ನವದೆಹಲಿ: ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್ (ಸಿಸಿಸಿ) ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ದೇಶದ 26 ಜಿಲ್ಲೆಗಳಿಗೆ ಸಂಬಂಧಿಸಿದಂತೆ 111 ತರಬೇತಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ.
ಕೊರೋನಾ ಎರಡನೇ ಸಂದರ್ಭದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ದೇಶದ ಸನ್ನದ್ಧತೆಯನ್ನು ನಾವು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಈ ಗುರಿಯೊಂದಿಗೆ ಇಂದು ದೇಶದಲ್ಲಿ ಸುಮಾರು 1 ಲಕ್ಷ ಮುಂಚೂಣಿ ಕರೋನಾ ಯೋಧರನ್ನು ಸಜ್ಜುಗೊಳಿಸುವ ದೊಡ್ಡ ಅಭಿಯಾನ ಪ್ರಾರಂಭವಾಗಿದೆ. ಕೊರೋನಾವೈರಸ್ ಈಗಲೂ ನಮ್ಮ ನಡುವೆಯೇ ಇದೆ. ಅದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಈ ಸಾಂಕ್ರಾಮಿಕ ರೋಗವು ಪ್ರತಿ ದೇಶ, ಪ್ರತಿ ಸಂಸ್ಥೆ, ಪ್ರತಿ ಸಮಾಜ, ಪ್ರತಿ ಕುಟುಂಬ, ಜಗತ್ತಿನ ಪ್ರತಿಯೊಬ್ಬ ಮನುಷ್ಯನ ಸಾಮರ್ಥ್ಯವನ್ನು ಕೂಡ ಪದೇ ಪದೇ ಪರೀಕ್ಷಿಸಿದೆ. ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ವಿಜ್ಞಾನ, ಸರ್ಕಾರ, ಸಮಾಜ, ಸಂಸ್ಥೆ ಮತ್ತು ವ್ಯಕ್ತಿಗಳಾಗಿ ನಮ್ಮ ಸಾಮರ್ಥ್ಯವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ಎಚ್ಚರಿಸಿದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸೇವಾ ಮುಂಚೂಣಿ ಕಾರ್ಯಕರ್ತರಿಗಾಗಿ ವಿಶೇಷ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ನಮ್ಮ ಪ್ರಸ್ತುತ ಪಡೆಗೆ ಬೆಂಬಲವನ್ನು ನೀಡುವ ಸಲುವಾಗಿ ದೇಶದಲ್ಲಿ ಸುಮಾರು ಒಂದು ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಈ ತರಬೇತಿ 1-2 ತಿಂಗಳಲ್ಲಿ ಪೂರ್ಣವಾಗಲಿದೆ, ಈ ಮೂಲಕ ಕ್ಷಿಪ್ರ ಕಾರ್ಯಕ್ಕೆ ತರಬೇತಿ ಪಡೆದವರು ಲಭ್ಯವಾಗಲಿದ್ದಾರೆ. ಈ ಅಭಿಯಾನದಿಂದ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ಆರೋಗ್ಯ ವಲಯದ ಮುಂಚೂಣಿ ಪಡೆಗೆ ಹೊಸ ಉತ್ಸಾಹ ಸಿಗಲಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ, ದೂರ ಪ್ರದೇಶಗಳಲ್ಲಿ, ಬೆಟ್ಟ ಪ್ರದೇಶಗಳಲ್ಲಿ ಮತ್ತು ಪರಿಶಿಷ್ಟ ಪ್ರದೇಶಗಳಲ್ಲಿ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು, ಎಎನ್ಎಂ, ಅಂಗನವಾಡಿ ಮತ್ತು ಗ್ರಾಮಗಳ ಅನೇಕ ಆರೋಗ್ಯ ಕಾರ್ಯಕರ್ತರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಹೊಸ ಏಮ್ಸ್, ಹೊಸ ವೈದ್ಯಕೀಯ ಕಾಲೇಜುಗಳು, ಹೊಸ ನರ್ಸಿಂಗ್ ಕಾಲೇಜುಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಇದರಲ್ಲಿ ಕೆಲವೊಂದು ಕಾರ್ಯಾರಂಭವನ್ನೂ ಮಾಡಿವೆ. ವೈದ್ಯಕೀಯ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಸುಧಾರಣೆಗಳಿಗೂ ಬೆಂಬಲ ನೀಡಲಾಗುತ್ತಿದೆ. ಮುಂಚೂಣಿ ಕಾರ್ಯಕರ್ತರ ವಿಶೇಷ ತರಬೇತಿ ಕಾರ್ಯಕ್ರಮದ ಮೂಲಕ, ಆಸಕ್ತರಿಗೆ ಉಚಿತ ತರಬೇತಿ, ಸ್ಕಿಲ್ ಇಂಡಿಯಾ ಸರ್ಟಿಫಿಕೇಟ್, ಊಟ ಮತ್ತು ವಸತಿಯ ಸೌಲಭ್ಯ, ಕೆಲಸದೊಂದಿಗೆ ತರಬೇತಿ ಪಡೆಯುತ್ತಿರುವವರಿಗೆ ಸ್ಟಿಪೆಂಡ್ ಮತ್ತು ಪ್ರಮಾಣಿಕೃತ ಅಭ್ಯರ್ಥಿಗಳಿಗೆ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ಸಿಗಲಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ. ಸುಮಾರು 276 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.