ಜುಲೈ 6, 1905 ರಂದು, ಬಂಗಾಳ ವಿಭಜನೆಯ ವಿರುದ್ಧದ ಚಳವಳಿಯು ನಡೆಯುತ್ತಿದ್ದ ಸಂದರ್ಭದಲ್ಲಿ ಜನಿಸಿದ ಕಮಲಾ ಎಂಬ ಬಾಲಕಿ ಮುಂದೆ ಇತಿಹಾಸವನ್ನು ರಚಿಸುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು? ತನ್ನ ಹದಿನಾಲ್ಕನೇ ವಯಸ್ಸಿನ ಬಾಲ್ಯದಲ್ಲೇ ವೃತ್ತಿಯಿಂದ ವಕೀಲರಾಗಿದ್ದ, ಅದಾಗಲೇ ವಿವಾಹವಾಗಿ ವಿಧುರನಾಗಿದ್ದ ಆರು ಮಕ್ಕಳ ತಂದೆ ಪುರುಷೋತ್ತಮ್ ರಾವ್ ಕೆಲ್ಕರ್ ಅವರನ್ನು ವಿವಾಹವಾಗುವುದರ ಮೂಲಕ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಹೋರಾಟದ ಮನೋಭಾವವನ್ನು ಹೊಂದಿದ್ದ ಅವರು ತಮ್ಮ ಮನೆಯಲ್ಲಿ ಅಂದಿನ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ನಡೆದು ಹರಿಜನ ಸೇವಕರನ್ನು ಕೆಲಸಕ್ಕೆ ನೇಮಸಿದ್ದರು. ಸಮಾಜಮುಖೀ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಗಾಂಧೀಜಿಯವರಿಂದ ಪ್ರೇರಣೆಯನ್ನು ಪಡೆದು ಚರಕವನ್ನು ಬಳಸುತ್ತಿದ್ದರು, ಮಾತ್ರವಲ್ಲದೆ ಸಭೆಯೊಂದರಲ್ಲಿ ಗಾಂಧೀಜಿಯವರು ದೇಣಿಗೆಯನ್ನು ನೀಡುವಂತೆ ಕೇಳಿದಾಗ ತಮ್ಮ ಬಂಗಾರದ ಸರವನ್ನೇ ಸಮಾಜಕ್ಕಾಗಿ ಅರ್ಪಿಸಿದವರು ಮತ್ಯಾರೂ ಅಲ್ಲ ದೇಶದ ಅತ್ಯಂತ ದೊಡ್ಡ ಮಹಿಳಾ ಸಮಾಜಮುಖಿ ಸಂಘಟನೆಯಾದ “ರಾಷ್ಟ್ರ ಸೇವಿಕಾ ಸಮಿತಿ” ಯ ಸಂಸ್ಥಾಪಕರಾದ ವಂದನೀಯ ಮೌಶೀ ಜಿ.
1932 ರಲ್ಲಿ ಪತಿಯ ಮರಣಾನಂತರ ತಮ್ಮ ಮಕ್ಕಳೊಂದಿಗೆ, ತಮ್ಮಂತೆಯೇ ವಿಧವೆಯಾದ ಅತ್ತಿಗೆಯ ಜೀವನದ ಜವಾಬ್ದಾರಿಯೂ ಮೌಶೀಜಿಯವರ ಹೆಗಲೇರಿತ್ತು. ಇಂತಹಾ ದಿನಗಳಲ್ಲಿ ಲಕ್ಷ್ಮೀಬಾಯಿ ಕೇಲ್ಕರ್ ಅವರ ಪುತ್ರರು ಸಂಘದ ಶಾಖೆಗಳಿಗೆ ಭೇಟಿಯನ್ನು ನೀಡುತ್ತಿದ್ದರು. ಪುತ್ರರಲ್ಲಿನ ಆಲೋಚನೆಗಳು ಮತ್ತು ನಡವಳಿಕೆಯ ಬದಲಾವಣೆಯಿಂದಾಗಿ, ಲಕ್ಷ್ಮೀಬಾಯಿ ಸಂಘದತ್ತ ಆಕರ್ಷಿತರಾದರು ಮತ್ತು ಅವರು ಸಂಘದ ಸಂಸ್ಥಾಪಕ ಡಾ. ಹೆಡ್ಗೆವಾರ್ ಅವರನ್ನು ಭೇಟಿಯಾದರು. ಅವರು 1936 ರಲ್ಲಿ ‘ರಾಷ್ಟ್ರ ಸೇವಿಕಾ ಸಮಿತಿ ‘ ಎಂಬ ಹೊಸ ಸಂಘಟನೆಯನ್ನು ಪ್ರಾರಂಭಿಸಿದರು. ಮುಂದಿನ ಹತ್ತು ವರ್ಷಗಳ ನಿರಂತರ ವಾಸ್ತವ್ಯದಿಂದಾಗಿ, ಸಮಿತಿಯ ಕಾರ್ಯವು ಅನೇಕ ಪ್ರಾಂತ್ಯಗಳಲ್ಲಿ ವಿಸ್ತರಿಸಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಆದರೆ ಮಹಿಳೆಯರಿಗಾಗಿ ರಾಷ್ಟ್ರೀಯತೆಯ ಉದ್ದೇಶವನ್ನು ಹೊಂದಿದ ಪ್ರತ್ಯೇಕ ಸಂಘಟನೆಯನ್ನು ರಚಿಸಬೇಕಾದ ಅವಶ್ಯಕತೆ ಇದೆ ಎಂದು ಲಕ್ಷ್ಮೀಬಾಯಿ ಅವರು ಡಾ. ಹೆಡ್ಗೆವಾರ್ ಅವರಿಗೆ ತಿಳಿಸಿದರು. ನಂತರ 1936 ರಲ್ಲಿ ಅವರು ಡಾ ಹೆಡ್ಗೆವಾರ್ ಅವರ ಮಾರ್ಗದರ್ಶದೊಂದಿಗೆ ಮಹಿಳೆಯರಿಗಾಗಿ ‘ರಾಷ್ಟ್ರ ಸೇವಿಕಾ ಸಮಿತಿ’ ಎಂಬ ಹೊಸ ಸಂಘಟನೆಯನ್ನು ಪ್ರಾರಂಭಿಸಿದರು. ಇದು ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ಅಂಗಸಂಸ್ಥೆಯಾಯಿತು. ಇತರ ಮಹಿಳಾ ಸಂಘಟನೆಗಳು ಮಹಿಳೆಯರನ್ನು ತಮ್ಮ ಹಕ್ಕುಗಳ ಬಗ್ಗೆ, ಅವರ ಪ್ರತಿಷ್ಠೆಯ ಬಗ್ಗೆ ಜಾಗೃತಗೊಳಿಸಿದರೆ, ರಾಷ್ಟ್ರ ಸೇವಿಕಾ ಸಮಿತಿಯು ರಾಷ್ಟ್ರದ ಕಡೆಗೆ ತಾಯಿಯ ಕರ್ತವ್ಯವೇನು ಎಂಬ ವಿಚಾರದ ಕುರಿತಾಗಿ ಅವರನ್ನು ಜಾಗೃತಗೊಳಿಸುತ್ತದೆ. ಅವರೊಳಗೆ ಅಡಗಿರುವ ರಾಷ್ಟ್ರ ನಿರ್ಮಾಣದ ಸಾಟಿಯಿಲ್ಲದ ಪ್ರತಿಭೆಯನ್ನು ಉತ್ತೇಜಿಸುತ್ತದೆ. ಮಾತ್ರವಲ್ಲದೆ ಕುಟುಂಬ ವ್ಯವಸ್ಥೆಯನ್ನು ಅದರ ಸಂಪ್ರದಾಯಕ್ಕೆ ಅನುಗುಣವಾಗಿ ಗೌರವಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಪಾತ್ರಕ್ಕೆ ಅವರನ್ನು ಜಾಗೃತಗೊಳಿಸುತ್ತದೆ.
ಈ ರೀತಿಯ ರಾಷ್ಟ್ರೀಯತೆಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಂದನೀಯ ಮೌಶಿ ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಧಾನದ ಮೇಲೆ ರಾಷ್ಟ್ರೀಯ ಸೇವಿಕಾ ಸಮಿತಿಯ ಕೆಲಸವನ್ನು ಪ್ರಾರಂಭಿಸಿದರು. ಸಮಿತಿಯ ವಿಸ್ತರಣೆಯೊಂದಿಗೆ, ಲಕ್ಷ್ಮಿ ಬಾಯಿ ಮಹಿಳೆಯರ ಹೃದಯದಲ್ಲಿ ಪೂಜ್ಯ ಸ್ಥಾನವನ್ನು ಅಲಂಕರಿಸಿದರು. ಎಲ್ಲರೂ ಅವರನ್ನು ‘ವಂದನೀಯ ಮೌಶೀ ಜಿ ‘ ಎಂದು ಕರೆಯಲು ಪ್ರಾರಂಭಿಸಿದರು. ಸಮಿತಿಯ ಮೊದಲ ರಾಷ್ಟ್ರೀಯ ಸಮ್ಮೇಳನ 1945 ರಲ್ಲಿ ನಡೆಯಿತು. ದೇಶದ ಸ್ವಾತಂತ್ರ ಮತ್ತು ವಿಭಜನೆಯ ಪೂರ್ವದಲ್ಲಿ ಮೌಶೀ ಜಿ ಸಿಂಧ್ ಪ್ರಾಂತದ ಕರಾಚಿಯಲ್ಲಿದ್ದರು. ನಡೆಯಬಹುದಾದ ಘಟನೆಗಳಿಗೆ ಸಿದ್ಧರಾಗಿರುವಂತೆ ಕಾರ್ಯಕರ್ತರನ್ನು ಅಣಿಗೊಳಿಸಿದ್ದು ಮಾತ್ರವಲ್ಲದೆ ಅನೇಕ ಹಿಂದೂ ಕುಟುಂಬಗಳು ಸುರಕ್ಷಿತವಾಗಿ ಭಾರತವನ್ನು ಸೇರುವಂತೆ ಮಾಡುವುದರಲ್ಲೂ ಮೌಶೀಜಿಯವರ ಪಾತ್ರವು ಹಿರಿದಾಗಿತ್ತು. ಭಾರತದ ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಸಾರುವ ಜಗತ್ತಿನ ಬಹುದೊಡ್ಡ ಸಂಘಟನೆಯ ಸ್ಥಾಪಕರಾದ ಮೌಶೀ ಜಿ ಅವರು ಮಾರ್ಗದರ್ಶಿಸಿದ ಹಾದಿಯಲ್ಲೇ ಸಾಗೋಣ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.