ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದ ಧರ್ಮ. ಕೇವಲ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಷ್ಟೇ ಅಲ್ಲದೆ ಹಿಂದೂ ಧರ್ಮ ಜಗತ್ತಿನಾದ್ಯಂತ ಹರಡಿತ್ತು. ಅನೇಕ ವೈಜ್ಞಾನಿಕ ಪುರಾವೆಗಳನ್ನು ಹೊಂದಿದ್ದರೂ ಕೂಡ ಪ್ರಗತಿಪರರು ಎಂದು ಕರೆದುಕೊಳ್ಳುವ ಅನೇಕರು ಈ ವಿಚಾರವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ.
ಇತಿಹಾಸದ ಕಥೆಗಳಲ್ಲಿ ಬರುವ ಪಾತ್ರಗಳ ಹೆಸರುಗಳನ್ನು ಹೊಂದಿದವರು ಕೂಡಾ ತಮ್ಮ ಹೆಸರು ಯಾವ ಗ್ರಂಥದಿಂದ ಆರಿಸಲಾಯಿತೋ, ಆ ಗ್ರಂಥಗಳನ್ನೇ ಕೇವಲ ದಂತ ಕಥೆ ಎಂದು ಹೀಯಾಳಿಸುತ್ತಾರೆ. ಕೆಲವರು ತಾವು ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮವನ್ನು ಸ್ವೀಕರಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರಾದರೂ ತಮ್ಮ ಹೆಸರನ್ನು ಬದಲಾಯಿಸುವುದಿಲ್ಲ. ಒಂದು ಕಾಲದಲ್ಲಿ ಪ್ರಪಂಚವನ್ನು ಆಳಿದ್ದ ಹಿಂದೂ ಧರ್ಮ, ತನ್ನಿಂದಲೇ ಉಧ್ಭವಗೊಂಡ ಇತರ ಧರ್ಮಗಳ ಸುಳಿಗೆ ಸಿಲುಕಿ ನಲುಗುತ್ತಾ ಬಂತು. ಪರ ಧರ್ಮದ ರಾಜರು ರಾಜ್ಯವಾಳಲು ಪ್ರಾರಂಭಿಸಿದ ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಪುರಾತನ ಹಿಂದೂ ದೇವಾಲಯಗಳ ನಾಶ. ಅತ್ಯಂತ ಕ್ರೂರಿಗಳಾದವರು ದೇವಾಲಯವನ್ನು ಸಂಪೂರ್ಣವಾಗಿ ನಾಶಪಡಿಸಿ ಕುರುಹನ್ನೂ ಅಳಿಸಿ ಹಾಕಿದರೆ ಇನ್ನು ಕೆಲವು ಅತೀ ಬುದ್ದಿಯುಳ್ಳ ಅರಸರು ದೇವಾಲಯವನ್ನು ಮಾರ್ಪಡಿಸಿ ಅವುಗಳಲ್ಲಿ ತಮ್ಮ ಧಾರ್ಮಿಕ ಕೇಂದ್ರಗಳನ್ನು ಮುಂದುವರೆಸುತ್ತಿದ್ದರು. ಮತ್ತೆ ಕೆಲವು ಸ್ಥಳಗಳಲ್ಲಿದ್ದ ರಾಜರ ಪರಧರ್ಮ ಸಹಿಷ್ಣುತೆಯಿಂದ ಹಾಗೆಯೇ ಉಳಿದುಕೊಂಡಿತು.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಎಂಬ ಎರಡೂ ರಾಷ್ಟ್ರಗಳು ಬೌದ್ಧ ರಾಷ್ಟ್ರಗಳಾಗಿವೆ. ಗಡಿಯನ್ನು ಭೂಭಾಗದಲ್ಲಿ ಹಂಚಿಕೊಳ್ಳುವ ಈ ನೆರೆಹೊರೆಯ ದೇಶಗಳು ವಿಭಜನೆ ಹೊಂದಿದ ದಿನದಿಂದಲೂ, ಅಂದರೆ ಸುಮಾರು 80 ಕ್ಕೂ ಹೆಚ್ಚು ವರ್ಷಗಳಿಂದ ಗಡಿ ತಗಾದೆಯನ್ನು ಹೊಂದಿದೆ. ಅವರ ಗಡಿ ತಗಾದೆಯು 1000 ಕಿಲೋಮೀಟರ್ ವಿಸ್ತೀರ್ಣದ ಭೂಮಿಗಾಗಿಯೋ ಅಥವಾ ವಿಶಾಲವಾದ ಜನ ಸಂಖ್ಯೆಯನ್ನು ಹೊಂದಿರುವ ವಸತಿ ಪ್ರದೇಶಕ್ಕಾಗಿಯೋ ಅಲ್ಲ. ಬದಲಾಗಿ 900 ವರ್ಷಗಳ ಇತಿಹಾಸವನ್ನು ಹೊಂದಿರುವ ಒಂದು ಹಿಂದೂ ದೇವಾಲಯಕ್ಕಾಗಿ ಎಂಬುದು ಅಪ್ಪಟ ಸತ್ಯ. ಈ ವಿಷಯ ನಂಬಲು ಕಷ್ಟವಾಗುವುದಾದರೂ, ಈ ಪ್ರಕರಣ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಹಾಗಾದರೆ ಈ ದೇವಾಲಯವನ್ನು ಎರಡೂ ಬೌದ್ಧ ರಾಷ್ಟ್ರಗಳು ಎಷ್ಟು ಗಂಭೀರವಾಗಿ ತೆಗೆದುಕೊಂಡಿರಬಹುದೆಂದು ನೀವೇ ಯೋಚಿಸಿ ನೋಡಿ. ಅಂತಹುದೇನಾದರೂ ಭಾರತದೊಂದಿಗೆ ಚೀನಾ ಅಥವಾ ಪಾಕಿಸ್ತಾನದೊಂದಿಗೆ ನಡೆದಿದ್ದಲ್ಲಿ ಹಲವಾರು ವರ್ಷಗಳ ಕಾಲ ದೇಶವನ್ನಾಳಿದ, ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಕಳೆದುಕೊಂಡ ಭೂಮಿಯನ್ನು ಹೋರಾಡಿ ಗೆದ್ದುಕೊಂಡ ಯೋಧರ ಮೇಲೆ ಒಂದಿನಿತೂ ಗೌರವಿಲ್ಲದಂತೆ ಪಾಕಿಸ್ತಾನ ಮತ್ತು ಚೀನಗಳಿಗೆ ಕಾಶ್ಮೀರದಂತಹಾ ಭೂಮಿಯನ್ನೇ ದಾನವನ್ನಾಗಿ ನೀಡಿದ್ದ ಸರ್ಕಾರವು ಒಂದಿನಿತೂ ಕೊಸರಾಡದೆ ದೇವಾಲಯವನ್ನು ಒಪ್ಪಿಸಿ ಕೊಡುತ್ತಿತ್ತು.
ಥೈಲೆಂಡ್ ಮತ್ತು ಕಾಂಬೋಡಿಯಾ ದೇಶಗಳ ನಡುವಿನ ಗಡಿಯಲ್ಲಿ ಇರುವ ದೇವಾಲಯವೇ ಪ್ರಿಹ್ ವಿಹಾರ್ ದೇವಾಲಯ. ಸುಮಾರು 900 ವರ್ಷ ಪುರಾತನವಾದ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಖಮೇರ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವನ್ನು ಸತತವಾಗಿ 6 ಶತಮಾನಗಳಷ್ಟು ಕಾಲ ಆಡಳಿತ ನಡೆಸಿದ ಖಮೇರ್ ವಂಶದ ಅನೇಕ ರಾಜರು ಇದರಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿದ್ದಾರೆ. ಪ್ರಿಯ ವಿಹಾರ್ ಪ್ರಾಂತ್ಯದ ಡಂಗ್ ರಾಕ್ ಪರ್ವತದಲ್ಲಿ 1722 ಅಡಿ ಎತ್ತರದ ಬಂಡೆಯ ಮೇಲೆ ನಿರ್ಮಿಸಲ್ಪಟ್ಟಿದೆ. 9 ನೇ ಶತಮಾನದಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದ ಈ ದೇವಾಲಯದಲ್ಲಿ ಶಿವ ಮತ್ತು ಪರ್ವತಗಳ ದೇವರಾದ ಶಿಖರೇಶ್ವರ ಹಾಗೂ ಭದ್ರೇಶ್ವರರನ್ನು ಪೂಜಿಸಲಾಗುತ್ತದೆ. ದೇವಾಲಯವನ್ನು 1 ನೇ ಸೂರ್ಯವರ್ಮನ್ ರ ಕಾಲದಲ್ಲಿ ನಿರ್ಮಿಸಲು ಪ್ರಾರಂಭಿಸಿದ್ದರು. ದೇವಾಲಯಗಳಲ್ಲಿ ದೊರೆತ ಶಾಸನಗಳಲ್ಲಿ 2 ನೇ ಸೂರ್ಯವರ್ಮನು ತನ್ನ ಆಡಳಿತಾವಧಿಯಲ್ಲಿ ಈ ದೇವಾಲಯದಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದ ಹಾಗೂ ದತ್ತಿಗಳನ್ನು ನೀಡುತ್ತಿದ್ದ ಎಂದು ತಿಳಿಯುತ್ತದೆ. ಶಾಸನದ ಪ್ರಕಾರ ಹಿರಿಯ ಬ್ರಾಹ್ಮಣ ಪಂಡಿತರಾದ ದಿವಾಕರ ಪಂಡಿತರು ದೇವಾಲಯಕ್ಕೆ ನಟರಾಜನ ಚಿನ್ನದ ಪ್ರತಿಮೆಯನ್ನು ದಾನವಾಗಿ ನೀಡಿದ್ದರು. ಬಳಿಕ ಈ ಪ್ರದೇಶದಲ್ಲಿ ಬೌದ್ಧ ಧರ್ಮವು ವೇಗವಾಗಿ ಪ್ರವರ್ಧಮಾನಕ್ಕೆ ಬಂದು, ಅವರು ದೇವಾಲಯವನ್ನು ತಮ್ಮ ಸುರ್ಪದಿಗೆ ತೆಗೆದುಕೊಂಡರು.
