ಭಾರತವು ಸಮೃದ್ಧಿಯ ದೇಶ. ನಾಡು-ನುಡಿ, ಸಂಸ್ಕೃತಿಗಳಲ್ಲಿ ಶ್ರೀಮಂತವೆಂಬ ಹೆಗ್ಗಳಿಕೆ ಪಡೆದಿದೆ. ಜನ ಸಂಖ್ಯೆಯಲ್ಲಿ ಈಗಾಗಲೇ ಪ್ರಪಂಚದಲ್ಲೇ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಪ್ರಪಂಚದಲ್ಲಿರುವ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಭಾರತ ದೇಶದಲ್ಲಿದ್ದಾರೆ.
ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದಿಂದ ದೇಶಕ್ಕೆ ಮಾರಕವಾಗಬಹುದು. ಮುಂದುವರಿದ ದೇಶಗಳಲ್ಲಿ ಜನ ಸಂಖ್ಯೆ ಹೆಚ್ಚಿದರೆ ಗಂಭೀರ ಸಮಸ್ಯೆ ಉದ್ಭವಿಸುವುದಿಲ್ಲ. ಸಂಪದ್ಭರಿತ ದೇಶಗಳು ಎಲ್ಲಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂಲಭೂತ ಅವಶ್ಯಕತೆಗಳ ಜೊತೆಗೆ ಅಗತ್ಯತೆಗಳು ಕೂಡ ಹೆಚ್ಚಾಗುತ್ತಾ ಬಂದಿದೆ.
ಬಡ ಕುಟುಂಬವೊಂದನ್ನು ಮುನ್ನಡೆಸುವ ಮನೆಯ ಯಜಮಾನನಿಗೆ, ಎಂಟು ಹತ್ತು ಜನ ನೆಂಟರುಗಳ ಆಗಮನದಿಂದ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ನಮ್ಮ ದೇಶದ ಪರಿಸ್ಥಿತಿಯು ಕೂಡ ಈ ಬಡ ಕುಟುಂಬದಂತೆಯೇ ಆಗಿದೆ. ಆದರೆ ಅದಾಗಲೇ ಇಲ್ಲಿ ಸುಧಾರಣೆಗೆ ಸಾಧ್ಯವಾಗದಷ್ಟು ಸಂಬಂಧಿಕರು ಬಂದಾಗಿದೆ. ಇದಕ್ಕೆ ಕಡಿವಾಣದಂತೆ ಎಷ್ಟೇ ನೀತಿ ನಿಯಮಗಳನ್ನು ಜಾರಿಗೊಳಿಸಿದರೂ, ಸಮಸ್ಯೆ ನಿವಾರಣೆಯಾಗುವುದು ಕಂಡು ಬರುತ್ತಿಲ್ಲ.
ಜನಸಂಖ್ಯೆ ಹೆಚ್ಚಾದಂತೆ ಜನರ ಬಯಕೆಯೂ ಹೆಚ್ಚಾಗಿ ದೇಶದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿರುವುದಂತೂ ನಿಜ. ಇದರ ಬಗೆಗೆ ಸರಕಾರ ಯೋಚಿಸುವ ಜೊತೆಗೆ ಜನತೆಯೂ ಹೆಚ್ಚು ಗಮನ ಕೊಡಬೇಕಿದೆ. ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ತರಲು ಸರಕಾರದ ನೀತಿ ನಿಯಮಗಳನ್ನು ಪಾಲಿಸಬೇಕಿದೆ. ಭಾರತದ ಸವಲತ್ತುಗಳನ್ನು ಪಡೆಯುತ್ತಿರುವ ಜನರು ದೇಶದ ಸಂಪತ್ತನ್ನು, ಆರ್ಥಿಕತೆಯನ್ನು ಉಳಿಸುವಲ್ಲಿ ಪ್ರಯತ್ನ ಮಾಡಬೇಕು. ದೇಶದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಳವಾಗಿದೆ ಎಂಬ ಮಾತು ಹೆಚ್ಚು ಕೇಳಿಬರುತ್ತಿದೆ. ವಾಹನ ಸಮಸ್ಯೆ ಮಾತ್ರ ಅಲ್ಲ. ಬದಲಾಗಿ ಅನಕ್ಷರತೆ, ಬಡತನ, ಆರ್ಥಿಕತೆ ಕುಸಿತದಿಂದಾಗಿ ಮೂಲಭೂತ ಅವಶ್ಯಕತೆಗಳು ದೊರಕದೆ ಇರುವುದು ಬಹಳ ದೊಡ್ಡ ಸಮಸ್ಯೆ. ಹಾಗಾಗಿ ಇವೆಲ್ಲದರ ಬಗೆಗೆ ಚಿಂತಿಸಿ ಅಗತ್ಯತೆಗಳಿಗೆ ತಕ್ಕಂತೆ ಸಂಪನ್ಮೂಲಗಳನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು.
