ಬೈಂದೂರು : ಸ್ಥಳೀಯ ಆರಕ್ಷಕ ಠಾಣಾ ವತಿಯಿಂದ ಯಡ್ತರೆ ಗ್ರಾ.ಪಂ ಸಭಾಭವನದಲ್ಲಿ ಪಡುವರಿ, ಶಿರೂರು, ಬೈಂದೂರು ಯಡ್ತರೆ ಹಾಗೂ ಉಪ್ಪುಂದ ಗ್ರಾ.ಪಂ ಮಟ್ಟದ ನಾಗರೀಕ ಸಮಿತಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ದ್ವಿಚಕ್ರವಾಹನ ಸವಾರರು ಅತೀಯಾದ ವೇಗದಲ್ಲಿ ಪೇಟೆಯ ಮುಖ್ಯ ರಸ್ತೆಗಳಲ್ಲಿ ವಾಹನ ಚಲಾಯಿಸಿ ಅಪಘಾತವಾಗುವುದನ್ನು ತಡೆಕಟ್ಟುವುದು. ವಾಹನದಲ್ಲಿ ಸರಿಯಾದ ದಾಖಲೆಗಳಿಲ್ಲದೇ ಯುವಕ(ವಿದ್ಯಾರ್ಥಿಗಳು)ರು ವಾಹನ ಓಡಿಸುವುದಕ್ಕೆ ಕಡಿವಾಣ ಹಾಗೂ ತಪಾಸಣೆ ಮಾಡಬೇಕು. ಹಾಗೂ ಪಾರ್ಕಿಂಗ್ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಸಭೆಯಲ್ಲಿರುವ ಅನೇಕರು ಆಗ್ರಹಿಸಿದರು.
ಶಿರೂರು ಕಾಲೇಜಿನಲ್ಲಿ ರಾತ್ರಿ ಹೊತ್ತು ಕೆಲವು ಕಿಡಿಗೇಡಿಗಳು ಅಹಿತಕರ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಕ್ಲಾಸ್ರೂಮಿನ ಬೀಗ ಮುರಿದು ಸೊತ್ತು ನಾಶಮಾಡಿದ್ದು ಕೂಡಾ ಇತ್ತೀಚೆಗೆ ನಡೆದಿದೆ. ತಡೆಯಲು ಹೋದ ರಾತ್ರಿ ಕಾವಲುಗಾರನಿಗೆ ಬೈದು ಹಲ್ಲೆಗೆ ಮುಂದಾದ ಘಟನೆಗಳು ನಡೆದಿದೆ. ಈ ಬಗ್ಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಿರೂರಿನ ಸೈಯದ್ ಸಾಹೇಬ್ ವೃತ್ತನೀರಿಕ್ಷಕರಿಗೆ ಮನವಿ ಮಾಡಿದರು.
ಅಂಬಾಗಿಲು ಪೇಟೆ ಮುಖ್ಯರಸ್ತೆಗಳ ಬದಿಯಲ್ಲಿ ಅಂಗಡಿ ಮಾಲೀಕರು ಸಾಮಾನು ಸರಂಜಾಪುಗಳನ್ನು ರಸ್ತೆಯ ಮೇಲೆ ಇಟ್ಟು ಮಾರಾಟ ಮಾಡುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ವತಿಯಿಂದ ತೆರವಿನ ಬಗ್ಗೆ ನೋಟೀಸು ನೀಡಿದರೂ ವ್ಯಾಪಾರಸ್ಥರು ಸ್ಪಂದಿಸುತ್ತಿಲ್ಲ ಎಂದು ಉಪ್ಪುಂದ ಗ್ರಾ.ಪಂ ಅಧ್ಯಕ್ಷ ಜಗನ್ನಾಥ ಎಂ. ಆರೋಪಿಸಿ ಮುಂದಿನ ದಿನಗಳಲ್ಲಿ ಗ್ರಾಪಂ ನಡೆಸುವ ಕಾರ್ಯಾಚರಣೆಗೆ ಪೋಲೀಸರ ಸಹಕಾರ ಕೋರಿದರು.
ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ರಾತ್ರಿ-ಹಗಲು ಅನೇಕ ಪ್ರಯಾಣಿಕರು ಬಂದು ಹೋಗುತ್ತಾರೆ. ಈ ನಿಲ್ದಾಣದಲ್ಲಿ ಭಧ್ರತೆ ಕಡಿಮೆ ಇರುವುದರಿಂದ ರಾತ್ರಿ ಬೀಟ್ ಹೆಚ್ಚಿಸಿ, ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ನಡೆಸಬೇಕು. ಕಳ್ಳಕಾಕರಿಗೆ ಇದು ಉತ್ತಮ ರಹದಾರಿಯಾಗಿದ್ದು, ಭದ್ರತೆ ಹೆಚ್ಚಿಸಬೇಕು ಎಂದು ತಾ.ಪಂ ಸದಸ್ಯ ಎಸ್ ರಾಜು ಪೂಜಾರಿ ಸಲಹೆ ನೀಡಿದರು. ಯಡ್ತರೆ ಜಂಕ್ಷನನಲ್ಲಿ ಕೊಲ್ಲೂರು ರಾ.ಹೆ ೬೬ಕ್ಕೆ ಸೇರುವಲ್ಲಿ ವಾಹನ ನಿಲುಗಡೆಯಿಂದಾಗಿ ಕೆಲವು ಸಮಯದವರೆಗೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಬಗ್ಗೆ ಸರ್ವಿಸ್ ಬಸ್ ಚಾಲಕರಿಗೆ ಆದೇಶ ನೀಡಬೇಕು ಅಲ್ಲದೆ ರಾ.ಹೆ ಅಗಲೀಕರಣ ಕಾರ್ಯ ನಡೆಯುತ್ತಿರುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಪಾದಚಾರಿಗಳು ಹೆಚ್ಚಿನ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದು ಆ ಬಗ್ಗೆ ಗಮನಹರಿಸಬೇಕು ಎಂದು ಜಿ.ಪಂ ಸದಸ್ಯ ಕೆ.ಬಾಬು ಶೆಟ್ಟಿ ಹೇಳಿದರು.
ವಸತಿ ಪ್ರದೇಶದಲ್ಲಿ ತಡರಾತ್ರಿಯವರೆಗೆ ಕೆಲವು ಅಪರಿಚಿತ ವ್ಯಕ್ತಿಗಳು ಮೋರಿಗಳ ಹಾಗೂ ಆವರಣ ಗೋಡೆಗಳಲ್ಲಿ ಕುಳಿತು ಮತನಾಡುತ್ತಿರುವುದು ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಎಂದು ಯಡ್ತರೆ ಗ್ರಾಪಂ ಸದಸ್ಯ ಮಾರ್ಟೀನ್ ಡಯಾಸ್ ಆರಕ್ಷಕರ ಗಮನಕ್ಕೆ ತಂದರು.
ಕೊನೆಯಲ್ಲಿ ಮಾತನಾಡಿದ ವೃತ್ತನಿರೀಕ್ಷಕ ಎಂ. ಸುದರ್ಶನ್, ಈ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವಲ್ಲಿ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಠಾಣಾ ವಲಯ ವಿಸ್ತಾರವಾಗಿರುವುದರಿಂದ ಅಪರಾಧ ಪತ್ತೆ ಮಡುವಲ್ಲಿ ಹಾಗೂ ತಡೆಯುವಲ್ಲಿ ಪೋಲೀಸರೊಂದಿಗೆ ಊರಿನ ನಾಗರೀಕರು ಕೈ ಜೋಡಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಯಾರ ಮೇಲಾದರು ಅನುಮನ ಬಂದರೆ ತಕ್ಷಣ ಠಾಣೆಗೆ ತಿಳಿಸುವಂತೆ ಸೂಚಿಸಿದರು.
ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ಪ್ರಸನ್ನ ಕುಮಾರ್, ಉದ್ಯಮಿ ಬಿ.ಎಸ್ ಸುರೇಶ ಶೆಟ್ಟಿ, ಬೈಂದೂರು ಗ್ರಾ.ಪಂ ಅಧ್ಯಕ್ಷ ಜನಾರ್ದನ, ಮಾಜಿ ಉಪಾಧ್ಯಕ್ಷ ಎಸ್ ವೆಂಕಟ ಪೂಜಾರಿ, ಕಿರುಮುಂಜೇಶ್ವರ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಮೀನುಗಾರ ಮುಖಂಡ ಕುಮಾರ್ ಖಾರ್ವಿ ಬಿಎಚ್ಕೆ, ಪಂಚಾಯತ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಸ್ವಾಗತಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.