ಹಲವಾರು ವರುಷಗಳ ಕಾಲ ಪರ್ವತದಲ್ಲಿ ಅಡಗಿದ್ದ ದೇವಾಲಯವು ಆಧುನಿಕ ಕಾಲಘಟ್ಟದಲ್ಲಿ ಪುನಃ ಹೊರ ಪ್ರಪಂಚದ ಸಂಪರ್ಕಕ್ಕೆ ಬಂತು. ಇಲ್ಲಿಂದ ಥೈಲ್ಯಾಂಡ್ ಮತ್ತು ಹೊಸತಾಗಿ ಸ್ವತಂತ್ರಗೊಂಡ ಕಾಂಬೋಡಿಯಾ ದೇಶಗಳ ನಡುವೆ ಭಾವನಾತ್ಮಕ ಸಂಘರ್ಷವು ಪ್ರಾರಂಭವಾಯಿತು. 1904 ರಲ್ಲಿ ಈ ದೇಶಗಳನ್ನು ಆಳುತ್ತಿದ್ದ ಫ್ರೆಂಚ್ ವಸಾಹತು ಅಧಿಕಾರಿಗಳು ಪರಸ್ಪರ ತಮ್ಮಗಡಿಗಳನ್ನು ಗುರುತಿಸಲು ಆಯೋಗವೊಂದನ್ನು ರಚಿಸಿದರು. ಅಲ್ಲಿದ್ದ ಜಲಾಶಯದ ಮಾರ್ಗವಾಗಿ ದೇವಾಲಯವಿದ್ದ ಪರ್ವತವನ್ನು ಸಂಪರ್ಕಿಸುವುದು ಸುಲಭವಾಗಿ ಕಂಡು ಅವರು ದೇವಾಲಯವನ್ನು ಥೈಲ್ಯಾಂಡ್ ನೊಂದಿಗೆ ಸೇರಿಸಿದರು. ಆದರೆ 1962 ರಲ್ಲಿ ಜಲಾಶಯಕ್ಕೂ ದೇವಾಲಯಕ್ಕೂ ದೂರವಿರುವುದನ್ನು ಮನಗಂಡು ದೇವಾಲಯವನ್ನು ಕಾಂಬೋಡಿಯಾದೊಂದಿಗೆ ಸೇರಿಸಲಾಯಿತು. 1954 ರಲ್ಲಿ ಫ್ರೆಂಚರು ತಮ್ಮ ದೇಶಕ್ಕೆ ಮರಳಿದ ಬಳಿಕದೇವಾಲಯದ ಮೇಲೆ ಹಕ್ಕನ್ನು ಸಾಧಿಸುವ ಉದ್ದೇಶದಿಂದ ಥಾಯ್ ಪಡೆಗಳು ದೇವಾಲಯವನ್ನು ಆಕ್ರಮಿಸಿಕೊಂಡಿತು. ಮುಂದೆ ಈ ವಿವಾದ ನ್ಯಾಯಾಲಯದ ಮೆಟ್ಟಿಲನ್ನೇರಿದಾಗ 1962 ರ ಜೂನ್ 15 ರಂದು ದೇವಾಲಯ ಕಂಬೋಡಿಯ ದೇಶಕ್ಕೆ ಸೇರಿರುತ್ತದೆ ಎಂಬ ತೀರ್ಪು ಲಭಿಸಿತು. ಅಂತಿಮವಾಗಿ 1963 ರಲ್ಲಿ ಸುಮಾರು 1000 ಜನರು ನೆರೆದಿದ್ದ ಸಮಾರಂಭವೊಂದರಲ್ಲಿ ಕಾಂಬೋಡಿಯಾದ ರಾಜಕುಮಾರ ಸಿಹಾನಕ್ಕ್ ಪರ್ವತವನ್ನು ಏರಿ ಔಪಚಾರಿಕವಾಗಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡರು. ರಾಜಿ ಸಂಧಾನವನ್ನು ಶಾಂತಿಯಿಂದ ಇರಿಸಲು ಎಲ್ಲಾ ಥಾಯ್ ಪ್ರಜೆಗಳೂ ವೀಸಾದ ಅಗತ್ಯವಿಲ್ಲದೆ ದೇವಾಲಯಕ್ಕೆ ಭೇಟಿ ನೀಡಬಹುದೆಂದೂ ಘೋಷಿಸಿದರು.