ಮಿತಿ ಮೀರಿದ ಜನಸಂಖ್ಯೆಯಿಂದ ಕೊಳಚೆ ಪ್ರದೇಶದಲ್ಲಿ ವಾಸಿಸುವವರು ಅಧಿಕವಾಗಿದ್ದಾರೆ. ಆದ್ದರಿಂದ ಜನರು ಸಾಧ್ಯವಾದಷ್ಟು ಮಟ್ಟಿಗೆ ಕುಟುಂಬ ಕಲ್ಯಾಣ ಯೋಜನೆಯನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಹಾಗೂ ಬೇರೆ ದೇಶದಿಂದ ಅತಿಕ್ರಮಣ ವಲಸೆ ಬರುವ ಜನರ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಂದಿನ ದಿನಗಳಲ್ಲಿ ಕೃಷಿಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳು ತೀರಾ ಕಡಿಮೆಯಾಗಿದ್ದು, ಮತ್ತೊಂದೆಡೆ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಕೈಗಾರಿಕೋದ್ಯಮಗಳಿಂದ ಆರೋಗ್ಯಕ್ಕೆ ಅಪಾಯಕಾರಿಯಾಗುವಂತಹ ಕೀಟನಾಶಕಗಳು ಮಾನವನ ದೇಹ ಸೇರುತ್ತಿದ್ದು, ಅನೇಕ ರೋಗರುಜಿನಗಳಿಗೆ ಕಾರಣವಾಗಿದೆ. ಅತಿಯಾದ ಕೈಗಾರೀಕರಣವು ಶುದ್ಧ ಪರಿಸರದ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು.
ದೇಶವು ಆರ್ಥಿಕ ಸಮಸ್ಯೆಯೊಂದಿಗೆ ಸಾಮಾಜಿಕ ಬಿಕ್ಕಟ್ಟು, ಬಡತನ, ಪರಿಸರ ಮಾಲಿನ್ಯ, ವಾಯುಮಾಲಿನ್ಯ, ನೀರಿನ ಅಭಾವ, ಅನಕ್ಷರತೆ, ಮುಂತಾದವುಗಳ ಜೊತೆಗೆ ಇಂದು ಕೋರೋನ ಎಂಬ ಅಪಾಯಕಾರಿ ವೈರಸ್ನ ವಿರುದ್ಧ ಹೋರಾಟ ನಡೆಸುತ್ತಿದೆ. ಇಂತಹ ನೂರು ಸಂಕಷ್ಟಗಳಿಗೆ ಪರಿಹಾರ ದೇಶದ ಜನರೇ ಆಗಿದ್ದಾರೆ. ದೇಶದ ಸಂಪತ್ತು, ಸವಲತ್ತುಗಳನ್ನು ಬಳಸುವುದು ಮಾತ್ರವಲ್ಲ ಜೊತೆಗೆ ದೇಶದ ಬಗೆಗೆ ಕಾಳಜಿಯನ್ನೂ ತೋರಬೇಕು. ನಮ್ಮ ದೇಶ ಮುಂದುವರಿದ ದೇಶವಾಗಲು, ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯ.
✍️ ಆಕರ್ಷ ಆರಿಗ
ಎಸ್. ಡಿ. ಎಮ್. ಕಾಲೇಜು, ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.