ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಕೇಂದ್ರದ ಬಿಜೆಪಿ ಸರಕಾರ ಪ್ರಧಾನಿಗಳಾದ ಮೋದಿ ಅವರ ನೇತೃತ್ವದಲ್ಲಿ ಸಮರೋಪಾದಿ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಿತು ಎಂದು ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಜ್ಯ ಮಟ್ಟದ “ಇ ಚಿಂತನಾ ಸಭೆ”ಯಲ್ಲಿ ಅವರು “ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳು” ಕುರಿತು ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಿಂದ ವೆಬೆಕ್ಸ್ ಮೂಲಕ ಭಾಗವಹಿಸಿ ಅಧ್ಯಕ್ಷತೆ ವಹಿಸಿದ್ದರು.
ವಿಶ್ವದಲ್ಲೇ ಗರಿಷ್ಠ ಕೋವಿಡ್ ಲಸಿಕೆ ನೀಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ದೇಶದಾದ್ಯಂತ ಒಟ್ಟು 32.66 ಕೋಟಿ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ; ಲಸಿಕೆ ಆಂದೋಲನದಲ್ಲಿ ಭಾರತವು ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಸಾಧನೆ ಮಾಡಿದೆ ಸದಾನಂದ ಗೌಡ ಅವರು ಹೇಳಿದರು.
ಹಿಂದೆ ದೇಶದಲ್ಲಿ ಏಳು ರೆಮಿಡಿಸಿವಿರ್ ಉತ್ಪಾದನಾ ಘಟಕಗಳಿದ್ದವು. ಪ್ರಧಾನಿ ಮೋದಿ ಅವರ ವಿಶೇಷ ಮುತುವರ್ಜಿಯ ಕಾರಣ ಮತ್ತು ಔಷಧ ಕಂಪೆನಿಗಳ ಜೊತೆ ಮಾತುಕತೆ ನಡೆಸಿದ್ದರಿಂದ ಈಗ ರೆಮಿಡಿಸಿವಿರ್ ಉತ್ಪಾದನಾ ಘಟಕಗಳ ಸಂಖ್ಯೆ 17ಕ್ಕೆ ಏರಿದೆ. ಕೋವಿಡ್ನ ಸಮರ್ಥ ನಿರ್ವಹಣೆಗೆ ಇದು ಸಹಕರಿಸಿದೆ ಎಂದು ತಿಳಿಸಿದರು. ಆಮ್ಲಜನಕ ಉತ್ಪಾದನಾ ಘಟಕಗಳ ಹೆಚ್ಚಳಕ್ಕೂ ಆದ್ಯತೆ ಕೊಡಲಾಗಿದೆ. ದೇಶದಲ್ಲಿ ಹಿಂದೆ 100 ಆಮ್ಲಜನಕ ಉತ್ಪಾದನಾ ಘಟಕಗಳಿದ್ದು, ಈಗ ಹೊಸದಾಗಿ 2,200 ಹೊಸ ಘಟಕಗಳು ಕಾರ್ಯ ಪ್ರವೃತ್ತವಾಗುತ್ತಿವೆ. ಆಮ್ಲಜನಕ ಸರಬರಾಜು ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಹಲವೆಡೆ ವೈಮಾನಿಕ ಸರಬರಾಜು ನಡೆದಿದೆ. ಇನ್ನೂ ಹಲವು ಕಡೆ ರೈಲಿನ ಮೂಲಕ ಸರಬರಾಜು ಮಾಡಲಾಗಿದೆ. ರಸ್ತೆ, ರೈಲು, ವಿಮಾನ ಸೇರಿ ಎಲ್ಲಾ ಲಭ್ಯ ಮಾರ್ಗಗಳನ್ನು ಭಾರತ ಬಳಸಿಕೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದೆ ಎಂದು ವಿವರಿಸಿದರು.
ಕೋವಿಡ್ 2ನೇ ಅಲೆಯನ್ನು ನಿಭಾಯಿಸಲಾಗದೆ ಹಲವು ದೇಶಗಳು ಕೈಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ, ಭಾರತವು ಇದನ್ನು ಸವಾಲಾಗಿ ತೆಗೆದುಕೊಂಡಿತು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಔಷಧಿ, ಆಮ್ಲಜನಕ, ವೆಂಟಿಲೇಟರ್ಗಳನ್ನು ವ್ಯಾಪಕವಾಗಿ ಒದಗಿಸಲಾಗಿದೆ. ರಾಜ್ಯ ಸರಕಾರಗಳ ಅಗತ್ಯಗಳಿಗೆ ಕೇಂದ್ರ ಸರಕಾರವು ನಿರಂತರವಾಗಿ ತಕ್ಷಣವೇ ಸ್ಪಂದಿಸಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳು ಮಾಡುವ ಅಪಪ್ರಚಾರಕ್ಕೆ ತಮ್ಮ ಕಾರ್ಯದ ಮೂಲಕ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಸ್ಪಷ್ಟ ಉತ್ತರ ನೀಡಿದೆ. ಆಮ್ಲಜನಕ, ರೆಮಿಡಿಸಿವಿರ್, ಬೆಡ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಆಗದಂತೆ ಸಕಾಲದಲ್ಲಿ ವ್ಯವಸ್ಥೆ ಮಾಡಿದೆ. ಆದರೆ, ವಿಪಕ್ಷಗಳು ವಿರೋಧಕ್ಕಾಗಿಯೇ ಅಪಪ್ರಚಾರ ಮುಂದುವರಿಸಿವೆ ಎಂದು ಅವರು ತಿಳಿಸಿದರು. ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ತ್ವರಿತವಾಗಿ ವ್ಯಾಕ್ಸಿನ್ ನೀಡಲು ಸರಕಾರ ಬದ್ಧವಾಗಿದೆ. ಜೂನ್ 21ರಿಂದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡುವ ಯೋಜನೆಗೆ ಚಾಲನೆ ಕೊಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೋವಿಡ್ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ನೀಡುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. ಇದಲ್ಲದೆ, ಕೋವಿಡ್ನಿಂದ ಪೋಷಕರು ಮೃತಪಟ್ಟ ಕಾರಣಕ್ಕೆ ಅನಾಥರಾದ ಕುಟುಂಬದ ಮಕ್ಕಳಿಗೆ ಕೇಂದ್ರ ಸರಕಾರವು 10 ಲಕ್ಷ ರೂಪಾಯಿಯ ಬಾಂಡ್ ನೀಡುತ್ತಿದೆ ಎಂದು ಅವರು ವಿವರಿಸಿದರು. ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಗೆ ನೆರವಾಗುವ ದೃಷ್ಟಿಯಿಂದ ಫ್ರಂಟ್ಲೈನ್ ವಾರಿಯರ್ಗಳಾಗಿ ಬಿಜೆಪಿ ಕಾರ್ಯಕರ್ತರನ್ನು ತರಬೇತಿಗೊಳಿಸಲಾಗುತ್ತಿದೆ. ಕರ್ನಾಟಕದಿಂದ 1.20 ಲಕ್ಷ ಕಾರ್ಯಕರ್ತರನ್ನು ಸಿದ್ಧಪಡಿಸಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.