರ ಸರ್ಕಾರವೇ ಆದೇಶ ಜಾರಿಗೊಳಿಸುವ ಮೂಲಕ ತಂದರೆ ಉತ್ತಮ ಬೆಳವಣಿಗೆಯಾಗಬಹುದು. ಆ ಮೂಲಕ ಅನಗತ್ಯ. ವೆಚ್ಚಕ್ಕೆ. ಕಡಿವಾಣ ಹಾಕುವ ಮೂಲಕ, ಆ ಮೊತ್ತವನ್ನು ಮತ್ತಿನ್ಯಾವುದೋ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿದಲ್ಲಿ ಜನರಿಗೂ ಉಪಯೋಗವಾಗುವ ಸಾಧ್ಯತೆ ಇದೆ. ಜೊತೆಗೆ ಸಾರ್ವಜನಿಕ ಪ್ರಶಂಸೆಗೂ ಪಾತ್ರವಾಗಬಹುದು.
ಈಗ ಹೂಗುಚ್ಛದ ಲೆಕ್ಕಚಾರ ನೋಡೋಣ..
ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಲ್ಲದೆ, ಕೇಂದ್ರಾಡಳಿತ ಪ್ರದೇಶ ಇವುಗಳಿಗೆ ದಿನವೊಂದಕ್ಕೆ ಸರಿ ಸುಮಾರು 5,000 ಹೂಗುಚ್ಛಗಳು ಬೇಕಾಗಬಹುದು ಎಂಬ ಅಂದಾಜು. ಈ ಹೂಗುಚ್ಚಗಳು 300, 500, 1,000 ಮೊತ್ತದ ವರೆಗಿನವು ಇರಬಹುದು ಎಂಬ ಅಂದಾಜಿದೆ. ಏನೇ ಇರಲಿ ನಾವು ಸರಾಸರಿ ದರವನ್ನು 500 ನೂರು ರೂಪಾಯಿ ಎಂದು ತಿಳಿದು ಮುಂದಿನ ಲೆಕ್ಕ ಹಾಕೊಣ.
1 ದಿನಕ್ಕೆ 5000 * ರೂ. 500 = ರೂ. 2,500,000 (25 ಲಕ್ಷ)
ತಿಂಗಳಲ್ಲಿ 25 ದಿನಕ್ಕೆ ರೂ. 2,500,000 * 25 = ರೂ. 62,500,000 (625 ಲಕ್ಷ)
1 ವರ್ಷಕ್ಕೆ ರೂ. 62,500,000 * 12 = ರೂ. 75,000,000 (7500 ಲಕ್ಷ).
ಅಂದರೆ ವರ್ಷವೊಂದಕ್ಕೆ ಹೂಗುಚ್ಛದ ವೆಚ್ಚ ರೂ. 75,000,000.
ಇದನ್ನು ನಿಲ್ಲಿಸಿ ಕರೊನಾ ಕಡಿವಾಣ ವೆಚ್ಚಕ್ಕೆ ಇದನ್ನು ಉಪಯೋಗಿಸಬಹುದಲ್ಲವೇ. ಅಥವಾ ಸಾಮಾಜಿಕ ಯೋಜನೆಗಳಿಗೆ ಇದನ್ನು ಉಪಯೋಗಿಸಬಹುದಾಗಿದೆ. ಆರ್ಥಿಕ ಸಂಕಷ್ಟದ ಈ ಸಂದರ್ಭದಲ್ಲಿ ಇಂತಹ ಒಂದು ಚಿಕ್ಕ ಪ್ರಯತ್ನಗಳು ಸಹ ಒಂದು ದೊಡ್ಡ ಧನಾತ್ಮಕ ಫಲಿತಾಂಶವನ್ನು ನೀಡುವುದು ಸಾಧ್ಯವಾಗಬಹುದು. ಆ ಮೂಲಕ ಹಣದ ಸದ್ಭಳಕೆ ಸಾಧ್ಯವಿದೆ. ಇದೇ ರೀತಿಯಲ್ಲಿ ಮತ್ತೆ ಹಲವು ಸಣ್ಣ ಪುಟ್ಟ ಪ್ರಯತ್ನ, ಬದಲಾವಣೆಗಳ ಮೂಲಕ ಯಾವುದೋ ಒಂದು ಸಕಾರಾತ್ಮಕ ಬೆಳವಣಿಗೆಯನ್ನು ಸಹ ನಾವು ಕಾಣುವುದು ಸಾಧ್ಯವಿದೆ.
