ಬೆಂಗಳೂರು: ಪಾಂಡಿಚೇರಿಯಲ್ಲಿ ಕಳೆದ ವಾರ ಮಂತ್ರಿಮಂಡಲ ರಚನೆಯಾಗಿದೆ. ಬಿಜೆಪಿ ಮಿತ್ರ ಪಕ್ಷದ ರಂಗಸ್ವಾಮಿ ಅವರು ಅಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಎರಡನೇ ಬಿಜೆಪಿ ಸರಕಾರ ರಚನೆ ಆಗಿರುವುದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಪಕ್ಷದ ಪಾಂಡಿಚೇರಿಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನ ತಿಳಿಸಿದರು.
ಪಾಂಡಿಚೇರಿಯ ನೂತನ ಸರಕಾರದ ಸಚಿವ ಎ. ನಮಃಶಿವಾಯ, ಸಾಯಿ ಶ್ರವಣ ಕುಮಾರ್ ಹಾಗೂ 8 ಜನ ಶಾಸಕರು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿದ್ದು, ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲ್ ಕುಮಾರ್ ಸುರಾಣ ಅವರು ಮಾತನಾಡಿದರು.
ಪಾಂಡಿಚೇರಿಯಲ್ಲಿ ಭಾರತೀಯ ಜನತಾ ಪಕ್ಷವು ಶೂನ್ಯದಿಂದ ಆರಂಭಿಸಿ, ಎನ್ಡಿಎ ಅಧಿಕಾರ ಪಡೆಯಲು ಅಲ್ಲಿನ ಅಧ್ಯಕ್ಷ ಸ್ವಾಮಿನಾಥನ್, ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ. ಬಿಜೆಪಿಗೆ ಹಲವಾರು ಮಂದಿ ಮುಖಂಡರು ಚುನಾವಣೆಗೆ ಮೊದಲು ಸೇರ್ಪಡೆಗೊಂಡರು. ಕೇಂದ್ರದಿಂದ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪಕ್ಷದ ಗೆಲುವಿಗೆ ವಿಶೇಷ ಮಾರ್ಗದರ್ಶನ ನೀಡಿದರು ಎಂದು ವಿವರಿಸಿದರು.
ಪಾಂಡಿಚೇರಿಯ ಸಚಿವರನ್ನು ಆಹ್ವಾನಿಸಿದ ಪ್ರಧಾನಿಯವರು 40 ನಿಮಿಷ ಕಾಲ ಅವರ ಜೊತೆ ಸಭೆ ನಡೆಸಿರುವುದು ಅತ್ಯಂತ ವಿಶೇಷವಾದುದು ಎಂದು ಮೆಚ್ಚುಗೆ ಸೂಚಿಸಿದರು. ಪಾಂಡಿಚೇರಿಯನ್ನು ಅತ್ಯುತ್ತಮ ರಾಜ್ಯ ಮಾಡಲು ಪ್ರಧಾನಿಯವರು ಮುಂದಾಗಿದ್ದಾರೆ. ಬಿಸಿನೆಸ್, ಎಜುಕೇಶನ್, ಸ್ಪಿರಿಚುವಲ್, ಟೂರಿಸ್ಟ್ ಸೇರಿ “ದಿ ಬೆಸ್ಟ್ ಪುದುಚೇರಿ” ಮಾಡುವುದಾಗಿ ಪ್ರಧಾನಿಯವರು ತಿಳಿಸಿದ್ದಾರೆ ಎಂದರು.
ಕರ್ನಾಟಕದ 40-50 ಜನರು ಮುಖಂಡರು ಮತ್ತು ಕಾರ್ಯಕರ್ತರು ಪಾಂಡಿಚೇರಿಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಗೆಲುವಿಗೆ ಶ್ರಮಿಸಿದ ಇಲ್ಲಿನ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಇಂದು ಶಾಸಕರು, ಸಚಿವರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.