ಬೆಂಗಳೂರು: ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಹೇರಿದ ಜೂನ್ 25 ಅತ್ಯಂತ ಕರಾಳ ದಿನ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಬೆಂಗಳೂರಿನ ಮೂರು ಜಿಲ್ಲಾ ಘಟಕಗಳ ವತಿಯಿಂದ ಇಂದು ಫ್ರೀಡಂ ಪಾರ್ಕ್ನಲ್ಲಿ ನಡೆದ ತುರ್ತು ಪರಿಸ್ಥಿತಿಯ ಕರಾಳ ದಿನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿ ಮತ್ತೆ ಬಾರದೇ ಇರಲಿ ಎಂಬ ಆಶಯದಿಂದ ಈ ಕರಾಳ ದಿನಾಚರಣೆ ನಡೆಸಲಾಗುತ್ತಿದೆ ಎಂದರು.
ಅಧಿಕಾರವೆಲ್ಲವೂ ತಾನು ಮತ್ತು ತನ್ನ ಕುಟುಂಬ ಕೇಂದ್ರಿತವಾಗಿ ಇರಬೇಕೆಂಬ ದುಷ್ಟ ಮನಸ್ಥಿತಿಯ ಸಂಕೇತ ಇದಾಗಿದೆ. 1975ರ ಆ ದಿನಗಳಲ್ಲಿ ದೇಶದ ಮೇಲೆ ಬಾಹ್ಯ ಆಕ್ರಮಣ ನಡೆದಿರಲಿಲ್ಲ. ದೇಶದೊಳಗೂ ಭಯೋತ್ಪಾದನೆಯಂಥ ಚಟುವಟಿಕೆ, ಪ್ರಕೃತಿ ವಿಕೋಪದಂಥ ದುರ್ಘಟನೆ ನಡೆದಿರಲಿಲ್ಲ. ಆದರೂ ಆವತ್ತಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದರು ಎಂದು ತಿಳಿಸಿದರು.
ಇಡೀ ದೇಶ 21 ತಿಂಗಳುಗಳ ಕಾಲ ತುರ್ತು ಪರಿಸ್ಥಿತಿಯ ಸಂಕಷ್ಟವನ್ನು ಅನುಭವಿಸಿತು. ಬಲಾತ್ಕಾರವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆಸ್ತಿಯನ್ನು ವಶ ಪಡಿಸಿಕೊಳ್ಳಲಾಯಿತು. ಪ್ರತಿರೋಧ ಒಡ್ಡಿದವರನ್ನು ಮಿಸಾ ಅಡಿಯಲ್ಲಿ ಜಾಮೀನು ರಹಿತ ಬಂಧನಕ್ಕೆ ಒಳಪಡಿಸಲಾಯಿತು. ಸಾವಿರಾರು ಜನ ವಿದ್ಯಾರ್ಥಿಗಳನ್ನೂ ಡಿಎಆರ್ ಅಡಿ ಬಂಧಿಸಿದರು ಎಂದರು.
ಗೋಪಾಲಕೃಷ್ಣ, ಸುರೇಶ್ ಕುಮಾರ್, ಸಿಎಂ ಯಡಿಯೂರಪ್ಪ, ಪಿ.ಜಿ.ಆರ್. ಸಿಂಧ್ಯಾ, ದತ್ತಾತ್ರೇಯ ಹೊಸಬಾಳೆ ಹೀಗೆ ನೂರಾರು ಜನರನ್ನು ಕರ್ನಾಟಕದಲ್ಲೂ ಬಂಧಿಸಿಡುವ ಕೆಲಸ ನಡೆಯಿತು. ರಾಜನಾರಾಯಣ್ ಅವರು ಚುನಾವಣೆ ಸಂಬಂಧ ಹಾಕಿದ ಮೊಕದ್ದಮೆಯಲ್ಲಿ ಇಂದಿರಾ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ತೀರ್ಪು ಬಂದುದೇ ಈ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಅಡ್ವಾಣಿ, ವಿಜಯರಾಜೇ ಸಿಂಧಿಯ, ಜಾರ್ಜ್ ಫರ್ನಾಂಡಿಸ್, ರಾಜನಾರಾಯಣ್, ಕೃಪಲಾನಿ ಹೀಗೆ ವಿಪಕ್ಷದ ಎಲ್ಲಾ ಸಂಸದರನ್ನು ಬಂಧಿಸಿ ಜೈಲಿಗಟ್ಟಿ ಕರಾಳ ಅಧ್ಯಾಯಕ್ಕೆ ನಾಂದಿ ಹಾಡಿದರು. ಕೊಂದರೂ ಕೇಳುವಂತಿಲ್ಲ ಎಂದು ಹೇಳುವಂಥ ದಿನ ಅದಾಗಿತ್ತು ಎಂದರು.