ಇದಕ್ಕೆ ಪೂರಕವಾಗಿ ಹೇಳುವುದಾದರೆ, ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ಆಯ್ಕೆಯಾದ ಸಚಿವ ಸುನಿಲ್ ಕುಮಾರ್ ಅವರು ತಮ್ಮ ಭೇಟಿಗೆ ಬರುವವರು ಹಾರ, ತುರಾಯಿ ಅಥವಾ ಇನ್ಯಾವುದೇ ಉಡುಗೊರೆಗಳನ್ನು ತರಬೇಡಿ. ತರುವುದಿದ್ದರೆ ಕನ್ನಡ ಪುಸ್ತಕಗಳನ್ನು ತನ್ನಿ ಎನ್ನುವ ಮೂಲಕ ಯಾವುದೋ ಒಂದು ಸಂಸ್ಕೃತಿಯ ಬದಲಾವಣೆಗೆ ಆರಂಭಿಕ ಹೆಜ್ಜೆ ನೆಟ್ಟಿದ್ದರು.
ಆ ಬಳಿಕ ಇಂತಹ ಒಂದು ದಿಟ್ಟ ನಡೆಯನ್ನು ಈಗಾಗಲೇ ಕರ್ನಾಟಕ ಸರ್ಕಾರ ಜಾರಿಗೆ ತರುವ ಮೂಲಕ ಒಂದು ದಿಟ್ಟ ಹೆಜ್ಜೆ ಇರಿಸಿದೆ. ಸರ್ಕಾರ, ಸರ್ಕಾರದ ಇಲಾಖೆಗಳು, ಸರ್ಕಾರಿ ಸ್ವಾಧೀನದ ಸಂಸ್ಥೆಗಳಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಹೂಗಳು ಅಥವಾ ಇನ್ಯಾವುದೇ ಉಡುಗೊರೆಗಳಿಗೆ ಅವಕಾಶ ಇಲ್ಲ ಎಂಬ ಆದೇಶ ಹೊರಡಿಸುವ ಮೂಲಕ ವಿಭಿನ್ನವಾದ ಪ್ರಯತ್ನ ಒಂದಕ್ಕೆ ಸಿದ್ಧವಾಗಿದೆ. ಕೊಡುವುದೇ ಆದರೆ, ಕೊಡಲೇ ಬೇಕೆಂದರೆ ಕನ್ನಡ ಪುಸ್ತಕಗಳನ್ನು ನೀಡಿ ಎಂಬುದಾಗಿಯೂ ತಿಳಿಸುವ ಮೂಲಕ ಮಹತ್ವದ ಬದಲಾವಣೆಯೊಂದಕ್ಕೆ ಭಾಷ್ಯ ಬರೆದಿದೆ. ಇಂತಹದ್ದೇ ನಡೆ ಇಡೀ ದೇಶದಲ್ಲಿ ಜಾರಿಯಾದರೆ ಸಮಾರಂಭ, ಸಭೆ, ಉಡುಗೊರೆಗಳ ಹೆಸರಿನಲ್ಲಿ ಬಳಕೆಯಾಗುವ ಹಣದ ಉಳಿಕೆ ಸಾಧ್ಯ.
✍️ ಡಾ. ರವಿಕಿರಣ್ ಪಟವರ್ಧನ್, ಶಿರಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.