ಕಾಸರಗೋಡು : ಬೆಳವಣಿಗೆ ಎನ್ನುವುದು ಸಹಜ ಕ್ರಿಯೆ, ಇದು ಆರೋಗ್ಯಪೂರ್ಣವೂ ಅರ್ಥಪೂರ್ಣವೂ ಆಗಬೇಕಾದರೆ ಸಂಸ್ಕಾರ ಚೌಕಟ್ಟಿನಲ್ಲಿರಬೇಕು, ಪ್ರಕೃತಿ ಸಹಜವಾದದ್ದನ್ನು ಸಂಸ್ಕೃತಿಯ ಜೊತೆಗೂಡಿ ಆಚರಿಸಿದಾಗ ದೊರಕುವುದು ಸಂಸ್ಕಾರ ಎಂದು ಬದಿಯಡ್ಕ ಶ್ರೀ ಭಾರತೀವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹೇಳಿದರು.
ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಮಕ್ಕಳಿಗಾಗಿ ನಡೆಯುತ್ತಿದ್ದ 3 ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಅವರು ಮಾತನಾಡಿ ಮುಂದಿನ ಪೀಳಿಗೆಗೆ ನಮ್ಮ ಹಿರಿಯರಿಂದ ಅನೂಚಾನವಾಗಿ ನಮಗೆ ದೊರಕಿರುವ ಸಂಸ್ಕಾರವೆಂಬ ಸುಂದರ ಬದುಕಿನ ರಸವನ್ನು ಉಣಬಡಿಸುವ ಇಂತಹ ಶಿಬಿರಗಳು ಎಲ್ಲ ಕಡೆಗಳಲ್ಲಿಯೂ, ಎಲ್ಲಾ ಮನೆಗಳಲ್ಲಿಯೂ ಜರಗಬೇಕು ಎಂದರು. ಒಬ್ಬ ವ್ಯಕ್ತಿಗೆ ಸ್ವಯಂ ತನ್ನಲ್ಲಿಯೇ ಶ್ರದ್ಧೆ, ನಂಬಿಕೆ, ಆತ್ಮಧೈರ್ಯ, ಬದ್ಧತೆಗಳಿಲ್ಲದಿದ್ದಾಗ ಸಮಾಜದ ಇನ್ನೊಬ್ಬರಿಂದ ಹೇಗೆ ನಿರೀಕ್ಷಿಸಲು ಸಾಧ್ಯ? ತನ್ನಲ್ಲಿ ತಾನು ಇವುಗಳನ್ನೆಲ್ಲಾ ತುಂಬಿಸಿಕೊಳ್ಳಬೇಕಾಗಿದೆ.
ಗೋಕರ್ಣ ಮಹಾಮಂಡಲದ ಮಾತೃವಿಭಾಗದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇವತ್ತು ಕಲಿತದ್ದನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಿ, ಗುರುಹಿರಿಯರು ನಿರ್ದೇಶಿಸಿದ ದಾರಿಯಲ್ಲಿ ಮುಂದುವರಿಯಿರಿ ಎಂದು ಹರಸಿದರು. ಅಧ್ಯಾಪಕ ಶ್ಯಾಮಕೃಷ್ಣ ಪ್ರಕಾಶ್ ಮುಂಡೋಳುಮೂಲೆ ಮಕ್ಕಳಿಗೆ ದೇಶೀಯ ಆಟಗಳನ್ನು ಆಡಿಸಿ ಮಕ್ಕಳನ್ನು ರಂಜಿಸಿದರು.
ನೀರ್ಚಾಲು, ಪೆರಡಾಲ, ಪಳ್ಳತ್ತಡ್ಕ ಹಾಗೂ ಚಂದ್ರಗಿರಿ ಹವ್ಯಕ ವಲಯಗಳ ನೇತೃತ್ವದಲ್ಲಿ ಜರಗಿರುವ ಶಿಬಿರದಲ್ಲಿ 200ಕ್ಕೂ ಅಧಿಕ ಪಾಲ್ಗೊಳ್ಳುವಿಕೆ ಶಿಬಿರಕ್ಕೆ ನವೋತ್ಸಾಹವನ್ನು ತಂದುಕೊಟ್ಟಿತು. ಮಾತೆಯರಿಗಾಗಿ ಕಸೂತಿಯನ್ನು ಶ್ರೀಮತಿ ಭಾಗ್ಯಜ್ಯೋತಿ ಪಟ್ಟಾಜೆ ಹೇಳಿಕೊಟ್ಟಿರುವುದು ಸಂತಸವನ್ನು ತಂದಿತು. ಸ್ಯಾಟಲೈಟ್ ಎಜುಕೇಶನ್ನ ಮೂಲಕ ಮಕ್ಕಳಿಗೆ ಚಂದ್ರಗ್ರಹಣದ ಮಾಹಿತಿಯನ್ನು ನೀಡಲಾಯಿತು.
ವಲಯ ಮಾತೃಮಂಡಳಿಯ ಅಧ್ಯಕ್ಷೆಯರಾದ ಕುಸುಮ ಪೆರ್ಮುಖ, ಗೀತಾ ಪೊಟ್ಟಿಪ್ಪಲ, ಕನಕವಲ್ಲಿ ಬಡಗಮೂಲೆ, ವಸಂತಿ ನಲ್ಕ ಶಿಬಿರಾರ್ಥಿಗಳಿಗೆ ಗುರುಸ್ಮರಣಿಕೆಯನ್ನು ನೀಡಿದರು. ಶಿಬಿರಾರ್ಥಿಗಳಾದ ವೆಂಕಟ ಯಶಸ್ವಿ ಕಬೆಕ್ಕೋಡು ನಿರೂಪಿಸಿ, ಅನಿರುದ್ಧ ವಸಿಷ್ಠ ಶರ್ಮ ಉಡುಪಮೂಲೆ ಸ್ವಾಗತಿಸಿ, ಅನಿರುದ್ಧ ಮೀನಗದ್ದೆ ಧನ್ಯವಾದವನ್ನುತ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.