ಅಂದಿನ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಇಂದಿರಾ ಗಾಂಧಿ ಅವರನ್ನು ಮೆಚ್ಚಿಸುವುದೇ ಏಕೈಕ ಉದ್ದೇಶವಾಗಿತ್ತು. ದೌರ್ಜನ್ಯ ಮಾಡಿದವರಿಗೆ ಆಗ ಕಾಂಗ್ರೆಸ್ನಲ್ಲಿ ಬಡ್ತಿ ಸಿಗುತ್ತಿತ್ತು. ಇಂದಿರಾ ಗಾಂಧಿ ಅವರ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿ ಪೊಲೀಸ್ ರಾಜ್ಯ ತಾಂಡವವಾಗುವಂತೆ ಮುಖಂಡರು ನೋಡಿಕೊಂಡರು ಎಂದು ತಿಳಿಸಿದರು.
ನ್ಯಾಯಾಂಗವೂ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲಾಗದ ಅಸಹಾಯಕ ಸ್ಥಿತಿ ಅಂದಿನದಾಗಿತ್ತು. ಇಂದಿರಾ ಗಾಂಧಿ ಅವರನ್ನು ದೇಶಕ್ಕೆ ಸಮ ಎಂದು ವೈಭವೀಕರಿಸುವ ನಾಯಕರು ಕಾಂಗ್ರೆಸ್ನಲ್ಲಿದ್ದರು. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷದಲ್ಲಿ ಮೊದಲು ಸರ್ವಾಧಿಕಾರ ಬರುತ್ತದೆ. ಇವತ್ತು ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಒಂದು ಕುಟುಂಬದ ಕಪಿಮುಷ್ಟಿಯಲ್ಲಿ ಪಕ್ಷ ಇದೆ. 88 ಬಾರಿ ವಿವಿಧ ರಾಜ್ಯ ಸರಕಾರಗಳನ್ನು ವಜಾ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
ತನ್ನದೇ ಪಕ್ಷದ ಮುಖಂಡರನ್ನು ಅತ್ಯಂತ ನಗಣ್ಯವಾಗಿ ನಡೆಸಿಕೊಂಡ ಪಕ್ಷ ಕಾಂಗ್ರೆಸ್. ಮೊರಾರ್ಜಿ ದೇಸಾಯಿ, ಕಾಮರಾಜ ನಾಡಾರ್, ನಿಜಲಿಂಗಪ್ಪ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು ಇದಕ್ಕೆ ಉದಾಹರಣೆ. ಕುಟುಂಬ ನಿಷ್ಠೆ ಇರಬೇಕೆಂಬ ನಿರೀಕ್ಷೆ ಕಾಂಗ್ರೆಸ್ನಲ್ಲಿದೆ ಎಂದರು. ಯಾರೂ ಸತ್ಯ ಹೇಳಬಾರದು. ಹೊಗಳುವವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ಎಂಬ ಕಾಂಗ್ರೆಸ್ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಗರ್ಭಿಣಿಯರನ್ನೂ ಹಿಂಸಿಸುವ ಪ್ರವೃತ್ತಿ ತುರ್ತು ಪರಿಸ್ಥಿತಿ ವೇಳೆ ಬಂದಿತ್ತು ಎಂದು ಅವರು ವಿವರಿಸಿದರು.
ತುರ್ತು ಪರಿಸ್ಥಿತಿ ವಿರುದ್ಧ ಭೂಗತ ಚಳವಳಿಗಳು ಪ್ರಾರಂಭವಾದವು. ಸಾವಿರಾರು ವಿದ್ಯಾರ್ಥಿಗಳು, ಯುವಕರ ಭೂಗತ ಚಳವಳಿ ನಡೆಯಿತು. ರಾಜ್ಯದಲ್ಲೂ ಕಹಳೆ, ಪುಂಗವ ಪತ್ರಿಕೆಗಳ ಮೂಲಕ ತುರ್ತು ಪರಿಸ್ಥಿತಿಯ ಕರಾಳ ಮುಖವನ್ನು ಅನಾವರಣಗೊಳಿಸಲಾಯಿತು. ಇದರ ಪರಿಣಾಮವಾಗಿ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಜಯವಾಯಿತು. ಇಂದಿರಾ ಗಾಂಧಿ ಮತ್ತು ಅವರ ಮಗ ಸಂಜಯ್ ಗಾಂಧಿ ಸೋತರು. ಮತಪತ್ರವು ತುರ್ತು ಪರಿಸ್ಥಿತಿಯನ್ನು ಸೋಲಿಸುವ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಿತು ಎಂದು ತಿಳಿಸಿದರು.
ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಮೌಲ್ಯಗಳಿವೆ. ಸಂವಿಧಾನದ ಆಶಯಕ್ಕೆ ಬದ್ಧವಾಗಿ ಪಕ್ಷ ಕಾರ್ಯ ನಿರ್ವಹಿಸುತ್ತಿದೆ. ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿ ಜೈಲಿನಲ್ಲಿ ಇದ್ದವರನ್ನು ಸನ್ಮಾನಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ ಅನುಮತಿ ಪಡೆದೇ ಸುದ್ದಿ ಪ್ರಕಟಿಸಬೇಕಿತ್ತು. ಇದನ್ನು ವಿರೋಧಿಸಿ 27ರಂದು ಅನೇಕ ಪತ್ರಿಕೆಗಳು ತಮ್ಮ ಸಂಪಾದಕೀಯ ಜಾಗವನ್ನು ಖಾಲಿ ಬಿಟ್ಟು ಪ್ರಕಟಣೆ ಮಾಡಿದವು. ಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ. ವ್ಯಕ್ತಿ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಲಾಗಿತ್ತು ಎಂದರು.
1976ನೇ ಇಸವಿಯಲ್ಲಿ ನಮ್ಮ ಜೊತೆ ಜಾರ್ಜ್ ಫರ್ನಾಂಡಿಸ್ ಅವರ ಸೋದರ ಮೈಕೆಲ್ ಫರ್ನಾಂಡಿಸ್ ಇದ್ದರು. ಅವರ ಇನ್ನೊಬ್ಬ ಸೋದರ ಲಾರೆನ್ಸ್ ಫರ್ನಾಂಡಿಸ್ (ನಂತರ ಬೆಂಗಳೂರಿನ ಮೇಯರ್ ಆಗಿದ್ದರು) ಅವರ ಮೇಲೆ ಪೊಲೀಸರಿಂದ ಗಂಭೀರ ದೌರ್ಜನ್ಯ ನಡೆದಿತ್ತು ಎಂದು ವಿವರಿಸಿದರು. ಮಿಸಾ ಬಂಧನ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯಿತು ಎಂದು ತಿಳಿಸಿದರು. ಶಾಸಕಾಂಗದಲ್ಲಿ ಇರಬೇಕಾದ ಎಲ್ಲರೂ ಜೈಲಿನಲ್ಲಿದ್ದ ಕಾರಣ ಶಾಸಕಾಂಗವೆಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದು ತಿಳಿಸಿದರು. ಅದೆಷ್ಟೋ ಜನರ ಜೀವ ಹೋಗಿದೆ. ತುರ್ತು ಪರಿಸ್ಥಿತಿಯ ದಿನಗಳು ಮತ್ತೆ ದೇಶಕ್ಕೆ ಬರಬಾರದು ಎಂದು ಆಶಿಸಿದರು.
ಯಾರೂ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸವನ್ನು ಮರೆಯಬಾರದು. ತುರ್ತು ಪರಿಸ್ಥಿತಿ ವಿರುದ್ಧ ನಡೆದ ಭೂಗತ ಚಳವಳಿಯಲ್ಲಿ ಎಲ್ಲಾ ಪಕ್ಷದವರು ಸೇರಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಸ್ವಯಂಸೇವಕರು, ಜನಸಂಘದ ಕಾರ್ಯಕರ್ತರು, ಸ್ವತಂತ್ರ ಪಾರ್ಟಿ, ಸಮಾಜವಾದಿ ಪಾರ್ಟಿ ಸೇರಿದಂತೆ ಎಲ್ಲರೂ ಸೇರಿ ಹೋರಾಟ ಮಾಡಿದ್ದರಿಂದ ತುರ್ತು ಪರಿಸ್ಥಿತಿಗೆ ಕೊನೆ ಹಾಡಬೇಕಾಯಿತು ಎಂದು ತಿಳಿಸಿದರು. ನಾವೆಲ್ಲರೂ ಅಧ್ಯಯನ ಮಾಡಬೇಕಾದ ಕರಾಳ ಅಧ್ಯಾಯ ಇದು ಎಂದರು.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಕಾರ್ಯಕ್ರಮದ ಸಂಚಾಲಕ ಸಪ್ತಗಿರಿ ಗೌಡ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರಿಗೆ ತುರ್ತು ಪರಿಸ್ಥಿತಿಯ ಕರಾಳ ದಿನದ ಪರಿಚಯ ಮಾಡಿಕೊಡುವ ಉದ್ದೇಶದಿಂದ ವೆಬೆಕ್ಸ್ ಸಭೆಯನ್ನೂ ಏರ್ಪಡಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.