ಆದರೆ 2008 ರ ಇಸವಿಯ ಏಪ್ರಿಲ್ ತಿಂಗಳಲ್ಲಿ ಎರಡೂ ದೇಶಗಳ ನಡುವಿನ ಸಂಘರ್ಷವು ಹಿಂಸೆಯ ಸ್ವರೂಪವನ್ನು ಪಡೆದುಕೊಂಡಿತು. ಎರಡೂ ಪಕ್ಷಗಳಲ್ಲಿ ಸಾವುನೋವುಗಳೂ ಸಂಭವಿಸಿತು. 2009 ರಲ್ಲಿ ಗಡಿಯುದ್ದಕ್ಕೂ ಥಾಯ್ ಪಡೆಗಳು ಹಾರಿಸಿದ ಗುಂಡುಗಳಿಂದಾಗಿ ದೇವಾಲಯದ 66 ಕಲ್ಲುಗಳಿಗೆ ಹಾನಿಯುಂಟಾಯಿತು. 2011 ರಲ್ಲಿ ಎರಡೂ ದೇಶದ ಅಧಿಕಾರಿಗಳು ಗಡಿ ವಿವಾದದ ಬಗ್ಗೆ ಕಾಂಬೋಡಿಯಾದಲ್ಲಿ ಚರ್ಚಿಸುತ್ತಿರುವಾಗ ಗಡಿಯಲ್ಲಿ ಎರಡೂ ದೇಶಗಳ ಸೈನಿಕರು ಪರಸ್ಪರ ಫಿರಂಗಿಗಳನ್ನು ಬಳಸಿದ್ದರು. ಮುಂದೆ ಕಾಂಬೋಡಿಯಾ ಸರಕಾರದ ಮನವಿಯನ್ನು ಪುರಸ್ಕರಿಸಿದ ಯುನೆಸ್ಕೊ ಈ ದೇವಾಲಯವನ್ನು ವಿಶ್ವ ಪಾರಂಪರಿಕ ಸ್ಥಾನದ ಪಟ್ಟಿಯಲ್ಲಿ ಸೇರಿಸಿತು. ದೇವಾಲಯದ ಪೂರ್ವ ಮತ್ತು ಪಶ್ಚಿಮದ ಭೂಮಿಯೊಂದಿಗೆ ದೇವಾಲಯವೂ ಕಾಂಬೋಡಿಯಾ ದೇಶಕ್ಕೆ ಸೇರಿದೆ ಎಂಬುದಾಗಿ 2013 ನವೆಂಬರ್ 11 ರಂದು ಅಂತರರಾಷ್ಟ್ರೀಯ ನ್ಯಾಯಾಲಯವು ತೀರ್ಪು ನೀಡಿತು. ಕೇವಲ ಒಂದು ಪ್ರಾಚೀನ ಹಿಂದೂ ದೇವಾಲಯಕ್ಕಾಗಿ ಬೌದ್ಧ ರಾಷ್ಟ್ರಗಳೆರಡೂ ಸುಮಾರು 1 ಶತಮಾನಗಳ ಕಾಲ ಹೋರಾಡಿತ್ತು. ಕೊನೆಗೂ ದೇವಾಲಯವನ್ನು ಕಾಂಬೋಡಿಯಾ ತನ್ನ ತೆಕ್ಕೆಗೆ ತೆಗೆದುಕೊಂಡಿತು.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.